OpenAI ಕಂಪೆನಿಯ AI ಏಜೆಂಟ್ ಭದ್ರತಾ ಪರೀಕ್ಷೆಯ ಬೆನ್ನಲ್ಲೇ NVIDIA 'ಓಪನ್ ಸೆಕ್ಯೂರ್ ಎಐ ಅಲೈಯನ್ಸ್' ಆರಂಭಿಸಿದ್ದು ಏಕೆ?

Update: 2026-07-30 21:58 IST

Photo Credit : indianexpress.com

ಮೌಲ್ಯಮಾಪನದ ವೇಳೆ ತಮ್ಮ ಅತ್ಯಂತ ಸಾಮರ್ಥ್ಯವುಳ್ಳ ಎರಡು ಎಐ ಏಜೆಂಟ್‌ಗಳು 'ಹಗ್ಗಿಂಗ್ ಫೇಸ್' ಎಂಬ ಎಐ ಕಂಪೆನಿಯ ದತ್ತಾಂಶವನ್ನು ಹ್ಯಾಕ್ ಮಾಡಿದ್ದವು ಎಂದು OpenAI ಕಂಪೆನಿ ಪ್ರಕಟಿಸಿದ ಒಂದು ವಾರದ ಬೆನ್ನಲ್ಲೇ, ಪ್ರಸಿದ್ಧ ಚಿಪ್ ತಯಾರಿಕಾ ಕಂಪೆನಿ ಎನ್‌ವಿಡಿಯಾ (NVIDIA) ಜುಲೈ 27ರಂದು 'ಓಪನ್ ಸೆಕ್ಯೂರ್ ಎಐ ಅಲೈಯನ್ಸ್' (Open Secure AI Alliance) ಎಂಬ ಹೊಸ ಮೈತ್ರಿಕೂಟವನ್ನು ಘೋಷಿಸಿದೆ.

ಈ ಕುರಿತು ಬ್ಲಾಗ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ NVIDIA, ಈ ಘಟನೆಯು ಜಾಗತಿಕ ಸೈಬರ್ ರಕ್ಷಣಾಪಡೆಗಳಿಗೆ ಮುಕ್ತ ಎಐ ವ್ಯವಸ್ಥೆಗಳ ಅಗತ್ಯವನ್ನು ತೋರಿಸಿಕೊಟ್ಟಿದೆ ಎಂದು ಹೇಳಿದೆ. ತಮ್ಮದೇ ತಾಂತ್ರಿಕ ಮೂಲಸೌಕರ್ಯದಲ್ಲಿ ಅತ್ಯಾಧುನಿಕ ಎಐ ಅನ್ನು ಪರೀಕ್ಷಿಸಲು, ಬದಲಾಯಿಸಲು ಮತ್ತು ಚಲಾಯಿಸಲು ಈ ವ್ಯವಸ್ಥೆ ನೆರವಾಗಲಿದೆ. ಹೆಚ್ಚು ಸ್ವಾಯತ್ತವಾಗಿ ಕೆಲಸ ಮಾಡುವ ಎಐ ವ್ಯವಸ್ಥೆಗಳಿಗಾಗಿ ಓಪನ್ ಸೋರ್ಸ್ ಭದ್ರತಾ ಉಪಕರಣಗಳು, ಮೌಲ್ಯಮಾಪನ ಚೌಕಟ್ಟುಗಳು ಮತ್ತು ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು ಈ ಮೈತ್ರಿಕೂಟದ ಮುಖ್ಯ ಉದ್ದೇಶವಾಗಿದೆ.

