×
Ad

ಧರ್ಮಸ್ಥಳ ಪ್ರಕರಣದಲ್ಲಿ ಒಂದು ಕಡೆ ಚಿವುಟಿ ಮತ್ತೊಂದು ಕಡೆ ತೂಗುವ ಕೆಲಸ ಪ್ರಭಾಕರ ಭಟ್ ಮಾಡುತ್ತಿದ್ದಾರೆ‌: ವಿನಯ್ ಕುಮಾರ್ ಸೊರಕೆ ಆರೋಪ

Update: 2025-08-21 19:38 IST

ವಿಜಯಪುರ: ಧರ್ಮಸ್ಥಳದ ವಿರುದ್ಧ ಧ್ವನಿ ಎತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಪ್ರಚೋದನೆ ಕೊಡುತ್ತಿರುವವರು ಯಾರು? ಧರ್ಮಸ್ಥಳ ಪ್ರಕರಣದಲ್ಲಿ ಒಂದು ಕಡೆ ಚಿವುಟುವುದು, ಇನ್ನೊಂದು ಕಡೆ ತೂಗುವ ಕೆಲಸವನ್ನು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಡುತ್ತಿದ್ದಾರೆ‌ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಆರೋಪಿಸಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪ್ರಚೋದನೆ ಕೊಟ್ಟವರು ಯಾರು ಎಂಬುದನ್ನು ಬಿಜೆಪಿಯವರೇ ಹೇಳಬೇಕು. ತಿಮರೋಡಿ ಅವರೂ ಕೂಡಾ ಸಂಘಪರಿವಾರಿದವರು. ಹಾಗಾದರೆ ಪ್ರಭಾಕರ್ ಭಟ್ ಧರ್ಮಸ್ಥಳದ ಪರವಾಗಿ ಇದ್ದಾರೆಯೇ ಅಥವಾ ವಿರುದ್ಧವೇ ಎಂದು ಪ್ರಶ್ನಿಸಿದರು.

ಕರಾವಳಿಯಲ್ಲಿ ಯಾವುದೇ ಧಾರ್ಮಿಕ ಉದ್ರೇಕಕಾರಿ ಕಾರ್ಯಕ್ರಮಗಳು ನಡೆದರೂ ಅದರ ಹಿಂದೆ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ ಇರುತ್ತಾರೆ. ಆದರೆ, ಬಿಜೆಪಿ ಶಾಸಕರು ಮೊನ್ನೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಬಂದಾಗ ಕಲ್ಲಡ್ಕ ಪ್ರಭಾಕರ ಭಟ್ ಏಕೆ ಇರಲಿಲ್ಲ ಎಂದು ಅವರು ಪ್ರಶ್ನಿಸಿದರು.

'ಧರ್ಮಸ್ಥಳ ವಿಷಯದಲ್ಲಿ ಕಾಂಗ್ರೆಸ್, ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಯವರ ಯಾವುದೇ ಹಿತಾಸಕ್ತಿ ಇಲ್ಲ. ಕೋರ್ಟ್‌ ಆದೇಶದ ಮೇರೆಗೆ ಎಸ್‌ಐಟಿ ರಚನೆಯಾಗಿ, ತನಿಖೆಯಾಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರೂ ಎಸ್‌ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ಶೀಘ್ರ ವಾಸ್ತವಾಂಶ ಹೊರಬರಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲು ಲೋಣಿ, ಕಾಂಗ್ರೆಸ್ ಮುಖಂಡ ರಫೀಕ್ ಟಪಾಲ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸರ್ಪರಾಜ ಮಿರ್ಧೆ, ಎಸ್.ಜಿ.ಮಹಾಬಲೇಶ್ವರ, ಮುನಿರಹ್ಮದ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News