Photo Credit : scroll.in

ಅದಾನಿ ಗ್ರೂಪ್ ನ ಪ್ರಮುಖ ಸಂಸ್ಥೆಯು 2022ರ ಹಣಕಾಸು ವರ್ಷದ ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತಾದರೂ, ವರ್ಷದ ಕೊನೆಯಲ್ಲಿ ಶೇ 200ರಷ್ಟು ಭಾರಿ ಲಾಭ ಗಳಿಸಿತು. ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ನ ವಾರ್ಷಿಕ ವಹಿವಾಟಿನ ಶೇ. 70ಕ್ಕಿಂತ ಹೆಚ್ಚು ಭಾಗವು ಅದರ ಕಲ್ಲಿದ್ದಲು ಆಮದು ವಿಭಾಗದಿಂದಲೇ ಬಂದಿದೆ. ‘ವಿವಿಧ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಕಂಪೆನಿಗಳಿಗೆ ಪೂರೈಸಿದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ’ ಎಂದು ಕಂಪೆನಿಯು ತನ್ನ 2022–23ನೇ ಸಾಲಿನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

2022ರ ಮೇ ತಿಂಗಳಲ್ಲಿ, ದೇಶದಲ್ಲಿ ಕಲ್ಲಿದ್ದಲಿನ ಕೊರತೆಯಿದೆ ಎಂದು ಕಾರಣವೊಡ್ಡಿ, ದೇಶದ ಎಲ್ಲ ಉಷ್ಣ ವಿದ್ಯುತ್ ಉತ್ಪಾದನಾ ಕಂಪೆನಿಗಳು ತಮ್ಮ ಕಲ್ಲಿದ್ದಲು ಅಗತ್ಯದ ಶೇ. 10ರಷ್ಟನ್ನು ಕಡ್ಡಾಯವಾಗಿ ಆಮದು ಮಾಡಿಕೊಳ್ಳುವಂತೆ ಕೇಂದ್ರ ವಿದ್ಯುತ್ ಸಚಿವಾಲಯ ನಿರ್ದೇಶನ ನೀಡಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಬೆಲೆ ಗಗನಕ್ಕೇರುತ್ತಿದ್ದ ಸಮಯದಲ್ಲೇ ಈ ಆಮದು ಕಡ್ಡಾಯ ಆದೇಶ ಜಾರಿಗೆ ಬಂದಿತು. ರಾಜ್ಯಗಳ ನಡುವೆ ಸಾರ್ವಜನಿಕ ಹಣವನ್ನು ಹಂಚಿಕೆ ಮಾಡುವ ಸಾಂವಿಧಾನಿಕ ಸಂಸ್ಥೆಯಾದ ಭಾರತದ 16ನೇ ಹಣಕಾಸು ಆಯೋಗದ ವರದಿಯ ಪ್ರಕಾರ, 2022ರ ಎಪ್ರಿಲ್‌ ನಿಂದ 2023ರ ಜನವರಿಯ ನಡುವೆ ಅಂತರರಾಷ್ಟ್ರೀಯ ಕಲ್ಲಿದ್ದಲಿನ ಬೆಲೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.131ರಷ್ಟು ಹೆಚ್ಚಿತ್ತು.

ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸಲ್ಲಿಸಲಾದ ಅರ್ಜಿಗಳ ಮೂಲಕ ಲಭ್ಯವಾದ ಸರ್ಕಾರದ ಆಂತರಿಕ ಪತ್ರವ್ಯವಹಾರಗಳನ್ನು ‘ಸ್ಕ್ರಾಲ್’ ಪಡೆದುಕೊಂಡಿದೆ. ಪತ್ರಕರ್ತ ಶ್ರೀಗಿರೀಶ್ ಜಲಿಹಾಲ್ ಅವರ ಈ ವರದಿಯಲ್ಲಿ, ಈ ಹಿಂದೆ ಎಲ್ಲಿಯೂ ಪ್ರಕಟವಾಗದ ದಾಖಲೆಗಳು ಕಲ್ಲಿದ್ದಲು ಆಮದನ್ನು ಕಡ್ಡಾಯಗೊಳಿಸಿದ ಸರ್ಕಾರದ ನಿರ್ಧಾರಕ್ಕೆ ಸರ್ಕಾರಿ ಹಾಗೂ ಖಾಸಗಿ ಒಡೆತನದ ವಿದ್ಯುತ್ ಕಂಪೆನಿಗಳೆರಡರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂಬುದನ್ನು ಬಹಿರಂಗಪಡಿಸಿವೆ.

ದುಬಾರಿ ಬೆಲೆಯ ಕಲ್ಲಿದ್ದಲಿನ ಆಮದಿನಿಂದ ತಮ್ಮ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹದಗೆಡಲಿದೆ ಎಂದು ಉತ್ತರ ಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳು ಎಚ್ಚರಿಸಿದ್ದವು. ಹಲವು ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆಗಳು ತಾಂತ್ರಿಕ ಕಾರಣಗಳನ್ನು ನೀಡಿ ಆಮದಿನಿಂದ ವಿನಾಯಿತಿ ಕೋರಿದ್ದವು.

ಆದರೆ, ಕೇಂದ್ರ ವಿದ್ಯುತ್ ಸಚಿವಾಲಯ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕಲ್ಲಿದ್ದಲು ಆಮದು ಗುರಿಯನ್ನು ತಲುಪಲು ವಿಫಲವಾದ ಕಂಪೆನಿಗಳಿಗೆ ಹಂಚಿಕೆಯಾಗುವ ದೇಶೀಯ ಕಲ್ಲಿದ್ದಲಿನ ಪ್ರಮಾಣದಲ್ಲಿ ಶೇ 5ರಷ್ಟು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವಂತೆ ಆದೇಶ ನೀಡಿದ್ದು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (NTPC). ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಈ ಸಂಸ್ಥೆಯು ವಿದ್ಯುತ್ ವಲಯದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಕಂಪೆನಿಯಾಗಿದೆ.

2021ರ ಡಿಸೆಂಬರ್ನಿಂದ 2024ರ ಎಪ್ರಿಲ್ವರೆಗೆ 30.16 ಮಿಲಿಯನ್ ಟನ್ ಕಲ್ಲಿದ್ದಲಿನ ಆಮದಿಗಾಗಿ NTPC ಹೊರಡಿಸಿದ್ದ 31 ಟೆಂಡರ್ ಗಳನ್ನು ‘ಸ್ಕ್ರಾಲ್’ ಪರಿಶೀಲಿಸಿದೆ. ಇವುಗಳಲ್ಲಿ 24 ಟೆಂಡರ್ ಗಳನ್ನು ಅದಾನಿ ಎಂಟರ್ಪ್ರೈಸಸ್ ತನ್ನದಾಗಿಸಿಕೊಂಡಿದೆ. ಉಳಿದ ಏಳು ಟೆಂಡರ್ ಗಳು ಅಹಮದಾಬಾದ್ ಮೂಲದ ‘Adi Tradelink’ ಕಂಪೆನಿಯ ಪಾಲಾಗಿವೆ. ಅದಾನಿ ಕಂಪೆನಿಗಳಿಂದ ಅದಾನಿ ಪವರ್ಗೆ ಹಣ ವರ್ಗಾಯಿಸಲು ಈ ಸಂಸ್ಥೆಯನ್ನು ಬಳಸಿಕೊಳ್ಳಲಾಗಿದೆ ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ‘ಹಿಂಡನ್ ಬರ್ಗ್’ ಆರೋಪಿಸಿತ್ತು. ಆದರೆ, ಅದಾನಿ ಗ್ರೂಪ್ ಈ ಆರೋಪವನ್ನು ತಳ್ಳಿಹಾಕಿತ್ತು.

