ಪೋಲಿಸ್ ಕಾರ್ಯಾಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾತ್ರ ಪ್ರಶ್ನಿಸಿದ ರಾಹುಲ್ ಗಾಂಧಿ: ಕಾನೂನು ಏನು ಹೇಳುತ್ತದೆ?
ರಾಹುಲ್ ಗಾಂಧಿ , ಅಮಿತ್ ಶಾ | Photo Credit : PTI
ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡಲು ಕೇಂದ್ರ ಗೃಹ ಸಚಿವರು ಪೊಲೀಸರಿಗೆ ಆದೇಶ ನೀಡಬಹುದೇ? ನಿಷೇಧಾಜ್ಞೆ ಜಾರಿಗೊಳಿಸಿದ ತಕ್ಷಣವೇ ಲಾಠಿಚಾರ್ಜ್ ಅಥವಾ ಅಶ್ರುವಾಯು ಬಳಸಲು ಕಾನೂನಿನಲ್ಲಿ ಅವಕಾಶವಿದೆಯೇ? ಬಲಪ್ರಯೋಗವು ಯಾವಾಗ ಕಾನೂನುಬದ್ಧವಾಗುತ್ತದೆ ಎಂಬುದನ್ನು ಅಂತಿಮವಾಗಿ ನಿರ್ಧರಿಸುವವರು ಯಾರು?
NEET-UG ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕಾರ್ಯಾಚರಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆಗಾರರು ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ ನಂತರ ಈ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಸಂಸತ್ತಿನಲ್ಲಿ ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಆಡಳಿತ ಪಕ್ಷದ ಸದಸ್ಯರೊಂದಿಗೆ ಸುದೀರ್ಘ ವಾಗ್ವಾದ ನಡೆಸಿದರು. ನಂತರ ಪತ್ರಿಕಾಗೋಷ್ಠಿಯಲ್ಲೂ ತಮ್ಮ ಆರೋಪಗಳನ್ನು ಪುನರುಚ್ಚರಿಸಿದ ಅವರು, ಬಲಪ್ರಯೋಗಕ್ಕೆ ಯಾರು ಅನುಮತಿ ನೀಡಿದ್ದರು ಎಂದು ಪ್ರಶ್ನಿಸಿ ಗೃಹ ಸಚಿವರಿಂದ ಹೊಣೆಗಾರಿಕೆಯನ್ನು ಆಗ್ರಹಿಸಿದರು.
ಸರ್ಕಾರ ಈ ಆರೋಪಗಳನ್ನು ತಿರಸ್ಕರಿಸಿದ್ದು, ಪೊಲೀಸರು ಕಾನೂನಿನಂತೆಯೇ ಕ್ರಮ ಕೈಗೊಂಡಿದ್ದಾರೆ. ಪೆಲೆಟ್ ಗನ್‌ಗಳಾಗಲಿ ಅಥವಾ ಗುಂಡುಗಳಾಗಲಿ ಬಳಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಸಂದರ್ಭದಲ್ಲಿ ಬಲಪ್ರಯೋಗ ಮಾಡಲು ಕೇಂದ್ರ ಗೃಹ ಸಚಿವರು ಅಧಿಕಾರ ನೀಡುವುದಿಲ್ಲ ಅಥವಾ ಕಾರ್ಯಾಚರಣೆಗೆ ಆದೇಶಗಳನ್ನು ನೀಡುವುದಿಲ್ಲ ಎಂದೂ ಸರ್ಕಾರ ವಿವರಣೆ ನೀಡಿದೆ.
ಈ ರಾಜಕೀಯ ಸಂಘರ್ಷವು ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಅಧಿಕಾರಗಳನ್ನು ನಿಯಂತ್ರಿಸುವ ಕಾನೂನು ಚೌಕಟ್ಟಿನತ್ತ ಗಮನ ಸೆಳೆದಿದೆ. ಇದಕ್ಕೆ ಉತ್ತರಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), ನ್ಯಾಯಾಲಯದ ತೀರ್ಪುಗಳು ಮತ್ತು ಪೊಲೀಸ್ ನಿಯಮಾವಳಿಗಳಲ್ಲಿ ಸಿಗುತ್ತವೆ.
