ವಿಜಯಪುರ: ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ

Update: 2024-04-04 10:09 GMT

ವಿಜಯಪುರ, ಎ.4: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿರುವ 2 ವರ್ಷದ ಮಗು ಸಾತ್ವಿಕ್ ನನ್ನು ಜೀವಂತವಾಗಿ ಮೇಲೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.

SDRF, NDRF, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ಕಾರ್ಯಾಚರಣಾ ತಂಡವು ನಿರಂತರ 20 ಗಂಟೆಗಳ ಅಹೋರಾತ್ರಿ ಕಾರ್ಯಾಚರಣೆ ಫಲ ನೀಡಿದೆ. ಮೇಲೆತ್ತಿದ ಕೂಡಲೇ ಸನ್ನದ್ಧರಾಗಿದ್ದ ವೈದ್ಯರ ತಂಡ ಮಗುವಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮಗು ಕೊಳವೆಬಾವಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಬುಧವಾರ ಸಂಜೆ 6 ಗಂಟೆಗೆ ರಕ್ಷಣೆ ಕಾರ್ಯಾಚರಣೆ ಆರಂಭಿಸಲಾಗಿತ್ತು.ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಕಲ್ಲು ಬಂಡೆಗಳನ್ನು ಕೊರೆದ ತಂಡವು ಇಂದು ಬೆಳಿಗ್ಗೆಯೇ ಮಗುವನ್ನು ಸಮೀಪಿಸಿತ್ತು. ಈ ವೇಳೆ ಮಗುವಿಗೆ ನಿರಂತರ ಆಕ್ಸಿಜನ್ ಪೊರೈಕೆ ಮಾಡಲಾಗುತ್ತಿತ್ತು. ಅಂತಿಮವಾಗಿ ಕೊಳವೆ ಬಾವಿಯ ಪೈಪ್ ಅನ್ನು ಕತ್ತರಿಸಿ ಮಗುವನ್ನು ಮೇಲೆತ್ತಲಾಯಿತು.

 ಆತಂಕದಲ್ಲಿದ್ದ ಮಗುವಿನ ಪೋಷಕರು ಹಾಗೂ ಊರವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಶ್ಲಾಘನೆ

 ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 2 ವರ್ಷದ ಮಗುವನ್ನು 20 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಎಲ್ಲರನ್ನೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಅವರು ಶ್ಲಾಘಿಸಿದ್ದಾರೆ. ಮಗುವನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿರುವುದು ಅತ್ಯಂತ ಸಮಾಧಾನ ನೀಡಿದೆ ಎಂದಿದ್ದಾರೆ. 

ಇದೆ ವೇಳೆ ಮುಚ್ಚದೆ ಹಾಗೆಯೇ ಬಿಟ್ಟಿರುವ ಕೊಳವೆಬಾವಿಗಳ ಬಗ್ಗೆ ಜಿಲ್ಲೆಯಾದ್ಯಂತ ಸರ್ವೆ ನಡೆಸಿ, ಬೋರ್ವೆಲ್ ಗಳನ್ನು ಮುಚ್ಚದೆ ಬಿಟ್ಟಿದ್ದರೆ, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿರುವಂತೆ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದಶಕದ ಬಳಿಕ ಮತ್ತೊಂದು ಘಟನೆ 

ಜಿಲ್ಲೆಯಲ್ಲಿ ಇದಕ್ಕೂ ಮುನ್ನ  ಈ ರೀತಿಯ ಎರಡು ಪ್ರಕರಣಗಳು ಸಂಭವಿಸಿವೆ.  

