ಹೆದ್ದಾರಿ ಕಾಮಗಾರಿ ಅಪೂರ್ಣ: ಟೋಲ್ ಸಂಗ್ರಹ ಮುಂದೂಡುವ ಮನವಿ ಪರಿಶೀಲಿಸಲು NHAIಗೆ ಕೇರಳ ಹೈಕೋರ್ಟ್ ಸೂಚನೆ
ಮೂರು ವಾರಗಳಲ್ಲಿ ನಿರ್ಧಾರ ಕೈಗೊಳ್ಳಲು ನಿರ್ದೇಶನ; ನ. 4ಕ್ಕೆ ಮುಂದಿನ ವಿಚಾರಣೆ
ಸಾಂದರ್ಭಿಕ ಚಿತ್ರ
ಕೊಚ್ಚಿ: ರಾಷ್ಟ್ರೀಯ ಹೆದ್ದಾರಿ-66ರ ನಟ್ಟಿಕಾ ಟೋಲ್ ಪ್ಲಾಝಾದಲ್ಲಿ ಟೋಲ್ ಸಂಗ್ರಹ ಮುಂದೂಡುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಮೂರು ವಾರಗಳೊಳಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಕೊಚ್ಚಿನ್ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕರಿಗೆ ಕೇರಳ ಹೈಕೋರ್ಟ್ ಬುಧವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ.ಎಂ. ಅವರನ್ನೊಳಗೊಂಡ ವಿಭಾಗೀಯ ಪೀಠವು, ನಟ್ಟಿಕಾ ಟೋಲ್ ಪ್ಲಾಝಾದಲ್ಲಿ ಟೋಲ್ ಸಂಗ್ರಹ ಆರಂಭಿಸುವ ಪ್ರಸ್ತಾವವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ನಿರ್ದೇಶನ ನೀಡಿದೆ.
ಹೆದ್ದಾರಿ ಕಾಮಗಾರಿ ಅಪೂರ್ಣವಾಗಿರುವಾಗ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಸರ್ವಿಸ್ ರಸ್ತೆಗಳ ಗಮನಾರ್ಹ ಭಾಗಗಳು ಇನ್ನೂ ಪೂರ್ಣಗೊಂಡಿಲ್ಲ ಅಥವಾ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳು ಸೇರಿದಂತೆ ಸ್ಥಳೀಯ ವಾಹನಗಳು ಮುಖ್ಯ ರಸ್ತೆಯನ್ನು ಅಥವಾ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಭಾಗಗಳನ್ನು ಬಳಸುವುದು ಅನಿವಾರ್ಯವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಎಡಮುಟ್ಟಂ ಮತ್ತು ವಡನಪ್ಪಳ್ಳಿಯಲ್ಲಿನ ಮೇಲ್ಸೇತುವೆಗಳ ಕಾಮಗಾರಿಯೂ ಅಪೂರ್ಣವಾಗಿದೆ. ನಿರ್ಮಾಣ ಕಾಮಗಾರಿ ಹಾಗೂ ಸಂಚಾರ ಮಾರ್ಗ ಬದಲಾವಣೆಗಳು ನಡೆಯುತ್ತಿರುವ ಸ್ಥಳಗಳಲ್ಲಿ ಬೀದಿ ದೀಪಗಳು, ಸಂಚಾರ ಸೂಚನಾ ಫಲಕಗಳು ಮತ್ತು ಎಚ್ಚರಿಕೆ ಫಲಕಗಳ ಕೊರತೆಯಿದೆ. ಇದರಿಂದ ವಿಶೇಷವಾಗಿ ರಾತ್ರಿ ವೇಳೆ ವಾಹನ ಸವಾರರು ಮತ್ತು ಪಾದಚಾರಿಗಳ ಸುರಕ್ಷತೆಗೆ ಅಪಾಯ ಎದುರಾಗಬಹುದು ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
►ಹೆದ್ದಾರಿಯ ಉದ್ದದ ಲೆಕ್ಕಾಚಾರದಲ್ಲಿ ವ್ಯತ್ಯಾಸ
