×
Ad

ಪ್ರವಾಹ ತಗ್ಗಿದ ಮೇಲೆ ಬಿಜೆಪಿಯವರು ಏನು ವೀಕ್ಷಣೆ ಮಾಡುತ್ತಾರೆ?: ಸಚಿವ ಎಂ.ಬಿ.ಪಾಟೀಲ್ ಟೀಕೆ

Update: 2025-10-03 23:51 IST

ವಿಜಯಪುರ: ಈಗ ಪ್ರವಾಹ ತಗ್ಗಿದ್ದು, ಬಿಜೆಪಿಯವರು ಏನು ವೀಕ್ಷಣೆ ಮಾಡುತ್ತಾರೆ? ಇದು ಟ್ರೈನ್ ಹೋದ ನಂತರ ಟಿಕೆಟ್ ತೆಗೆಯಲು ಬರುವಂತಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದು, ಬಿಜೆಪಿಯವರು ಈಗ ಪ್ರವಾಸ ಕೈಗೊಂಡು ಏನು ವೀಕ್ಷಣೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು,  ಬಿಜೆಪಿಯಲ್ಲಿ ಆರ್.ಅಶೋಕ, ಬಿ.ವೈ.ವಿಜಯೇಂದ್ರ, ಪ್ರಹ್ಲಾದ ಜೋಶಿ, ವಿ.ಸೋಮಣ್ಣ ಸೇರಿದಂತೆ 20 ಬಣಗಳು ಇದೆ. ಬಿಜೆಪಿಗೆ ಒಂದಲ್ಲ, ಮೂರು ಬಾಗಿಲುಗಳು ಇವೆ. ನೆರೆ ಪ್ರದೇಶಗಳಿಗೆ ಯಾವ ಬಾಗಿಲಿನ ಬಿಜೆಪಿಯವರು ಬರುತ್ತಿದ್ದಾರೆ ಗೊತ್ತಿಲ್ಲ ಎಂದರು.

ಭೀಮಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿದ ದಿನವೇ ಪರಿಹಾರವನ್ನೂ ಘೋಷಿಸಲಾಗಿದೆ. ಎನ್ದಿಆರ್ಎಫ್ ಮಾರ್ಗಸೂಚಿಗಿಂತ 8,500 ರೂಪಾಯಿ ಹೆಚ್ಚುವರಿ ಪರಿಹಾರ ಸೇರಿ ಒಂದು ಹೆಕ್ಟೇರ್ ಕೃಷಿ ಭೂಮಿಗೆ ಸುಮಾರು 17,000 ರೂ. ಪರಿಹಾರವನ್ನು ಘೋಷಿಸಲಾಗಿದೆ ಎಂದರು.

ಎಲ್ಲಾ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಹ ಪರಿಸ್ಥಿತಿ ಅವಲೋಕಿಸಿದ್ದಾರೆ. ಈಗ ಬಿಜೆಪಿಯವರು ಏನು ವೀಕ್ಷಣೆ ಮಾಡುತ್ತಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದಿಂದ 14, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಸುಮಾರು 60-70 ಸಾವಿರ ಕೋಟಿ ರೂಪಾಯಿ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,800 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದರೂ ಇನ್ನೂ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ಹೀಗಾಗಿ ಬಿಜೆಪಿಯವರು ಮೊದಲು ರಾಜ್ಯಕ್ಕೆ ಬರಬೇಕಾದ ಅನುದಾನ ಬಿಡುಗಡೆ ಮಾಡಿಸುವ ಕಾರ್ಯ ಮಾಡಲಿ ಎಂದು ಸವಾಲು ಹಾಕಿದರು.

ಎನ್ ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ, ಬೆಳೆ ಹಾನಿ ಪರಿಹಾರ ಬಹಳ ಕಡಿಮೆ ಇದೆ. ಒಣಬೇಸಾಯಕ್ಕೆ ಕೇವಲ 8,500 ರೂ. ನಿಗದಿಯಾಗಿದ್ದು, ಇದನ್ನು 20,000 ರೂ.ಗೆ ಪರಿಷ್ಕರಣೆ ಮಾಡಿಸಲಿ. ಈ ನಿಟ್ಟಿನಲ್ಲಿ ಬಿಜೆಪಿಯವರು ದಿಲ್ಲಿಗೆ ಹೋಗಲಿ. ಆದರೆ, ಅವರಿಗೆ ದಿಲ್ಲಿಗೆ ಹೋಗುವ ತಾಕತ್ತು, ಧೈರ್ಯ ಇಲ್ಲ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News