ವಿಜಯಪುರ | ಸಿಂದಗಿಯಲ್ಲಿ ಒಂದೇ ದಿನ ಐದಾರು ಬಾರಿ ಭೂಮಿ ಕಂಪಿಸಿದ ಅನುಭವ!
ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದ ಜನತೆ
ವಿಜಯಪುರ: ಸಿಂದಗಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಮಧ್ಯಾಹ್ನದಿಂದ ಮಧ್ಯರಾತ್ರಿ ನಡುವೆ ಐದಾರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಭಯಭೀತರಾಗಿದ್ದಾರೆ.
ಗುರುವಾರ ಅಪರಾಹ್ನ 3 ಗಂಟೆ, ರಾತ್ರಿ 10 ಗಂಟೆ 11 ನಿಮಿಷ, 10 ಗಂಟೆ 25 ನಿಮಿಷ, 10 ಗಂಟೆ 47 ನಿಮಿಷ, 01 ಗಂಟೆ 21 ನಿಮಿಷ ರಾತ್ರಿಯ ವೇಳೆ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆಯಿಂದ ಸಿಂದಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮನೆಮಾಡಿದೆ.
ಮನೆಗಳಿಂದ ಹೊರಬಂದ ಜನ: ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಸ್ಥಳೀಯ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಬಂದಿದ್ದಾರೆ.
ಭೂಕಂಪನದ ತೀವ್ರತೆಯ ಬಗ್ಗೆ ತಕ್ಷಣವೇ ಮಾಹಿತಿ ಲಭ್ಯವಾಗಿಲ್ಲವಾದರೂ, ಯಾವುದೇ ಜೀವಹಾನಿ ಮತ್ತು ಆಸ್ತಿ ಹಾನಿಯ ವರದಿಗಳು ಇದುವರೆಗೆ ಬಂದಿಲ್ಲ.
ಈ ಹಿಂದೆ ಅನೇಕ ಬಾರಿ ಭೂಕಂಪನ: ಕಳೆದ ವರ್ಷ ವಿಜಯಪುರ ಜಿಲ್ಲೆಯಲ್ಲಿ ಸರಣಿ ರೂಪದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದವು, ಇದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಗಮನಾರ್ಹ ಹಾನಿಯಾಗಿರಲಿಲ್ಲ. ಈಗ ಮತ್ತೆ ಸಿಂದಗಿಯಲ್ಲಿ ಒಂದೇ ದಿನದಲ್ಲಿ ಹಲವು ಬಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.