×
Ad

ಗ್ರೀನ್‌ ಲ್ಯಾಂಡ್ ರಕ್ಷಣೆಗೆ ಮುಂದಾದ ಯುರೋಪ್‌: ಅಮೆರಿಕದ ತೆರಿಗೆ ವಿರುದ್ಧ ‘ಟ್ರೇಡ್ ಬಜೂಕಾ’ ಕಾರ್ಯಯೋಜನೆ ಅಳವಡಿಸಿಕೊಳ್ಳಲು ನಿರ್ಧಾರ!

ಏನಿದು ಟ್ರೇಡ್ ಬಜೂಕಾ?

Update: 2026-01-19 15:16 IST

Photo Credit : AP\ PTI 


ಗ್ರೀನ್‌ ಲ್ಯಾಂಡ್ ವಿಚಾರವಾಗಿ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಗ್ರೀನ್‌ ಲ್ಯಾಂಡ್‌ ವಶಪಡಿಸಿಕೊಳ್ಳುವ ತನ್ನ ಪ್ರಯತ್ನವನ್ನು ವಿರೋಧಿಸಿದ ಯುರೋಪಿಯನ್ ಒಕ್ಕೂಟದ ಮೇಲೆ ಟ್ರಂಪ್ ಶೇ 10ರಷ್ಟು ತೆರಿಗೆ ಹೇರಿದ್ದಾರೆ. ಜೂನ್ ಒಳಗೆ ಒಪ್ಪಿಗೆ ನೀಡದೆ ಇದ್ದರೆ ತೆರಿಗೆಯನ್ನು ಶೇ 25ಕ್ಕೆ ಏರಿಸುವುದಾಗಿ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.

ಫೆಬ್ರವರಿ 1ರಿಂದ ಅಮೆರಿಕವು ಡೆನ್ಮಾರ್ಕ್, ಫಿನ್‌ಲ್ಯಾಂಡ್, ಫ್ರಾನ್ಸ್‌, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್‌ಡಂ ಮೇಲೆ ಶೇ 10ರಷ್ಟು ತೆರಿಗೆ ಹೇರುತ್ತಿದೆ. ಟ್ರಂಪ್ ಹೇಳಿಕೆಯಿಂದಾಗಿ ಯುರೋಪ್ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ನಂತರ ರವಿವಾರದಂದು ಬ್ರುಸೆಲ್ಸ್‌ನಲ್ಲಿ ಯುರೋಪಿಯನ್ ಒಕ್ಕೂಟದ ಸದಸ್ಯರು ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅಮೆರಿಕದ ತೆರಿಗೆ ವಿರುದ್ಧ ಯುರೋಪ್ ‘ಟ್ರೇಡ್ ಬಜೂಕಾ’ ಕಾರ್ಯಯೋಜನೆಯನ್ನು ಮೊದಲ ಬಾರಿಗೆ ಅಳವಡಿಸಿಕೊಳ್ಳಲು ನಿರ್ಧರಿಸಿದೆ.

ಏನಿದು ಟ್ರೇಡ್ ಬಜೂಕಾ?

ಟ್ರೇಡ್ ಬಜೂಕಾ ಎಂದರೆ ಒತ್ತಡದ ವಿರುದ್ಧ ಬಳಸುವ ಸಾಧನ (Anti-Coercion Instrument) ಅಥವಾ ACI ಎನ್ನುವ ಕಾರ್ಯತಂತ್ರ. 2021 ಡಿಸೆಂಬರ್‌ನಲ್ಲಿ ಪ್ರಸ್ತಾಪಿಸಲಾದ ಯುರೋಪಿಯನ್ ಒಕ್ಕೂಟದ ನಿಯಂತ್ರಣವಾಗಿದೆ. ಇದನ್ನು 2023 ನವೆಂಬರ್‌ನಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಇದು 2023 ಡಿಸೆಂಬರ್ 27ರಂದು ಜಾರಿಗೆ ಬಂದಿತ್ತು. ಇದು ಯುರೋಪಿಯನ್ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳನ್ನು ತೃತೀಯ ದೇಶದ ಆರ್ಥಿಕ ಬೆದರಿಕೆಯಿಂದ ರಕ್ಷಿಸುವ ಗುರಿ ಹೊಂದಿದೆ. ಪರೀಕ್ಷೆ ಎದುರಿಸುವುದು, ತೊಡಗಿಸಿಕೊಳ್ಳುವಿಕೆ ಮತ್ತು ಪ್ರತಿ ಕ್ರಮಗಳನ್ನು ಅಳವಡಿಸುವುದು ಸೇರಿದಂತೆ ಯುರೋಪಿಯನ್ ಒಕ್ಕೂಟದ ಕ್ರಮಕ್ಕೆ ಚೌಕಟ್ಟನ್ನು ಒದಗಿಸುತ್ತದೆ.

ACI ಅಳವಡಿಸಿಕೊಂಡರೆ ಯುರೋಪ್ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ವಿರುದ್ಧ ತೆರಿಗೆಗಳನ್ನು ಹೇರಲು ಸಾಧ್ಯವಾಗುತ್ತದೆ. ‘ಟ್ರೇಡ್ ಬಜೂಕಾ’ ಅಳವಡಿಕೆಯೆಂದರೆ ಯುರೋಪ್ ತನ್ನ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸ್ಪಷ್ಟ ಸಂದೇಶವನ್ನು ಅಮೆರಿಕಕ್ಕೆ ನೀಡಿದೆ.

