×
Ad

ವಿಜಯಪುರಕ್ಕೆ ಸರ್ಕಾರಿ ಮೆಡಿಕಲ್‌ ಕಾಲೇಜು | ಹೋರಾಟಗಾರರ ಜೊತೆ ಸಭೆ ನಿಗದಿಗೆ ಸಿಎಂಗೆ ಸಚಿವ ಶಿವಾನಂದ ಪಾಟೀಲ ಪತ್ರ

Update: 2025-12-06 12:03 IST

ವಿಜಯಪುರ : ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಗೆ ಬದಲಾಗಿ ಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಆಗ್ರಹಿಸಿ ವಿಜಯಪುರದಲ್ಲಿ ಸೆಪ್ಟೆಂಬರ್‌ 18 ರಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರ ಬೇಡಿಕೆ ಆಲಿಸಿ, ಚರ್ಚಿಸಲು ಸೂಕ್ತ ದಿನಾಂಕ ನಿಗದಿಪಡಿಸುವಂತೆ ಜವಳಿ,‌ ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಶಿವಾನಂದ ಪಾಟೀಲ ಅವರು, ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಆರಂಭಿಸಬೇಕು ಎಂಬ ಬೇಡಿಕೆ ಕಳೆದ 10-15 ವರ್ಷಗಳಿಂದ ಇದೆ. ಜಿಲ್ಲಾ ಆಸ್ಪತ್ರೆ 627 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಮುಂದಿನ 6 ತಿಂಗಳಲ್ಲಿ ಇನ್ನೂ 251 ಹಾಸಿಗೆಗಳ ಸಾಮರ್ಥ್ಯದ ವೈದ್ಯಕೀಯ ಸೇವೆ ಹೆಚ್ಚುವರಿ ಕಟ್ಟಡದಲ್ಲಿ ಲಭ್ಯವಾಗಲಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಹಾಗೂ 60 ಹಾಸಿಗೆಗಳ ಟ್ರಾಮಾ ಸೆಂಟರ್‌ ಕೂಡಾ ಪ್ರಾರಂಭವಾಗಲಿದೆ ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಪಿಪಿಪಿ ಮಾಡೆಲ್‌ ಬೇಡ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿ ಎಂದು ನಡೆಯುತ್ತಿರುವ ಹೋರಾಟಕ್ಕೆ ಮಠಾಧೀಶರು, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು, ವಕೀಲರು, ವಾಣಿಜ್ಯೋದ್ಯಮ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ನಾನೂ ಕೂಡ ಹೋರಾಟದ ಸ್ಥಳಕ್ಕೆ ತೆರಳಿ ಅವರ ಮನವಿ ಸ್ವೀಕರಿಸಿದ್ದೇನೆ.

ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿದ್ದು, ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯವಿದೆ. ಕಾಲೇಜಿಗೆ ಅಗತ್ಯವಾದ ಜಾಗ ಕೂಡ ಲಭ್ಯ ಇದೆ. ತಾವೂ ಕೂಡ ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಎಂದು ಘೋಷಿಸಿದ್ದೀರಿ. ಹೀಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News