2008 ರಲ್ಲಿ ಇಂಡಿ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ  ಕೊಳವೆ ಬಾವಿಗೆ ಕಾಂಚನಾ ಎಂಬ ಬಾಲಕಿ ಬಿದ್ದಿದ್ದಳು. ಕರ್ನಾಟಕದಲ್ಲಿ ಮಗು ಕೊಳವೆ ಬಾವಿಗೆ ಬಿದ್ದ ಎರಡನೇ ಪ್ರಕರಣ ಇದಾಗಿತ್ತು.  ಕಾಂಚನಾ ಉರುಫ್‌ ಏಗವ್ವ ಎಂಬ ಬಾಲೆಯನ್ನು ರಕ್ಷಿಸುವುದಕ್ಕೆ ರಕ್ಷಣಾ ತಂಡಗಳು ಬಹಳ ಹೊತ್ತು ಕಾರ್ಯಾಚರಣೆ ನಡೆಸಿದ್ದವು. ಮಗುವನ್ನು ಕೊಳವೆ ಬಾವಿಯಿಂದ ಮೇಲೆತ್ತುವುದಕ್ಕೆ ಹಿಟಾಚಿ, ಜೆಸಿಬಿ ಬಳಸಿ ನಿರಂತರ ಕಾರ್ಯಾರಣೆ ನಡೆಸಲಾಗಿತ್ತು. ಹೀಗಿದ್ದರೂ, ಕಾಂಚನಾಳ ಜೀವ ಉಳಿಸುವುದು ಸಾಧ್ಯವಗಿರಲಿಲ್ಲ.

ಯಾದಗಿರಿ ಜಿಲ್ಲೆಯಿಂದ ಕೂಲಿಗಾಗಿ ಬಂದಿದ್ದ ಹನುಮಂತ ಪಾಟೀಲ ಅವರ ಮಗಳು ಮೂರು ವರ್ಷದ ಅಕ್ಷತಾ ಆಟವಾಡುತ್ತಾ ಕೊಳವೆ ಬಾವಿಯಲ್ಲಿ ಸಿಲುಕಿದ ಪ್ರಕರಣ 2014 ರಲ್ಲಿ ದ್ಯಾಬೇರಿ ಗ್ರಾಮದ ಜಮೀನೊಂದರಲ್ಲಿ ನಡೆದಿತ್ತು. ಅಂದು ಬಾಲಕಿ ಅಕ್ಷತಾಳ ರಕ್ಷಣೆಗಾಗಿ ಹೈದಾರಾಬಾದ್‍ನಿಂದ ಎನ್‍ಡಿಆರ್‌ಎಫ್, ಬೆಳಗಾವಿಯಿಂದ ಎಸ್‍ಡಿಆರ್‌ಎಫ್ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ರಕ್ಷಣಾ ತಂಡಗಳು ವಾರ ಪೂರ್ತಿ ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ಸಫಲವಾಯಿತಾದರೂ, ಅಕ್ಷತಾ ಜೀವ ಉಳಿಸುವುದು ಸಾಧ್ಯವಾಗಿರಲಿಲ್ಲ.

ರಾಯಚೂರು ಜಿಲ್ಲೆಯಲ್ಲಿ ಮೊದಲ  ಘಟನೆ:

ಕೊಳವೆ ಬಾವಿಗೆ ಬಿದ್ದು ಮಗು ಮೃತಪಟ್ಟ ಮೊದಲ ದುರಂತ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿತ್ತು. 2005 ರಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಯಲ್ಲಮ್ಮದೇವಿ ಗುಡ್ಡದ ಪರಿಸರದಲ್ಲಿ ಸಂದೀಪ ಎಂಬ ಬಾಲಕ ಇದೇ ರೀತಿ ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿದ್ದ.

ಮಾನವಿ ತಾಲೂಕಿನ ನೀರಮಾನವಿಯಲ್ಲಿ ಸಣ್ಣವೆಂಟಕೇಶ ಎಂಬುವವರ ಜಮೀನಿನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ್ತೊಬ್ಬ ಸಂದೀಪ ಕೊಳವೆ ಬಾವಿಗೆ ಬಿದಿದ್ದ. ಅಂದು ಆತನ ರಕ್ಷಣೆಗಾಗಿ ಐದಾರು ದಿನಗಳ ಕಾರ್ಯಾಚರಣೆ ನಡೆಸಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News