8 ವರ್ಷದ ಬಾಲಕನ ಸಾಧನೆ; 8 ಡಾಲರ್ ಚಿಪ್ ಬಳಸಿ ಇಂಟರ್ನೆಟ್ ಅಗತ್ಯವಿಲ್ಲದ AI ಸಾಧನದ ಆವಿಷ್ಕಾರ
Photo Credit : indiatoday.in
ಹೈದರಾಬಾದ್‌ನ ಎಂಟು ವರ್ಷದ ಡೆವಲಪರ್ ಲಕ್ಷ್ಯ 760 ರೂ. ಬೆಲೆಯ ಮೈಕ್ರೋಕಂಟ್ರೋಲರ್ ಬಳಸಿ ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ, ಧ್ವನಿಯ ಮೂಲಕ ನಿಯಂತ್ರಿಸಬಹುದಾದ ಕಥೆ ಹೇಳುವ AI ಸಾಧನವನ್ನು ನಿರ್ಮಿಸಿದ್ದಾರೆ.
ಸಾಮಾನ್ಯವಾಗಿ AI ಸಾಧನಗಳು ಇಂಟರ್ನೆಟ್ ಇಲ್ಲದೆ ಕೆಲಸ ಮಾಡುವುದಿಲ್ಲ. ಕಥೆ ಹೇಳುವುದು, ಹಾಡು ಕೇಳುವುದು ಮತ್ತು ಇತರ ಯಾವುದೇ ಉದ್ದೇಶಕ್ಕಾಗಿ ಬಳಸುವ AI ಸಾಧನಗಳಿಗೆ ವೈಫೈ ಸಂಪರ್ಕ ಇರಲೇಬೇಕು. ಆದರೆ ಹೈದರಾಬಾದ್‌ನ 8 ವರ್ಷದ ಬಾಲಕ ಲಕ್ಷ್ಯ ಇಂಟರ್ನೆಟ್ ಅಗತ್ಯವಿಲ್ಲದೆ ಕೆಲಸ ಮಾಡುವ AI ಸಾಧನವನ್ನು ಆವಿಷ್ಕರಿಸಿದ್ದಾರೆ.
ಹೈದರಾಬಾದ್‌ನ ಎಂಟು ವರ್ಷದ ಡೆವಲಪರ್ ಲಕ್ಷ್ಯ 8 ಡಾಲರ್‌ನ ಮೈಕ್ರೋಕಂಟ್ರೋಲರ್ ಬಳಸಿ ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ, ಧ್ವನಿಯ ಮೂಲಕ ನಿಯಂತ್ರಿಸಬಹುದಾದ ಕೃತಕ ಬುದ್ಧಿಮತ್ತೆಯ (AI) ಕಥೆ ಹೇಳುವ ಸಾಧನವನ್ನು ನಿರ್ಮಿಸಿದ್ದಾರೆ.
ಅವರು ESP32-S3 ಮೈಕ್ರೋಕಂಟ್ರೋಲರ್, INMP441 ಮೈಕ್ರೋಫೋನ್, I2S ಸ್ಪೀಕರ್ ಮತ್ತು MAX98357A ಆಂಪ್ಲಿಫೈರ್ ಬಳಸಿ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವ್ಯವಸ್ಥೆಗೆ ಕಾರ್ಯನಿರ್ವಹಿಸಲು ವೈಫೈ, ಕ್ಲೌಡ್ ಸೇವೆಗಳು ಅಥವಾ API ಅಗತ್ಯವಿಲ್ಲ.
AI ಸಣ್ಣ ಕಥೆಗಳನ್ನು ರಚಿಸಬಹುದು, ಅವುಗಳನ್ನು ಗಟ್ಟಿಯಾಗಿ ಓದಬಹುದು, ಸರಳ ಅನಿಮೇಷನ್‌ಗಳನ್ನು ಪ್ರದರ್ಶಿಸಬಹುದು ಹಾಗೂ ಪ್ಲೇ, ಪಾಸ್, ರೆಸ್ಯೂಮ್ ಮತ್ತು ನೆಕ್ಸ್ಟ್ ಸ್ಟೋರಿಯಂತಹ ಧ್ವನಿ ಆಜ್ಞೆಗಳಿಗೆ ಪ್ರತಿಕ್ರಿಯಿಸಬಹುದು.