ಗ್ರೀನ್‌ ಲ್ಯಾಂಡ್ ಜೊತೆಗೆ ನಿಂತಿರುವ ಯೂರೋಪ್

ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ ಜೊತೆಗೆ ಯುರೋಪ್ ಸದಾ ನಿಲ್ಲುತ್ತದೆ ಎಂದು ರವಿವಾರ ಯುರೋಪ್ ಸ್ಪಷ್ಟಪಡಿಸಿದೆ. ನ್ಯಾಟೋ ಸದಸ್ಯರಾಗಿ ಯುರೋಪಿಯನ್ ದೇಶಗಳು ಆರ್ಕಿಟಿಕ್ ಭದ್ರತೆಯನ್ನು ಸಾಮಾನ್ಯ ಟ್ರಾನ್ಸ್ ಅಟ್ಲಾಂಟಿಕ್ ಆದ್ಯತೆಯಾಗಿ ಬಲಪಡಿಸಲು ಬದ್ಧವಾಗಿರುವುದಾಗಿ ಹೇಳಿದೆ. ಅಮೆರಿಕದ ತೆರಿಗೆ ಬೆದರಿಕೆಯಿಂದ ದೀರ್ಘಕಾಲೀನ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದೂ ಯುರೋಪ್ ಹೇಳಿದೆ.

ಸೈನ್ಯ ತುಕಡಿ ಕಳುಹಿಸಿದ ಯುರೋಪ್ ದೇಶಗಳು

ಗ್ರೀನ್‌ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಅಮೆರಿಕದ ಅಧ್ಯಕ್ಷರ ಬೆದರಿಕೆ ವಿರುದ್ಧ ಯುರೋಪ್‌ ದ್ವೀಪ ರಾಷ್ಟ್ರಕ್ಕೆ ಸೇನಾ ತಂಡವನ್ನು ಕಳುಹಿಸಿದೆ. Reconnaissance Mission ಎನ್ನುವ ಹೆಸರಿನಲ್ಲಿ 37 ಸಿಬ್ಬಂದಿಯ ಪಡೆಯನ್ನು ಯುರೋಪ್ ಗ್ರೀನ್‌ಲ್ಯಾಂಡ್‌ಗೆ ಕಳುಹಿಸಿದೆ. Reconnaissance Mission ಎಂದರೆ ಶತ್ರುವಿನ ಪಾಳೆಯದ ಆಯಕಟ್ಟಿನ ನೆಲೆಗಳನ್ನು ಕಂಡುಹಿಡಿಯಲು ಪಡೆಗಳನ್ನು ಕಳುಹಿಸಿ ನಡೆಸುವ ಸ್ಥಳಾನ್ವೇಷಣೆಯಾಗಿದೆ. ಈ ಸ್ಥಳಾನ್ವೇಷಣೆಗೆ ಯುನೈಟೆಡ್ ಕಿಂಗ್‌ಡಂ ಮತ್ತು ನೆದರ್‌ಲ್ಯಾಂಡ್‌ ಒಬ್ಬ ಸೈನಿಕ, ಫಿನ್‌ಲ್ಯಾಂಡ್‌, ನಾರ್ವೆ ಮತ್ತು ಸ್ವೀಡನ್‌ ಇಬ್ಬರು ಸೈನಿಕರನ್ನು ಕಳುಹಿಸಿದೆ. ಹೀಗಾಗಿ ಗ್ರೀನ್‌ ಲ್ಯಾಂಡ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಅಮೆರಿಕದ ಪ್ರಯತ್ನದಲ್ಲಿ ಯುರೋಪ್ ಸೇನಾ ಬಲ ಪ್ರಯೋಗಿಸಲೂ ಸಿದ್ಧ ಎಂದು ಸ್ಥಿರವಾಗಿ ನಿಂತಿದೆ ಎನ್ನುವ ಸಂದೇಶವನ್ನು ಕಳುಹಿಸಲಾಗಿದೆ. ಜರ್ಮನಿಯೂ ಸೈನಿಕರನ್ನು ಕಳುಹಿಸಲು ಒಪ್ಪಿಕೊಂಡಿದೆ. ಆದರೆ ಗ್ರೀನ್‌ಲ್ಯಾಂಡ್‌ಗೆ ಸೇನೆ ಕಳುಹಿಸುವ ಯುರೋಪ್ ನಿರ್ಧಾರಕ್ಕೆ ಸೈನಿಕರನ್ನು ಕಳುಹಿಸುವ ಬೇಡಿಕೆಗೆ ಇಟಲಿ, ಟರ್ಕಿ ಮತ್ತು ಪೊಲ್ಯಾಂಡ್ ಸಮ್ಮತಿ ಸೂಚಿಸಿಲ್ಲ.

ಈ ನಡುವೆ ಡೆನ್ಮಾರ್ಕ್‌ನ ಆರ್ಕಿಟಿಕ್ ಕಮಾಂಡರ್ ಮೇಜರ್ ಸೊರೆನ್ ಆಂಡರ್ಸನ್ ನ್ಯಾಟೊ ಮಿತ್ರರಾಷ್ಟ್ರಗಳ ನಡುವೆ ಸೇನಾ ಸಂಘರ್ಷ ಏರ್ಪಡುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. “ನ್ಯಾಟೋ ಮಿತ್ರರಾಷ್ಟ್ರಗಳು ಪರಸ್ಪರ ಕಾದಾಡುವ ಸನ್ನಿವೇಶ ಬರುತ್ತದೆ ಎಂದು ನನಗೆ ಅನಿಸುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News