ಈ ಪ್ರಕಟಣೆಯು ಎಐ ಉದ್ಯಮವು ಭದ್ರತೆಯನ್ನು ನೋಡುವ ರೀತಿಯಲ್ಲಿ ದೊಡ್ಡ ಬದಲಾವಣೆ ತಂದಿರುವುದನ್ನು ತೋರಿಸುತ್ತದೆ. ಎಐ ವ್ಯವಸ್ಥೆಗಳು ಕೇವಲ ಪಠ್ಯವನ್ನು ರಚಿಸುವುದಕ್ಕೆ ಸೀಮಿತವಾಗದೆ, ಇಂಟರ್ನೆಟ್ ಬಳಸುವುದು, ಕೋಡಿಂಗ್ ಬರೆಯುವುದು ಮತ್ತು ಇತರ ತಾಂತ್ರಿಕ ಉಪಕರಣಗಳೊಂದಿಗೆ ಸಂವಹನ ನಡೆಸುವ ಮಟ್ಟಕ್ಕೆ ಬೆಳೆದಿವೆ. ಹೀಗಾಗಿ ಅವು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಹೊಸ ಭದ್ರತಾ ಸವಾಲುಗಳನ್ನು ಹುಟ್ಟುಹಾಕಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಎಐ ವ್ಯವಸ್ಥೆಗಳು ಹೊರಗಿನ ತಾಂತ್ರಿಕ ಮೂಲಸೌಕರ್ಯಗಳೊಂದಿಗೆ ಸಂವಹನ ನಡೆಸುವಾಗ ನೈಜ ಜಗತ್ತಿನಲ್ಲಿ ಎಂತಹ ಭದ್ರತಾ ಆತಂಕಗಳನ್ನು ತರಬಹುದು ಎಂಬುದನ್ನು ಓಪನ್‌ಎಐ - ಹಗ್ಗಿಂಗ್ ಫೇಸ್ ಪರೀಕ್ಷೆಯು ಎತ್ತಿ ತೋರಿಸಿದೆ.

ಏನಿದು ಮೈತ್ರಿಕೂಟ?

ಎಐ ಭದ್ರತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಲು ಎಐ ಕಂಪೆನಿಗಳು, ಸೈಬರ್ ಭದ್ರತಾ ಕಂಪೆನಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಈ ಮೈತ್ರಿಕೂಟವು ಒಂದೇ ವೇದಿಕೆಗೆ ತರುತ್ತದೆ. ಮತ್ತೊಂದು ಹೊಸ ಎಐ ಮಾದರಿಯನ್ನು ಅಭಿವೃದ್ಧಿಪಡಿಸುವ ಬದಲು, ಎಐ ವ್ಯವಸ್ಥೆಗಳನ್ನು ಪರೀಕ್ಷಿಸಲು ಮತ್ತು ಸುರಕ್ಷಿತಗೊಳಿಸಲು ಓಪನ್ ಸೋರ್ಸ್ ಭದ್ರತಾ ಉಪಕರಣಗಳು, ಮಾನದಂಡಗಳು, ಮೌಲ್ಯಮಾಪನ ಚೌಕಟ್ಟುಗಳು, ಸಾಫ್ಟ್‌ವೇರ್ ಲೋಪಗಳ ಸಂಶೋಧನೆ ಮತ್ತು ಉತ್ತಮ ಪದ್ಧತಿಗಳನ್ನು ರೂಪಿಸಲು ಈ ಒಕ್ಕೂಟದ ಸದಸ್ಯರು ಯೋಜನೆ ರೂಪಿಸಿದ್ದಾರೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಎಐ ವ್ಯವಸ್ಥೆಗಳ ಭದ್ರತೆಯನ್ನು ಪರೀಕ್ಷಿಸಲು ಮತ್ತು ಸುಧಾರಿಸಲು ಕಂಪೆನಿಗಳಿಗೆ ನೆರವಾಗುವ ಜಂಟಿ ತಾಂತ್ರಿಕ ಮೂಲಸೌಕರ್ಯವನ್ನು ಒದಗಿಸುವುದು ಕೂಡ ಇದರ ಮುಖ್ಯ ಉದ್ದೇಶವಾಗಿದೆ.

NVIDIA ಹೊರತಾಗಿ, ಮೈಕ್ರೋಸಾಫ್ಟ್, ಐಬಿಎಂ, ಸಿಸ್ಕೋ, ಕ್ಲೌಡ್‌ಫ್ಲೇರ್ ಮತ್ತು ಹಗ್ಗಿಂಗ್ ಫೇಸ್ ಸೇರಿದಂತೆ ಪ್ರಮುಖ ಎಐ ಅಭಿವೃದ್ಧಿ ಕಂಪೆನಿಗಳು, ಕ್ಲೌಡ್ ಪೂರೈಕೆದಾರರು ಮತ್ತು ಸೈಬರ್ ಭದ್ರತಾ ಕಂಪೆನಿಗಳು ಇದರ ಸಂಸ್ಥಾಪಕ ಸದಸ್ಯರಾಗಿದ್ದಾರೆ. ಪ್ರಮುಖವಾಗಿ, ಎಐ ರಂಗದ ಮುಂಚೂಣಿ ಮಾದರಿಗಳನ್ನು ಅಭಿವೃದ್ಧಿಪಡಿಸಿರುವ ಗೂಗಲ್, ಓಪನ್‌ಎಐ ಮತ್ತು ಆಂಥ್ರೋಪಿಕ್ ಕಂಪೆನಿಗಳು ಈ ಮೈತ್ರಿಕೂಟದ ಸಂಸ್ಥಾಪಕ ಸದಸ್ಯರ ಪಟ್ಟಿಯಲ್ಲಿಲ್ಲ.

