ವಿಜಯಪುರ | ಕೆಲಸಕ್ಕೆ ಬಾರದಿದ್ದಕ್ಕೆ ಚಾಲಕನನ್ನು ಸರಪಳಿಯಿಂದ ಕಂಬಕ್ಕೆ ಕಟ್ಟಿ, ಜೀವ ಬೆದರಿಕೆ: ಆರೋಪ
ವಿಜಯಪುರ : ಡ್ರೈವಿಂಗ್ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿ ಮುಂಗಡ ಪಡೆದುಕೊಂಡು ಕೆಲಸಕ್ಕೆ ಹಾಜರಾಗದೆ, ಪಡೆದ ಹಣ ಮರಳಿ ನೀಡದ್ದರಿಂದ ಚಾಲಕನೊಬ್ಬನ್ನು ದಿನವಿಡೀ ಕಬ್ಬಿಣದ ಕಂಬಕ್ಕೆ ಸರಪಳಿಯಿಂದ ಕಟ್ಟಿ, ಕಾಲಿಗೆ ಬೀಗ ಹಾಕಿ, ಜೀವ ಬೆದರಿಕೆ ಹಾಕಿರುವ ಘಟನೆ ವಿಜಯಪುರ ಜಿಲ್ಲೆಯ ಹತ್ತಳ್ಳಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಚಾಲಕನನ್ನು ಗೋಡಿಹಾಳದ ಭಾಷಾ ಸಾಬ್ ಅಲ್ಲಾವುದ್ದೀನ್ ಮುಲ್ಲಾ (38) ಎಂದು ಗುರುತಿಸಲಾಗಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆರೋಪಿಗಳಾದ ಚಡಚಣದ ಕುಮಾರ್ ಬಿರಾದಾರ ಹಾಗೂ ಉಮ್ರಾಣಿಯ ಶ್ರೀಶೈಲ ಪೀರಗೊಂಡ ಎನ್ನುವವರು ಚಾಲಕನನ್ನು ಚಡಚಣದಿಂದ ಬೈಕ್‌ನಲ್ಲಿ ಕರೆದುಕೊಂಡು ಬಂದು ಹತ್ತಳ್ಳಿ ಗ್ರಾಮದ ಅಂಗಡಿಯೊಂದರ ಮುಂದೆ ಕಂಬಕ್ಕೆ ಸರಪಳಿಯಿಂದ ಕಟ್ಟಿಹಾಕಿ, ಕಾಲಿಗೆ ಬೀಗ ಹಾಕಿ ಅಕ್ರಮವಾಗಿ ಬಂಧಿಸಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಚಡಚಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.