ಕಾನೂನುಬಾಹಿರವಾಗಿ ಸೇರಿರುವ ಗುಂಪನ್ನು ಚದುರಿಸಲು ಬಿಎನ್‌ಎಸ್‌ಎಸ್ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆಯಾದರೂ, ಬಲಪ್ರಯೋಗಕ್ಕೆ ಯಾರು ಆದೇಶ ನೀಡಬಹುದು, ಯಾವ ಪರಿಸ್ಥಿತಿಗಳಲ್ಲಿ ಅದನ್ನು ಬಳಸಬಹುದು ಮತ್ತು ಅನುಸರಿಸಬೇಕಾದ ಕಾರ್ಯವಿಧಾನದ ರಕ್ಷಣೆಗಳೇನು ಎಂಬುದನ್ನೂ ಅದು ಸ್ಪಷ್ಟವಾಗಿ ನಿರ್ದಿಷ್ಟಪಡಿಸುತ್ತದೆ.
ಬಲಪ್ರಯೋಗಕ್ಕೆ ಆದೇಶ ನೀಡುವ ಅಧಿಕಾರ ಯಾರಿಗೆ ಇದೆ?
ಬಲಪ್ರಯೋಗಕ್ಕೆ ಆದೇಶ ನೀಡುವ ಪ್ರಾಥಮಿಕ ಅಧಿಕಾರವು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಥವಾ ಸಬ್-ಇನ್ಸ್‌ಪೆಕ್ಟರ್ ಶ್ರೇಣಿಗಿಂತ ಕಡಿಮೆಯಿಲ್ಲದ ಯಾವುದೇ ಪೊಲೀಸ್ ಅಧಿಕಾರಿಗೆ ಇರುತ್ತದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 148, ಕಾನೂನುಬಾಹಿರ ಸಮಾವೇಶವನ್ನು ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಯಿರುವ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪನ್ನು ಚದುರಲು ಆದೇಶಿಸಲು ಈ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
ಆ ಸಮಾವೇಶವು ಆದೇಶವನ್ನು ಪಾಲಿಸಲು ನಿರಾಕರಿಸಿದರೆ ಅಥವಾ ಚದುರಲು ನಿರಾಕರಿಸುತ್ತಿದೆ ಎಂದು ಸ್ಪಷ್ಟವಾದರೆ, ಅದನ್ನು ಚದುರಿಸಲು ಅಧಿಕಾರಿಗಳು ನಾಗರಿಕ ಬಲವನ್ನು ಬಳಸಬಹುದು.
ಇದು ಸಿಆರ್‌ಪಿಸಿ (CrPC) ಸೆಕ್ಷನ್ 129 ರಿಂದ 131ರ ಅಡಿಯಲ್ಲಿ ಇದ್ದ ನಿಯಮಾವಳಿಯನ್ನೇ ಹೋಲುತ್ತದೆ.
ವಿಶೇಷವೆಂದರೆ, ಬಿಎನ್‌ಎಸ್‌ಎಸ್ ಈ ಶಾಸನಬದ್ಧ ಅಧಿಕಾರವನ್ನು ಕೇಂದ್ರ ಗೃಹ ಸಚಿವರಿಗೆ ನೀಡುವುದಿಲ್ಲ. ಸ್ಥಳದಲ್ಲೇ ಗುಂಪನ್ನು ಚದುರಿಸುವ ಆದೇಶಗಳನ್ನು ಹೊರಡಿಸುವ ಮತ್ತು ಬಲಪ್ರಯೋಗಕ್ಕೆ ಅನುಮತಿ ನೀಡುವ ಜವಾಬ್ದಾರಿಯುತ ಅಧಿಕಾರಿಗಳನ್ನು ಕಾನೂನು ನಿರ್ದಿಷ್ಟವಾಗಿ ಗುರುತಿಸುತ್ತದೆ.
ಸೆಕ್ಷನ್ 163 ತಾನಾಗಿಯೇ ಪೊಲೀಸ್ ಕಾರ್ಯಾಚರಣೆಗೆ ಅವಕಾಶ ನೀಡುತ್ತದೆಯೇ?
ಇಲ್ಲ.
ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಅಥವಾ ಅಪಾಯವನ್ನು ತಡೆಯಲು ಸಮಾವೇಶಗಳು ಅಥವಾ ಕೆಲವು ಚಟುವಟಿಕೆಗಳನ್ನು ನಿರ್ಬಂಧಿಸುವ ತಡೆಗಟ್ಟುವ ಆದೇಶಗಳನ್ನು ಹೊರಡಿಸಲು ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡುತ್ತದೆ.
