IIM ಬೆಂಗಳೂರಿನಲ್ಲಿ ಓದುತ್ತಾ 5 ಕೋಟಿ ರೂ. ಮೌಲ್ಯದ ಉದ್ಯಮ ಕಟ್ಟಿದ ಯುವಕ

Update: 2026-07-30 20:40 IST

ಜೈದ್ ಖಾನ್ | Photo Credit : indiatoday.in

ಸಹಪಾಠಿಗಳು ವಾರ್ಷಿಕ 25-40 ಲಕ್ಷ ರೂ. ಪ್ಯಾಕೇಜ್ ನೀಡುವ ಉದ್ಯೋಗಗಳಿಗೆ ಸಿದ್ಧತೆ ನಡೆಸುತ್ತಿರುವಾಗ ಝೈದ್ ಖಾನ್ ತಮ್ಮದೇ ಉದ್ಯಮ ಸ್ಥಾಪಿಸಿ ಬೆಳೆಸಿದ್ದಾರೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂ) ವಿದ್ಯಾರ್ಥಿಯಾಗಿರುವ ಝೈದ್ ಖಾನ್, ಎಂಬಿಎ ಓದುತ್ತಿರುವಾಗಲೇ ಅಂದಾಜು 5 ಕೋಟಿ ರೂ. ಮೌಲ್ಯದ ಉದ್ಯಮವನ್ನು ಸ್ಥಾಪಿಸಿದ್ದಾರೆ. 25ನೇ ವಯಸ್ಸಿನಲ್ಲಿ ಝೈದ್ ಖಾನ್ ಝೆಡಿಟಲ್ ಮೀಡಿಯಾದ ಸಂಸ್ಥಾಪಕರಾಗಿದ್ದಾರೆ. ಇತ್ತೀಚೆಗೆ ಅವರು ‘ದಿ ಕ್ರೋರ್ ಕ್ಲಬ್’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಬಳಿಕ ಸುದ್ದಿಯಾಗಿದ್ದಾರೆ.

ಪಾಡ್‌ಕಾಸ್ಟ್‌ನಲ್ಲಿ ಅವರು ತಮ್ಮ ಉದ್ಯಮ ಪಯಣ, ಉದ್ಯಮ ಸ್ಥಾಪನೆ ಹಾಗೂ ಪ್ರತಿ ಉದ್ಯಮಿಯೂ ಕಲಿಯಲೇಬೇಕಾದ ಪಾಠಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಹಪಾಠಿಗಳು ವಾರ್ಷಿಕ 25-40 ಲಕ್ಷ ರೂ. ಪ್ಯಾಕೇಜ್ ನೀಡುವ ಉದ್ಯೋಗಗಳಿಗೆ ಸಿದ್ಧತೆ ನಡೆಸುತ್ತಿರುವಾಗ ಝೈದ್ ಖಾನ್ ತಮ್ಮದೇ ಉದ್ಯಮ ಸ್ಥಾಪಿಸಿ ಬೆಳೆಸಿರುವುದನ್ನು ಪಾಡ್‌ಕಾಸ್ಟ್ ನಿರೂಪಕಿ ಶ್ರೇಯಾ ಹೆಗ್ಡೆ ಗಮನ ಸೆಳೆದರು. ತಮ್ಮದೇ ಉದ್ಯಮ ಆರಂಭಿಸಲು ಆಶಿಸುವ ವಿದ್ಯಾರ್ಥಿಗಳಿಗೆ ಅವರು ನೀಡುವ ಸಲಹೆ ಏನು ಎಂದೂ ಪ್ರಶ್ನಿಸಿದರು.

ಝೈದ್ ಖಾನ್ ಅವರ ಪ್ರಕಾರ, ಉದ್ಯಮಶೀಲತೆ ಆತ್ಮವಿಶ್ವಾಸ ಮತ್ತು ಕ್ರಮ ಕೈಗೊಳ್ಳುವುದರ ಮೂಲಕ ಆರಂಭವಾಗುತ್ತದೆ. “ಮೊದಲಿಗೆ ಏನನ್ನಾದರೂ ಮಾರಾಟ ಮಾಡಬೇಕಾಗುತ್ತದೆ. ಅದು ಕೇವಲ 100 ರೂ. ಅಥವಾ 200 ರೂ.ಗಳಿಗೇ ಆಗಿರಲಿ. ಅದು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.

ಅವರ ಎರಡನೇ ಸಲಹೆ ಬಲವಾದ ಆನ್‌ಲೈನ್ ಉಪಸ್ಥಿತಿಯನ್ನು ಸ್ಥಾಪಿಸುವುದು. “ಕಂಟೆಂಟ್ ಎನ್ನುವುದು ಡಿಜಿಟಲ್ ಕರೆನ್ಸಿಯಾಗಿದೆ. ಆನ್‌ಲೈನ್ ಉಪಸ್ಥಿತಿ ಬೆಳೆಸಿಕೊಳ್ಳಿ. ಏಕೆಂದರೆ ಅದು ಅವಕಾಶಗಳನ್ನು ಸೃಷ್ಟಿಸುತ್ತದೆ” ಎಂದು ಅವರು ಹೇಳಿದರು.

