ವಿಜಯಪುರ | ಕನ್ನಡ ರಾಜ್ಯೋತ್ಸವ ದಿನಾಚರಣೆ : ಧ್ವಜಾರೋಹಣ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ್
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಇದಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹಾಗೂ ಆಕರ್ಷಕ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಚಾಲನೆ ನೀಡಿದರು.
ವಿವಿಧ ಇಲಾಖೆಯ ಸ್ತಬ್ಧಚಿತ್ರಗಳು, ಕೆಕೆಆರ್‌ಟಿಸಿ ತಾಂತ್ರಿಕ ಸಿಬ್ಬಂದಿಗಳು ಸಿದ್ಧಪಡಿಸಿದ 1949ರಿಂದ ಈವರೆಗಿನ ವಿವಿಧ ಬಸ್ಸುಗಳ ಮಾದರಿಯ ಸ್ತಬ್ಧಚಿತ್ರವು ಮೆರವಣಿಗೆಯ ಆಕರ್ಷಣೀಯ ಕೇಂದ್ರಬಿಂದುವಾಗಿತ್ತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ನಾಡು-ನುಡಿಯನ್ನು ಪ್ರತಿಬಿಂಬಿಸುವ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.
ಪಥಸಂಚಲನ :
ಈರಸಂಗಪ್ಪ ತೇಲಿ ಇವರ ನೇತೃತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಮೊದಲಿಗೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಐಆರ್‌ಬಿ ಪೋಲಿಸ್ ಪಡೆ, ನಾಗರಿಕ ಪೋಲಿಸ್ ಪಡೆ, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಎನ್ ಸಿಸಿ ಸೀನಿಯರ್ ಡಿವಿಜನ್, ಬಿಎಲ್‌ಡಿಇ ಬಾಲಕಿಯರ ಪ್ರೌಢ ಶಾಲೆ, ಸಂಗನಬಸವ ಅಂತರರಾಷ್ಟ್ರೀಯ ಶಾಲೆ ಬಾಲಕಿಯರು, ಕೆಜಿಎಚ್‌ಪಿಎಸ್-12 ದರ್ಗಾ ಶಾಲೆ, ಭಾರತ ಸೇವಾದಳ ತಂಡ, ತೊರವಿಯ ಕೆಜಿಎಮ್‌ಪಿಎಸ್, ಸಂಗನಬಸವ ಅಂತರರಾಷ್ಟ್ರೀಯ ಶಾಲೆಯ ಬಾಲಕರು, ಸೈಂಟ್ ಜೋಷಪ್ ಶಾಲೆ, ಶ್ರೀ ರುಕ್ಮಾಂಗದ ಪ್ರಾಥಮಿಕ ಶಾಲೆ, ಎಚ್.ಪಿಎಸ್ ಶಾಂತಿನಗರ ತೊರವಿ, ಗ್ಯಾಲಕ್ಸಿ ಶಾಲೆ ಹಾಗೂ ಕನ್ನಡದ ಗೀತೆಗಳ ಸಂಗೀತದ ಸಂಯೋಜನೆಯ ಪೊಲೀಸ್ ವಾದ್ಯ ವೃಂದದ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ, ಮೇಯರ್ ಸಿದ್ರಾಮಪ್ಪ ಕರಡಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನಾನ್ ಮುಶ್ರೀಪ್, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಮುಂತಾದವರು ಇದ್ದರು.