NTPCಯ ಒಪ್ಪಂದಗಳು ಈ ಎರಡೂ ಕಂಪೆನಿಗಳಿಗೆ ಅಸ್ತಿತ್ವದಲ್ಲಿದ್ದ ಕಲ್ಲಿದ್ದಲಿನ ಬೆಲೆ ಮತ್ತು ಸರಕು ಸಾಗಣೆ ವೆಚ್ಚದ ಮೇಲೆ ನಿಗದಿತ ಲಾಭದ ಶೇಕಡಾವಾರು ಪ್ರಮಾಣವನ್ನು ಖಚಿತಪಡಿಸಿದ್ದವು. ಪರಿಣಾಮವಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಬೆಲೆ ಹೆಚ್ಚಾದಂತೆಲ್ಲ, ಪ್ರತಿ ಸಾಗಣೆಯಲ್ಲೂ ಈ ಕಂಪೆನಿಗಳ ಲಾಭದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಯಿತು.

ಕಲ್ಲಿದ್ದಲಿನ ಆಮದಿನಿಂದ ಹೆಚ್ಚಾದ ಇಂಧನ ವೆಚ್ಚದ ಅಂತಿಮ ಹೊರೆಯನ್ನು ಸಾಮಾನ್ಯ ಗ್ರಾಹಕರೇ ಹೊರಬೇಕಾಯಿತು.

ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದರಿಂದ ಪ್ರತಿ ಯುನಿಟ್‌ ಗೆ 75ರಿಂದ 80 ಪೈಸೆಯವರೆಗೆ ವಿದ್ಯುತ್ ದರ ಹೆಚ್ಚಾಗಬಹುದು ಎಂದು ಉತ್ತರ ಪ್ರದೇಶದ ಇಂಧನ ಸಚಿವರು ಕೇಂದ್ರ ವಿದ್ಯುತ್ ಸಚಿವಾಲಯಕ್ಕೆ ಎಚ್ಚರಿಕೆ ನೀಡಿದ್ದರು ಎಂಬುದನ್ನು ಸರ್ಕಾರದ ಆಂತರಿಕ ಪತ್ರವ್ಯವಹಾರಗಳು ತೋರಿಸುತ್ತವೆ. ಇದಕ್ಕೆ ಪ್ರತಿಕ್ರಿಯಿಸಿದ್ದ ವಿದ್ಯುತ್ ಸಚಿವರು, ಈ ಹೆಚ್ಚಳವು ಪ್ರತಿ ಯುನಿಟ್‌ ಗೆ 50ರಿಂದ 60 ಪೈಸೆಗಿಂತ ಹೆಚ್ಚಿರುವುದಿಲ್ಲ ಎಂದು ಹೇಳಿದ್ದರು.

ಆದರೆ, ಒಂದು ವರ್ಷದ ಬಳಿಕ ವಿದ್ಯುತ್ ಸಚಿವರು ಒಪ್ಪಿಕೊಂಡಂತೆ, 2022–23ನೇ ಸಾಲಿನಲ್ಲಿ ಸರಾಸರಿ ವಿದ್ಯುತ್ ಖರೀದಿ ವೆಚ್ಚವು 71 ಪೈಸೆಯಷ್ಟು ಹೆಚ್ಚಳವಾಗಿತ್ತು. ಆದರೂ, ‘ಪ್ರಸರಣ ಮತ್ತು ಹಂಚಿಕೆ ವೆಚ್ಚಗಳು ಸೇರಿದಂತೆ ವಿವಿಧ ವೆಚ್ಚಗಳ ಹೆಚ್ಚಳವೇ’ ಇದಕ್ಕೆ ಕಾರಣ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಅದೇ ಹಣಕಾಸು ವರ್ಷದಲ್ಲಿ ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ನ ಕಲ್ಲಿದ್ದಲು ಆಮದು ವ್ಯವಹಾರವು 99,486 ಕೋಟಿ ರೂ. ವಹಿವಾಟು ದಾಖಲಿಸಿತ್ತು. ಇದು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು.

ಕೇಂದ್ರ ವಿದ್ಯುತ್ ಸಚಿವಾಲಯ, NTPC, ಅದಾನಿ ಗ್ರೂಪ್ ಮತ್ತು ಆದಿ ಟ್ರೇಡ್ಲಿಂಕ್ಗೆ ‘ಸ್ಕ್ರಾಲ್’ ಪ್ರಶ್ನೆಗಳನ್ನು ಕಳುಹಿಸಿತ್ತು. ಆದರೆ, ವರದಿ ಪ್ರಕಟವಾಗುವವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

►ಕಲ್ಲಿದ್ದಲು ಕೊರತೆಯ ವಿವಾದ

ಭಾರತದ ಬಹುಪಾಲು ಉಷ್ಣ ವಿದ್ಯುತ್ ಉತ್ಪಾದನೆಯು ಸ್ಥಳೀಯವಾಗಿ ಗಣಿಗಾರಿಕೆ ಮಾಡಿದ ಕಲ್ಲಿದ್ದಲನ್ನು ಬಳಸಿಕೊಂಡೇ ನಡೆಯುತ್ತದೆ. ಕರಾವಳಿ ಪ್ರದೇಶಗಳ ಬಳಿ ನಿರ್ಮಿಸಲಾದ ಕೆಲವೇ ಕೆಲವು ಉಷ್ಣ ವಿದ್ಯುತ್ ಸ್ಥಾವರಗಳು ಮಾತ್ರ ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಪ್ರಾಥಮಿಕ ಇಂಧನವಾಗಿ ಬಳಸಲು ವಿನ್ಯಾಸಗೊಳಿಸಲ್ಪಟ್ಟಿವೆ. ಇನ್ನುಳಿದ ವಿದ್ಯುತ್ ಸ್ಥಾವರಗಳು ಭಾರತೀಯ ಕಲ್ಲಿದ್ದಲಿಗಿಂತ ಕಡಿಮೆ ಬೂದಿ ಅಂಶ ಹೊಂದಿರುವ ಅಲ್ಪ ಪ್ರಮಾಣದ ಆಮದು ಕಲ್ಲಿದ್ದಲನ್ನು ದೇಶೀಯ ಕಲ್ಲಿದ್ದಲಿನೊಂದಿಗೆ ಬೆರೆಸಿ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ.

2020 ಮತ್ತು 2021ರಲ್ಲಿ ಭಾರತದ ಕಲ್ಲಿದ್ದಲು ಆಮದು ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದಿತ್ತು. 2020ರ ಫೆಬ್ರುವರಿಯಲ್ಲಿ, 2023ರ ವೇಳೆಗೆ ದೇಶವು ಕಲ್ಲಿದ್ದಲಿನ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಭಾರತದ ಕಲ್ಲಿದ್ದಲು ಸಚಿವರು ಹೇಳಿದ್ದರು.

2020ರಲ್ಲಿ ಕಂಡುಬಂದ ಅಲ್ಪ ಇಳಿಕೆಯನ್ನು ಹೊರತುಪಡಿಸಿ, ಭಾರತದ ದೇಶೀಯ ಕಲ್ಲಿದ್ದಲು ಉತ್ಪಾದನೆಯು ಸ್ಥಿರವಾಗಿ ಏರಿಕೆಯಾಗುತ್ತಿರುವುದನ್ನು ಸರ್ಕಾರದ ದತ್ತಾಂಶಗಳು ತೋರಿಸುತ್ತವೆ. ಆದರೆ, 2022ರವರೆಗಿನ ಎರಡು ವರ್ಷಗಳಲ್ಲಿ ಗಣಿಗಳಿಂದ ಉಷ್ಣ ವಿದ್ಯುತ್ ಸ್ಥಾವರಗಳು ಸೇರಿದಂತೆ ವಿವಿಧ ಕೈಗಾರಿಕೆಗಳಿಗೆ ಕಲ್ಲಿದ್ದಲು ಸಾಗಣೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿತ್ತು.

