×
Ad

ಸಂಘ ಪರಿವಾರಕ್ಕೆ ಮುಸ್ಲಿಮರು ಟಾರ್ಗೆಟ್ ಅಲ್ಲ, ದಲಿತರೇ ಮೂಲ ಟಾರ್ಗೆಟ್ : ಅಹಿಂದ ಮುಖಂಡ ಎಸ್.ಎಂ.ಪಾಟೀಲ

Update: 2025-10-14 14:54 IST

ವಿಜಯಪುರ : ಸಂಘ ಪರಿವಾರಕ್ಕೆ ಮುಸ್ಲಿಮರು ಟಾರ್ಗೆಟ್ ಅಲ್ಲ, ದಲಿತರೇ ಮೂಲ ಟಾರ್ಗೆಟ್, ದಲಿತರನ್ನು ದಮನ ಮಾಡುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಪರಿವಾರ, ಸಂಘದ ಸನಾತನವಾದಿಗಳಿಗೆ ಸಮಾನತೆ ಬೇಕಾಗಿಲ್ಲ, ದಲಿತರಿಗೆ ಸಮಾನತೆ ಕೊಡುವುದಾದರೆ ಸ್ವಾತಂತ್ರ‍್ಯವೇ ಬೇಡ ಎಂದು ಪ್ರಮುಖರೇ ಬ್ರಿಟಿಷರಿಗೆ ಹೇಳಿದ್ದರು. ಈ ಒಂದು ಅಂಶದ ಮೇಲೆಯೇ ಸಂಘ ಪರಿವಾರಕ್ಕೆ ದಲಿತರ ಶ್ರೇಯೋಭಿವೃದ್ಧಿ ಬೇಕಾಗಿಲ್ಲ ಎಂದು ತೋರುತ್ತದೆ ಎಂದು ದೂರಿದರು.

ನಾವು ಸೇರಿದಂತೆ ದೇಶ ವಾಸಿಗಳೆಲ್ಲರೂ ಸನಾತನಿಗಳೇ, ನಾನು ಸಹ ಸನಾತನಿಯೇ, ಆದರೆ ಸಂಘ ಪರಿವಾರದ ನಕಲಿ ಸನಾತನವಾದಿ ನಾನಲ್ಲ, ಸನಾತನದ ನೈಜ ಅರ್ಥವನ್ನೇ ಸಂಘ ಪರಿವಾರ ಹಾಳು ಮಾಡುತ್ತಿದೆ, ಪಥಸಂಚಲನೆಯಿಂದ ದೇಶಕ್ಕೆ ಏನು ಪ್ರಯೋಜನ, ಲಾಠಿ ಹಿಡಿಯುವುದು ಎಂದರೆ ಏನು ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಷೂ ಎಸೆದ ಪ್ರಕರಣ ಅತ್ಯಂತ ನೋವು ತರಿಸಿದೆ, ಇದನ್ನು ಖಂಡಿಸಿ ಇದೇ ದಿ.16 ರಂದು ವಿಜಯಪುರ ಬಂದ್ ಕರೆ ನೀಡಲಾಗಿದೆ, ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಿ, ಸಂವಿಧಾನ ಮೇಲೆ ವಿಶ್ವಾಸವಿದೆಯೋ ಅವರೆಲ್ಲರೂ ಒಗ್ಗೂಡಬೇಕು ಎಂದರು.

ಸಂಘ ಪರಿವಾರ ನಿಷೇಧಿಸುವ ತಾಕತ್ತು ಸರ್ಕಾರಕ್ಕೆ ಇದೆ, ಆದರೆ ಇದು ಸಮಯವಲ್ಲ, ಈ ಹಿಂದೆಯೂ ಅನೇಕ ಬಾರಿ ಸಂಘ ಪರಿವಾರ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು ಎಂದರು. ತ್ರಿವರ್ಣ ಧ್ವಜಕ್ಕೂ ಸಹ ಸಂಘ ಪರಿವಾರ ಗೌರವ ನೀಡುವುದಿಲ್ಲ, ಸಂಘದ ಆಡಿಟ್ ಸಹ ನಡೆಯುವುದಿಲ್ಲ, ನಮ್ಮ ಶತ್ರು ರಾಪ್ಟ್ರ ಪಾಕ್ ಪರ ಬೇಹುಗಾರಿಕೆ ನಡೆಸುವಲ್ಲಿ ಅನೇಕ ಸಂಘ ಪರಿವಾರದವರು ಭಾಗಿಯಾಗಿದ್ದು, ಸಹ ಬೆಳಕಿಗೆ ಬಂದಿದೆ ಎಂದರು.

ಹೋರಾಟಗಾರ ಜಿ.ಎಸ್. ಪಾಟೀಲ ಮಾತನಾಡಿ, ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ನಡೆದಿರುವ ಶೂ ದಾಳಿಯನ್ನು ಪ್ರತಿಯೊಬ್ಬರು ಖಂಡಿಸಬೇಕು, ಇದು ಬಹುತ್ವ ಸಂಸ್ಕೃತಿಯ ಮೇಲೆ ನಡೆದ ದಾಳಿಯಾಗಿದೆ, ಪಕ್ಷ ಬೇಧ ಮರೆತು ಬಂದ್ ಗೆ ಬೆಂಬಲಿಸಬೇಕು ಎಂದು ಕೋರಿದರು.

ಹೋರಾಟಗಾರ ಪ್ರಭುಗೌಡ ಪಾಟೀಲ ಮಾತನಾಡಿ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಎಲ್ಲ ಪಕ್ಷಗಳ ಪ್ರಮುಖರಿಗೂ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಲಾಗಿದೆ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಎ.ಎಸ್. ಪಾಟೀಲ, ಬಸನಗೌಡ ಹರನಾಳ, ಡಾ.ರವಿಕುಮಾರ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News