ಮುಕ್ತ ಭದ್ರತೆಯ ಪರ ವಾದ

ಈ ಮೈತ್ರಿಕೂಟವು ಎಐ ಭದ್ರತಾ ಉಪಕರಣಗಳನ್ನು ಸಾರ್ವಜನಿಕವಾಗಿ ಮತ್ತು ಮುಕ್ತವಾಗಿ ಅಭಿವೃದ್ಧಿಪಡಿಸುವುದರ ಮೇಲೆ ಗಮನ ಹರಿಸಿದೆ. ಹೊಸ ಆವಿಷ್ಕಾರಗಳು, ಸ್ಪರ್ಧೆ ಮತ್ತು ಭದ್ರತೆಯನ್ನು ಸುಧಾರಿಸಲು ಇತ್ತೀಚೆಗೆ 'ಓಪನ್-ವೇಟ್' ಎಐ ಮಾದರಿಗಳನ್ನು ಬೆಂಬಲಿಸಿದ್ದ NVIDIA ಕಂಪೆನಿಗೆ ಇದು ಮುಕ್ತ ಎಐ ವ್ಯವಸ್ಥೆಯತ್ತ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

ಇತ್ತೀಚಿನ ದಿನಗಳಲ್ಲಿ NVIDIA ನಡೆಸುತ್ತಿರುವ ವ್ಯಾಪಕ ಅಭಿಯಾನವನ್ನು ಈ ಮೈತ್ರಿಕೂಟವು ಪ್ರತಿಫಲಿಸುತ್ತದೆ. 'ಓಪನ್-ವೇಟ್' ಎಐ ವ್ಯವಸ್ಥೆಯು ಕಂಪೆನಿಗಳಿಗೆ ಅತ್ಯಾಧುನಿಕ ಎಐ ವ್ಯವಸ್ಥೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಮತ್ತು ಮೌಲ್ಯಮಾಪನ ಮಾಡಲು ಅವಕಾಶ ನೀಡುವ ಮೂಲಕ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಎನ್‌ವಿಡಿಯಾ ನೀತಿ ನಿರೂಪಕರಿಗೆ ಮನವರಿಕೆ ಮಾಡಿಕೊಟ್ಟಿದೆ. ಮುಕ್ತ ವ್ಯವಸ್ಥೆಯು ಎಐ ಅಭಿವೃದ್ಧಿಯನ್ನು ಹೇಗೆ ವೇಗಗೊಳಿಸುತ್ತದೆ ಎಂಬುದಕ್ಕೆ ಚೀನಾದ ಓಪನ್-ವೇಟ್ ಮಾದರಿಗಳನ್ನು ಉದಾಹರಣೆಯಾಗಿ ನೀಡಿದೆ. ಈ ಹೊಸ ಮೈತ್ರಿಕೂಟವು ಅದೇ ವಾದವನ್ನು ಕೇವಲ ಎಐ ಮಾದರಿಗಳಿಗೆ ಸೀಮಿತಗೊಳಿಸದೆ, ಎಐ ಭದ್ರತೆಗೂ ವಿಸ್ತರಿಸಿದೆ.

ಎಐ ಮಾದರಿಗಳನ್ನು ಹೆಚ್ಚು ಜನರಿಗೆ ಸಿಗುವಂತೆ ಮಾಡುವುದರ ಕುರಿತು ಚರ್ಚೆಗಳು ನಡೆಯುತ್ತಿದ್ದ ವೇಳೆಯಲ್ಲೇ, ಈ ಹೊಸ ಮೈತ್ರಿಕೂಟವು ಅದೇ ಕಲ್ಪನೆಯನ್ನು ಎಐ ಭದ್ರತೆಗೂ ಅನ್ವಯಿಸಿದೆ. ಕೇವಲ ಮಾದರಿಗಳನ್ನು ಮುಕ್ತಗೊಳಿಸುವ ಬದಲು, ಅವುಗಳನ್ನು ಪರೀಕ್ಷಿಸಲು ಮತ್ತು ಸುರಕ್ಷಿತಗೊಳಿಸಲು ಬಳಸುವ ಉಪಕರಣಗಳನ್ನು ಮುಕ್ತವಾಗಿ ಅಭಿವೃದ್ಧಿಪಡಿಸುವುದು ಮತ್ತು ಹಂಚಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.