ಆದರೆ, ನಿಷೇಧಾಜ್ಞೆ ಜಾರಿಗೊಳಿಸಿದ ತಕ್ಷಣವೇ ದೈಹಿಕ ಬಲಪ್ರಯೋಗ ಮಾಡಲು ಅವಕಾಶ ಸಿಗುವುದಿಲ್ಲ.
ಚದುರಿ ಹೋಗುವಂತೆ ಕಾನೂನುಬದ್ಧ ಆದೇಶ ನೀಡಿದ ನಂತರವೂ ಅದನ್ನು ಉಲ್ಲಂಘಿಸಿದರೆ ಅಥವಾ ಗುಂಪು ಆದೇಶವನ್ನು ಪಾಲಿಸುವುದಿಲ್ಲ ಎಂಬುದು ಸ್ಪಷ್ಟವಾದಾಗ ಮಾತ್ರ ಬಲಪ್ರಯೋಗಕ್ಕೆ ಕಾನೂನಿನಲ್ಲಿ ಸಮ್ಮತಿ ಸಿಗುತ್ತದೆ.
'ಬಲಪ್ರಯೋಗ' ಎಂದರೆ ಏನು?
ಕಾನೂನು ವಿವಿಧ ಹಂತಗಳ ಬಲಪ್ರಯೋಗವನ್ನು ಗುರುತಿಸುತ್ತದೆ.
ಆರಂಭದಲ್ಲಿ, ಕಾನೂನುಬಾಹಿರ ಸಮಾವೇಶವನ್ನು ಚದುರಿಸಲು ಅಧಿಕಾರಿಗಳು ನಾಗರಿಕ ಬಲವನ್ನು (ಸಾಮಾನ್ಯ ಹಾಗೂ ಪ್ರಾಣಾಪಾಯವಿಲ್ಲದ ದೈಹಿಕ ಬಲ) ಬಳಸಬಹುದು.
ಈ ರೀತಿಯ ಬಲಪ್ರಯೋಗವೂ ಸಾಲದೇ ಇದ್ದಾಗ ಮತ್ತು ಸಾರ್ವಜನಿಕ ಭದ್ರತೆಗೆ ತೀವ್ರ ಬೆದರಿಕೆ ಎದುರಾದಾಗ ಮಾತ್ರ ಕಠಿಣ ಕ್ರಮಗಳನ್ನು ಪರಿಗಣಿಸಬಹುದು.
ಸಿಆರ್‌ಪಿಸಿಯಲ್ಲಿದ್ದ ನಿಯಮದಂತೆಯೇ ಬಿಎನ್‌ಎಸ್‌ಎಸ್‌ನಲ್ಲೂ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಸಶಸ್ತ್ರ ಪಡೆಗಳ ನೆರವು ಪಡೆಯಲು ಅವಕಾಶವಿದೆ. ಸಾರ್ವಜನಿಕ ಭದ್ರತೆಗೆ ತೀವ್ರ ಅಪಾಯವಿದ್ದು, ಮ್ಯಾಜಿಸ್ಟ್ರೇಟ್‌ರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಮಾತ್ರ ಮಿಲಿಟರಿ ಅಧಿಕಾರಿಗಳು ಸ್ವತಂತ್ರವಾಗಿ ಪಡೆಗಳನ್ನು ನಿಯೋಜಿಸಲು ಅವಕಾಶ ನೀಡಲಾಗಿದೆ.
ಬಲಪ್ರಯೋಗ ಕೊನೆಯ ಆಯ್ಕೆಯಾಗಿರಬೇಕು
ಬಲಪ್ರಯೋಗ ಮಾಡುವ ಮುನ್ನ ಸಂಧಾನ ಮತ್ತು ಮಾತುಕತೆಗೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಭಾರತೀಯ ಪೊಲೀಸ್ ನಿಯಮಗಳು ನಿರಂತರವಾಗಿ ಪ್ರತಿಪಾದಿಸುತ್ತವೆ.
