ವಿಜಯಪುರ | ಸರಕಾರಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿಸಿಕೊಂಡು ಬರಲು ನಾನೇ ಮುಂದಾಳತ್ವ ವಹಿಸಿಕೊಳ್ಳುತ್ತೇನೆ : ಎಂ.ಬಿ.ಪಾಟೀಲ್
ವಿಜಯಪುರ : ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಜಿಲ್ಲೆಯ ಜನತೆಯ ಬೇಡಿಕೆ, ಹೋರಾಟದ ಕುರಿತು ಈಗಾಗಲೇ ಸಚಿವ ಸಂಪುಟ ಸಭೆ, ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಜಿಲ್ಲೆಗೆ ಕಾಲೇಜನ್ನು ಮಂಜೂರು ಮಾಡಿಸಿಕೊಂಡು ಬರಲು ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ. ಈ ಸಮಸ್ಯೆಯನ್ನು ನಾನೇ ಬಗೆಹರಿಸುತ್ತೇನೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರಕಟಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಾನು ಕೂಡ ಪರವಾಗಿದ್ದೇನೆ, ಈ ವಾರದಲ್ಲೇ ಮತ್ತೆ ಮುಖ್ಯಮಂತ್ರಿಯವರ ಬಳಿಗೆ ಹೋರಾಟಗಾರರ ನಿಯೋಗ ಕರೆದೊಯ್ದು, ಅವರನ್ನು ಒಪ್ಪಿಸುತ್ತೇನೆ. ಉದ್ದೇಶಿತ ಪಿಪಿಪಿ ಮಾದರಿ ಕೈಬಿಟ್ಟು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನೇಕರು ವಿರೋಧ ಮಾಡುತ್ತಿದ್ದಾರೆ. ಆದರೆ, ಈಗ ಕೇಂದ್ರ ಸರಕಾರವೇ ರಾಷ್ಟ್ರದಾದ್ಯಂತ ಪಿಪಿಪಿ ಮಾದರಿಯಲ್ಲಿ 11 ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವೈದ್ಯಕೀಯ ಕಾಲೇಜು ಸ್ಥಾಪನೆಯ ಹೋರಾಟಗಾರರು ಇಂದೇ ಸರಕಾರಿ ವೈದ್ಯಕೀಯ ಕಾಲೇಜು ಆಗಬೇಕು, ನಾಳೆಯೇ ಆಗಬೇಕು, ಲಿಖಿತವಾಗಿ ಬರೆದುಕೊಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡುವುದು ಸರಿಯಲ್ಲ. ಕಾಲೇಜು ಸ್ಥಾಪನೆಗೆ ಕಾಲಾವಕಾಶ ಬೇಕಾಗುತ್ತದೆ ಎಂದರು.
ಈ ಹಿಂದೆ ವೈದ್ಯಕೀಯ ಕಾಲೇಜು ಸ್ಥಾಪನೆಯ ಹೋರಾಟಗಾರರ ನಿಯೋಗವನ್ನು ಸಿಎಂ ಬಳಿಗೆ ಕರೆದಾಗ ಯಾರಿಗೂ ಎಲ್ಲಿಯೂ ಅವಮಾನ ಆಗಿಲ್ಲ. ಸಿಎಂ ಅವರು ಅಂದು ಕಾರ್ಯಕ್ರಮಗಳ ಒತ್ತಡದಲ್ಲಿ ಇದ್ದರು. ಅವರ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದರು. ಹೀಗಾಗಿ ನಿಯೋಗದೊಂದಿಗೆ ಚರ್ಚಿಸಲು ಹೆಚ್ಚು ಸಮಯ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.