ಓಪನ್ ಸೋರ್ಸ್ ಸಾಫ್ಟ್‌ವೇರ್ ಎಂದರೆ ಅದರ ಮೂಲ ಕೋಡ್ (Code) ಸಾರ್ವಜನಿಕವಾಗಿ ಲಭ್ಯವಿರುತ್ತದೆ. ಇದನ್ನು ಇತರರು ಬಳಸಲು, ಅಭ್ಯಾಸ ಮಾಡಲು, ಬದಲಾಯಿಸಲು ಮತ್ತು ಹಂಚಿಕೊಳ್ಳಲು ಅವಕಾಶವಿರುತ್ತದೆ. ಪ್ರಮುಖ ಎಐ ಮಾದರಿಗಳು ಸಾಂಪ್ರದಾಯಿಕ ಅರ್ಥದಲ್ಲಿ ಓಪನ್ ಸೋರ್ಸ್ ಆಗಿಲ್ಲ. ಕೆಲವು ಕಂಪೆನಿಗಳು ತಮ್ಮ ಮಾದರಿಗಳನ್ನು 'ಓಪನ್-ವೇಟ್' ರೂಪದಲ್ಲಿ ಬಿಡುಗಡೆ ಮಾಡುತ್ತವೆ. ಎಂದರೆ, ಡೆವಲಪರ್‌ಗಳು ತರಬೇತಿ ಪಡೆದ ಮಾದರಿಯನ್ನು ಡೌನ್‌ಲೋಡ್ ಮಾಡಿ ಬಳಸಬಹುದು, ಆದರೆ ಅದನ್ನು ನಿರ್ಮಿಸಲು ಬಳಸಿದ ಕೋಡ್ ಅಥವಾ ಡೇಟಾಗೆ ಪ್ರವೇಶ ಸಿಗುವುದಿಲ್ಲ.

ಸಾರ್ವಜನಿಕ ಪರಿಶೀಲನೆಯಿಂದ ಸಾಫ್ಟ್‌ವೇರ್‌ನಲ್ಲಿರುವ ಲೋಪಗಳನ್ನು ಬೇಗನೇ ಪತ್ತೆಹಚ್ಚಲು ಮತ್ತು ಸಾಮಾನ್ಯ ಮಾನದಂಡಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಬೆಂಬಲಿಗರು ವಾದಿಸುತ್ತಾರೆ. ಈ ಮುಕ್ತ ವ್ಯವಸ್ಥೆಯು ದುಷ್ಟಶಕ್ತಿಗಳಿಗೂ ದುರ್ಬಳಕೆ ಮಾಡಿಕೊಳ್ಳಲು ಸುಲಭವಾಗಬಹುದು ಎಂಬುದು ವಿಮರ್ಶಕರ ಆತಂಕವಾಗಿದೆ.

ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್‌ಗಳ (APIs) ಮೂಲಕ ಪಡೆಯುವ ಕ್ಲೋಸ್ಡ್ ಎಐ ಸೇವೆಗಳನ್ನು ಮಾತ್ರ ಸಂಪೂರ್ಣವಾಗಿ ನಂಬುವ ಬದಲು, ಸೈಬರ್ ರಕ್ಷಣಾಪಡೆಗಳು ತಮ್ಮದೇ ತಾಂತ್ರಿಕ ಮೂಲಸೌಕರ್ಯದಲ್ಲಿ ಪರಿಶೀಲಿಸಬಹುದಾದ, ಬದಲಾಯಿಸಬಹುದಾದ ಮತ್ತು ಚಲಾಯಿಸಬಹುದಾದ ಮುಕ್ತ ಎಐ ವ್ಯವಸ್ಥೆಗಳ ಅಗತ್ಯವಿದೆ ಎಂಬುದು ಎನ್‌ವಿಡಿಯಾದ ವಾದವಾಗಿದೆ.