ಟೋಲ್ ದರ ನಿಗದಿಗೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ಮತ್ತು ಸಾರ್ವಜನಿಕ ಪ್ರಕಟಣೆಯಲ್ಲಿ ನಮೂದಿಸಿರುವ ಹೆದ್ದಾರಿಯ ಉದ್ದದ ನಡುವೆ ವ್ಯತ್ಯಾಸವಿರುವುದನ್ನು ಅರ್ಜಿದಾರರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
2026ರ ಜುಲೈ 31ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ 39.881 ಕಿ.ಮೀ ನಿವ್ವಳ ರಸ್ತೆ ಉದ್ದ, 19.710 ಕಿ.ಮೀ ಬೈಪಾಸ್ ಗಳು ಹಾಗೂ 2.309 ಕಿ.ಮೀ ಭೌತಿಕ ಉದ್ದದ, 60 ಮೀಟರ್ ಗಿಂತ ಹೆಚ್ಚು ಉದ್ದವಿರುವ ರಚನೆಗಳನ್ನು ಉಲ್ಲೇಖಿಸಲಾಗಿದೆ. ಶುಲ್ಕ ಲೆಕ್ಕಾಚಾರದಲ್ಲಿ ಈ ರಚನೆಗಳ ಉದ್ದವನ್ನು 23.090 ಕಿ.ಮೀಗೆ ಸಮಾನವೆಂದು ಪರಿಗಣಿಸಲಾಗಿದೆ. ಇದರಂತೆ ಅಧಿಸೂಚನೆಗೆ ಒಳಪಟ್ಟ ಹೆದ್ದಾರಿ ವಿಭಾಗದ ಉದ್ದ 61.900 ಕಿ.ಮೀ ಹಾಗೂ ಶುಲ್ಕ ವಿಧಿಸಬಹುದಾದ ಉದ್ದ 92.536 ಕಿ.ಮೀ ಆಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಆದರೆ, ಅಕ್ಟೋಬರ್ 6ರಂದು ಪ್ರಕಟವಾದ ಸಾರ್ವಜನಿಕ ಪ್ರಕಟಣೆಯಲ್ಲಿ ಪೂರ್ಣಗೊಂಡ ಆರು ಪಥಗಳ ರಸ್ತೆಯ ಉದ್ದ 53.885 ಕಿ.ಮೀ ಎಂದು ನಮೂದಿಸಲಾಗಿದೆ. ಇದರಲ್ಲಿ 32.703 ಕಿ.ಮೀ ನೇರ ರಸ್ತೆ, 19.710 ಕಿ.ಮೀ ಬೈಪಾಸ್ ಗಳನ್ನು 29.565 ಕಿ.ಮೀಗೆ ಸಮಾನವೆಂದು ಪರಿಗಣಿಸಿರುವ ಲೆಕ್ಕಾಚಾರ ಹಾಗೂ 1.472 ಕಿ.ಮೀ ಉದ್ದದ ರಚನೆಗಳನ್ನು 14.720 ಕಿ.ಮೀಗೆ ಸಮಾನವೆಂದು ಪರಿಗಣಿಸಿರುವ ವಿವರಗಳಿವೆ. ಈ ಲೆಕ್ಕಾಚಾರದ ಪ್ರಕಾರ ಶುಲ್ಕ ವಿಧಿಸಬಹುದಾದ ಉದ್ದ 76.988 ಕಿ.ಮೀ ಆಗುತ್ತದೆ.
ಗೆಜೆಟ್ ಅಧಿಸೂಚನೆ ಮತ್ತು ಸಾರ್ವಜನಿಕ ಪ್ರಕಟಣೆಯಲ್ಲಿನ ಹೆದ್ದಾರಿ ವಿಭಾಗದ ಉದ್ದದಲ್ಲಿ 8.015 ಕಿ.ಮೀ ವ್ಯತ್ಯಾಸವಿದೆ. ಲೆಕ್ಕಾಚಾರದಲ್ಲಿ ಸೇರಿಸಿರುವ ರಚನೆಗಳ ಭೌತಿಕ ಉದ್ದದಲ್ಲಿಯೂ 0.837 ಕಿ.ಮೀ ವ್ಯತ್ಯಾಸವಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಯಾವ ರಸ್ತೆ ಭಾಗಗಳು ಮತ್ತು ರಚನೆಗಳನ್ನು ಲೆಕ್ಕಾಚಾರದಲ್ಲಿ ಸೇರಿಸಲಾಗಿದೆ ಅಥವಾ ಹೊರಗಿಡಲಾಗಿದೆ, ಈ ಲೆಕ್ಕಾಚಾರಕ್ಕೆ ಆಧಾರವಾಗಿರುವ ಇಂಜಿನಿಯರಿಂಗ್ ವಿವರಗಳು ಯಾವುವು ಹಾಗೂ ಅದಕ್ಕೆ ಕಾನೂನುಬದ್ಧ ಆಧಾರವೇನು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಕೋರಿದ್ದಾರೆ.
