×
Ad

ಬುಡಕಟ್ಟು ಬಾಲಕಿಯ ಸಂಕಷ್ಟದ ವೀಡಿಯೋ ವೈರಲ್ ಬೆನ್ನಲ್ಲೆ ಎಚ್ಚೆತ್ತ ಆಡಳಿತ: ದಿಲ್ ಕುಮಾರಿಗೆ ಆರೋಗ್ಯ ನೆರವು

Update: 2026-01-19 19:49 IST

ಅಜ್ಜ ರಾಮ್ ಬ್ರಿಜ್ ಗ್ರಾಮದ ಸರ್ಪಂಚ್ ಬಳಿ ಪದೇ ಪದೆ ನೆರವು ಕೇಳಿದ್ದರು. ಸ್ಥಳೀಯ ಪ್ರತಿನಿಧಿಗಳ ಬಳಿಯೂ ನೆರವು ಯಾಚಿಸಿದ್ದರು. ಪಂಚಾಯತ್ ಮಟ್ಟದಲ್ಲೂ ನೆರವು ಕೇಳಿದ್ದರು. ಆದರೆ ಯಾವುದೇ ನೆರವು ಸಿಗದ ಕಾರಣ ಬಾಲಕಿಯ ಸ್ಥಿತಿ ಶೋಚನೀಯವಾಗಿ ಬದಲಾಗಿದೆ.

ಸಿಂಗ್ರೌಲಿ ಜಿಲ್ಲೆಯ 11 ವರ್ಷ ಪ್ರಾಯದ ವಿಶೇಷಚೇತನ ಬುಡಕಟ್ಟು ಬಾಲಕಿಯ ಹೃದಯ ವಿದ್ರಾವಕ ವೀಡಿಯೊ ಒಂದು ವೈರಲ್ ಆಗಿದೆ. ಬಾಲಕಿ ತನ್ನ ಅಜ್ಜಿ-ತಾತಂದಿರಿಗೆ ಚಳಿಯಾಗುತ್ತದೆ ಎಂದು ನಡುಗುವ ಚಳಿಯಲ್ಲಿ ಅರ್ಧ ಬಟ್ಟೆ ತೊಟ್ಟು ತಲೆ ಮೇಲೆ ಕಟ್ಟಿಗೆ ಹೊತ್ತುಕೊಂಡು ಅಂಬೆಗಾಲಿಕ್ಕುತ್ತಾ ರಸ್ತೆಯಲ್ಲಿ ಸಾಗುತ್ತಿರುವ ವೀಡಿಯೊ ಕರುಳು ಹಿಂಡುವಂತಿದೆ. ಬಾಲಕಿಗೆ ಹುಟ್ಟಿನಿಂದಲೇ ಕಾಲುಗಳಿರಲಿಲ್ಲ. ವೀಡಿಯೋ ವೈರಲ್ ಆದ ನಂತರ ಆಡಳಿತ ಮುಂದೆ ಬಂದು ವೈದ್ಯಕೀಯ ನೆರವು ನಿಡುತ್ತಿದೆ.

ಛತ್ತೀಸ್‌ಗಢ ಗಡಿಭಾಗದಲ್ಲಿರುವ ಸಿಂಗ್ರೌಲಿಯ ಬರಹಪನ್ ಗ್ರಾಮದ ಬಾಲಕಿ ತನ್ನ ಮೊಣಕಾಲಿನಲ್ಲಿ ತೆಗಳುತ್ತಾ ತಲೆ ಮೇಲೆ ಕಟ್ಟಿಗೆ ಹೊತ್ತು ಸಾಗುತ್ತಿದ್ದಳು. ಚಳಿಗಾಲದಲ್ಲಿ ಅವರ ಕುಟುಂಬಕ್ಕೆ ಕಟ್ಟಿಗೆಯ ಅಗತ್ಯವಿತ್ತು. 11 ವರ್ಷದ ದಿಲ್ ಕುಮಾರಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಹುಟ್ಟಿನಿಂದಲೇ ಕಾಲುಗಳಿಗೆ ಶಕ್ತಿ ಇಲ್ಲದೆ ನಿಲ್ಲಲು ತ್ರಾಸಪಡುತ್ತಿದ್ದಳು. ಆಕೆಯ ಸ್ಥಿತಿಯ ಹೊರತಾಗಿಯೂ ತನ್ನ ಕುಟುಂಬಕ್ಕೆ ದೈನಂದಿನ ಚಟುವಟಿಕೆಗಳಲ್ಲಿ ಆಕೆ ನೆರವು ನೀಡುತ್ತಿದ್ದಳು.