ಲಕ್ಷ್ಯ ಅವರು ಡೆವಲಪರ್ slvDev ರಚಿಸಿದ ESP32 ಗಾಗಿ TinyStories LLM ಎಂಬ ಓಪನ್ ಸೋರ್ಸ್ ಲ್ಯಾಂಗ್ವೇಜ್ ಮಾಡೆಲ್ ಅನ್ನು ಮಾರ್ಪಡಿಸುವ ಮೂಲಕ ಈ ಪ್ರಾಜೆಕ್ಟ್ ನಿರ್ಮಿಸಿದ್ದಾರೆ. ಇಂಟರ್ನೆಟ್ ಸಂಪರ್ಕವಿಲ್ಲದೆ ESP32 ಮೈಕ್ರೋಕಂಟ್ರೋಲರ್‌ನಲ್ಲಿ ಕಥೆಗಳನ್ನು ರಚಿಸಲು ಮೂಲ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.
ಲಕ್ಷ್ಯ ಅವರು ಧ್ವನಿಯ ಮೂಲಕ ಸಂವಹನ, ಪ್ಲೇಬ್ಯಾಕ್ ನಿಯಂತ್ರಣಗಳು ಮತ್ತು ಅನಿಮೇಷನ್‌ಗಳು ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದ್ದಾರೆ. ಹೀಗೆ ಅವರು ಸಣ್ಣ AI ಸಾಧನವನ್ನು ತಯಾರಿಸಿದ್ದು, ಬಳಕೆದಾರರು ಮಾತನಾಡುವ ಆಜ್ಞೆಗಳ ಮೂಲಕ ಅದನ್ನು ನಿಯಂತ್ರಿಸಬಹುದು. ಮೂಲ ಯೋಜನೆಯ ಸೋರ್ಸ್ ಕೋಡ್ GitHub ನಲ್ಲಿ ಲಭ್ಯವಿದೆ. ಅಲ್ಲಿ ಡೆವಲಪರ್‌ಗಳು ಅಸ್ತಿತ್ವದಲ್ಲಿರುವ ಮಾದರಿಯನ್ನು ಅಭಿವೃದ್ಧಿಪಡಿಸಬಹುದು ಅಥವಾ ತಮ್ಮದೇ ಆದ ಆವೃತ್ತಿಯನ್ನು ರಚಿಸಬಹುದು.
ಈ ಬಗ್ಗೆ ವಿವರ ನೀಡಿರುವ ಲಕ್ಷ್ಯ, ಸಾಧನವು ಸಂಪೂರ್ಣವಾಗಿ ESP32 ಚಿಪ್‌ನಲ್ಲೇ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. "ತಮಾಷೆಯ ಕಥೆಯೊಂದನ್ನು ರಚಿಸು" ಎಂದು ಹೇಳಿದಾಗ AI ಹೊಸ ಕಥೆಯೊಂದನ್ನು ರಚಿಸಿತು. ಬಳಿಕ ಸಾಧನವು ಅನಿಮೇಷನ್‌ಗಳನ್ನು ಪ್ರದರ್ಶಿಸುತ್ತಾ ಆ ಕಥೆಯನ್ನು ಗಟ್ಟಿಯಾಗಿ ಓದಿತು. ಬಳಕೆದಾರರು ಪ್ಲೇ ಮಾಡಲು, ವಿರಾಮಗೊಳಿಸಲು, ಪುನರಾರಂಭಿಸಲು ಅಥವಾ ಮುಂದೆ/ಹಿಂದೆ ಹೋಗಲು ಸರಳ ಧ್ವನಿ ಆಜ್ಞೆಗಳನ್ನು ಬಳಸಿಕೊಂಡು ಕಥೆ ಹೇಳುವುದನ್ನು ನಿಯಂತ್ರಿಸಬಹುದು. ಇವೆಲ್ಲವೂ ಇಂಟರ್ನೆಟ್‌ಗೆ ಸಂಪರ್ಕವಿಲ್ಲದೆಯೇ ಸಾಧನದಲ್ಲೇ ನಡೆಯುತ್ತದೆ.
