×
Ad

ʼವಾರ್ತಾಭಾರತಿʼ ಜನರ ನೈಜ ಧ್ವನಿ : ಪತ್ರಕರ್ತ ಅನಿಲ್ ಹೊಸಮನಿ

ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ವಿಜಯಪುರದಲ್ಲಿ ಓದುಗ, ಹಿತೈಷಿಗಳ ಸಭೆ

Update: 2025-11-24 19:56 IST

ವಿಜಯಪುರ : ಭಾರತೀಯ ಸಂವಿಧಾನದ ನೈಜ ಆಶಯ ಹಾಗೂ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ʼವಾರ್ತಾಭಾರತಿʼ ಜನರ ನೈಜ ಧ್ವನಿಯಾಗಿದೆ ಎಂದು ಹಿರಿಯ ಪತ್ರಕರ್ತ ಅನಿಲ್ ಹೊಸಮನಿ ಅಭಿಪ್ರಾಯಪಟ್ಟರು.

ʼವಾರ್ತಾಭಾರತಿʼಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಹಿನ್ನೆಲೆಯಲ್ಲಿ ವಿಜಯಪುರದ ಗಾಂಧಿ ಭವನದಲ್ಲಿ ಓದುಗ, ಹಿತೈಷಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ವಾರ್ತಾಭಾರತಿ ತನ್ನದೇ ಆದ ಮಹತ್ವದ ಪಾತ್ರ ನಿಭಾಯಿಸುತ್ತಾ ಬಂದಿದೆ. ಕಾರ್ಪೋರೇಟ್ ದಿಗ್ಗಜರ ಕೈಯಲ್ಲಿ ಕೈಗೊಂಬೆಯಾಗಿರುವ ಅನೇಕ ಮಾಧ್ಯಮಗಳ ನಡುವೆ ವಾರ್ತಾಭಾರತಿ ಒಂದು ನೈಜ ಆಶಯಗಳ ಹೊಸ ಆಶಾಕಿರಣವಾಗಿದೆ ಎಂದರು.

ದ್ವೇಷ, ವೈಷಮ್ಯಭರಿತವಾದ ಸುದ್ದಿಗಳೇ ಪ್ರಸಾರವಾಗುವ ಇಂದಿನ ಅನೇಕ ಮಾಧ್ಯಮಗಳ ನಡುವೆ ವಾರ್ತಾಭಾರತಿ ಸದಾ ಸತ್ಯದ ಪರವಾಗಿ, ಸಂವಿಧಾನ ಬದ್ಧತೆಯ ಪರವಾಗಿ ತನ್ನ ನಿಲುವನ್ನು ಸಾರುತ್ತಾ, ಪ್ರಸಾರ ಮಾಡುತ್ತಾ ಬಂದಿದೆ. ಸಮಾಜ ಕಟ್ಟುವ ಕಾರ್ಯದಲ್ಲಿ ಪರ್ಯಾಯ ಮಾಧ್ಯಮವಾಗಿ ಮುನ್ನಡೆಯುತ್ತಿರುವ ವಾರ್ತಾಭಾರತಿ ಕಲ್ಯಾಣ ಕರ್ನಾಟಕಕ್ಕೂ ಆವೃತ್ತಿಯ ಮೂಲಕ ಉತ್ತರ ಕರ್ನಾಟಕದ ಮನೆ-ಮನಗಳಿಗೆ ತಲುಪಲು ಸಜ್ಜಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಅಹಿಂದ ಮುಖಂಡ ಎಸ್.ಎಂ.ಪಾಟೀಲ್‌ ಗಣಿಹಾರ ಮಾತನಾಡಿ, ವಾರ್ತಾಭಾರತಿ ನೊಂದವರ, ಶೋಷಿತರ ಪರ ಒಂದು ಗಟ್ಟಿ ಧ್ವನಿ, ಸದಾ ನೊಂದವರ ಧ್ವನಿಯಾಗಿ ತನ್ನ ಧ್ಯೇಯವಾಗಿರುವ ಜನದನಿಯ ಸಾರಥಿಯಂತೆ ಜನರ ಸಾರಥಿಯಾಗಿ ವಾರ್ತಾಭಾರತಿ ಮಾಧ್ಯಮ ಲೋಕದಲ್ಲಿಯೇ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ವಾರ್ತಾಭಾರತಿ ಒಂದು ದಿವ್ಯ ಮಾಧ್ಯಮದ ಸ್ವರೂಪದೊಂದಿಗೆ ಕಳೆದ ಹಲವಾರು ದಶಕಗಳಿಂದ ಮುನ್ನಡೆಯುತ್ತಿದೆ. ಅಬ್ದುಸ್ಸಲಾಮ್ ಪುತ್ತಿಗೆ ಅವರ ಸಮರ್ಥ ಸಾರಥ್ಯದಲ್ಲಿ ವಾರ್ತಾಭಾರತಿ ತಂಡ ಮುನ್ನಡೆಯುತ್ತಿದೆ, ಈಗ ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ತನ್ನ ಆವೃತ್ತಿ ಆರಂಭಿಸಲು ಹೊರಟಿರುವುದು ಸಂತೋಷ ತರಿಸಿದೆ ಎಂದರು.

