×
Ad

ಕಾಡಸಿದ್ದೇಶ್ವರ ಸ್ವಾಮೀಜಿಗೆ ಎರಡು ತಿಂಗಳು ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ

Update: 2025-10-16 11:34 IST

ವಿಜಯಪುರ: ಮಹಾರಾಷ್ಟ್ರದ ಗಡಿಯ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಎರಡು ತಿಂಗಳ ಕಾಲ ವಿಜಯಪುರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆನಂದ ಕೆ. ಆದೇಶ ಹೊರಡಿಸಿದ್ದಾರೆ

ಮಹಾರಾಷ್ಟ್ರದ ಜತ್ತ ಜಿಲ್ಲೆಯ ಬೀಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ, ಬಸವ ಸಂಸ್ಕೃತಿ ಅಭಿಯಾನ ಮತ್ತು ಲಿಂಗಾಯತ ಮಠಾಧೀಪತಿಗಳ ವಿರುದ್ಧ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದರು.

ಅವರ ಹೇಳಿಕೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ವಿಜಯಪುರ, ಬಸವಕಲ್ಯಾಣ, ಕೂಡಲಸಂಗಮ, ಬೆಳಗಾವಿ, ದಾವಣಗೆರೆ, ಬೀದರ್, ಗದಗ ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮನವಿ ಮೇರೆಗೆ , ಅಕ್ಟೋಬರ್ 16ರಿಂದ ಡಿಸೆಂಬರ್ 14ರ ವರೆಗೆ (ಎರಡು ತಿಂಗಳ ಕಾಲ) ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಬಸವನಬಾಗೇವಾಡಿ ಸೇರಿದಂತೆ ವಿಜಯಪುರ ಜಿಲ್ಲೆಯನ್ನು ಪ್ರವೇಶಿಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಆದೇಶ ಹೊರಡಿಸಿದ್ದಾರೆ.

ಅಕ್ಟೋಬರ್ 16 ಮತ್ತು 17 ರಂದು ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆಯಲಿರುವ ಸಮರ್ಥ ಸದ್ಗುರು ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕನ್ಹೇರಿ ಸ್ವಾಮೀಜಿ ಪಾಲ್ಗೊಳ್ಳುವ ಸಾಧ್ಯತೆ ಇತ್ತು. ಆದರೆ, ಅವರ ಭೇಟಿಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಮತ್ತು ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಸಾಧ್ಯತೆಯನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News