×
Ad

ವಿಜಯಪುರ| ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ರಕ್ತ ಸಹಿ ಅಭಿಯಾನ

Update: 2025-10-24 19:16 IST

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಒತ್ತಾಯಿಸಿ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ಪದಾಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿಗಳು, ವಿವಿಧ ಸಹಕಾರಿ ಸಂಘಗಳ ಮುಖಂಡರು, ಕನ್ನಡಪರ ಹೋರಾಟಗಾರರು, ವಿದ್ಯಾರ್ಥಿಗಳು ತಮ್ಮ ರಕ್ತದ ಮೂಲಕ ಸಹಿ ಮಾಡಿ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಧರಣಿ ಸ್ಥಳದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗಾಗಿ ಕಳೆದ 37 ದಿನಗಳಿಂದ ಸತತ ಹೋರಾಟ ನಡೆಯುತ್ತಿದ್ದು, ಹೋರಾಟದ ಭಾಗವಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ರಕ್ತ ಸಹಿ ಸಂಗ್ರಹಣಾ ಅಭಿಯಾನ ನಡೆಯಿತು.

ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಸುರಕ್ಷಿತ ಉಪಕರಣಗಳ ಮೂಲಕ ತಮ್ಮ ರಕ್ತವನ್ನು ಪಡೆದು ಅದೇ ರಕ್ತದಲ್ಲಿ ಸಹಿ ಮಾಡಿದರು. ಇನ್ನೂ ಕೆಲವರು `ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆ ಬೇಕು, ಹೋರಾಟಕ್ಕೆ ನಮ್ಮ ಬೆಂಬಲ' ಎಂದು ರಕ್ತದಲ್ಲಿಯೇ ಘೋಷಣೆಗಳನ್ನು ಬರೆದರು.

ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ಶೋಷಣೆಗೆ ದಾರಿ, ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಗಗನಕುಸುಮವಾಗುವ ಜೊತೆಗೆ ಬಡ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುವಂತಾಗುತ್ತದೆ, ಹೀಗಾಗಿ ಪೂರ್ಣವಾಗಿ ಸರ್ಕಾರವೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇದು ಜಿಲ್ಲೆಯ ಜನತೆಯ ಒಕ್ಕೊರೆಲಿನ ಬೇಡಿಕೆ. ಇದು ಕೇವಲ ಸ್ವಾಭಿಮಾನದ ಬೇಡಿಕೆಯಲ್ಲ, ಜನಹಿತದ ಬೇಡಿಕೆ. 150 ಎಕರೆ ಜಾಗ, ಎಂಆರ್‌ಐ, ಪೂರಕವಾದ ಕಟ್ಟಡ ಹೀಗೆ ಎಲ್ಲ ಸೌಲಭ್ಯವಿದ್ದು ಕೇವಲ 100 ಕೋಟಿ ರೂ. ಒದಗಿಸಿದರೆ ಸಾಕು ಮೆಡಿಕಲ್ ಕಾಲೇಜ್ ಸ್ಥಾಪನೆಯಾಗುತ್ತದೆ. ಆದರೆ ಜಿಲ್ಲೆಯ ಜನತೆಯ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ, ಹೋರಾಟ 37 ನೇ ದಿನಕ್ಕೆ ಕಾಲಿರಿಸಿದರೂ ಸಹ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಹೋರಾಟಗಾರರಾದ ಭಿ. ಭಗವಾನರೆಡ್ಡಿ, ಭರತ್‌ಕುಮಾರ್ ಎಚ್.ಟಿ, ಸಿದ್ಧಲಿಂಗ ಬಾಗೇವಾಡಿ ಮುಂತಾದವರು ಅಸಮಾಧಾನ ಹೊರಹಾಕಿದರು.

ಹೋರಾಟಗಾರರಾದ ಸುರೇಶ ಜಿ.ಬಿ, ಎಚ್.ಟಿ. ಮಲ್ಲಿಕಾರ್ಜುನ, ಲಕ್ಷ್ಮಣ ಹಂದ್ರಾಳ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ, ಶಿವಬಾಳಮ್ಮ, ಗೀತಾ ಸೇರಿದಂತೆ ಅನೇಕ ಹೋರಾಟಗಾರರು ತಮ್ಮ ರಕ್ತದಲ್ಲಿ ಸಹಿ ಮಾಡಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News