2021ರ ಅಕ್ಟೋಬರ್ನಲ್ಲಿ, ದಿಲ್ಲಿಯ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಖಾಲಿಯಾಗುತ್ತಿರುವುದರಿಂದ ರಾಜಧಾನಿಯಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಬಹುದು ಎಂದು ಅಂದಿನ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದರು. ಆದರೆ, ಈ ಆರೋಪಗಳನ್ನು ಕೇಂದ್ರ ವಿದ್ಯುತ್ ಸಚಿವಾಲಯ ತಳ್ಳಿಹಾಕಿತ್ತು. ದೇಶದಲ್ಲಿ ಯಾವುದೇ ಕಲ್ಲಿದ್ದಲು ಕೊರತೆಯಿಲ್ಲ ಎಂದು ಅದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.

ಸರ್ಕಾರವು ಸಾರ್ವಜನಿಕವಾಗಿ ನೀಡುತ್ತಿದ್ದ ಹೇಳಿಕೆಗಳಿಗೆ ವಿರುದ್ಧವಾಗಿ, ‘ಸ್ಕ್ರಾಲ್’ ಪಡೆದುಕೊಂಡಿರುವ ಆಂತರಿಕ ಪತ್ರವ್ಯವಹಾರಗಳ ಪ್ರಕಾರ, 2021ರ ಜುಲೈನಿಂದ ಸೆಪ್ಟೆಂಬರ್ವರೆಗೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ‘ನಿರಂತರವಾಗಿ ಖಾಲಿಯಾಗುತ್ತಿತ್ತು’ ಮತ್ತು ಅದೇ ವರ್ಷದ ಅಕ್ಟೋಬರ್ ನಲ್ಲಿ ಅದು ‘ಅತ್ಯಂತ ಕಳವಳಕಾರಿ’ ಮಟ್ಟ ತಲುಪಿತ್ತು ಎಂಬುದು ವಿದ್ಯುತ್ ಸಚಿವಾಲಯಕ್ಕೆ ತಿಳಿದಿತ್ತು.

ಕಲ್ಲಿದ್ದಲು ದಾಸ್ತಾನು ಕಡಿಮೆಯಾಗಲು ಒಂದು ಕಡೆ ಮಳೆಗಾಲದಲ್ಲಿ ಕಲ್ಲಿದ್ದಲು ಪೂರೈಕೆ ಮತ್ತು ಸಾಗಣೆಯಲ್ಲಿ ಉಂಟಾದ ವ್ಯತ್ಯಯ ಕಾರಣವಾಗಿದ್ದರೆ, ಮತ್ತೊಂದೆಡೆ ಆಮದು ಕಲ್ಲಿದ್ದಲನ್ನು ಬಳಸುತ್ತಿದ್ದ ಕೆಲವು ಉಷ್ಣ ವಿದ್ಯುತ್ ಸ್ಥಾವರಗಳು ಕಾನೂನು ವ್ಯಾಜ್ಯಗಳಿಂದಾಗಿ ಮುಚ್ಚಲ್ಪಟ್ಟಿದ್ದ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಹಠಾತ್ತನೆ ಗಗನಕ್ಕೇರಿದ್ದು ಕಾರಣವಾಗಿತ್ತು ಎಂದು ಸಚಿವಾಲಯ ವಿವರಿಸಿತ್ತು.

2021ರ ಡಿಸೆಂಬರ್ನಲ್ಲಿ ಎಲ್ಲ ವಿದ್ಯುತ್ ಉತ್ಪಾದಕರು ತಮ್ಮ ಕಲ್ಲಿದ್ದಲು ಅಗತ್ಯದ ಶೇ 4ರಷ್ಟನ್ನು ಆಮದು ಮಾಡಿಕೊಳ್ಳುವಂತೆ ವಿದ್ಯುತ್ ಸಚಿವಾಲಯ ಸಲಹೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ಒಡೆತನದ ಎರಡು ವಿದ್ಯುತ್ ಕಂಪೆನಿಗಳಾದ NTPC ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ ಸಂಸ್ಥೆಗಳಿಗೆ ತಮ್ಮ ಕಲ್ಲಿದ್ದಲು ಅಗತ್ಯದ ಶೇ 10ರಷ್ಟನ್ನು ಕಡ್ಡಾಯವಾಗಿ ಆಮದು ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿತ್ತು.

ನಾಲ್ಕು ತಿಂಗಳ ಬಳಿಕ, ಅಂದರೆ 2022ರ ಎಪ್ರಿಲ್ ನಲ್ಲಿ, ಈ ನಿರ್ದೇಶನದ ವ್ಯಾಪ್ತಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರದ ಸ್ವಾಮ್ಯದ ಅಥವಾ ಖಾಸಗಿ ಒಡೆತನದ ಎಲ್ಲ ವಿದ್ಯುತ್ ಉತ್ಪಾದಕರಿಗೂ ಅನ್ವಯಿಸಲಾಯಿತು. ‘ಮಳೆಗಾಲ ಆರಂಭವಾಗುವ ಮೊದಲು ವಿದ್ಯುತ್ ಸ್ಥಾವರಗಳಲ್ಲಿ ಕನಿಷ್ಠ ಅಗತ್ಯದಷ್ಟು ಕಲ್ಲಿದ್ದಲು ದಾಸ್ತಾನು ಖಚಿತಪಡಿಸಿಕೊಳ್ಳಲು’ 2022ರ ಮೇ ಅಂತ್ಯದೊಳಗೆ ತಮ್ಮ ಕಲ್ಲಿದ್ದಲು ಅಗತ್ಯದ ಶೇ 10ರಷ್ಟನ್ನು ಆಮದು ಮಾಡಿಕೊಳ್ಳುವಂತೆ ವಿದ್ಯುತ್ ಸಚಿವಾಲಯ ಸೂಚಿಸಿತು.

►ಕಲ್ಲಿದ್ದಲು ಬೆಲೆ ಏರಿಕೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಬೆಲೆ ಗಗನಕ್ಕೇರಿದ್ದ ಸಮಯದಲ್ಲೇ ಈ ಆಮದು ಕಡ್ಡಾಯ ಆದೇಶ ಜಾರಿಗೆ ಬಂದಿತು. 2022ರಲ್ಲಿ ಕಲ್ಲಿದ್ದಲು ‘ಅಭೂತಪೂರ್ವ ಬೆಲೆ ಮಟ್ಟವನ್ನು’ ತಲುಪಿತ್ತು ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ತಿಳಿಸಿದೆ.

ಉದಾಹರಣೆಗೆ, ಆಸ್ಟ್ರೇಲಿಯಾದ ಕಲ್ಲಿದ್ದಲಿನ ಬೆಲೆ 2022ರ ಎಪ್ರಿಲ್ ನಲ್ಲಿ ಪ್ರತಿ ಟನ್‌ ಗೆ 300 ಡಾಲರ್ಗಿಂತ ಕಡಿಮೆಯಿತ್ತು. ಆದರೆ, 2022ರ ಮೇ ತಿಂಗಳಲ್ಲಿ ಅದು ಪ್ರತಿ ಟನ್‌ ಗೆ 400 ಡಾಲರ್ ಗಡಿ ದಾಟಿತು. 2023ರ ಸೆಪ್ಟೆಂಬರ್ ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಪ್ರತಿ ಟನ್‌ ಗೆ 443 ಡಾಲರ್ ತಲುಪಿತು.

