ವಿಜಯಪುರ | ಇಬ್ಬರು ಯುವಕರ ಬರ್ಬರ ಹತ್ಯೆ
Update: 2025-10-13 12:44 IST
ವಿಜಯಪುರ: ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕನ್ನೂರ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಗ್ರಾಮದ ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖರೇಷಿ (24) ಕೊಲೆಯಾದ ಇಬ್ಬರು ಯುವಕರು ಎಂದು ತಿಳಿದುಬಂದಿದೆ.
ಅಪರಿಚಿತರ ತಂಡವೊಂದು ತಡರಾತ್ರಿ ಇಬ್ಬರನ್ನು ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ಹಳೆ ವೈಷಮ್ಯದಿಂದ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಎರಡು ವರ್ಷಗಳ ಹಿಂದೆ ಗ್ರಾಮದ ಈರನಗೌಡ ಎಂಬವರ ಮೇಲೆ ಇಸಾಕ್ ಖರೇಷಿ ಹಾಗೂ ಸಾಗರ ತೀವ್ರ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗಿ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಈರನಗೌಡ ಬಳಿಕ ಮೃತಪಟ್ಟಿದ್ದರು. ಈ ದ್ವೇಷದ ಕಾರಣ ಇವರಿಬ್ಬರ ಕೊಲೆ ನಡೆದಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.