ವಿಜಯಪುರ | ಬ್ಯಾಂಕ್‌ನಿಂದ 58 ಕೆ.ಜಿ ಚಿನ್ನಾಭರಣ ದರೋಡೆ ಪ್ರಕರಣ: ಮತ್ತೆ 12 ಆರೋಪಿಗಳ ಬಂಧನ
ವಿಜಯಪುರ : ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ನಡೆದಿದ್ದ ಕೋಟ್ಯಾಂತರ ಮೌಲ್ಯದ ಬಂಗಾರ ಹಾಗೂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಾಲರಾಜ್ ಮಣಿಕಮ್ ಯೆರೆಕುಲಾ (40), ಗುಂಡು ಜೊಸೇಫ್ ಶ್ಯಾಮಬಾಬು (28), ಚಂದನರಾಜ್ ಪಿಳ್ಳೈ (29), ಇಜಾಜ್ ಧಾರವಾಡ್ (34), ಪೀಟರ್ ಜಯಚಂದ್ರಪಾಲ್ (40), ಸುಸೈರಾಜ್ ಡ್ಯಾನಿಯಲ್ (44), ಬಾಬುರಾವ್ ಮಿರಿಯಾಲ್ (40), ಮಹಮ್ಮದ್ ಆಸಿಫ್ ಕಲ್ಲೂರ (31), ಅನೀಲ ಮಿರಿಯಾಲ್ (40), ಅಬು ಯಶಮಾಲಾ (42), ಸುಲೋಮನ್ ವೆಸ್ಲಿ ಪಲುಕುರಿ (40) ಹಾಗೂ ಮರಿಯಾದಾಸ್ ಗೋನಾ (40) ಎಂದು ಗುರುತಿಸಲಾಗಿದೆ.
2025ರ ಮೇ 23ರಿಂದ 25ರ ಮಧ್ಯರಾತ್ರಿ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನ ಲಾಕರ್ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ ಬಂಗಾರದ ಆಭರಣಗಳು ಹಾಗೂ ರೂ. 5,20,450 ನಗದು ದರೋಡೆಯಾಗಿತ್ತು.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಅದೇ ಬ್ಯಾಂಕಿನ ಹಿಂದಿನ ವ್ಯವಸ್ಥಾಪಕ ವಿಜಯಕುಮಾರ ಮಿರಿಯಾಲ(41), ಹುಬ್ಬಳ್ಳಿ ಜನತಾ ಕಾಲೊನಿಯ ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ(38) ಮತ್ತು ಹುಬ್ಬಳ್ಳಿ ಚಾಲುಕ್ಯ ನಗರದ ಸುನೀಲ ಮೋಕಾ(40) ಎಂಬುವವರನ್ನು ಬಂಧಿಸಲಾಗಿತ್ತು.
ಪ್ರಕರಣದ ತನಿಖೆಯಲ್ಲಿ ಪತ್ತೆದಾರಿ ಶ್ವಾನಗಳಿಗೂ ಗೊತ್ತಾಗಬಾರದೆಂದು ಆರೋಪಿಗಳು ಕಳ್ಳತನ ಮಾಡಿದ ಜಾಗದಲ್ಲಿ ಖಾರದ ಪುಡಿ ಎರಚಿ, ತನಿಖೆಯ ದಿಕ್ಕು ತಪ್ಪಿಸಲು ವಾಮಾಚಾರದ ಮಾಡಿದ ರೀತಿಯಲ್ಲಿ ವಸ್ತುಗಳನ್ನು ಇಟ್ಟಿದ್ದರು.