ಕೇಂದ್ರ ಗೃಹ ಸಚಿವಾಲಯದ ಪೊಲೀಸ್ ನಡವಳಿಕೆ ಸಂಹಿತೆಯ ಪ್ರಕಾರ, ಪೊಲೀಸರು ಮೊದಲು ಮಾತುಕತೆ, ಸಲಹೆ ಮತ್ತು ಎಚ್ಚರಿಕೆಗಳನ್ನು ನೀಡಬೇಕು. ಅನಿವಾರ್ಯವಾದಾಗ ಮತ್ತು ಅಗತ್ಯವಿರುವಷ್ಟು ಮಾತ್ರ ಬಲಪ್ರಯೋಗ ಮಾಡಬೇಕು.
ವಿಶ್ವಸಂಸ್ಥೆಯ ಕಾನೂನು ಜಾರಿ ಅಧಿಕಾರಿಗಳ ನಡವಳಿಕೆ ಸಂಹಿತೆಯಲ್ಲೂ ಇದೇ ತತ್ವವನ್ನು ಹೇಳಲಾಗಿದೆ. ಅತ್ಯಂತ ಅಗತ್ಯವಿದ್ದಾಗ ಮತ್ತು ಅಧಿಕೃತ ಕರ್ತವ್ಯ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟು ಮಾತ್ರ ಬಲಪ್ರಯೋಗ ಮಾಡಲು ಅದು ಅನುಮತಿಸುತ್ತದೆ.
ಸುಪ್ರೀಂ ಕೋರ್ಟ್ ಏನು ಹೇಳಿದೆ?
ಅನುರಾಧ ಭಾಸಿನ್ vs ಕೇಂದ್ರ ಸರ್ಕಾರ ಪ್ರಕರಣ (2020)
ನಿಷೇಧಾಜ್ಞೆಗಳನ್ನು ನೈಜ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಜಾರಿಗೊಳಿಸಬೇಕು, ಸೂಕ್ತ ಆಧಾರಗಳನ್ನು ದಾಖಲಿಸಬೇಕು ಮತ್ತು ಸನ್ನಿವೇಶಕ್ಕೆ ತಕ್ಕಂತೆ ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಅಸ್ಪಷ್ಟ ಅಥವಾ ಊಹಾತ್ಮಕ ಆತಂಕಗಳನ್ನು ನೆಪ ಮಾಡಿಕೊಂಡು ಅಧಿಕಾರಿಗಳು ನಿರ್ಧಾರ ಕೈಗೊಳ್ಳುವಂತಿಲ್ಲ.
ರಾಮಲೀಲಾ ಮೈದಾನ ಘಟನೆ vs ಕೇಂದ್ರ ಗೃಹ ಕಾರ್ಯದರ್ಶಿ ಪ್ರಕರಣ (2012)
ಬಾಬಾ ರಾಮ್‌ದೇವ್ ಬೆಂಬಲಿಗರ ಮೇಲೆ ಅರ್ಧರಾತ್ರಿ ನಡೆದ ಪೊಲೀಸ್ ಕಾರ್ಯಾಚರಣೆಯನ್ನು ಪರಿಶೀಲಿಸುವಾಗ, ನಿಯಮಾವಳಿಗಳ ಪಾಲನೆ ಬರೀ ಸಾಂಕೇತಿಕ ಪ್ರಕ್ರಿಯೆಯಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತು ನೀಡಿ ಹೇಳಿದೆ.
ಬಲಪ್ರಯೋಗ ಮಾಡುವ ಮುನ್ನ ಪೊಲೀಸರು ಪದೇ ಪದೇ ಎಚ್ಚರಿಕೆ ನೀಡಬೇಕು, ಸಾರ್ವಜನಿಕ ಪ್ರಕಟಣೆಗಳನ್ನು ಮಾಡಬೇಕು, ವಿಡಿಯೊ ಚಿತ್ರೀಕರಣವನ್ನು ಮಾಡಬೇಕು, ವೈದ್ಯಕೀಯ ನೆರವು ಕಲ್ಪಿಸಬೇಕು ಮತ್ತು ಪ್ರತಿಭಟನಾಕಾರರು ಸುರಕ್ಷಿತವಾಗಿ ತೆರಳಲು ಅವಕಾಶ ಮಾಡಿಕೊಡಬೇಕು.