ಸಾರ್ವಜನಿಕ ಪ್ರಕಟಣೆಯು 2026ರ ಎಪ್ರಿಲ್ 10 ಮತ್ತು 20ರಂದು ಪ್ರಾಧಿಕಾರದ ಇಂಜಿನಿಯರ್ ನೀಡಿದ ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣಪತ್ರಗಳನ್ನು ಆಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಾಮಗಾರಿ ಅಪೂರ್ಣವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೆದ್ದಾರಿ ಮೂಲಸೌಕರ್ಯದ ಸ್ವತಂತ್ರ ಭೌತಿಕ ಮತ್ತು ತಾಂತ್ರಿಕ ಪರಿಶೀಲನೆ ನಡೆಸಬೇಕು ಹಾಗೂ ಪ್ರಮಾಣಪತ್ರಗಳಿಗೆ ಆಧಾರವಾಗಿರುವ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
►ಟೋಲ್ ದರಗಳ ಬಗ್ಗೆಯೂ ಆಕ್ಷೇಪ
'ರಾಷ್ಟ್ರೀಯ ಹೆದ್ದಾರಿಗಳ ಕಾಯ್ದೆ, 1956' ಮತ್ತು 'ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಧಾರ ಮತ್ತು ಸಂಗ್ರಹಣೆ) ನಿಯಮಗಳು, 2008'ರ ಅಡಿಯಲ್ಲಿ ಶುಲ್ಕ ವಿಧಿಸುವ ಮತ್ತು ಸಂಗ್ರಹಿಸುವುದಕ್ಕೆ ಸಂಬಂಧಿಸಿದ ಶಾಸನಬದ್ಧ ಷರತ್ತುಗಳನ್ನು ಪಾಲಿಸಬೇಕು. ಕೇವಲ ಆಡಳಿತಾತ್ಮಕ ಅನುಮೋದನೆಯು ಈ ಷರತ್ತುಗಳಿಗೆ ಪರ್ಯಾಯವಾಗಲಾರದು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಕಾರ್ಯನಿರ್ವಹಿಸುವ ಸರ್ವಿಸ್ ರಸ್ತೆಗಳು ಅಥವಾ ಪರ್ಯಾಯ ಮಾರ್ಗಗಳು ಇಲ್ಲದಿರುವುದರಿಂದ ಸ್ಥಳೀಯ ನಿವಾಸಿಗಳು ಕಡಿಮೆ ದೂರ ಪ್ರಯಾಣಿಸುವಾಗಲೂ ಟೋಲ್ ಪ್ಲಾಝಾವನ್ನು ದಾಟಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಅರ್ಜಿದಾರರು ಹೇಳಿದ್ದಾರೆ.
ಸಾರ್ವಜನಿಕ ಪ್ರಕಟಣೆಯ ಪ್ರಕಾರ, ಕಾರು, ಜೀಪ್, ವ್ಯಾನ್ ಮತ್ತು ಲೈಟ್ ಮೋಟಾರು ವಾಹನಗಳಿಗೆ 120 ರೂ., ಹಗುರ ವಾಣಿಜ್ಯ ವಾಹನಗಳು ಹಾಗೂ ಮಿನಿ ಬಸ್ ಗಳಿಗೆ 195 ರೂ., ಎರಡು ಆಕ್ಸಲ್ಗಳ ಬಸ್ಗಳು ಮತ್ತು ಟ್ರಕ್ಗಳಿಗೆ 405 ರೂ. ಶುಲ್ಕ ನಿಗದಿಪಡಿಸಲಾಗಿದೆ. ಭಾರೀ ನಿರ್ಮಾಣ ಯಂತ್ರೋಪಕರಣಗಳು, ನಿರ್ದಿಷ್ಟ ಬಹು-ಆಕ್ಸಲ್ ವಾಹನಗಳು ಹಾಗೂ ಏಳು ಅಥವಾ ಅದಕ್ಕಿಂತ ಹೆಚ್ಚು ಆಕ್ಸಲ್ಗಳಿರುವ ವಾಹನಗಳಿಗೆ 775 ರೂ. ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ.
