×
Ad

ಕನೇರಿ ಶ್ರೀಗಳು ಕ್ಷಮೆ ಕೇಳಿದರೆ ನಾನೇ ಅವರಿಗೆ ನಮಸ್ಕರಿಸಿ ವಿಜಯಪುರಕ್ಕೆ ಕರೆ ತರುವೆ: ಸಚಿವ ಎಂ.ಬಿ. ಪಾಟೀಲ್

Update: 2025-10-25 20:02 IST

ಸಚಿವ ಎಂ.ಬಿ. ಪಾಟೀಲ್

ವಿಜಯಪುರ: ಕನೇರಿ ಶ್ರೀಗಳು ಕ್ಷಮೆ ಕೋರಿದರೆ ದೊಡ್ಡವರಾಗುತ್ತಿದ್ದರು, ಈಗಲೂ ಅವರು ಕ್ಷಮೆ ಕೋರಿದರೆ ನಾನೇ ಅವರಿಗೆ ನಮಸ್ಕರಿಸಿ ಪಾದ ಮುಟ್ಟಿ ಅವರನ್ನು ವಿಜಯಪುರಕ್ಕೆ ಕರೆ ತರುವೆ ಎಂದು ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನೇರಿ ಶ್ರೀಗಳು ನನಗೂ ಆತ್ಮೀಯರು, ಅವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಶಿಷ್ಯರು. ನಾನೂ ಶ್ರೀಗಳ ಶಿಷ್ಯನೇ ಎಂದರು.

ಆಡುಮಾತಿನಲ್ಲಿ ಅವರು ಪದಪ್ರಯೋಗ ಮಾಡಿದ್ದಾರೆ ಎನ್ನುವ ವಾದದಲ್ಲಿ ಹುರುಳಿಲ್ಲ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಅನೇಕ ದಶಕಗಳಿಂದ ಆಡುಭಾಷೆಯಲ್ಲಿಯೇ ಪ್ರವಚನ ಮಾಡಿದವರು. ಅವರು ಎಂದೂ ಈ ರೀತಿಯ ಪದ ಪ್ರಯೋಗ ಒಂದೆಡೆ ಇರಲಿ ಅದರ ಬಗ್ಗೆ ಯೋಚನೆಯೂ ಮಾಡಿಲ್ಲ. ಅಂತಹ ಮಹಾನ್ ಚೇತನದ ಗರಡಿಯಲ್ಲಿ ಬೆಳೆದ ಕನೇರಿ ಶ್ರೀಗಳು ಸಿದ್ದೇಶ್ವರ ಸ್ವಾಮೀಜಿಗಳ ಆಡುಭಾಷೆ ಕಲಿತಿಲ್ಲವೇ? ನಾವು ರಾಜಕೀಯದವರು ಏನೇನೋ ಹೇಳಬಹುದು, ಆದರೆ ಕನೇರಿ ಶ್ರೀಗಳು ಅಧ್ಯಾತ್ಮಿಕ ಚಿಂತಕರು. ಅವರ ಬಾಯಿಯಿಂದ ಈ ಪದ ಪ್ರಯೋಗ ಅದರಲ್ಲೂ ಮಠಾಧೀಶರ ಬಗ್ಗೆ ಪದ ಬಂದಿರುವುದು ಸರಿಯಲ್ಲ ಎಂದರು.

ಈಗಲಾದರೂ ಶ್ರೀಗಳು ಕ್ಷಮೆ ಕೋರಿದರೆ ನಾನೇ ಅವರನ್ನು ಕರೆ ತರುವೆ. ಶ್ರೀಗಳ ಪ್ರವೇಶ ನಿಷೇಧದ ಹಿಂದೆ ನನ್ನ ಯಾವ ಪಾತ್ರವೂ ಇಲ್ಲ. ಅದು ಜಿಲ್ಲಾಡಳಿತದ ನಿರ್ಧಾರ, ಜಿಲ್ಲಾಡಳಿತದ ನಿರ್ಧಾರವನ್ನು ಉಚ್ಛ ನ್ಯಾಯಾಲಯ ಸಹ ಎತ್ತಿ ಹಿಡಿದಿದೆ. ಈ ರೀತಿಯ ವಿಚಾರವನ್ನು ಶ್ರೀಗಳು ಮಾತನಾಡಬಾರದು ಎಂದು ಉಚ್ಛ ನ್ಯಾಯಾಲಯವೂ  ಹೇಳಿದೆ. ಹೀಗಾಗಿ ಇದರಲ್ಲಿ ನನ್ನ ಪಾತ್ರವೂ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News