ದಿಲ್ಲಿ ಪೊಲೀಸ್ ನಿಯಮಾವಳಿಗಳ ಪ್ರಕಾರ, ನಿಷೇಧಾಜ್ಞೆಯನ್ನು ಸಾರುವ ಬ್ಯಾನರ್‌ಗಳನ್ನು ಪ್ರದರ್ಶಿಸಬೇಕು ಹಾಗೂ ಶಾಂತಿಯುತವಾಗಿ ಚದುರಿ ಹೋಗುವಂತೆ ಅಥವಾ ಬಂಧನಕ್ಕೆ ಒಳಪಡುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಬೇಕು ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಇತರ ಕಠಿಣ ಕ್ರಮಗಳಿಗೆ ಮುಂದಾಗುವ ಮೊದಲು ಪೊಲೀಸರು ವಾಟರ್ ಕ್ಯಾನನ್‌ಗಳನ್ನು ಬಳಸಲು ವಿಫಲರಾಗಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಮುಖ್ಯಾಂಶವಾಗಿ ಗಮನಿಸಿತ್ತು.
ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಬಹುದೇ?
ಪಿ.ವಿ. ಕಪೂರ್ vs ಕೇಂದ್ರ ಸರ್ಕಾರ ಪ್ರಕರಣದಲ್ಲಿ (1982) ದೆಹಲಿ ಹೈಕೋರ್ಟ್, ಕೇವಲ ಕಾನೂನುಬಾಹಿರ ಸಮಾವೇಶವಿದೆ ಎಂಬ ಕಾರಣಕ್ಕೆ ಅಥವಾ ಚದುರಿ ಹೋಗಲು ನಿರಾಕರಿಸಿದರು ಎಂಬ ಕಾರಣಕ್ಕೆ ಬಂದೂಕುಗಳನ್ನು ಬಳಸುವುದು ಸಮರ್ಥನೀಯವಲ್ಲ ಎಂದು ಹೇಳಿದೆ.
ಎಚ್ಚರಿಕೆಗಳನ್ನು ನೀಡುವ ಮೂಲಕವೇ ಜನಸಂದಣಿಯನ್ನು ಚದುರಿಸಲು ಸಾಧ್ಯವಾದರೆ, ಬಲಪ್ರಯೋಗದ ಅಗತ್ಯವೇ ಇರುವುದಿಲ್ಲ.
ಅಧಿಕಾರಿಗಳು ಯಾವಾಗಲೂ ಅತ್ಯಂತ ಕಡಿಮೆ ಹಾನಿ ಉಂಟುಮಾಡುವ ಮತ್ತು ಪರಿಣಾಮಕಾರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾರ್ವಜನಿಕ ಶಾಂತಿಯನ್ನು ಮರುಸ್ಥಾಪಿಸುವುದು ನ್ಯಾಯಾಲಯದ ಉದ್ದೇಶವೇ ಹೊರತು ಪ್ರತಿಭಟನಾಕಾರರನ್ನು ಶಿಕ್ಷಿಸುವುದಲ್ಲ ಎಂದು ಹೇಳಿದೆ.
ಅಶ್ರುವಾಯು ಬಳಕೆ ಕುರಿತು ಪೊಲೀಸ್ ನಿಯಮಗಳು ಏನು ಹೇಳುತ್ತವೆ?
ಅಶ್ರುವಾಯು ಬಳಸುವ ಮೊದಲು ಜನಸಂದಣಿಯ ಗಾತ್ರ, ನೆರೆದಿರುವ ಜನರ ಮನಸ್ಥಿತಿ ಮತ್ತು ಗಾಳಿಯ ದಿಕ್ಕನ್ನು ಪರಿಶೀಲಿಸಬೇಕು ಎಂದು ಪೊಲೀಸ್ ನಿಯಮಾವಳಿಗಳು ಸ್ಪಷ್ಟಪಡಿಸುತ್ತವೆ.
ಸಾಮಾನ್ಯವಾಗಿ ಮುಚ್ಚಿದ ಸ್ಥಳಗಳಲ್ಲಿ ಅಶ್ರುವಾಯು ಬಳಸಬಾರದು ಮತ್ತು ಶೆಲ್‌ಗಳನ್ನು ನೇರವಾಗಿ ಜನರ ಮೇಲೆ ಎಸೆಯುವ ಬದಲು ಜನರಿಲ್ಲದ ದಿಕ್ಕಿಗೆ ಹಾರಿಸಬೇಕು.
