ವಿಜಯಪುರ: ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಪ್ರತಿಭಟನೆ
ವಿಜಯಪುರ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯವಾದಿಯೊಬ್ಬರು ಚಪ್ಪಲಿ ಎಸೆಯಲು ಯತ್ನಿಸಿರುವ ಘಟನೆಯನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಡಾ.ಅಂಬೇಡ್ಕರ್ ವೃತ್ತದ ಎದುರು ಪ್ರತಿಭಟನೆ ನಡೆಸಿ, ಆರೋಪಿ ನ್ಯಾಯವಾದಿಯ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದುನಂತರ ಆತನ ಪ್ರತಿಕೃತಿ ಹಾಗೂ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಪವಿತ್ರ ನ್ಯಾಯದಾನ ವ್ಯವಸ್ಥೆಯ ದೇವಾಲಯದಂತಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲರೊಬ್ಬರು ಚಪ್ಪಲಿ ಎಸೆದಿರುವುದು ಅತ್ಯಂತ ಖಂಡನಾರ್ಹ ಸಂಗತಿ, ದೇಶದ ಪವಿತ್ರ ಹುದ್ದೆಯ ಮೇಲಿರುವ ವ್ಯಕ್ತಿಯ ಮೇಲೆ ಈ ರೀತಿ ಅಗೌರವ ತೋರಿದ ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ನ್ಯಾಯದಾನ ವ್ಯವಸ್ಥೆ ಅನ್ಯಾಯದ ವಿರುದ್ಧ ನ್ಯಾಯ ಪಡೆದುಕೊಳ್ಳಲು ಅನೇಕ ಸೌಲಭ್ಯಗಳನ್ನು ನೀಡಿದೆ, ಇಂತಹ ಮಹಾನ್ ನ್ಯಾಯ ವ್ಯವಸ್ಥೆಯ ಪ್ರಮುಖರ ಮೇಲೆ ಈ ರೀತಿ ಹಲ್ಲೆ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪು ಮಾಡಿರುವ ಆರೋಪಿ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿ, ಈ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಕೂಡಲೇ ಆರೋಪಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಇದು ಅಕ್ಷಮ್ಯ ಅಪರಾಧ ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಮಾತನಾಡಿ, ಮುಖ್ಯ ನ್ಯಾಯಮೂರ್ತಿಯ ಮೇಲೆ ಅಗೌರವ ತೋರಿದ ಆತನ ಮನಸ್ಥಿತಿ ಸರಿಯಾದುದು ಅಲ್ಲ, ಈ ರೀತಿ ಅಗೌರವ ತರುವುದು ಯಾರಿಗೂ ಶೋಭೆ ತರದು, ಸಜ್ಜನ ಸಾತ್ವಿಕತೆಯ ಪ್ರತಿರೂಪವಾಗಿರುವ ಗವಾಯಿ ಅವರ ಮೇಲೆ ಈ ರೀತಿ ಹಲ್ಲೆ ಯತ್ನ ನಡೆದಿರುವುದು ಅತ್ಯಂತ ಘೋರ ಶಬ್ದಗಳಲ್ಲಿ ಖಂಡನೆ ಮಾಡಬೇಕಿದೆ ಎಂದರು.
ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ರವಿ ಕಿತ್ತೂರ, ಸಂಗಮೇಶ ಸಗರ, ಅರವಿಂದ ಕುಲಕರ್ಣಿ, ಚೆನ್ನು ಕಟ್ಟಮನಿ, ಇರ್ಫಾನ್ ಶೇಖ್, ಫಯಾಜ್ ಕಲಾದಗಿ, ಫಯಾಜ್ ಸಾಸನೂರ, ನ್ಯಾಯವಾದಿ ಹಾಜಿ ನದಾಫ್, ಅಭಿಷೇಕ ಚಕ್ರವರ್ತಿ, ಅಕ್ರಂ ಮಾಶ್ಯಾಳಕರ ಮೊದಲಾದವರು ಭಾಗವಹಿಸಿದ್ದರು.