×
Ad

ಗುತ್ತಿಗೆ ಷರತ್ತು ಉಲ್ಲಂಘಿಸಿ ಕೋಟ್ಯಂತರ ರೂ.ಬಾಚುತ್ತಿರುವ ರಾಜ್ಯ ಕ್ರಿಕೆಟ್ ಸಂಸ್ಥೆ

ಸರಕಾರಕ್ಕೆ ಬಿಡಿಗಾಸು ಲಾಭವಿಲ್ಲ

Update: 2026-01-19 08:20 IST

ಬೆಂಗಳೂರು : ಐಪಿಎಲ್ ನಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿ ನೂರಾರು ಕೋಟಿ ರೂ. ವ್ಯವಹಾರ ಮತ್ತು ಆದಾಯ ಗಳಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯು ಹತ್ತು ಹಲವು ವರ್ಷಗಳಿಂದ ಗುತ್ತಿಗೆ ಷರತ್ತು ಉಲ್ಲಂಘಿಸುತ್ತಿದೆ. ಬಾಡಿಗೆ ಪಡೆದ ಜಾಗದಲ್ಲಿ ಗಳಿಸುತ್ತಿರುವ ಸಾವಿರಾರು ಕೋಟಿ ರೂ. ಆದಾಯದಲ್ಲಿ ಬಿಡಿಗಾಸನ್ನೂ ಸರಕಾರಕ್ಕೆ ಕೊಡುತ್ತಿಲ್ಲ.

ಐಪಿಎಲ್ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಅನುಮತಿ ನೀಡಿರುವ ಸರಕಾರವು, ನೂರಾರು ಕೋಟಿ ರೂ. ಮೊತ್ತದ ಆದಾಯದ ಲೆಕ್ಕವನ್ನೂ ಕೇಳುತ್ತಿಲ್ಲ. ಅಲ್ಲದೇ ವರ್ಷಕ್ಕೆ ನೂರು ರೂ. ಬಾಡಿಗೆ ಆಧಾರದ ಮೇಲೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ.

ಆದರೆ ಇದೇ ಜಾಗದಲ್ಲಿ ಕೋಟ್ಯಂತರ ರೂ. ಆದಾಯ ಗಳಿಸುತ್ತಿದೆ. ಆದರೂ ಲೋಕೋಪಯೋಗಿ ಇಲಾಖೆಯು ಈ ಬಗ್ಗೆ ಗಟ್ಟಿಯಾಗಿ ದನಿಯನ್ನೇ ಎತ್ತಿಲ್ಲ.

ರಾಜ್ಯದಲ್ಲಿರುವ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಿದ್ದ ವಿಧಾನಪರಿಷತ್ ಸದಸ್ಯ ಡಾ.ಕೆ. ಗೋವಿಂದರಾಜು ಅವರ ಅಧ್ಯಕ್ಷತೆಯ ವಿಶೇಷ ಸದನ ಸಮಿತಿಯು 2021ರ ಜುಲೈ 19ರಂದು ನಡೆದಿದ್ದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿತ್ತು.

ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ.ಎಸ್. ಕೃಷ್ಣಾರೆಡ್ಡಿ ಅವರು ಸಮಿತಿಗೆ ಈ ವಿಷಯವನ್ನು ಗಮನಕ್ಕೆ ತಂದಿದ್ದರು. ಆದರೆ ಸರಕಾರ ಮಾತ್ರ ಈಗಲೂ ಗಂಭೀರವಾಗಿ ಪರಿಗಣಿಸಿಲ್ಲ. ಹಾಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಈ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.

ಈ ಸಭೆಯ ನಡವಳಿ ಪ್ರತಿ ‘the-file.in’ಗೆ ಲಭ್ಯವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಗುತ್ತಿಗೆ ಷರತ್ತುಗಳ ಪ್ರಕಾರ ಕ್ರಿಕೆಟ್ ಆಟಕ್ಕೆ ಮಾತ್ರ ಅವಕಾಶ ನೀಡಬೇಕು. ಅಲ್ಲಿ ಕಮರ್ಷಿಯಲ್ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಅವರು ಐಪಿಎಲ್‌ನಂತಹ ಕಮರ್ಷಿಯಲ್ ಚಟುವಟಿಕೆಯನ್ನು ಅಲ್ಲಿ ನಡೆಸುತ್ತಾರೆ.

ಇಲ್ಲಿ ಬಿಡ್ ಮಾಡಿ ಕೋಟ್ಯಂತರ ರೂ.ಗಳ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಆದರೆ ಸರಕಾರಕ್ಕೆ ಬಾಡಿಗೆಯನ್ನು ಕೊಡುವುದಿಲ್ಲ ಮತ್ತು ಆದಾಯದಲ್ಲಿನ ಒಂದು ಭಾಗವನ್ನೂ ಸಹ ಕೊಡುವುದಿಲ್ಲ ಎಂದು ಕೃಷ್ಣಾರೆಡ್ಡಿ ಅವರು ಸಭೆಯಲ್ಲಿ ಮಾಹಿತಿ ಒದಗಿಸಿದ್ದರು.

ಗಳಿಕೆ ನೂರಾರು ಕೋಟಿ, ಬಾಡಿಗೆ ನೂರು ರೂಪಾಯಿ!

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ವರ್ಷಕ್ಕೆ 100 ರೂ. ಬಾಡಿಗೆ ಆಧಾರದ ಮೇಲೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಆದರೆ ಇದೇ ಜಾಗದಲ್ಲಿ ಕೋಟ್ಯಂತರ ರೂ. ಆದಾಯ ಗಳಿಸುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಗುತ್ತಿಗೆ ಪಡೆದಿರುವ ಜಾಗದಲ್ಲಿ ಆರಂಭದಲ್ಲಿ ಕ್ರೀಡಾ ಉದ್ದೇಶಕ್ಕಾಗಿಯೇ ಬಳಸಲಾಗುತ್ತಿತ್ತು. ಆದರೆ ಈಗ ಅದೇ ಜಾಗದಲ್ಲಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ನಂತಹ ವಾಣಿಜ್ಯ ಚಟುವಟಿಕೆಗಳನ್ನೂ ನಡೆಸುತ್ತಿದೆ. ಇದು ಕೇವಲ ಬೆಂಗಳೂರು ಮಾತ್ರವಲ್ಲ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗದಲ್ಲೂ ಇದೇ ರೀತಿ ನಡೆಯುತ್ತಿದೆ ಎಂದು ಕಾರ್ಯದರ್ಶಿ ಆಗಿದ್ದ ಕೃಷ್ಣಾರೆಡ್ಡಿ ಅವರು ಸಭೆಗೆ ವಿವರಿಸಿದ್ದರು.

ಕೋಟ್ಯಂತರ ಆದಾಯದಲ್ಲಿ ಬಿಡಿಗಾಸೂ ಸರಕಾರಕ್ಕಿಲ್ಲ

ರಣಜಿ ಟೆಸ್ಟ್ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಸಂಸ್ಥೆಯು ಬಾಡಿಗೆ ಜಾಗದಲ್ಲಿ ಗಳಿಸುತ್ತಿರುವ ಆದಾಯವನ್ನು ಸರಕಾರಕ್ಕೂ ಕೊಡುತ್ತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2019ರಲ್ಲಿ 595 ಕೋಟಿ ರೂ., 2020ರಲ್ಲಿ 535 ಕೋಟಿ ರೂ. ಆದಾಯ ಗಳಿಸಿತ್ತು ಎಂದು ಹೇಳಲಾಗುತ್ತಿದೆ.

ಐಪಿಎಲ್ ಸೇರಿದಂತೆ ಇನ್ನಿತರ ಪ್ರಾಯೋಜಿತ ಪಂದ್ಯಾವಳಿಗಳು ನಡೆಯುತ್ತಿವೆಯಾದರೂ ಇದರ ಆದಾಯವನ್ನು ಸರಕಾರದೊಂದಿಗೆ ಹಂಚಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯು ಪ್ರಸ್ತಾಪಿಸಿತ್ತು. ಆ ನಂತರ ಈ ಬಗ್ಗೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

‘ಕ್ರೀಡಾ ಚಟುವಟಿಕೆಗಳನ್ನು ನಡೆಸುವುದಕ್ಕೆಂದು ಭೂಮಿಯನ್ನು ತೆಗೆದುಕೊಂಡ ಮೇಲೆ ಅದಕ್ಕೆ ವಿರುದ್ಧವಾಗಿರುವ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಮನರಂಜನೆಯ ಚಟುವಟಿಕೆಗಳನ್ನು ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅಲ್ಲಿ ಕಮರ್ಷಿಯಲ್ ಚಟುವಟಿಕೆಗಳನ್ನು ನಡೆಸಿ ದುಡ್ಡು ಮಾಡುತ್ತಿದ್ದಾರೆ. ಅವರಿಂದ ಆಸ್ತಿಗಳನ್ನು ಕಿತ್ತುಕೊಳ್ಳುವುದು ನಮ್ಮ ಉದ್ದೇಶವಲ್ಲ. ಸರಕಾರ ಯಾವ ಉದ್ದೇಶಕ್ಕಾಗಿ ಅವರಿಗೆ ಜಾಗವನ್ನು ನೀಡಿದೆ ಆ ಉದ್ದೇಶ ಈಡೇರಬೇಕಿದೆ. ಶೇ.80ರಷ್ಟು ಕಮರ್ಷಿಯಲ್ ಉದ್ದೇಶವನ್ನೇ ಮೂಲವಾಗಿಟ್ಟುಕೊಂಡರೆ ಅಂತಹ ಕ್ಲಬ್‌ಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಿಡುವುದಿಲ್ಲ ಎನ್ನುವ ಸಂದೇಶ ನಮ್ಮ ಸಮಿತಿಯಿಂದ ಹೋಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅತ್ಯಂತ ದೊಡ್ಡ ಆದಾಯದ ಮೂಲವಾಗಿದೆ. 2023-24ರಲ್ಲಿ ಬಿಸಿಸಿಐನ ಒಟ್ಟು ಆದಾಯದ ಶೇ. 59 ಅಂದರೆ 5,761 ಕೋಟಿ ರೂ. ಗಳಿಸಿತ್ತು. ಮುಖ್ಯವಾಗಿ ಮಾಧ್ಯಮ ಹಕ್ಕುಗಳು (48,390 ಕೋಟಿ 2023-27ಕ್ಕೆ) ಮತ್ತು ಟಾಟಾ ಗ್ರೂಪ್‌ನಂತಹ ಪ್ರಾಯೋಜಕತ್ವದಿಂದ ಬರುತ್ತದೆ, ಇದು ಬಿಸಿಸಿಐ ಅನ್ನು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯನ್ನಾಗಿ ಮಾಡಿತ್ತು.

ಪ್ರತಿ ಪಂದ್ಯದಿಂದ 130 ಕೋಟಿ ರೂ. ಲಾಭ !

ಐಪಿಎಲ್ 2025 ರಲ್ಲಿ ಬಿಸಿಸಿಐಗೆ ಹರಿದು ಬಂದಿದೆ ಎನ್ನಲಾಗಿರುವ ಹಣದ ಲೆಕ್ಕಾಚಾರದ ಪ್ರಕಾರ ಪ್ರಸಾರ ಹಕ್ಕಿನಿಂದ 9,678 ಕೋಟಿ ರೂಪಾಯಿ ಸಿಕ್ಕಿದೆ. ಅಂದರೆ ಪ್ರತೀ ಪಂದ್ಯಕ್ಕೆ ಸುಮಾರು 130.7 ಕೋಟಿ ರೂಪಾಯಿ ಲಾಭ ಬಂದಂತಾಗಿದೆ. ಟಿ.ವಿ. ಮತ್ತು ಡಿಜಿಟಲ್ ಹಕ್ಕುಗಳನ್ನು ಬೇರೆ ಬೇರೆಯಾಗಿ ಮಾರಾಟ ಮಾಡಿದ್ದರಿಂದ ಆದಾಯ ಹೆಚ್ಚಾಗಿದೆ. ಸ್ಟಾರ್ ಸ್ಪೋರ್ಟ್ಸ್ ಟಿ.ವಿ. ಹಕ್ಕುಗಳನ್ನು ತೆಗೆದುಕೊಂಡಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ವಯಾಕಾಮ್ 18 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿತ್ತು. ಈ ಮಧ್ಯೆ ಟಾಟಾ ಗ್ರೂಪ್ ಐಪಿಎಲ್‌ನ ಪ್ರಾಯೋಜಕತ್ವವನ್ನು 2024ರಿಂದ 2028ರವರೆಗೆ ಐದು ವರ್ಷಗಳವರೆಗೆ ವಿಸ್ತರಿಸಿಕೊಂಡಿದೆ. ಇದಕ್ಕಾಗಿ 2,500 ಕೋಟಿ ರೂಪಾಯಿ ನೀಡಿದೆ. ಅಂದರೆ ಪ್ರತೀ ವರ್ಷ ಸುಮಾರು 500 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತ ಸಿಗುತ್ತದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆಗುತ್ತಿಗೆ ಷರತ್ತುಗಳ ಪ್ರಕಾರ ಕ್ರಿಕೆಟ್ ಆಟಕ್ಕೆ ಮಾತ್ರ ಅವಕಾಶ ನೀಡಬೇಕು. ಆದರೆ ಅಲ್ಲಿ ಕಮರ್ಷಿಯಲ್ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಅವರು ಐಪಿಎಲ್‌ನಂತಹ ಕಮರ್ಷಿಯಲ್ ಚಟುವಟಿಕೆಯನ್ನು ಅಲ್ಲಿ ನಡೆಸುತ್ತಾರೆ. ಇಲ್ಲಿ ಬಿಡ್ ಮಾಡಿ ಕೋಟ್ಯಂತರ ರೂಪಾಯಿಗಳ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಆದರೆ ಸರಕಾರಕ್ಕೆ ಬಾಡಿಗೆಯನ್ನು ಕೊಡುವುದಿಲ್ಲ ಮತ್ತು ಆದಾಯದಲ್ಲಿನ ಒಂದು ಭಾಗವನ್ನೂ ಸಹ ಕೊಡುವುದಿಲ್ಲ.

<ಕೆ.ಎಸ್. ಕೃಷ್ಣಾರೆಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News