ದಿಲ್ ಕುಮಾರಿ ತನ್ನ ತಾಯಿಯ ಕಡೆಯ ಸಂಬಂಧಿ ರಾಮ್ ಬ್ರಿಜ್ ಬೈಗ ಮತ್ತು ಸೋನಮತಿ ಬೈಗ ಅವರ ಜೊತೆಗೆ ನೆಲೆಸಿದ್ದಾಳೆ. ಬಾಲಕಿಯ ತಾಯಿ ಉರ್ಮಿಳಾ ಬೈಗಗೆ ನಾಲ್ಕು ಮಕ್ಕಳು. ದಿಲ್ ಕುಮಾರಿಯ ಕಾಲುಗಳಲ್ಲಿ ಶಕ್ತಿ ಇಲ್ಲದ ಕಾರಣ ಅಜ್ಜಿ-ತಾತಂದಿರೇ ಆಕೆಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

ವೀಡಿಯೋ ಬಗ್ಗೆ ಮಾತನಾಡುವಾಗ ಅಜ್ಜ ರಾಮ್ ಬ್ರಿಜ್ ಬಹಳ ಭಾವನಾತ್ಮಕವಾಗಿ ಪರಿಸ್ಥಿತಿಯನ್ನು ವಿವರಿಸಿದರು. ಅವರು ಮೊಮ್ಮಗಳನ್ನು ಕಾಡಿಗೆ ಕಳುಹಿಸಿರಲಿಲ್ಲ. ಆಕೆ ಸ್ವತಃ ಚಳಿಯ ಸಮಯದಲ್ಲಿ ಕಟ್ಟಿಗೆಯ ಅಗತ್ಯವಿದೆ ಎಂದುಕೊಂಡು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಾಳೆ.

ರಾಮ್ ಬ್ರಿಜ್ ಗ್ರಾಮದ ಸರ್ಪಂಚ್ ಬಳಿ ಪದೇಪದೆ ನೆರವು ಕೇಳಿದ್ದರು. ಸ್ಥಳೀಯ ಪ್ರತಿನಿಧಿಗಳ ಬಳಿಯೂ ನೆರವು ಯಾಚಿಸಿದ್ದರು. ಪಂಚಾಯತ್ ಮಟ್ಟದಲ್ಲೂ ನೆರವು ಕೇಳಿದ್ದರು. ಆದರೆ ಯಾವುದೇ ನೆರವು ಸಿಗದ ಕಾರಣ ಬಾಲಕಿಯ ಸ್ಥಿತಿ ಶೋಚನೀಯವಾಗಿ ಬದಲಾಗಿದೆ.

ವೀಡಿಯೊ ವೈರಲ್ ಆದ ನಂತರ ಕಾಂಗ್ರೆಸ್ ನಾಯಕರಾದ ಸೂರ್ಯ ದ್ವಿವೇದಿ ನೆರವಿಗೆ ಬಂದಿದ್ದಾರೆ. ಸರಕಾರ ನೆರವು ನೀಡದೆ ಇದ್ದರೆ ವೈಯಕ್ತಿಕವಾಗಿ ನೆರವು ನೀಡುವುದಾಗಿ ಅವರು ಹೇಳಿರುವುದಾಗಿ ಕುಟುಂಬ ತಿಳಿಸಿದೆ. ದೈನಿಕ್ ಬಾಸ್ಕರ್ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ ಜಿಲ್ಲಾ ಕೇಂದ್ರದಿಂದ ಕುಟುಂಬಕ್ಕೆ ಕರೆ ಬಂದಿದೆ. ರೆಡ್ ಕ್ರಾಸ್ ಸೊಸೈಟಿ ಆಕೆಗೆ ಚಲಿಸಲು ಟ್ರೈಸಿಕಲ್ ನೀಡುವುದಾಗಿ ಹೇಳಿದೆ.

ಜಿಲ್ಲಾ ಪಂಚಾಯತ್‌ ಹೆಚ್ಚುವರಿ ಸಿಇಒ ಐಬಿ ದಾಮೋರ್ ಬಾಲಕಿಯ ಆರೋಗ್ಯ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಬಾಲಕಿಯ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಸರಕಾರಿ ಯೋಜನೆಗಳ ಅಡಿಯಲ್ಲಿ ದಿಲ್ ಕುಮಾರಿಗೆ ಸಾಧ್ಯವಾದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News