ವಿಜಯಪುರ: ಎಂಟು ರೌಡಿಶೀಟರ್ ಗಳನ್ನು ಗಡೀಪಾರು ಮಾಡಿ ಎಸ್ಪಿ ಆದೇಶ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ
ವಿಜಯಪುರ: ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಎಂಟು ರೌಡಿಶೀಟರ್ ಗಳನ್ನು ವಿಜಯಪುರ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದಾರೆ.
ರವಿ ಬಾಡಗಂಡಿ (ಒಂದು ವರ್ಷ, ಕಲಬುರಗಿ ಜಿಲ್ಲೆಯ ಸೇಡಂ ಪೊಲೀಸ್ ಠಾಣೆ ವ್ಯಾಪ್ತಿ), ಮುಹಮ್ಮದ್ ಹನೀಫ್ ಬಾಗವಾನ್ (ಆರು ತಿಂಗಳು, ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿ), ರವಿ ನಂದಿ (ಆರು ತಿಂಗಳು, ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿ), ಮುಹಮ್ಮದ್ ಸಾಜೀದ್ ಸತ್ತಾರ (ಆರು ತಿಂಗಳು, ಬೀದರ್ ಜಿಲ್ಲೆ ಬಾಲ್ಕಿ ಪೊಲೀಸ್ ಠಾಣೆ ವ್ಯಾಪ್ತಿ), ಜಮೀರ್ ಮುಲ್ಲಾ (ಮೂರು ತಿಂಗಳು, ಬಳ್ಳಾರಿ ಜಿಲ್ಲೆ ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿ), ಹಣಮಂತಪ್ಪ ಹಳ್ಳಿ (ಮೂರು ತಿಂಗಳು, ಧಾರವಾಡ ಜಿಲ್ಲೆ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿ), ಚೇತನ ಜತ್ತಿ (ಆರು ತಿಂಗಳು, ಕಲಬುರಗಿ ಜಿಲ್ಲೆ ಸುಲೇಪೇಟೆ ಪೊಲೀಸ್ ಠಾಣೆ) ಹಾಗೂ ಯಮನಪ್ಪ ಕಟ್ಟಿಮನಿ (ಆರು ತಿಂಗಳು, ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪೊಲೀಸ್ ಠಾಣೆ ಕೊಲ್ಲಿಯ ವ್ಯಾಪ್ತಿ)ಗೆ ಗಡೀಪಾರು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1212 ರೌಡಿಶೀಟರ್ ಗಳಿದ್ದು ಅದರಲ್ಲಿ ಪ್ರಮುಖ 27 ಮಂದಿಯನ್ನು ಗಡೀಪಾರು ಮಾಡಲು ಉಪ ವಿಭಾಗೀಯ ದಂಡಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿ ಸದ್ಯ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾದ 8 ರೌಡಿಶೀಟರ್ ಗಳನ್ನು ರಾಜ್ಯದ ವಿವಿಧ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಉಳಿದ 19 ಜನರ ವಿರುದ್ಧ ಆದೇಶಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.