ದಿಲ್ಲಿಯಲ್ಲಿ ಅನ್ವಯವಾಗುವ ಪಂಜಾಬ್ ಪೊಲೀಸ್ ನಿಯಮಾವಳಿಯ ರೂಲ್ 14.56 ಪ್ರಕಾರ, ಬಲಪ್ರಯೋಗವು ನಿಯಂತ್ರಣದಲ್ಲಿರಬೇಕು. ಗಲಭೆಯನ್ನು ತಡೆಯಲು ಅಥವಾ ಕಾನೂನುಬದ್ಧ ಆದೇಶಗಳನ್ನು ಪಾಲಿಸದ ಗುಂಪನ್ನು ಚದುರಿಸಲು ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಸೀಮಿತವಾಗಿರಬೇಕು.
ಇತ್ತೀಚಿನ ಪೊಲೀಸ್ ಕಾರ್ಯಾಚರಣೆಯ ಸುತ್ತಲಿನ ರಾಜಕೀಯ ಚರ್ಚೆಯು ಕಾರ್ಯಾಂಗದ ಅಧಿಕಾರ ಮತ್ತು ಪೊಲೀಸ್ ಶಕ್ತಿಗಳ ಮೇಲಿನ ಕಾನೂನು ಪರಿಮಿತಿಗಳ ಕುರಿತು ಮಹತ್ವದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.
ಬಿಎನ್‌ಎಸ್‌ಎಸ್, ಪೊಲೀಸ್ ನಿಯಮಾವಳಿಗಳು ಮತ್ತು ನ್ಯಾಯಾಲಯದ ತೀರ್ಪುಗಳನ್ನು ಒಟ್ಟಾಗಿ ಗಮನಿಸಿದಾಗ ಒಂದು ಸ್ಪಷ್ಟ ಕಾನೂನು ತತ್ವ ವ್ಯಕ್ತವಾಗುತ್ತದೆ. ಅದೇನೆಂದರೆ, ಪ್ರತಿಭಟನೆ ನಡೆಯುತ್ತಿದೆ ಎಂದಷ್ಟೇ ಕಾರಣಕ್ಕೆ ಅಥವಾ ನಿಷೇಧಾಜ್ಞೆ ಜಾರಿಯಲ್ಲಿದೆ ಎಂಬ ಮಾತ್ರಕ್ಕೆ ಪೊಲೀಸರು ಬಲಪ್ರಯೋಗ ಮಾಡುವಂತಿಲ್ಲ.
ಅದೇ ರೀತಿ, ಕಾನೂನುಬಾಹಿರ ಸಮಾವೇಶವನ್ನು ಚದುರಿಸಲು ಆದೇಶಿಸುವ ಶಾಸನಬದ್ಧ ಅಧಿಕಾರವು ಬಿಎನ್‌ಎಸ್‌ಎಸ್ ಅಡಿಯಲ್ಲಿ ಗುರುತಿಸಲಾದ ಅಧಿಕಾರಿಗಳಿಗೆ ಮಾತ್ರ ಇರುತ್ತದೆ; ಕೇವಲ ಪದವಿಯ ಆಧಾರದ ಮೇಲೆ ರಾಜಕೀಯ ನಾಯಕರಿಗೆ ಇರುವುದಿಲ್ಲ.
ಕಾನೂನುಬದ್ಧ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ, ಪ್ರತಿಭಟನಾಕಾರರಿಗೆ ಚದುರಿ ಹೋಗಲು ಸೂಚನೆ ನೀಡಿದ ಮೇಲೆ, ಎಚ್ಚರಿಕೆಗಳನ್ನು ಕೊಟ್ಟ ನಂತರವೂ ಶಾಂತಿಯುತ ಮಾರ್ಗಗಳು ವಿಫಲವಾದಾಗ ಮಾತ್ರ ಬಲಪ್ರಯೋಗ ಮಾಡಬಹುದು.
ಅಂತಹ ಸಂದರ್ಭದಲ್ಲೂ ಬಳಸುವ ಬಲವು ಸನ್ನಿವೇಶಕ್ಕೆ ತಕ್ಕಂತೆ, ಅತ್ಯಂತ ಅಗತ್ಯವಿದ್ದಷ್ಟು ಮತ್ತು ಸಾರ್ವಜನಿಕ ಶಾಂತಿಯನ್ನು ಮರುಸ್ಥಾಪಿಸಲು ಬೇಕಾಗುವ ಕನಿಷ್ಠ ಪ್ರಮಾಣಕ್ಕೆ ಮಾತ್ರ ಸೀಮಿತವಾಗಿರಬೇಕು.
ಸೌಜನ್ಯ: Indiatoday.in