ವಿಜಯಪುರ| ಒಂದೇ ಕುಟುಂಬದ ಮೂವರು ನೀರುಪಾಲು; ಓರ್ವನ ಮೃತದೇಹ ಪತ್ತೆ
ವಿಜಯಪುರ: ಅಕ್ಕ, ತಮ್ಮ ಸಹಿತ ಒಂದೇ ಕುಟುಂಬದ ಮೂವರು ನೀರುಪಾಲಾದ ಘಟನೆ ಮುದ್ದೇಬಿಹಾಳದ ಶಿರೋಳ ರಸ್ತೆಯಲ್ಲಿನ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಪದ ಬಸಮ್ಮ ಚಿನ್ನಪ್ಪ ಕೊಣ್ಣೂರ (20), ಆಕೆಯ ಸಹೋದರ ಸಂತೋಷ ಚಿನ್ನಪ್ಪ ಕೊಣ್ಣೂರ (18), ಅಳಿಯ ರವಿ ಹಣಮಂತ ಕೊಣ್ಣೂರ (17) ನೀರುಪಾಲಾದವರು .
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.
ಬಸಮ್ಮ ಬಟ್ಟೆ ತೊಳೆಯಲೆಂದು ಕಾಲುವೆಗೆ ಬಂದಿದ್ದು, ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಇದನ್ನು ನೋಡಿದ ಸಹೋದರ ಸಂತೋಷ ಅಕ್ಕನನ್ನು ಕಾಪಾಡಲು ನೀರಿಗೆ ಜಿಗಿದಿದ್ದಾರೆ. ಇವರಿಬ್ಬರೂ ನೀರಿನ ರಭಸಕ್ಕೆ ಹರಿದು ಹೋಗುತ್ತಿರುವುದನ್ನು ಕಂಡ ಅಳಿಯ ರವಿ ಕೂಡ ನೀರಿಗೆ ಜಿಗಿದಿದ್ದಾನೆ. ಆದರೆ ನೀರಿನ ರಭಸಕ್ಕೆ, ಕಾಲುವೆಯಲ್ಲಿ ಆಳವಾದ ಮಟ್ಟದಲ್ಲಿ ನೀರಿದ್ದುದರಿಂದ ಮೂವರೂ ನೀರುಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸ್ಥಳಕ್ಕೆ ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.