ವಿಜಯಪುರ|ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು; ಓರ್ವ ನಾಪತ್ತೆ
Update: 2025-09-24 23:30 IST
ವಿಜಯಪುರ: ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದ ತುಂಬಿ ಹರಿಯುತ್ತಿರುವ ಡೋಣಿ ನದಿ ದಾಟಲು ಹೋಗಿ ಇಬ್ಬರ ಪೈಕಿ, ಓರ್ವ ಈಜಿ ದಡ ಸೇರಿದ್ದು, ಇನ್ನೊಬ್ಬ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತಾಳಿಕೋಟೆಯಲ್ಲಿ ಬುಧವಾರ ನಡೆದಿದೆ.
ವಡವಡಗಿ ಗ್ರಾಮದ ಸಂತೋಷ ಶಿವಲಿಂಗಪ್ಪ ಹಡಪದ ನೀರುಪಾಲಾದ ವ್ಯಕ್ತಿ. ವಡವಡಗಿ ಗ್ರಾಮದ ಮಹಾಂತೇಶ ಮಲ್ಲನಗೌಡ ಹೊಸಗೌಡ್ರು ಹಾಗೂ ಸಂತೋಷ ಶಿವಲಿಂಗಪ್ಪ ಹಡಪದ ಇಬ್ಬರೂ ಸೇರಿ ಬೈಕ್ ನಲ್ಲಿ ಡೋಣಿ ನದಿ ಸೇತುವೆ ಮೇಲೆ ತೆರಳುತ್ತಿದ್ದಾಗ, ನೀರಿನ ರಭಸಕ್ಕೆ ಬೈಕ್ ಸಹಿತ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಮಹಾಂತೇಶ ಮಲ್ಲನಗೌಡ ಹೊಸಗೌಡರ ಈಜಿ ದಡ ಸೇರಿದ್ದರೆ, ಸಂತೋಷ ಹಡಪದ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ.
ಈ ಕುರಿತು ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.