ಜುಲೈ 16ರಂದು ಘಟನೆಯ ಕುರಿತು ನೀಡಿದ ಆರಂಭಿಕ ವರದಿ ಮತ್ತು ನಂತರ ಪ್ರಕಟಿಸಿದ ತಾಂತ್ರಿಕ ವಿಶ್ಲೇಷಣೆಯಲ್ಲಿ 'ಹಗ್ಗಿಂಗ್ ಫೇಸ್' ಕಂಪೆನಿಯು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆಂಥ್ರೋಪಿಕ್‌ನ 'ಕ್ಲಾಡ್ ಓಪಸ್' ನಂತಹ ಕ್ಲೋಸ್ಡ್ ವಾಣಿಜ್ಯ ಎಐ ಉಪಕರಣಗಳು ದಾಳಿಯ ಲಾಗ್‌ಗಳನ್ನು (Logs) ಅಪಾಯಕಾರಿ ಎಂದು ಪರಿಗಣಿಸಿದ್ದವು ಎಂದು ಕಂಪೆನಿ ತಿಳಿಸಿದೆ. ಬದಲಿಗೆ, ಅದು ತನ್ನದೇ ಆದ ಮೂಲಸೌಕರ್ಯದಲ್ಲಿ ಡೌನ್‌ಲೋಡ್ ಮಾಡಿ ಚಲಾಯಿಸಬಹುದಾದ ಚೀನಾದ ಓಪನ್-ವೇಟ್ ಮಾದರಿಯಾದ 'ಜಿಎಲ್‌ಎಮ್ 5.2' (GLM 5.2) ಅನ್ನು ಬಳಸಿ ಲಾಗ್‌ಗಳನ್ನು ವಿಶ್ಲೇಷಿಸಿತು.

'AI intrusions are now real' ಎಂಬ ಶೀರ್ಷಿಕೆಯಡಿ ಈ ಘಟನೆಯನ್ನು ವಿಶ್ಲೇಷಿಸಿ ಪ್ರಬಂಧ ಬರೆದಿರುವ ಭದ್ರತಾ ಸಂಶೋಧಕ ಜೊಹಾನ್ ರೆಹಬರ್ಗರ್, ಸ್ವಾಯತ್ತ ಎಐ ಅತಿಕ್ರಮಣಗಳು ಕೇವಲ ಸೈದ್ಧಾಂತಿಕ ಅಪಾಯವಾಗಿ ಉಳಿದಿಲ್ಲ, ಬದಲಿಗೆ ನೈಜ ಬೆದರಿಕೆಯಾಗಿ ಮಾರ್ಪಟ್ಟಿವೆ ಎಂದು ವಾದಿಸಿದ್ದಾರೆ. ಎಐ ವ್ಯವಸ್ಥೆಗಳು ವಿವಿಧ ಉಪಕರಣಗಳು, ಕಾರ್ಪೊರೇಟ್ ಸಾಫ್ಟ್‌ವೇರ್‌ಗಳು ಮತ್ತು ಹೊರಗಿನ ತಾಂತ್ರಿಕ ಮೂಲಸೌಕರ್ಯಗಳನ್ನು ಬಳಸಲು ಆರಂಭಿಸಿರುವುದರಿಂದ, ಕಂಪೆನಿಗಳು ತಮ್ಮ ಎಐ ಬಳಕೆಯಲ್ಲಿ ಸಾಂಪ್ರದಾಯಿಕ ಸೈಬರ್ ಭದ್ರತಾ ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಬರೆದಿದ್ದಾರೆ.

NVIDIA ಮುಕ್ತ ಭದ್ರತೆಗೆ ಒತ್ತು ನೀಡುತ್ತಿರುವುದು ಏಕೆ?