2022ರ ಮೇ ತಿಂಗಳಲ್ಲಿ ತೆಲಂಗಾಣ ಸರ್ಕಾರವು ವಿದ್ಯುತ್ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಕಲ್ಲಿದ್ದಲಿನ ತೀವ್ರ ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ದೇಶೀಯ ಕಲ್ಲಿದ್ದಲು ಮತ್ತು ಆಮದು ಕಲ್ಲಿದ್ದಲಿನ ನಡುವಿನ ಬೆಲೆ ವ್ಯತ್ಯಾಸವು ಪ್ರತಿ ಟನ್‌ ಗೆ 25,000 ರೂ.ಗಳಷ್ಟಿದೆ ಎಂದು ಅದು ಗಮನಸೆಳೆದಿತ್ತು. ತನ್ನ ವಿದ್ಯುತ್ ಕಂಪೆನಿಯು ‘ಕಲ್ಲಿದ್ದಲು ಅಗತ್ಯದ ಶೇ 10ರಷ್ಟನ್ನು ಆಮದು ಮೂಲಕ ಪೂರೈಸಿಕೊಳ್ಳಬೇಕಾದರೆ’, ಕಲ್ಲಿದ್ದಲು ಖರೀದಿಗಾಗಿ ಪ್ರತಿವರ್ಷ 3,750 ಕೋಟಿ ರೂ.ಗಳ ಹೆಚ್ಚುವರಿ ಹೊರೆಯನ್ನು ಹೊರಬೇಕಾಗುತ್ತದೆ ಎಂದು ಆ ಪತ್ರದಲ್ಲಿ ತಿಳಿಸಲಾಗಿತ್ತು.

ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳೂ ಈ ನಿರ್ದೇಶನವನ್ನು ವಿರೋಧಿಸಿದ್ದವು.

ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ತನ್ನ ಸಚಿವ ಸಂಪುಟ ಅನುಮತಿ ನಿರಾಕರಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರವು 2022ರ ಮೇ ತಿಂಗಳಲ್ಲಿ ವಿದ್ಯುತ್ ಸಚಿವಾಲಯಕ್ಕೆ ತಿಳಿಸಿತ್ತು. ಅದೇ ತಿಂಗಳ ಕೊನೆಯಲ್ಲಿ ದಿಲ್ಲಿಯ ವಿದ್ಯುತ್ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆ ರಾಜ್ಯದ ಇಂಧನ ಸಚಿವರು, ಉತ್ತರ ಪ್ರದೇಶದಂತಹ ಸಮುದ್ರ ತೀರವಿಲ್ಲದ ರಾಜ್ಯಗಳನ್ನು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಂತೆ ಒತ್ತಾಯಿಸಬಾರದು ಎಂದು ಹೇಳಿದರು.

ಮಳೆಗಾಲದಲ್ಲಿ ಕಲ್ಲಿದ್ದಲಿನ ಆಮದು ಪ್ರಕ್ರಿಯೆಯನ್ನು ನಿರ್ವಹಿಸುವುದು ‘ತುಂಬಾ ಕಷ್ಟ’ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ತೊಂದರೆ ಎದುರಾಗಿರುವುದರಿಂದ ಕಲ್ಲಿದ್ದಲಿನ ಆಮದು ಜವಾಬ್ದಾರಿಯನ್ನು ‘ಕೋಲ್ ಇಂಡಿಯಾ ಲಿಮಿಟೆಡ್’ಗೆ ವಹಿಸಬೇಕು ಎಂದು ಗುಜರಾತ್ ಸರ್ಕಾರ ಸಲಹೆ ನೀಡಿತ್ತು.

ಖಾಸಗಿ ಒಡೆತನದ ವಿದ್ಯುತ್ ಸ್ಥಾವರಗಳೂ ವಿನಾಯಿತಿ ಕೋರಿ ವಿದ್ಯುತ್ ಸಚಿವಾಲಯಕ್ಕೆ ಪತ್ರ ಬರೆದಿದ್ದವು. ಆಮದು ಕಲ್ಲಿದ್ದಲಿಗೆ ತಮ್ಮ ವಿದ್ಯುತ್ ಸ್ಥಾವರದ ಬಾಯ್ಲರ್ ಗಳು ತಾಂತ್ರಿಕವಾಗಿ ಹೊಂದಿಕೊಳ್ಳುವುದಿಲ್ಲ ಎಂದು ‘ಅಧುನಿಕ್ ಪವರ್ ಅಂಡ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್’ ಹೇಳಿತ್ತು. ಉತ್ತರ ಪ್ರದೇಶಕ್ಕೆ ವಿದ್ಯುತ್ ಮಾರಾಟ ಮಾಡುವ ಒಪ್ಪಂದ ಹೊಂದಿದ್ದ ‘ಲಾಂಕೊ ಅನ್ಪರಾ’ ಸಂಸ್ಥೆಯು, ಆಮದು ಕಲ್ಲಿದ್ದಲನ್ನು ಬಳಸುವುದರಿಂದ ಖರೀದಿ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ರಾಜ್ಯದ ವಿದ್ಯುತ್ ವಿತರಣಾ ಕಂಪೆನಿಯು ತನಗೆ ಅನುಮತಿ ನಿರಾಕರಿಸಿದೆ ಎಂದು ತಿಳಿಸಿತ್ತು.

ವಿದ್ಯುತ್ ಉತ್ಪಾದಕರು ಮತ್ತು ವಿತರಕರಿಗೆ ವೆಚ್ಚ ಹೆಚ್ಚಾಗುವ ಬಗ್ಗೆ ಇದ್ದ ಕಳವಳವನ್ನು ನಿವಾರಿಸಲು ವಿದ್ಯುತ್ ಸಚಿವಾಲಯವು ವಿದ್ಯುತ್ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಆದೇಶವೊಂದನ್ನು ಹೊರಡಿಸಿತು. ಇದರನ್ವಯ, ಕಲ್ಲಿದ್ದಲಿನ ಆಮದಿನಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆಯೇ ಹೊರಿಸಲು ಉಷ್ಣ ವಿದ್ಯುತ್ ಕಂಪೆನಿಗಳಿಗೆ ಅವಕಾಶ ನೀಡಲಾಯಿತು.

ಜತೆಗೆ, ‘ಕಾರ್ಯವಿಧಾನದ ತೊಂದರೆಗಳನ್ನು’ ನಿವಾರಿಸಲು ರಾಜ್ಯ ಹಾಗೂ ಖಾಸಗಿ ಒಡೆತನದ ಎಲ್ಲ ಉಷ್ಣ ವಿದ್ಯುತ್ ಉತ್ಪಾದಕರ ಪರವಾಗಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಂತೆ ‘ಕೋಲ್ ಇಂಡಿಯಾ ಲಿಮಿಟೆಡ್’ಗೂ ನಿರ್ದೇಶನ ನೀಡಲಾಯಿತು.

ಭಾರತದ ಸಾರ್ವಜನಿಕ ಸ್ವಾಮ್ಯದ ಬೃಹತ್ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆಯಾದ ‘ಕೋಲ್ ಇಂಡಿಯಾ ಲಿಮಿಟೆಡ್’, ತನಗೆ ‘ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಲ್ಲಿ ಕಡಿಮೆ ಅನುಭವವಿದೆ ಅಥವಾ ಯಾವುದೇ ಅನುಭವವಿಲ್ಲ’ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿತ್ತು.