ಹೋರಾಟಗಾರ, ನ್ಯಾಯವಾದಿ ಶ್ರೀನಾಥ ಪೂಜಾರಿ ಮಾತನಾಡಿ, ವಾರ್ತಾಭಾರತಿ ಎಂದರೆ ಒಂದು ಸಿದ್ಧಾಂತ, ಅದೊಂದು ನಂಬಿಕೆ, ಅದೊಂದು ಸತ್ಯ. ಸದಾ ಸತ್ಯವನ್ನೇ ಪ್ರತಿಪಾದಿಸುತ್ತಾ ಬಂದು, ಯಾವ ಒತ್ತಡಕ್ಕೂ ರಾಜಿಯಾಗದೇ ಜನಪರವಾದ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ವಾರ್ತಾಭಾರತಿ ನಮ್ಮ ನೆಲದ ಗಟ್ಟಿ ಪತ್ರಿಕೆ ಎಂದರು.

ಹೋರಾಟಗಾರ ಕಲ್ಲಪ್ಪ ತೊರವಿ ಮಾತನಾಡಿ, ವಾರ್ತಾಭಾರತಿ ಎಂದರೆ ನಮಗೆ ಅಭಿಮಾನ, ಭಾರತೀಯತೆಯ ನೈಜ ಭಾವವನ್ನು ಬಿತ್ತುವ ಕಾರ್ಯ ಮಾಡುತ್ತಿರುವ ವಾರ್ತಾಭಾರತಿ ತನ್ನ ಧ್ಯೇಯವಾಕ್ಯದಂತೆ ನೊಂದ ಜನರ ಪರ ನಾಯಕತ್ವ ವಹಿಸುತ್ತಲೇ ಬಂದಿದೆ, ಈಗ ಉತ್ತರ ಕರ್ನಾಟಕ ಭಾಗದಲ್ಲಿಯೂ ಪತ್ರಿಕೆ ಬೆಳೆಯಲಿ ಎಂದು ಹಾರೈಸಿದರು.

ಜಿಷಾನ್ ಅಖಿಲ್ ಸಿದ್ದಿಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಸತ್ಯದ ಧ್ವನಿಯಾಗಿ, ಸತ್ಯವನ್ನು ಪ್ರತಿಪಾದಿಸುವ ದೃಷ್ಟಿಯಿಂದ ವಾರ್ತಾಭಾರತಿ ಪತ್ರಿಕೆಯನ್ನು ಹಿರಿಯರು ಕಟ್ಟಿದ್ದಾರೆ, ಯಾವ ಒತ್ತಡಕ್ಕೂ ಮಣಿಯದೇ ಜನ ಹಿತದ ಕಾರ್ಯವನ್ನು ನಿಭಾಯಿಸುತ್ತಲೇ ಮುನ್ನಡೆದಿದೆ ಎಂದರು.

ʼವಾರ್ತಾಭಾರತಿʼ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಪ್ರಮುಖರಾದ ಬಿ.ಭಗವಾನರೆಡ್ಡಿ, ಡಾ.ಅಮೀರುದ್ದೀನ್ ಖಾಜಿ, ಲಕ್ಷ್ಮೀ ರೆಡ್ಡಿ, ಸಂಗಮೇಶ ಸಗರ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬಸವರಾಜ ಸಂಪಳ್ಳಿ, ಯೂಸೂಫ್, ಪಿ.ರೋಜಿಂದಾರ, ಶಬ್ಬೀರ ದಲಾಯತ್ ಮುಂತಾದವರು ಇದ್ದರು. ಸುರೇಶ ಬಿಜಾಪುರ ನಿರೂಪಿಸಿದರು. ಸಂಯೋಜಕ ಶಬೀರ್ ವಂದಿಸಿದರು.

ಡಿಸೆಂಬರ್‌ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್‌ ಎಂ ಪಂಡಿತ್‌ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News