ದಿಲ್ಲಿ ಪ್ರತಿಭಟನೆಯಲ್ಲಿ ‘ಒನ್ ಪೀಸ್’ ಕಡಲ್ಗಳ್ಳರ ಲಾಂಛನ ಕಾಣಿಸಿಕೊಂಡಿದ್ದೇಕೆ?
ಅನಘಾ ಜಯಕುಮಾರ್ - indianexpress. com
Photo Credit : indianexpress.com
ನೇಪಾಳ ಮತ್ತು ಇಂಡೋನೇಷ್ಯಾದಿಂದ ಮೊರಾಕೋ ಹಾಗೂ ಬಾಂಗ್ಲಾದೇಶದವರೆಗೆ ಯುವಜನರ ನೇತೃತ್ವದ ಪ್ರತಿಭಟನೆಗಳು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಅಶಾಂತಿಯ ಪ್ರಮುಖ ಲಕ್ಷಣವಾಗಿ ಹೊರಹೊಮ್ಮಿವೆ. ಇಂಟರ್ನೆಟ್ ಯುಗದಲ್ಲಿ ಬೆಳೆದ ತಲೆಮಾರಿಗೆ ಪರಿಚಿತವಾಗಿರುವ ಜನಪ್ರಿಯ ಸಂಸ್ಕೃತಿ, ಹಾಸ್ಯ ಮತ್ತು ಸಂಕೇತಗಳನ್ನು ಬಳಸಿಕೊಳ್ಳುವ ಮೂಲಕ ಈ ‘ಜೆನ್ ಝೀ’ (Gen Z) ಚಳವಳಿಗಳು ಬೀದಿಗಳಲ್ಲಿ ದೃಶ್ಯ ಅಭಿವ್ಯಕ್ತಿಯ ವಿಶಿಷ್ಟ ಭಾಷೆಯನ್ನು ರೂಪಿಸಿವೆ.
ಅಮೆರಿಕದ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ ನಲ್ಲಿ ವಲಸೆ ನಿಯಂತ್ರಣವನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಪ್ರತಿಭಟನಾಕಾರರು ಧರಿಸಿದ್ದ ಗಾಳಿ ತುಂಬಿದ ಕಪ್ಪೆಗಳ ವೇಷಭೂಷಣಗಳು ಹಾಗೂ ಜಪಾನಿನ ಜನಪ್ರಿಯ ಮಂಗಾ ಮತ್ತು ಅನಿಮೆ ಸರಣಿ ‘ಒನ್ ಪೀಸ್’ನಿಂದ ಪ್ರೇರಿತವಾದ, ಹುಲ್ಲಿನ ಟೋಪಿ ಧರಿಸಿರುವ ತಲೆಬುರುಡೆ ಮತ್ತು ಅಡ್ಡ ಮೂಳೆಗಳಿರುವ ಧ್ವಜ ಇಂತಹ ಸಂಕೇತಗಳಿಗೆ ಉದಾಹರಣೆಗಳಾಗಿವೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ನಾಯಕಿ ನೇಹಾ ಬೋರಾ ಅವರು ಕಡಲ್ಗಳ್ಳರ ಲಾಂಛನವಿರುವ ಕೆಂಪು ಬಣ್ಣದ ‘ಒನ್ ಪೀಸ್’ ಟಿ-ಶರ್ಟ್ ಧರಿಸಿ ಕಾಣಿಸಿಕೊಂಡಿದ್ದರು. ಈ ಮೂಲಕ ಈ ಲಾಂಛನ ವಾರಾಂತ್ಯದಲ್ಲಿ ದಿಲ್ಲಿಯ ಪ್ರತಿಭಟನೆಯಲ್ಲೂ ಕಾಣಿಸಿಕೊಂಡಿತು.
►‘ಒನ್ ಪೀಸ್’ ಎಂದರೇನು? ಕಡಲ್ಗಳ್ಳರ ಧ್ವಜ ಏನನ್ನು ಪ್ರತಿನಿಧಿಸುತ್ತದೆ?