ಸರ್ಕಾರದ ಆಂತರಿಕ ಪತ್ರವ್ಯವಹಾರಗಳ ಪ್ರಕಾರ, ಆ ಸಂಸ್ಥೆಯ ಅಧಿಕಾರಿಗಳು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದರು ಮತ್ತು ಖಾಸಗಿ ಕಂಪೆನಿಗಳಿಗಾಗಿ ಆಮದು ಮಾಡಿಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದ್ದರು. ರಾಜ್ಯಗಳ ವಿಚಾರದಲ್ಲಿಯೂ ಮುಂಗಡವಾಗಿ ಹಣ ಪಾವತಿಸಬೇಕೆಂದು ಅವರು ಬಯಸಿದ್ದರು. ಆದರೆ, ವಿದ್ಯುತ್ ಸಚಿವಾಲಯ ಈ ಎಲ್ಲ ವಿರೋಧಗಳನ್ನು ತಳ್ಳಿಹಾಕಿ, ಕೇಂದ್ರ ಸರ್ಕಾರದ ಈ ಸಂಸ್ಥೆಯೇ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ಬಳಿಕ ರಾಜ್ಯಗಳಿಂದ ವೆಚ್ಚವನ್ನು ವಸೂಲಿ ಮಾಡುವಂತೆ ಸೂಚಿಸಿತು.

ಆದರೆ, ಆ ವೇಳೆಗೆ ಕೆಲವು ರಾಜ್ಯಗಳು ಮತ್ತು ಖಾಸಗಿ ಕಂಪೆನಿಗಳು ಈಗಾಗಲೇ ಕಲ್ಲಿದ್ದಲಿನ ಆಮದು ಟೆಂಡರ್ ಗಳನ್ನು ಆರಂಭಿಸಿದ್ದವು. ಹೀಗಾಗಿ, ಆ ಪ್ರಕ್ರಿಯೆಯನ್ನು ಮುಂದುವರಿಸಲು ವಿದ್ಯುತ್ ಸಚಿವಾಲಯ ಅವುಗಳಿಗೆ ಅವಕಾಶ ನೀಡಿತು.

►NTPC ಟೆಂಡರ್ ಗಳು

ಈ ವಿಶ್ಲೇಷಣೆಗಾಗಿ ‘ಸ್ಕ್ರಾಲ್’, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (NTPC) ನಡೆಸಿದ ಕಲ್ಲಿದ್ದಲು ಆಮದು ಪ್ರಕ್ರಿಯೆಯ ಮೇಲೆ ಗಮನಹರಿಸಿದೆ. ಏಕೆಂದರೆ, ಈ ಸಂಸ್ಥೆಯ ಆಮದು ಪ್ರಮಾಣ ಅತ್ಯಧಿಕವಾಗಿತ್ತು.

2021ರ ಡಿಸೆಂಬರ್ನಿಂದ 2024ರ ಎಪ್ರಿಲ್ವರೆಗೆ NTPC 30.16 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು 31 ಟೆಂಡರ್ ಗಳನ್ನು ಹೊರಡಿಸಿತು.

ಇದಕ್ಕೆ ವ್ಯತಿರಿಕ್ತವಾಗಿ, ‘ಕೋಲ್ ಇಂಡಿಯಾ ಲಿಮಿಟೆಡ್’ ಸಂಸ್ಥೆಯು 8.416 ಮಿಲಿಯನ್ ಟನ್ ಕಲ್ಲಿದ್ದಲಿನ ಆಮದಿಗಾಗಿ 2022ರ ಜುಲೈನಲ್ಲಿ ಕೇವಲ ಮೂರು ಟೆಂಡರ್ ಗಳನ್ನು ಹೊರಡಿಸಿತು. ಅದೇ ತಿಂಗಳಲ್ಲಿ NTPC ಹೊರಡಿಸಿದ 9.6 ಮಿಲಿಯನ್ ಟನ್ ಕಲ್ಲಿದ್ದಲಿನ ಟೆಂಡರ್ ಗಳಿಗಿಂತ ಇದು ಕಡಿಮೆಯಾಗಿತ್ತು.

NTPC ಟೆಂಡರ್ ಗಳಲ್ಲಿ ಗೆದ್ದ ಕಂಪೆನಿಗಳು ವಿದೇಶದಿಂದ ಕಲ್ಲಿದ್ದಲನ್ನು ಖರೀದಿಸಿ, ಹಡಗಿನ ಮೂಲಕ ಭಾರತಕ್ಕೆ ಸಾಗಿಸಿ, ಬಳಿಕ ರೈಲಿನಲ್ಲಿ ನಿರ್ದಿಷ್ಟ ವಿದ್ಯುತ್ ಸ್ಥಾವರಗಳಿಗೆ ತಲುಪಿಸಬೇಕಿತ್ತು.

ಕಂಪೆನಿಗಳು ಸಲ್ಲಿಸಿದ ಬಿಡ್ ಬೆಲೆಗಳ ಆಧಾರದ ಮೇಲೆ, ಅಸ್ತಿತ್ವದಲ್ಲಿದ್ದ ಅಂತರರಾಷ್ಟ್ರೀಯ ಕಲ್ಲಿದ್ದಲಿನ ಬೆಲೆ ಮತ್ತು ಸರಕು ಸಾಗಣೆ ವೆಚ್ಚದ ಮೇಲೆ ಪ್ರತಿ ಬಿಡ್ದಾರರ ಲಾಭದ ಶೇಕಡಾವಾರು ಪ್ರಮಾಣವನ್ನು NTPC ಲೆಕ್ಕಹಾಕುತ್ತಿತ್ತು. ಅತ್ಯಂತ ಕಡಿಮೆ ಲಾಭದ ಶೇಕಡಾವಾರು ಪ್ರಮಾಣವನ್ನು ನಮೂದಿಸಿದ ಕಂಪೆನಿಯನ್ನು ವಿಜೇತ ಎಂದು ಆಯ್ಕೆ ಮಾಡಲಾಗುತ್ತಿತ್ತು. ಶೇಕಡಾವಾರು ರೂಪದಲ್ಲಿ ಲೆಕ್ಕಹಾಕಿದ ಈ ಪ್ರಮಾಣವನ್ನು ಕಂಪೆನಿಯ ಪ್ರತಿ ಸಾಗಣೆಗೂ ಅನ್ವಯಿಸಲಾಗುತ್ತಿತ್ತು. ಕಲ್ಲಿದ್ದಲಿನ ಬೆಲೆ ಹೆಚ್ಚಾದರೆ, ಈ ನಿಗದಿತ ಲಾಭದ ಶೇಕಡಾವಾರು ಪ್ರಮಾಣದಿಂದಾಗಿ ಆಮದುದಾರರಿಗೆ ಹೆಚ್ಚಿನ ಲಾಭ ಸಿಗುತ್ತಿತ್ತು.

ಉದಾಹರಣೆಗೆ, ಬಿಡ್ ಮಾಡುವ ಸಮಯದಲ್ಲಿದ್ದ ಕಲ್ಲಿದ್ದಲಿನ ವೆಚ್ಚಕ್ಕಿಂತ ಕಂಪೆನಿಯ ಬಿಡ್ ಬೆಲೆ ಶೇ 5ರಷ್ಟು ಹೆಚ್ಚಾಗಿದ್ದರೆ, ಆಮದು ಮಾಡಿಕೊಂಡ ಪ್ರತಿ 100 ರೂ. ಮೌಲ್ಯದ ಕಲ್ಲಿದ್ದಲಿಗೆ ಅದು 5 ರೂ. ಲಾಭ ಗಳಿಸುತ್ತಿತ್ತು. ಬೆಲೆ 110 ರೂ.ಗೆ ಏರಿದರೆ, ಅದರ ಲಾಭವು 50 ಪೈಸೆ ಹೆಚ್ಚಾಗಿ 5.50 ರೂ.ಗೆ ತಲುಪುತ್ತಿತ್ತು.