ಲಕ್ಷ್ಯ ಅವರು ಮುಂದಿನ ಹಂತದಲ್ಲಿ ಧ್ವನಿಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ಉದ್ದೇಶ ಹೊಂದಿದ್ದಾರೆ. ಇಂಗ್ಲಿಷ್ ಧ್ವನಿ ಇನ್ನೂ ಮೂಲಭೂತ ಹಂತದಲ್ಲಿರುವುದರಿಂದ ಅದನ್ನು ಉತ್ತಮಗೊಳಿಸಲು ಬಯಸಿದ್ದಾರೆ. ತಮ್ಮ ಸಾಧನದ ಪಠ್ಯದಿಂದ ಮಾತು (Text-to-Speech) ಔಟ್‌ಪುಟ್ ಅನ್ನು ಇನ್ನಷ್ಟು ಸುಧಾರಿಸುವ ಗುರಿಯನ್ನೂ ಹೊಂದಿದ್ದಾರೆ.
ಲಕ್ಷ್ಯ ಅವರು ಸಾಂಪ್ರದಾಯಿಕ ಶಾಲೆಯಲ್ಲಿ ಪೂರ್ಣಾವಧಿ ಹಾಜರಾಗುವ ಬದಲು ಸ್ವತಂತ್ರ ಆನ್‌ಲೈನ್ ಶಿಕ್ಷಣ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಅವರಿಗೆ ಹೊಸ ವಿಷಯಗಳನ್ನು ಅನ್ವೇಷಿಸಲು ಮತ್ತು ಸ್ವತಂತ್ರ ಕಲಿಕೆಯನ್ನು ಮುಂದುವರಿಸಲು ಹೆಚ್ಚಿನ ಸ್ವಾತಂತ್ರ್ಯ ದೊರೆತಿದೆ. ಜೊತೆಗೆ, ಸಂಸ್ಥಾಪಕರು ಮತ್ತು ಉದ್ಯಮಿಗಳೊಂದಿಗೆ ಹೆಚ್ಚು ಸಮಯ ಸಂವಾದ ನಡೆಸುವ ಅವಕಾಶವೂ ಸಿಕ್ಕಿದೆ.
ಈ ಪ್ರಾಜೆಕ್ಟ್ ಮೂಲಕ ಓಪನ್ ಸೋರ್ಸ್ AI ಮಾಡೆಲ್‌ಗಳು ಮತ್ತು ಕಡಿಮೆ ವೆಚ್ಚದ ಹಾರ್ಡ್‌ವೇರ್ ಅನ್ನು ಸಂಯೋಜಿಸಿ ಆಫ್‌ಲೈನ್ AI ಅಪ್ಲಿಕೇಶನ್‌ಗಳನ್ನು ನಿರ್ಮಿಸಬಹುದು ಎಂಬುದನ್ನು ತೋರಿಸಲಾಗಿದೆ. ಸಣ್ಣ ಲ್ಯಾಂಗ್ವೇಜ್ ಮಾಡೆಲ್‌ಗಳನ್ನು ಕ್ಲೌಡ್ ಕಂಪ್ಯೂಟಿಂಗ್ ಅಗತ್ಯವಿಲ್ಲದೆ ಕಾಂಪ್ಯಾಕ್ಟ್ ಸಾಧನಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬಹುದು ಎಂಬುದನ್ನೂ ಇದು ತೋರಿಸಿದೆ. ಇಂಟರ್ನೆಟ್ ಸಂಪರ್ಕ ಕಡಿಮೆ ಇರುವ ಪ್ರದೇಶಗಳಲ್ಲಿ ಇಂತಹ ಸಾಧನಗಳು ಹೆಚ್ಚು ಉಪಯುಕ್ತವಾಗಬಹುದು.