ಸಮುದ್ರದಲ್ಲಿ ತಮ್ಮ ಇರುವಿಕೆಯನ್ನು ಸಾರಲು ಮತ್ತು ಸಮೀಪಿಸುತ್ತಿರುವ ಹಡಗುಗಳಲ್ಲಿ ಭೀತಿ ಹುಟ್ಟಿಸಲು ಕಡಲ್ಗಳ್ಳರು ಐತಿಹಾಸಿಕವಾಗಿ ತಲೆಬುರುಡೆ ಹಾಗೂ ಅಡ್ಡವಾಗಿ ಜೋಡಿಸಿದ ಮೂಳೆಗಳನ್ನು ಒಳಗೊಂಡ ‘ಜಾಲಿ ರೋಜರ್’ (Jolly Roger) ಧ್ವಜದ ವಿವಿಧ ರೂಪಗಳನ್ನು ಬಳಸುತ್ತಿದ್ದರು. 17ನೇ ಶತಮಾನದ ಅಂತ್ಯದಿಂದ 18ನೇ ಶತಮಾನದ ಆರಂಭದವರೆಗಿನ ಕಡಲ್ಗಳ್ಳರ ಸುವರ್ಣಯುಗದಲ್ಲಿ ಈ ಧ್ವಜದ ಹಲವು ರೂಪಗಳು ಬಳಕೆಯಲ್ಲಿದ್ದವು.
‘ಜಾಲಿ ರೋಜರ್’ ಎಂಬ ಹೆಸರಿನ ನಿಖರ ಮೂಲ ಸ್ಪಷ್ಟವಾಗಿಲ್ಲ. ಆದರೆ, ಈ ಪದವು 1724ರಲ್ಲಿ ಪ್ರಕಟವಾದ ‘ಎ ಜನರಲ್ ಹಿಸ್ಟರಿ ಆಫ್ ದಿ ರಾಬರೀಸ್ ಅಂಡ್ ಮರ್ಡರ್ಸ್ ಆಫ್ ದಿ ಮೋಸ್ಟ್ ನೋಟೋರಿಯಸ್ ಪೈರೇಟ್ಸ್’ ಕೃತಿಯಲ್ಲಿ ದಾಖಲಾಗಿದೆ. ವೆಲ್ಷ್ ಕಡಲ್ಗಳ್ಳ ಬ್ಲ್ಯಾಕ್ ಬಾರ್ಟ್ ರಾಬರ್ಟ್ಸ್ ಮತ್ತು ಇಂಗ್ಲಿಷ್ ಕಡಲ್ಗಳ್ಳ ಫ್ರಾನ್ಸಿಸ್ ಸ್ಪ್ರಿಗ್ಸ್ ಬಳಸುತ್ತಿದ್ದ ತಲೆಬುರುಡೆ ಹಾಗೂ ಮೂಳೆಗಳ ಲಾಂಛನದ ವಿವಿಧ ರೂಪಗಳನ್ನು ಈ ಪುಸ್ತಕ ಉಲ್ಲೇಖಿಸಿದೆ.
