×
Ad

ವಿಜಯಪುರ | ಸೈಬರ್ ವಂಚನೆ ಕುರಿತು ಸೋಲಿಡಾರಿಟಿ ಯೂತ್ ಮೂವ್ಮೆಂಟ್‌ನಿಂದ ಜನಜಾಗೃತಿ ಅಭಿಯಾನ

Update: 2025-08-28 12:37 IST

ವಿಜಯಪುರ: ಸೈಬರ್ ವಂಚನೆ ಸೇರಿದಂತೆ ಹಲವು ಆನ್‌ಲೈನ್ ಬೆಳವಣಿಗೆಗಳ ಬಗ್ಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್‌ ಕರ್ನಾಟಕದ ವತಿಯಿಂದ ಸೆ.15 ರವರೆಗೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನವನ್ನು ಆರಂಭಿಸಿದ್ದು‌, ಜಿಲ್ಲೆಯಲ್ಲಿ ಈ ಅಭಿಯಾನದಿಂದ ಯುವಕರನ್ನು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿವೆ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್‌ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಜಾವೀದ್ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್‌ ಕರ್ನಾಟಕದ ಜಾಗೃತಿ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸೈಬರ್ ವಂಚನೆ, ಸೈಬರ್ ದಾಳಿಗಳು, ಆನ್‌ಲೈನ್ ಜೂಜಾಟ, ತ್ವರಿತ ಸಾಲ ಹಗರಣಗಳು, ಬೆಟ್ಟಿಂಗ್ ಮತ್ತು ಗೇಮಿಂಗ್ ವ್ಯಸನದಲ್ಲಿ ಆತಂಕಕಾರಿ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದರು.

ಈ ಸಮಸ್ಯೆಗಳು ಜೀವನವನ್ನು ನಾಶಮಾಡುವ, ಕುಟುಂಬದ ಉಳಿತಾಯವನ್ನು ನಾಶ ಮಾಡುವ, ಜನರನ್ನು ಸಾಲಕ್ಕೆ ತಳ್ಳುವ ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುವ ಮೂಲಕ ಸಮಾಜಕ್ಕೆ ದೊಡ್ಡ ಕಂಟಕವಾಗಿದೆ. ಇದಕ್ಕೆಲ್ಲಾ ಕೂಡಲೇ ಸರಕಾರವು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಈ ಅಭಿಯಾನದಿಂದ ಯುವಕರು, ಪೋಷಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಸಂತ್ರಸ್ಥರು ಮತ್ತು ಕುಟುಂಬಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಸಹಾಯ ಪಡೆಯಲು ಪ್ರೋತ್ಸಾಹಿಸುವ ಮೂಲಕ ಬೆಂಬಲವನ್ನು ಒದಗಿಸುವುದು. ಸಮಾಜವನ್ನು ರಕ್ಷಿಸಲು ಸರಕಾರದಿಂದ ಬಲವಾದ ಕಾನೂನುಗಳು ಮತ್ತು ಪರಿಣಾಮಕಾರಿ ವ್ಯಸನ ಮುಕ್ತ ಸೇವೆಗಳಿಗಾಗಿ ಪ್ರತಿಪಾದಿಸಲಾಗುವುದು ಎಂದರು.

ಜಮಾತೇ ಇ ಇಸ್ಲಾಂ ಹಿಂದ್‌ನ ಜಿಲ್ಲಾಧ್ಯಕ್ಷ ಮಹೇಬೂಬ್ ಅಲಿ ಬಳಗಾನೂರ ಮಾತನಾಡಿ, ಈ ಅಭಿಯಾನದ ಕೇಂದ್ರ ಸಂದೇಶವೆಂದರೆ ಸೈಬರ್ ವಂಚನೆಯು ಜನರ ಸಂಪತ್ತನ್ನು ಕದಿಯುತ್ತಿದೆ. ಜೂಜಾಟ, ತ್ವರಿತ ಸಾಲಗಳು ಮತ್ತು ಬೆಟ್ಟಿಂಗ್ ಕುಟುಂಬಗಳನ್ನು ಹರಿದು ಹಾಕುತ್ತಿದೆ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನವು ನಮ್ಮ ಯುವಕರ ಶಿಕ್ಷಣ, ಆರೋಗ್ಯ ಮತ್ತು ಸಂಬಂಧಗಳನ್ನು ಹಾನಿಗೊಳಿಸುತ್ತಿದೆ. ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಹಲವಾರು ಚಟುವಟಿಕೆಗಳನ್ನು ಯೋಜಿಸಲಾಗಿದೆ. ಸಮುದಾಯ ಮತ್ತು ತಾಲೂಕು ಮಟ್ಟದಲ್ಲಿ, ಸ್ಥಳೀಯ ಘಟಕಗಳಲ್ಲಿ ಬೀದಿ ನಾಟಕಗಳು, ಜಾಗೃತಿ ಮಾತುಕತೆಗಳು, ಪೋಸ್ಟರ್ ಅಭಿಯಾನಗಳು ಮತ್ತು ಸಾಮಾಜಿಕ ಮಾಧ್ಯಮ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್‌ ಜಿಲ್ಲಾ ಉಪಾಧ್ಯಕ್ಷ ಉಬೈದೂರ ರಹೇಮನ್ ಶೈಖ್,   ಕಾರ್ಯದರ್ಶಿ ನಿಹಾಲ್ ಶೈಖ್ ಮುಂತಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News