ಮುಕ್ತ ಭದ್ರತೆಯತ್ತ NVIDIA ತೋರುತ್ತಿರುವ ಆಸಕ್ತಿಯು ಕೇವಲ ಚಿಪ್ ವಿನ್ಯಾಸಕ್ಕೆ ಸೀಮಿತವಾಗದೆ ಇತರ ಕ್ಷೇತ್ರಗಳಿಗೂ ವಿಸ್ತರಿಸುತ್ತಿರುವ ಅದರ ಆಕಾಂಕ್ಷೆಯನ್ನು ತೋರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಕಂಪೆನಿಯು ಎಐ ಹಾರ್ಡ್‌ವೇರ್‌ನಿಂದ ಸಾಫ್ಟ್‌ವೇರ್, ಎಐ ವೇದಿಕೆಗಳು ಮತ್ತು ಕಾರ್ಪೊರೇಟ್ ಎಐ ಸೇರಿದಂತೆ ಸಂಪೂರ್ಣ ತಾಂತ್ರಿಕ ವಲಯಕ್ಕೆ ತನ್ನ ಗಮನವನ್ನು ವಿಸ್ತರಿಸಿದೆ. ಭದ್ರತೆಯು ಈ ತಾಂತ್ರಿಕ ವ್ಯವಸ್ಥೆಯ ಮತ್ತೊಂದು ಪ್ರಮುಖ ಭಾಗವಾಗುತ್ತಿದೆ.

ಉದ್ಯಮಗಳು ಎಐ ಏಜೆಂಟ್‌ಗಳನ್ನು ಬಳಸಲು ಪ್ರಯೋಗಗಳನ್ನು ನಡೆಸುತ್ತಿವೆ. ಈ ಏಜೆಂಟ್‌ಗಳು ಆಂತರಿಕ ಡೇಟಾಗಳನ್ನು ಹುಡುಕುವ, ಸಾಫ್ಟ್‌ವೇರ್‌ಗಳನ್ನು ಬಳಸುವ ಮತ್ತು ಕಂಪೆನಿಗಳ ಪರವಾಗಿ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿವೆ. ಆದರೆ ಇವು ಆಂತರಿಕ ವ್ಯವಸ್ಥೆಗಳು ಮತ್ತು ಬಾಹ್ಯ ಉಪಕರಣಗಳನ್ನು ಬಳಸುವಾಗ ಭದ್ರತೆಯೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಜಂಟಿ ತಾಂತ್ರಿಕ ಮೂಲಸೌಕರ್ಯವನ್ನು ನಿರ್ಮಿಸಲು ನೆರವಾಗುವ ಮೂಲಕ, ಎನ್‌ವಿಡಿಯಾ ಕಂಪೆನಿಗಳಲ್ಲಿ ಎಐ ಬಳಕೆಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ದಾರಿ ಮಾಡಿಕೊಡುತ್ತಿದೆ.

ಹಂಚಿಕೆಯ ಭದ್ರತಾ ಉಪಕರಣಗಳು ಮತ್ತು ಮೌಲ್ಯಮಾಪನ ಚೌಕಟ್ಟುಗಳಿಗೆ ಬೆಂಬಲ ನೀಡುವ ಮೂಲಕ, ಎನ್‌ವಿಡಿಯಾ ಕೇವಲ ಎಐ ಮೂಲಸೌಕರ್ಯವನ್ನು ನಿರ್ಮಿಸುವುದಕ್ಕಷ್ಟೇ ಸೀಮಿತವಾಗದೆ, ಎಐ ವ್ಯವಸ್ಥೆಗಳನ್ನು ಹೇಗೆ ಪರೀಕ್ಷಿಸಬೇಕು ಮತ್ತು ಸುರಕ್ಷಿತಗೊಳಿಸಬೇಕು ಎಂಬುದನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಈ ಮೈತ್ರಿಕೂಟವು ಎರಡು ಉದ್ದೇಶಗಳನ್ನು ಈಡೇರಿಸುತ್ತದೆ. ಮುಕ್ತ ವ್ಯವಸ್ಥೆಯು ಎಐ ಭದ್ರತೆಯನ್ನು ಬಲಪಡಿಸುತ್ತದೆ ಎಂಬ ಎನ್‌ವಿಡಿಯಾದ ಹಳೆಯ ವಾದಕ್ಕೆ ಇದು ಪುಷ್ಟಿ ನೀಡುತ್ತದೆ. ಜೊತೆಗೆ, ಎನ್‌ವಿಡಿಯಾದ ತಾಂತ್ರಿಕ ವ್ಯವಸ್ಥೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಕಾರ್ಪೊರೇಟ್ ಎಐ ವ್ಯವಸ್ಥೆಗಳ ಮೇಲೆ ನಂಬಿಕೆ ಮೂಡಿಸಲು ನೆರವಾಗುತ್ತದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News