NTPCಯ ಎಲ್ಲ 31 ಟೆಂಡರ್ ಗಳನ್ನು ಇಬ್ಬರು ಪುನರಾವರ್ತಿತ ವಿಜೇತರು ಗೆದ್ದುಕೊಂಡರು. ಅವರೇ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಮತ್ತು ಅಹಮದಾಬಾದ್ ಮೂಲದ ‘Adi Tradelink’. ಸ್ಪರ್ಧೆಯಲ್ಲಿದ್ದ ತಾಂತ್ರಿಕವಾಗಿ ಅರ್ಹರಾದ ಉಳಿದ ಎಲ್ಲ ಬಿಡ್ದಾರರನ್ನು ಈ ಎರಡು ಕಂಪೆನಿಗಳು ಹಿಂದಿಕ್ಕಿದವು.

ವಿವಿಧ ಆಮದುದಾರರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಟೆಂಡರ್ ವಿನ್ಯಾಸಗೊಳಿಸಲಾಗಿದ್ದರೂ ಈ ಏಕಸ್ವಾಮ್ಯ ಏರ್ಪಟ್ಟಿತು. ವಿನ್ಯಾಸದ ಪ್ರಕಾರ, L1 ಎಂದು ಕರೆಯಲಾಗುವ ಅತಿ ಕಡಿಮೆ ಬಿಡ್ ಮಾಡಿದವರಿಗೆ ಒಪ್ಪಂದದ ಶೇ. 70ರಷ್ಟು ಭಾಗವನ್ನು ನೀಡಲಾಗುತ್ತಿತ್ತು. ಉಳಿದ ಶೇ 30ರಷ್ಟು ಪಾಲನ್ನು ಎರಡನೇ ಅತಿ ಕಡಿಮೆ ಬಿಡ್ ಮಾಡಿದ L2ಗೆ ನೀಡಲಾಗುತ್ತಿತ್ತು. ಆದರೆ, ಅವರು L1 ನಮೂದಿಸಿದ ಬೆಲೆಗೆ ಒಪ್ಪಿಕೊಳ್ಳಬೇಕಿತ್ತು. L2 ನಿರಾಕರಿಸಿದರೆ, ಆ ಕೊಡುಗೆಯನ್ನು L3ಗೆ, ಬಳಿಕ L4ಗೆ ನೀಡಲಾಗುತ್ತಿತ್ತು. ಯಾರೂ ಒಪ್ಪಿಕೊಳ್ಳದಿದ್ದರೆ, ಇಡೀ ಆದೇಶ L1 ಪಾಲಾಗುತ್ತಿತ್ತು.

ಸಿದ್ಧಾಂತದ ಪ್ರಕಾರ, ಈ ವ್ಯವಸ್ಥೆಯು ತಾಂತ್ರಿಕವಾಗಿ ಅರ್ಹರಾದ ಇತರ ಬಿಡ್ದಾರರಿಗೆ ಟೆಂಡರ್ ಗಳಲ್ಲಿ ಕನಿಷ್ಠ ಒಂದು ಪಾಲನ್ನಾದರೂ ಗೆಲ್ಲಲು ಅವಕಾಶ ನೀಡುತ್ತಿತ್ತು. ಆದರೆ, ವಾಸ್ತವದಲ್ಲಿ ಹಾಗಾಗಲಿಲ್ಲ.

NTPCಯ 31 ಟೆಂಡರ್ ಗಳಲ್ಲಿ 24ರಲ್ಲಿ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಅತ್ಯಂತ ಕಡಿಮೆ ಬಿಡ್ ಮಾಡಿದ ಸಂಸ್ಥೆಯಾಗಿ ಹೊರಹೊಮ್ಮಿತು. ಆದರೆ, ಇವುಗಳಲ್ಲಿ ಕೇವಲ ಆರು ಟೆಂಡರ್ ಗಳಲ್ಲಿ ಮಾತ್ರ ಮತ್ತೊಂದು ಕಂಪೆನಿಯು ಅದೇ ಬೆಲೆಯನ್ನು ಹೊಂದಿಸುವ ಮೂಲಕ ಶೇ 30ರಷ್ಟು ಪಾಲನ್ನು ಪಡೆಯಲು ಸಾಧ್ಯವಾಯಿತು. ಆ ಆರು ಸಂದರ್ಭಗಳಲ್ಲೂ ಪಾಲು ಪಡೆದ ಕಂಪೆನಿ ‘Adi Tradelink’ ಆಗಿತ್ತು.

ಅಹಮದಾಬಾದ್ ಮೂಲದ ಈ ಪಾಲುದಾರಿಕೆ ಸಂಸ್ಥೆಯು ತಾನೇ ಅತ್ಯಂತ ಕಡಿಮೆ ಬಿಡ್ ಮಾಡಿದ್ದ ಇತರ ಏಳು ಟೆಂಡರ್ ಗಳನ್ನೂ ಗೆದ್ದುಕೊಂಡಿತು. ಒಟ್ಟಾಗಿ, ಈ ಎರಡೂ ಕಂಪೆನಿಗಳು NTPCಗೆ 30.16 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಸುವ ಒಪ್ಪಂದಗಳನ್ನು ಗೆದ್ದುಕೊಂಡವು.

‘Adi Tradelink’ ಎಂಬುದು ಕಲ್ಲಿದ್ದಲು ವ್ಯಾಪಾರ ಮತ್ತು ಆಮದಿನಲ್ಲಿ ತೊಡಗಿರುವ ‘Adi Group of Companies’ನ ಒಂದು ಭಾಗವಾಗಿದೆ. ಕ್ರೆಡಿಟ್ ರೇಟಿಂಗ್ ವರದಿಯೊಂದನ್ನು ಉಲ್ಲೇಖಿಸಿ 2023ರ ಅಕ್ಟೋಬರ್ನಲ್ಲಿ ‘ಫೈನಾನ್ಷಿಯಲ್ ಟೈಮ್ಸ್’ ಪ್ರಕಟಿಸಿದ ವರದಿಯ ಪ್ರಕಾರ, Adi Tradelink ಕಂಪೆನಿಯು ಅದಾನಿ ಪರವಾಗಿ ಕಲ್ಲಿದ್ದಲಿನ ಆರ್ಡರ್ ಗಳನ್ನು ಮಾಡುತ್ತದೆ. 2022ರ ಡಿಸೆಂಬರ್ನಲ್ಲಿ ಕ್ರೆಡಿಟ್ ರೇಟಿಂಗ್ ಸಂಸ್ಥೆ ‘ಕೇರ್’ (CARE), Adi Tradelinkಗೆ ತನ್ನ ‘ಪ್ರಮುಖ ಪೂರೈಕೆದಾರರಾದ ಅದಾನಿ ಗ್ರೂಪ್ನೊಂದಿಗೆ ಸ್ಥಾಪಿತ ಸಂಬಂಧ’ ಇರುವುದು ಅನುಕೂಲಕರ ಅಂಶ ಎಂದು ಉಲ್ಲೇಖಿಸಿತ್ತು.

ಈ ಕಂಪೆನಿಯು ಪಾಲುದಾರಿಕೆ ಸಂಸ್ಥೆಯಾಗಿ ನೋಂದಣಿಯಾಗಿರುವುದರಿಂದ ಅದರ ಹಣಕಾಸು ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ, ಅದು ತನ್ನ ನೋಂದಾಯಿತ ವಿಳಾಸವನ್ನು ‘Adicorp Enterprises’ ಜತೆ ಹಂಚಿಕೊಂಡಿದೆ. ಅದಾನಿ ಗ್ರೂಪ್ನೊಂದಿಗಿನ ತನ್ನ ವ್ಯವಹಾರಗಳ ಕಾರಣದಿಂದಾಗಿ 2023ರಲ್ಲಿ ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆಯ ವರದಿ ಪ್ರಕಟವಾದ ಬಳಿಕ ಎಡಿಕಾರ್ಪ್ ಸಾರ್ವಜನಿಕ ತನಿಖೆ ಮತ್ತು ಚರ್ಚೆಗೆ ಗ್ರಾಸವಾಗಿತ್ತು.