ತಮ್ಮ ವೃತ್ತಿ ಹಾಗೂ ಶಿಕ್ಷಣ ಪಯಣದ ಬಗ್ಗೆ ವಿವರಿಸಿದ ಝೈದ್ ಖಾನ್, ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಾರಣ ವೈದ್ಯ ಅಥವಾ ಎಂಜಿನಿಯರ್ ಆಗುವಂತೆ ಮನೆಯವರು ಪ್ರೋತ್ಸಾಹಿಸಿದ್ದರು ಎಂದು ಹೇಳಿದ್ದಾರೆ. ಅನೇಕ ವಿದ್ಯಾರ್ಥಿಗಳಂತೆ ಅವರು 12ನೇ ತರಗತಿಯಲ್ಲಿದ್ದಾಗ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ಒತ್ತಡ ಎದುರಿಸಿದ್ದರು. ಆದರೆ, ಅವರು ಬೇರೆ ಮಾರ್ಗ ರೂಪಿಸಲು ನಿರ್ಧರಿಸಿ ಯೂಟ್ಯೂಬ್ ರಚನೆಕಾರರೊಂದಿಗೆ ಕೆಲಸ ಆರಂಭಿಸಿದರು. ಕ್ರಮೇಣ ಫ್ರೀಲ್ಯಾನ್ಸ್ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡರು. ಕ್ಯಾಲಿಫೋರ್ನಿಯಾದ ಮೂಲದ ಇನ್‌ಫ್ಲೂಯೆನ್ಸರ್‌ ಜತೆಗೆ ಕೆಲಸ ಮಾಡುವ ಅಸೈನ್‌ಮೆಂಟ್ ದೊರೆತಾಗ ಅವರ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿತು. ಮೊದಲ ಬಾರಿಗೆ 1.24 ಲಕ್ಷ ರೂ. ಗಳಿಸಿದರು. ಆ ಸಂದರ್ಭದಲ್ಲಿ ಅದು ಅವರ ಅತಿದೊಡ್ಡ ಸಂಭಾವನೆಯಾಗಿತ್ತು. ಈ ಗಳಿಕೆ ಸಾಂಪ್ರದಾಯಿಕ ವೃತ್ತಿಗಳ ಹೊರತಾಗಿಯೂ ವೃತ್ತಿಜೀವನ ಕಟ್ಟಿಕೊಳ್ಳಬಹುದು ಎಂಬ ವಿಶ್ವಾಸವನ್ನು ಅವರಿಗೆ ಮೂಡಿಸಿತು.

2019ರಿಂದ 2022ರವರೆಗೆ ಗ್ರಾಫಿಕ್ ಎರಾ ಹಿಲ್ ವಿಶ್ವವಿದ್ಯಾಲಯದಲ್ಲಿ ಅವರು ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಸೆಪ್ಟೆಂಬರ್ 2024ರಲ್ಲಿ ಅವರು ಐಐಎಂ ಬೆಂಗಳೂರಿನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಪ್ರೋಗ್ರಾಂಗೆ ಸೇರಿದರು.

ಝೆಡಿಟಲ್ ಮೀಡಿಯಾದ ವೆಬ್‌ಸೈಟ್ ಪ್ರಕಾರ, ಝೈದ್ ಖಾನ್ ಅವರು ಉತ್ತರಾಖಂಡದ ಅತ್ಯಂತ ಕಿರಿಯ ವಯಸ್ಸಿನ ಉದ್ಯಮಿ, ಇನ್ನೋವೇಟಿವ್ ಎಂಟರ್‌ಪ್ರಿನ್ಯೂರ್ 2024 ಮತ್ತು ಟ್ರೈಲ್‌ಬ್ಲೇಜರ್ ಇನ್ ಡಿಜಿಟಲ್ ಮಾರ್ಕೆಟಿಂಗ್ ಸೊಲ್ಯೂಷನ್ಸ್ ಸೇರಿದಂತೆ ಅನೇಕ ಮನ್ನಣೆಗಳನ್ನು ಪಡೆದಿದ್ದಾರೆ.

ಇಂದು ಭಾರತದ ಪ್ರಮುಖ ಬ್ಯುಸಿನೆಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಝೈದ್ ಖಾನ್, ಅದರ ಜೊತೆಗೆ ಬ್ರಾಂಡಿಂಗ್ ಮತ್ತು ಮೀಡಿಯಾ ಕಂಪೆನಿಯನ್ನೂ ಬೆಳೆಸುತ್ತಿದ್ದಾರೆ. ಯುವ ಉದ್ಯಮಿಗಳು ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿ ಡಿಜಿಟಲ್ ಗುರುತು ಸೃಷ್ಟಿಸಿಕೊಳ್ಳಲು ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ.

ಝೆಡಿಟಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಾಥಮಿಕವಾಗಿ ಬ್ರಾಂಡಿಂಗ್ ಮತ್ತು ಮಾಧ್ಯಮ ಜಾಹೀರಾತು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪೆನಿಯ ಪ್ರಕಾರ, ವ್ಯಕ್ತಿಗಳು ಮತ್ತು ಬ್ರಾಂಡ್‌ಗಳ ಡಿಜಿಟಲ್ ಉಪಸ್ಥಿತಿಯನ್ನು ಬಲಪಡಿಸಲು ನೆರವಾಗುತ್ತಿದ್ದು, ಆನ್‌ಲೈನ್ ರೆಪ್ಯುಟೇಶನ್ ಮ್ಯಾನೇಜ್‌ಮೆಂಟ್‌ (ORM), ಕಂಟೆಂಟ್ ಡಿಸ್ಟ್ರಿಬ್ಯೂಶನ್ ಮ್ಯಾನೇಜ್‌ಮೆಂಟ್‌ (CDM) ಮತ್ತು ಲಿಂಕ್‌ಡಿನ್ ಪ್ರೊಫೈಲ್ ಆಂಪ್ಲಿಫಿಕೇಶನ್ ಮ್ಯಾನೇಜ್‌ಮೆಂಟ್‌ (PAM) ಸೇರಿದಂತೆ ವಿವಿಧ ಸೇವೆಗಳನ್ನು ನೀಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News