ಟೋಲ್ ಪ್ಲಾಝಾದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರ ವಾಣಿಜ್ಯೇತರ ವಾಹನಗಳಿಗೆ 360 ರೂ. ಮಾಸಿಕ ಪಾಸ್ ಸೌಲಭ್ಯವನ್ನೂ ಒದಗಿಸಲಾಗಿದೆ. ಪ್ರತಿದಿನ ಈ ಟೋಲ್ ಪ್ಲಾಝಾವನ್ನು ದಾಟಬೇಕಾದ ಸ್ಥಳೀಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
►ಅಕ್ಟೋಬರ್ 8ರಿಂದ ಟೋಲ್ ಸಂಗ್ರಹಕ್ಕೆ ಆಕ್ಷೇಪ
ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಮೊದಲು ಅರ್ಜಿದಾರರು ಅಕ್ಟೋಬರ್ 6ರಂದು NHAIಯ ಕೊಚ್ಚಿನ್ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಸಂಬಂಧಿತ ಕಾಮಗಾರಿಗಳು ಪೂರ್ಣಗೊಂಡು ಪರಿಶೀಲನೆಗೆ ಒಳಪಡುವವರೆಗೆ ಟೋಲ್ ಸಂಗ್ರಹ ಮುಂದೂಡುವುದು, ಗೆಜೆಟ್ ಅಧಿಸೂಚನೆ ಮತ್ತು ಅನುಮೋದನೆ ಆದೇಶವನ್ನು ಬಹಿರಂಗಪಡಿಸುವುದು, ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣಪತ್ರಗಳು ಹಾಗೂ ಶುಲ್ಕ ವಿಧಿಸಬಹುದಾದ ರಸ್ತೆಯ ಉದ್ದದ ಲೆಕ್ಕಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವುದು ಮತ್ತು ಹೆದ್ದಾರಿ ಮೂಲಸೌಕರ್ಯದ ಜಂಟಿ ಪರಿಶೀಲನೆ ನಡೆಸುವುದು ಈ ಮನವಿಯ ಪ್ರಮುಖ ಬೇಡಿಕೆಗಳಾಗಿದ್ದವು.
ಅಕ್ಟೋಬರ್ 6ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಅಕ್ಟೋಬರ್ 8ರಿಂದಲೇ ಟೋಲ್ ಸಂಗ್ರಹ ಆರಂಭಿಸಲು ನಿರ್ಧರಿಸಿದ್ದರಿಂದ ಸಾರ್ವಜನಿಕರಿಗೆ ಪ್ರಸ್ತಾವನೆಯನ್ನು ಪರಿಶೀಲಿಸಲು ಹಾಗೂ ಸಂಬಂಧಿತ ದಾಖಲೆಗಳನ್ನು ಪಡೆದುಕೊಳ್ಳಲು ಸಾಕಷ್ಟು ಸಮಯಾವಕಾಶ ದೊರೆತಿರಲಿಲ್ಲ ಎಂದೂ ಅರ್ಜಿದಾರರು ವಾದಿಸಿದ್ದಾರೆ.
ನಟ್ಟಿಕಾ ಟೋಲ್ ಪ್ಲಾಝಾದಲ್ಲಿ ಅಕ್ಟೋಬರ್ 8ರಿಂದ ಟೋಲ್ ಸಂಗ್ರಹ ಆರಂಭಿಸಲು ನೀಡಿರುವ ಅನುಮೋದನೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಶುಲ್ಕ ವಿಧಿಸಲು ಆಧಾರವಾಗಿರುವ ಹೆದ್ದಾರಿ ವಿಭಾಗ ಮತ್ತು ಮೂಲಸೌಕರ್ಯಗಳು ಪೂರ್ಣಗೊಂಡು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಸಮರ್ಥ ಪ್ರಾಧಿಕಾರ ಪರಿಶೀಲಿಸುವವರೆಗೆ ಟೋಲ್ ಸಂಗ್ರಹ ಆರಂಭಿಸದಂತೆ ಅಥವಾ ಮುಂದುವರಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದೂ ಮನವಿ ಮಾಡಲಾಗಿದೆ.
ಅರ್ಜಿಯಲ್ಲಿನ ಅಂಶಗಳಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿರುವ ಹೈಕೋರ್ಟ್, NHAI ಯೋಜನಾ ನಿರ್ದೇಶಕರು ಮನವಿಯನ್ನು ಮೂರು ವಾರಗಳೊಳಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 4ಕ್ಕೆ ನಿಗದಿಪಡಿಸಲಾಗಿದೆ.
ಸೌಜನ್ಯ: livelaw.in