2020ರಲ್ಲಿ ಅದಾನಿ ಗ್ರೂಪ್ ನ ನಾಲ್ಕು ಕಂಪೆನಿಗಳು ಎಡಿಕಾರ್ಪ್ ಗೆ 620 ಕೋಟಿ ರೂ. ಸಾಲ ನೀಡಿದ್ದವು. ಅದೇ ವರ್ಷ ಎಡಿಕಾರ್ಪ್ ಸಂಸ್ಥೆಯು ಅದಾನಿ ಪವರ್ ಗೆ 610 ಕೋಟಿ ರೂ. ಸಾಲ ನೀಡಿತ್ತು ಎಂದು ಹೂಡಿಕೆ ಸಂಶೋಧನಾ ಸಂಸ್ಥೆ ಗಮನಸೆಳೆದಿತ್ತು. ಇದು ಅದಾನಿ ಗ್ರೂಪ್ ನಿಂದ ಸಾಲವಾಗಿ ಪಡೆದ ಮೊತ್ತದ ಶೇ 98ರಷ್ಟಾಗಿತ್ತು.

‘ಸಂಕ್ಷಿಪ್ತವಾಗಿ ಹೇಳುವುದಾದರೆ, ವಿವಿಧ ಅದಾನಿ ಗ್ರೂಪ್ ಕಂಪೆನಿಗಳಿಂದ ಷೇರುಪೇಟೆಯಲ್ಲಿ ನೋಂದಾಯಿತ ಅದಾನಿ ಪವರ್ಗೆ ಹಣ ವರ್ಗಾಯಿಸಲು ಎಡಿಕಾರ್ಪ್ ಅನ್ನು ಕೇವಲ ಮಧ್ಯವರ್ತಿಯಾಗಿ ಬಳಸಿಕೊಂಡಂತೆ ಕಾಣುತ್ತದೆ’ ಎಂದು ಅದು ಆರೋಪಿಸಿತ್ತು. ಸಾಮಾನ್ಯ ಮಾಲೀಕತ್ವ ಹೊಂದಿರುವ ಒಂದು ಕಂಪೆನಿಯು ಮತ್ತೊಂದು ಕಂಪೆನಿಗೆ ಹಣ ಪಾವತಿಸುವಾಗ ಅಥವಾ ‘ಸಂಬಂಧಿತ ಪಕ್ಷದ ವ್ಯವಹಾರ’ ನಡೆಸುವಾಗ ಕಡ್ಡಾಯವಾಗಿ ಮಾಡಬೇಕಾದ ಘೋಷಣೆಗಳನ್ನು ತಪ್ಪಿಸಲು ಹೀಗೆ ಮಾಡಿರಬಹುದು ಎಂದು ಅದು ಸೂಚಿಸಿತ್ತು.

ಹಿಂಡನ್ ಬರ್ಗ್ ನ 413 ಪುಟಗಳ ವರದಿಗೆ ಪ್ರತಿಕ್ರಿಯೆಯಾಗಿ ಅದಾನಿ ಗ್ರೂಪ್ ಹೀಗೆ ಹೇಳಿತ್ತು: ‘ಎಡಿಕಾರ್ಪ್ ಯಾವುದೇ ಸಂಬಂಧಿತ ಕಂಪೆನಿಯಲ್ಲ ಮತ್ತು ಎಡಿಕಾರ್ಪ್ ಜತೆಗಿನ ವ್ಯವಹಾರಗಳು ಭಾರತೀಯ ಕಾನೂನುಗಳು ಅಥವಾ ಲೆಕ್ಕಪತ್ರ ಮಾನದಂಡಗಳ ಅಡಿಯಲ್ಲಿ ಸಂಬಂಧಿತ ಕಂಪೆನಿಗಳ ನಡುವಿನ ವ್ಯವಹಾರಗಳಲ್ಲ. ಇವುಗಳನ್ನು ಅನ್ವಯವಾಗುವ ಕಾನೂನಿಗೆ ಅನುಗುಣವಾಗಿ ಕೈಗೊಳ್ಳಲಾಗಿದೆ.’

NTPC ಹೊರತುಪಡಿಸಿ, ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗಾಗಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು 2022ರಲ್ಲಿ ನಡೆದ ಇತರ ಟೆಂಡರ್ ಗಳನ್ನೂ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಗೆದ್ದುಕೊಂಡಿತ್ತು. ಉದಾಹರಣೆಗೆ, ರಾಜಸ್ಥಾನದ ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪೆನಿಯು ತನ್ನ ಸ್ಥಾವರಗಳಿಗಾಗಿ 0.57 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಅದಾನಿ ಎಂಟರ್ ಪ್ರೈಸಸ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಆ ರಾಜ್ಯವು ಮುಂದಿನ ವರ್ಷವೂ 0.5 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿತ್ತು. ಆದರೆ, ಈ ಸಂದರ್ಭದಲ್ಲಿ ಆಮದು ಮಾಡಿಕೊಂಡವರು ಯಾರು ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ‘ಸ್ಕ್ರಾಲ್’ ವರದಿ ತಿಳಿಸಿದೆ.

ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಮೂರು ಟೆಂಡರ್ ಗಳಲ್ಲಿ ಒಂದಕ್ಕೆ ಅದಾನಿ ಅತ್ಯಂತ ಕಡಿಮೆ ಬಿಡ್ದಾರರಾಗಿ ಹೊರಹೊಮ್ಮಿದ ಬಳಿಕ ಆರಂಭದಲ್ಲಿ ಆ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಆದರೆ, ಇಂಡೋನೇಷ್ಯಾದ ಕಂಪೆನಿಯೊಂದರ ನೇತೃತ್ವದ ಒಕ್ಕೂಟವು ಉಳಿದ ಎರಡು ಟೆಂಡರ್ ಗಳನ್ನು ಗೆದ್ದುಕೊಂಡಿತ್ತು. ಈ ಒಕ್ಕೂಟದ ಬೆಲೆಗಿಂತ ಅದಾನಿಯ ಬಿಡ್ ಪ್ರತಿ ಟನ್‌ ಗೆ 2,184 ರೂ. ಹೆಚ್ಚಾಗಿದ್ದರಿಂದ ಕೋಲ್ ಇಂಡಿಯಾ ಅದಾನಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿತು. ಕೊನೆಗೆ, ಕೋಲ್ ಇಂಡಿಯಾ ಇಡೀ ಪ್ರಮಾಣದ ಗುತ್ತಿಗೆಯನ್ನು ಆ ಒಕ್ಕೂಟಕ್ಕೇ ನೀಡಿತು.