ಸಮಕಾಲೀನ ಜನಪ್ರಿಯ ಸಂಸ್ಕೃತಿಯಲ್ಲಿ ಜಪಾನಿನ ಕಲಾವಿದ ಐಚಿರೊ ಒಡಾ ಸೃಷ್ಟಿಸಿದ ‘ಒನ್ ಪೀಸ್’ ಸರಣಿಯ ‘ಸ್ಟ್ರಾ ಹ್ಯಾಟ್ ಪೈರೇಟ್ಸ್’ ತಂಡದ ಲಾಂಛನ ಪ್ರಸಿದ್ಧವಾಗಿದೆ. ಹುಲ್ಲಿನ ಟೋಪಿ ಧರಿಸಿರುವ ತಲೆಬುರುಡೆ ಹಾಗೂ ಅಡ್ಡ ಮೂಳೆಗಳನ್ನು ಒಳಗೊಂಡಿರುವ ಈ ಧ್ವಜವು ಆ ತಂಡವನ್ನು ಪ್ರತಿನಿಧಿಸುತ್ತದೆ. ‘ಒನ್ ಪೀಸ್’ ಮಂಗಾ ಸರಣಿಯ ಪ್ರಕಟಣೆ 1997ರಲ್ಲಿ ಆರಂಭವಾಯಿತು. ಇದನ್ನು ಆಧರಿಸಿದ ಅನಿಮೆ ಸರಣಿ 1999ರಿಂದ ಪ್ರಸಾರವಾಗುತ್ತಿದೆ. ಈ ಸರಣಿಯು ಅಂತಿಮ ಹಂತ ತಲುಪಿದೆ ಎಂದು ಹೇಳಲಾಗಿದ್ದರೂ, ಅದು ಯಾವಾಗ ಮುಕ್ತಾಯಗೊಳ್ಳಲಿದೆ ಎಂಬ ನಿರ್ದಿಷ್ಟ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಸ್ಟ್ರಾ ಹ್ಯಾಟ್ ಪೈರೇಟ್ಸ್ ತಂಡವನ್ನು ರಬ್ಬರಿನಂತೆ ಹಿಗ್ಗುವ ದೇಹ ಹೊಂದಿರುವ ಮಂಕಿ ಡಿ. ಲಫಿ ಮುನ್ನಡೆಸುತ್ತಾನೆ. ವಿಭಿನ್ನ ವ್ಯಕ್ತಿತ್ವದ ಸದಸ್ಯರನ್ನು ಒಳಗೊಂಡ ಈ ತಂಡ ತನ್ನ ಸಾಹಸಯಾತ್ರೆಯಲ್ಲಿ ದಬ್ಬಾಳಿಕೆಯ ಆಡಳಿತಗಾರರನ್ನು ಎದುರಿಸುತ್ತದೆ ಮತ್ತು ವಿಶ್ವ ಸರ್ಕಾರದ ಅಧಿಕಾರವನ್ನು ಪ್ರಶ್ನಿಸುತ್ತದೆ. ಸುವ್ಯವಸ್ಥೆ ಕಾಪಾಡುವುದಾಗಿ ಹೇಳಿಕೊಳ್ಳುವ ಈ ವಿಶ್ವ ಸರ್ಕಾರವೇ ವ್ಯಾಪಕ ಅನ್ಯಾಯಗಳಲ್ಲಿ ಭಾಗಿಯಾಗಿದೆ ಎಂಬುದು ಕಥೆಯ ಪ್ರಮುಖ ಅಂಶವಾಗಿದೆ.
ಈ ಸಂಘರ್ಷವು ನ್ಯಾಯವನ್ನು ನಿರ್ಧರಿಸುವ ಅಧಿಕಾರ ಯಾರಿಗಿದೆ ಮತ್ತು ವ್ಯವಸ್ಥೆಯನ್ನು ಕಾಪಾಡುವುದು ಎಂದರೆ ಅದು ಆಳಲ್ಪಡುವ ಜನರಿಗೆ ನಿಜವಾಗಿಯೂ ಒಳಿತನ್ನು ಮಾಡುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಲಫಿ ಮತ್ತು ಆತನ ಸಂಗಾತಿಗಳನ್ನು ಕಾನೂನುಬಾಹಿರರೆಂದು ಬಿಂಬಿಸಲಾಗುತ್ತದೆ. ಆದರೆ, ಅವರು ದಬ್ಬಾಳಿಕೆಯ ಆಡಳಿತದಿಂದ ಜನರನ್ನು ಮುಕ್ತಗೊಳಿಸಲು ಪದೇ ಪದೇ ಹೋರಾಡುತ್ತಾರೆ.
2020ರಲ್ಲಿ ‘ಗ್ಲೋಬಲ್ ಅಫೇರ್ಸ್’ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ವಿದ್ವಾಂಸ ಆಕೋಸ್ ಕೊಪ್ಪರ್, ಸ್ಥಾಪಿತ ಅಧಿಕಾರವನ್ನು ಪ್ರಶ್ನಿಸುವ ವ್ಯಕ್ತಿಗಳಾಗಿ ಕಡಲ್ಗಳ್ಳರನ್ನು ಚಿತ್ರಿಸುವ ಐತಿಹಾಸಿಕ ಪರಿಕಲ್ಪನೆಯನ್ನು ‘ಒನ್ ಪೀಸ್’ ಬಳಸಿಕೊಳ್ಳುತ್ತದೆ ಎಂದು ವಾದಿಸಿದ್ದಾರೆ. ರಾಜಕೀಯ ವ್ಯವಸ್ಥೆಯನ್ನು ಉಳಿಸುವ ಹೆಸರಿನಲ್ಲಿ ನ್ಯಾಯವನ್ನು ಬಲಿಕೊಡಬಹುದೇ ಎಂಬ ಪ್ರಶ್ನೆಯೂ ಈ ಸರಣಿಯ ಪ್ರಮುಖ ಸಂಘರ್ಷದಲ್ಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಅಸ್ತಿತ್ವದಲ್ಲಿರುವ ರಾಜಕೀಯ ವ್ಯವಸ್ಥೆಗಳಲ್ಲಿನ ಅಕ್ರಮಗಳು ಹಾಗೂ ಅವು ಯಾವ ಅನ್ಯಾಯಗಳ ಆಧಾರದ ಮೇಲೆ ನಿರ್ಮಾಣವಾಗಿರಬಹುದು ಎಂಬುದನ್ನು ಪ್ರಶ್ನಿಸಲು ಈ ಸರಣಿ ಓದುಗರನ್ನು ಪ್ರೇರೇಪಿಸುತ್ತದೆ ಎಂಬುದು ಕೊಪ್ಪರ್ ಅವರ ವಾದ. ಈ ದೃಷ್ಟಿಕೋನದಲ್ಲಿ ಕಡಲ್ಗಳ್ಳರು ಪರ್ಯಾಯ ಸಾಮಾಜಿಕ ವ್ಯವಸ್ಥೆಯ ಸಾಧ್ಯತೆಯನ್ನು ಪ್ರತಿನಿಧಿಸುತ್ತಾರೆ.
►‘ಒನ್ ಪೀಸ್’ ಪ್ರತಿಭಟನೆಯ ಸಂಕೇತವಾಗಿ ಬದಲಾಗಿದ್ದೇಕೆ?
2023ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲೂ ಈ ಧ್ವಜ ಕಾಣಿಸಿಕೊಂಡಿತ್ತು. ಬಳಿಕ, ವಿಶ್ವದ ವಿವಿಧ ಭಾಗಗಳಲ್ಲಿ ನಡೆದ ಜೆನ್ ಝೀ ಪ್ರತಿಭಟನೆಗಳಲ್ಲೂ ಇದು ಬಳಕೆಯಾಗಿದೆ. ಫೆಲೆಸ್ತೀನ್ನಲ್ಲಿ ಪ್ರವಾಹ ನಿಯಂತ್ರಣ ಯೋಜನೆಗಳಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ ವಿರುದ್ಧದ ಪ್ರತಿಭಟನೆಗಳಿಂದ ಹಿಡಿದು, 2025ರ ಸೆಪ್ಟೆಂಬರ್ನಲ್ಲಿ ನೇಪಾಳದ ಸರಕಾರ ಪತನಕ್ಕೆ ಕಾರಣವಾದ ಪ್ರತಿಭಟನೆಗಳವರೆಗೆ ಈ ಧ್ವಜ ಕಾಣಿಸಿಕೊಂಡಿದೆ.
‘ಒನ್ ಪೀಸ್’ ಸರಣಿಯ ಜನಪ್ರಿಯತೆಗೆ ಅದರ ಕಥಾವಸ್ತುವೂ ಪ್ರಮುಖ ಕಾರಣವಾಗಿದೆ. ಲಫಿಯ ಸಾಹಸಗಳ ಬಗ್ಗೆ ತಿಳಿದಿರುವ ಯುವಜನರಿಗೆ ಈ ಧ್ವಜವು ಸ್ವಾತಂತ್ರ್ಯ, ಒಗ್ಗಟ್ಟು ಮತ್ತು ಪ್ರಬಲ ಸಂಸ್ಥೆಗಳ ವಿರುದ್ಧದ ಪ್ರತಿರೋಧದ ಸಂಕೇತವಾಗಿ ಕಾಣುತ್ತದೆ. ವಿಭಿನ್ನ ರಾಜಕೀಯ ಬೇಡಿಕೆಗಳನ್ನು ಹೊಂದಿರುವ ಚಳವಳಿಗಳೂ ಈ ವಿಷಯಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಬಹುದು.
ಪ್ರತಿಭಟನೆಗಳಲ್ಲಿ ಜನಪ್ರಿಯ ಸಂಸ್ಕೃತಿ ಮತ್ತು ಹಾಸ್ಯವನ್ನು ಬಳಸುವುದು ಹೊಸತಲ್ಲ. ಇಂತಹ ವಿಧಾನವನ್ನು ಸಾಮಾನ್ಯವಾಗಿ ‘ಟ್ಯಾಕ್ಟಿಕಲ್ ಫ್ರಿವಾಲಿಟಿ’ (tactical frivolity) ಎಂದು ಕರೆಯಲಾಗುತ್ತದೆ. ಅಧಿಕಾರವನ್ನು ಪ್ರಶ್ನಿಸಲು, ಸಾರ್ವಜನಿಕರ ಗಮನ ಸೆಳೆಯಲು ಮತ್ತು ಕೆಲವೊಮ್ಮೆ ಅಧಿಕಾರಿಗಳ ಅತಿರೇಕದ ಕ್ರಮಗಳನ್ನು ಬಹಿರಂಗಪಡಿಸಲು ಪ್ರತಿಭಟನಾಕಾರರು ಹಾಸ್ಯ, ವೇಷಭೂಷಣ ಹಾಗೂ ವಿಡಂಬನೆಯನ್ನು ಬಳಸುತ್ತಾರೆ. ನಾಟಕೀಯ ಪ್ರತಿಭಟನೆಗಳು ಮತ್ತು ವ್ಯಂಗ್ಯ ಪ್ರದರ್ಶನಗಳೂ ಈ ಸಂಪ್ರದಾಯದ ಭಾಗವಾಗಿವೆ. ಇಲ್ಲಿ ಹಾಸ್ಯವು ರಾಜಕೀಯ ಅಭಿವ್ಯಕ್ತಿಯ ಮಾಧ್ಯಮವಾಗುವುದರ ಜತೆಗೆ ಹೆಚ್ಚಿನ ಜನರನ್ನು ಚಳವಳಿಯತ್ತ ಸೆಳೆಯುವ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲೂ ಜುಲೈನಲ್ಲಿ ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಇಂತಹ ತಂತ್ರಗಳು ಕಂಡುಬಂದಿದ್ದವು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಲು ಮೀಮ್ಗಳು, ವೇಷಭೂಷಣಗಳು ಮತ್ತು ಜನಪ್ರಿಯ ಸಂಸ್ಕೃತಿಯ ಉಲ್ಲೇಖಗಳನ್ನು ಬಳಸಿಕೊಂಡಿದ್ದರು. ಕೆಲವರು ಸೂಪರ್ ಹೀರೋಗಳ ವೇಷ ಧರಿಸಿದ್ದರೆ, ಇನ್ನು ಕೆಲವರು ಪೊಲೀಸರೊಂದಿಗಿನ ಮಾತಿನ ಚಕಮಕಿಯನ್ನು ವಿಡಿಯೊ ಗೇಮ್ಗಳು ಮತ್ತು ಸಾಮಾಜಿಕ ಮಾಧ್ಯಮದ ಟ್ರೆಂಡ್ ಗಳಿಂದ ಪ್ರೇರಿತವಾದ ಮೀಮ್ ಗಳಾಗಿ ರೂಪಿಸಿದ್ದರು.
ಸೌಜನ್ಯ: indianexpress.com