ಕೋಲ್ ಇಂಡಿಯಾ ತನ್ನ ಟೆಂಡರ್ ಗಳನ್ನು ಹೊರಡಿಸಿದ ಅದೇ ತಿಂಗಳಲ್ಲಿ, ಅಂದರೆ 2022ರ ಜುಲೈನಲ್ಲಿ NTPC ಹೊರಡಿಸಿದ ಟೆಂಡರ್ ಗಳಲ್ಲಿನ ಪ್ರತಿ ಟನ್ ಕಲ್ಲಿದ್ದಲಿನ ಸರಾಸರಿ ಬೆಲೆ 15,932 ರೂ. ಇತ್ತು. ಮತ್ತೊಂದೆಡೆ, ಕೋಲ್ ಇಂಡಿಯಾ ಎರಡು ಟೆಂಡರ್ ಗಳ ಮೂಲಕ ಇಂಡೋನೇಷ್ಯಾದ ಒಕ್ಕೂಟದಿಂದ ಪ್ರತಿ ಟನ್‌ ಗೆ ಸರಾಸರಿ 14,715 ರೂ. ಬೆಲೆಗೆ ಕಲ್ಲಿದ್ದಲು ಖರೀದಿಸಿತು. ಇದು NTPC ಅದಾನಿ ಎಂಟರ್ಪ್ರೈಸಸ್ ಜತೆ ಗುತ್ತಿಗೆ ನಿಗದಿಪಡಿಸಿದ ಬೆಲೆಗಿಂತ ಪ್ರತಿ ಟನ್‌ ಗೆ 1,217 ರೂ. ಅಗ್ಗವಾಗಿತ್ತು.

►ಹೆಚ್ಚಿದ ಲಾಭ

ಅದಾನಿ ಗ್ರೂಪ್ ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್ಪ್ರೈಸಸ್ ಗೆ ‘ಇಂಟಿಗ್ರೇಟೆಡ್ ರಿಸೋರ್ಸಸ್ ಮ್ಯಾನೇಜ್ಮೆಂಟ್’ ಎಂದು ಕರೆಯಲಾಗುವ ಕಲ್ಲಿದ್ದಲು ಆಮದು ವಿಭಾಗವು ಅತ್ಯಂತ ದೊಡ್ಡ ವ್ಯವಹಾರ ವಿಭಾಗವಾಗಿದೆ. ಕಂಪೆನಿಯ ಹಿಂದಿನ ವರ್ಷಗಳ ಹೇಳಿಕೆಗಳನ್ನು ಪರಿಶೀಲಿಸಿದಾಗ, ಸರ್ಕಾರದ ಆಮದು ಆದೇಶಗಳ ಅವಧಿಯು ಅದರ ಆದಾಯ ಮತ್ತು ಲಾಭದ ಭಾರಿ ವಿಸ್ತರಣೆಯೊಂದಿಗೆ ಹೇಗೆ ತಳುಕು ಹಾಕಿಕೊಂಡಿತ್ತು ಎಂಬುದು ತಿಳಿಯುತ್ತದೆ.

2019–20ನೇ ಹಣಕಾಸು ವರ್ಷದ ವಾರ್ಷಿಕ ವರದಿಯಲ್ಲಿ, ‘ವಿವಿಧ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸ್ವಾಮ್ಯದ ವಿದ್ಯುತ್ ಮಂಡಳಿಗಳಿಗೆ ಪೂರೈಸಿದ ಪ್ರಮಾಣದಲ್ಲಿ ಕುಸಿತ’ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ನಿಂದ ‘ದೇಶೀಯ ಉತ್ಪಾದನೆ ಹೆಚ್ಚಾದ ಹಿನ್ನೆಲೆಯಲ್ಲಿ’ ಈ ವ್ಯವಹಾರವು ಸಂಕಷ್ಟದಲ್ಲಿದೆ ಎಂದು ಕಂಪೆನಿ ಉಲ್ಲೇಖಿಸಿತ್ತು.

ಮುಂದಿನ ವರ್ಷ, ಆಮದು ಮಾಡಿಕೊಂಡ ಕಲ್ಲಿದ್ದಲಿನ ಪ್ರಮಾಣದಲ್ಲಿ ಶೇ 19.5ರಷ್ಟು ಇಳಿಕೆಯಾಗಿದೆ ಎಂದು ಅದು ವರದಿ ಮಾಡಿತ್ತು. ಹಿಂದಿನ ವರ್ಷದ 78.8 ಮಿಲಿಯನ್ ಮೆಟ್ರಿಕ್ ಟನ್ನಿಂದ ಈ ಪ್ರಮಾಣ 63.4 ಮಿಲಿಯನ್ ಮೆಟ್ರಿಕ್ ಟನ್‌ ಗೆ ಕುಸಿದಿತ್ತು.

2021–22ರಲ್ಲಿ ‘ವ್ಯವಹಾರದ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ’ ಎಂದು ಕಂಪೆನಿ ತಿಳಿಸಿತ್ತು. ಆದರೆ, ‘ಕೊನೆಯ ತ್ರೈಮಾಸಿಕದಲ್ಲಿ ಕಂಪೆನಿಯು ರಾಜ್ಯ ಅಥವಾ ಕೇಂದ್ರ ವಿದ್ಯುತ್ ಮಂಡಳಿಯಿಂದ ಹೊಸ ಆರ್ಡರ್ ಗಳನ್ನು ಪಡೆದುಕೊಂಡಿತು’ ಎಂಬುದನ್ನೂ ಅದು ಉಲ್ಲೇಖಿಸಿತ್ತು. ಇದು ಕಲ್ಲಿದ್ದಲು ಆಮದಿನ ಕುರಿತು ವಿದ್ಯುತ್ ಸಚಿವಾಲಯವು ತನ್ನ ಆರಂಭಿಕ ಸಲಹೆಯನ್ನು ಹೊರಡಿಸಿದ ನಿರ್ದಿಷ್ಟ ಕಾಲಘಟ್ಟವಾದ 2021ರ ಡಿಸೆಂಬರ್ಗೆ ಹೊಂದಿಕೆಯಾಗುತ್ತದೆ.

ಮುಂದಿನ ವರ್ಷವು ಕಂಪೆನಿಯ ಕಲ್ಲಿದ್ದಲು ಆಮದು ವ್ಯವಹಾರಕ್ಕೆ ಮಹತ್ವದ ತಿರುವು ನೀಡಿತು. ಸಚಿವಾಲಯದ ಕಲ್ಲಿದ್ದಲು ಆಮದು ಸಲಹೆಯು ಎಲ್ಲರಿಗೂ ಕಡ್ಡಾಯವಾದ ಆದೇಶವಾಗಿ ಬದಲಾದಂತೆ, ಅದಾನಿಯ ಕಲ್ಲಿದ್ದಲು ಆಮದು ಪ್ರಮಾಣವು ಹಿಂದಿನ ವರ್ಷಕ್ಕಿಂತ ಶೇ 37ರಷ್ಟು ಏರಿಕೆಯಾಯಿತು. ಈ ವಿಭಾಗದಿಂದ ಕಂಪೆನಿಯು 99,486 ಕೋಟಿ ರೂ. ಆದಾಯ ಗಳಿಸಿತು. ಇದು ಆ ವರ್ಷ ಅದಾನಿ ಎಂಟರ್ಪ್ರೈಸಸ್ನ ಒಟ್ಟು ವಹಿವಾಟಿನ ಶೇ. 72ರಷ್ಟಾಗಿತ್ತು.

ತೆರಿಗೆ ಕಡಿತಗೊಳಿಸುವ ಮೊದಲು ಲೆಕ್ಕಹಾಕಿದ ಲಾಭವು 3,417 ಕೋಟಿ ರೂ.ಗಳಷ್ಟಿತ್ತು.

ಕಲ್ಲಿದ್ದಲನ್ನು ಮಿಶ್ರಣ ಮಾಡಲು (ಬ್ಲೆಂಡಿಂಗ್) ನೀಡಲಾದ ಆಮದು ಆದೇಶಗಳನ್ನು ಪರಿಷ್ಕರಿಸಿ ವಿಸ್ತರಿಸಿದ್ದರಿಂದ, ಮುಂದಿನ ಎರಡು ವರ್ಷಗಳಲ್ಲೂ ಕಂಪೆನಿಯ ಲಾಭ ನಿರಂತರವಾಗಿ ಏರಿಕೆಯಾಗುತ್ತ ಸಾಗಿತು.

ಸೌಜನ್ಯ: scroll.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor