ಆಧಾರವಿಲ್ಲದೆ 85,854 ಮತದಾರರ ಹೆಸರು ಅಳಿಸಲು ECI ತಂತ್ರಾಂಶದಿಂದಲೇ ನಮೂನೆ ಸೃಷ್ಟಿ!; reporters-collective.in ತನಿಖಾ ವರದಿ
► ಮುಸ್ಲಿಂ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಲು 200ಕ್ಕೂ ಹೆಚ್ಚು ಪ್ರಯತ್ನ; ತನಿಖಾ ವರದಿಯ ಪ್ರಮುಖ ಅಂಶಗಳನ್ನು ಒಪ್ಪಿಕೊಂಡ ಉತ್ತರ ಪ್ರದೇಶದ CEO ►ಸುಮೇಧಾ ಮಿತ್ತಲ್ ಮತ್ತು ಆಯುಷಿ ಕರ್ - reporters-collective.in
Photo Credit : reporters-collective.in
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ, ಯಾವುದೇ ಕಾರಣವನ್ನು ನಮೂದಿಸದೆ 85,854 ಮತದಾರರ ಹೆಸರುಗಳನ್ನು ಅಳಿಸುವ ನಮೂನೆಗಳನ್ನು ಭಾರತೀಯ ಚುನಾವಣಾ ಆಯೋಗದ (ECI) ತಂತ್ರಾಂಶ ಸ್ವಯಂಚಾಲಿತವಾಗಿ ಸೃಷ್ಟಿಸಿತ್ತು ಎಂದು 'reporters-collective. in'ನ ತನಿಖಾ ವರದಿ ತಿಳಿಸಿದೆ. ಈ ಅಂಶವನ್ನು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ (CEO) ನವದೀಪ್ ರಿನ್ವಾ ಒಪ್ಪಿಕೊಂಡಿದ್ದಾರೆ. ಮುಸ್ಲಿಂ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಲು 200ಕ್ಕೂ ಹೆಚ್ಚು ಪ್ರಯತ್ನಗಳು ನಡೆದಿದ್ದವು ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ ಎಂದು reporters-collective.in ವರದಿ ಮಾಡಿದೆ.
ಅಕ್ಟೋಬರ್ 9ರಂದು ಪ್ರಕಟವಾದ ವರದಿಯಲ್ಲಿ, ಯಾವುದೇ ಕಾರಣವನ್ನು ನೀಡದೆ 85,854 ಮತದಾರರ ಹೆಸರುಗಳನ್ನು ಅಳಿಸುವ ನಮೂನೆಗಳಿಗೆ ಸಹಿ ಹಾಕುವಂತೆ ECI ತಂತ್ರಾಂಶವು ಉತ್ತರ ಪ್ರದೇಶದ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿತ್ತು ಎಂಬುದನ್ನು ಬಹಿರಂಗಪಡಿಸಲಾಗಿತ್ತು.
ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲ ತಾಣ 'X' ನಲ್ಲಿ ಪ್ರತಿಕ್ರಿಯಿಸಿದ್ದ ನವದೀಪ್ ರಿನ್ವಾ, ವರದಿಯಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿ ಇದೆ ಎಂದು ಆರೋಪಿಸಿದ್ದರು. ಅದೇ ದಿನ ನಂತರ ಸ್ಪಷ್ಟನೆ ನೀಡುವುದಾಗಿ ರಿನ್ವಾ ಹೇಳಿದ್ದರು.
ಅದೇ ಸಂಜೆ ವಿಡಿಯೊ ಸಂದೇಶ ಪ್ರಕಟಿಸಿದ ಅವರು, ಆ ವರದಿ 'ತಪ್ಪು ದಾರಿಗೆಳೆಯುವಂಥದ್ದು' ಎಂದು ಬಣ್ಣಿಸಿದರು. ಆದರೆ, ತಮ್ಮ ವಿಡಿಯೊದಲ್ಲಿ, ಯಾವುದೇ ಕಾರಣವನ್ನು ನಮೂದಿಸದೆ ಮತದಾರರ ಹೆಸರು ಅಳಿಸುವ 85,854 ನಮೂನೆಗಳನ್ನು ECI ತಂತ್ರಾಂಶವು ಸ್ವಯಂಚಾಲಿತವಾಗಿ ಸೃಷ್ಟಿಸಿತ್ತು ಎಂಬ reporters-collective.in ತನಿಖೆಯ ಪ್ರಮುಖ ಅಂಶವನ್ನು ರಿನ್ವಾ ದೃಢಪಡಿಸಿದ್ದರು.
ಹಾಗಿದ್ದರೂ ಸ್ವಯಂಚಾಲಿತವಾಗಿ ಸೃಷ್ಟಿಯಾದ ಹೆಚ್ಚಿನ ನಮೂನೆಗಳಲ್ಲಿ ಮತದಾರರ ಹೆಸರು ಅಳಿಸಲು ಯಾವುದೇ ಕಾರಣವನ್ನು ಏಕೆ ನಮೂದಿಸಿರಲಿಲ್ಲ ಎಂಬುದನ್ನು ರಿನ್ವಾ ವಿವರಿಸಲಿಲ್ಲ. ಹೆಸರು ಅಳಿಸಲು ಕಾರಣವಾಗಿ 'A', 'N', 'H' ಅಥವಾ 'E' ಎಂಬ ಒಂದೊಂದು ಅಕ್ಷರವನ್ನು ಮಾತ್ರ ನಮೂದಿಸಲಾಗಿತ್ತು ಎಂಬ ವರದಿಯ ಅಂಶದ ಬಗ್ಗೆಯೂ ಅವರು ಪ್ರತಿಕ್ರಿಯಿಸಲಿಲ್ಲ.
ಕಾನೂನಿನ ಪ್ರಕಾರ ಮತ್ತು SIR ಪ್ರಕ್ರಿಯೆಗಾಗಿ ECI ರೂಪಿಸಿರುವ ಪರಿಷ್ಕೃತ ನಿಯಮಗಳ ಅನ್ವಯ, ಮತದಾರರ ಹೆಸರನ್ನು ಅಳಿಸಲು ಸೂಕ್ತ ಕಾರಣವನ್ನು ನೀಡುವುದು ಕಡ್ಡಾಯವಾಗಿದೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಲು 200ಕ್ಕೂ ಹೆಚ್ಚು ಪ್ರಯತ್ನಗಳು ನಡೆದಿದ್ದವು ಎಂಬ ವರದಿಯನ್ನೂ ರಿನ್ವಾ ಒಪ್ಪಿಕೊಂಡಿದ್ದಾರೆ. ಆದರೆ, ಈ ಸಂಖ್ಯೆ ಅತ್ಯಲ್ಪವಾಗಿದ್ದು, ರಾಜ್ಯದಲ್ಲಿ SIR ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಫಾರ್ಮ್ 7' ಮೂಲಕ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸಲಾಗಿದೆ ಎಂದು ಬಂದ ದೂರುಗಳಲ್ಲಿ ಉಲ್ಲೇಖಿಸಲಾದ ಮತದಾರರ ಸಂಖ್ಯೆ ಕೇವಲ 4,700 ಎಂದು ರಿನ್ವಾ ಹೇಳಿದ್ದಾರೆ.
"ಈ ಫಾರ್ಮ್ 7ಗಳ ಮೂಲಕ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸುವುದಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಿದ್ದ ಹೆಸರುಗಳ ಸಂಖ್ಯೆ ಕೇವಲ 4,700ರಷ್ಟಿತ್ತು. ಕೋಟ್ಯಂತರ ಜನಸಂಖ್ಯೆ ಮತ್ತು 13.39 ಕೋಟಿ ಮತದಾರರನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ, ಒಂದಕ್ಕಿಂತ ಹೆಚ್ಚು ಫಾರ್ಮ್ 7 ಸಲ್ಲಿಕೆಗೆ ಒಳಗಾದ ಹೆಸರುಗಳು ಕೇವಲ 4,700 ಮಾತ್ರ ಕಂಡುಬಂದಿವೆ" ಎಂದು ಅವರು ಹೇಳಿದ್ದಾರೆ.
►ʼಮೂರು ಬಾರಿ ಸಿಕ್ಕಿಬಿದ್ದರೂ, ಎರಡು ಬಾರಿ ಮಾತ್ರ ಒಪ್ಪಿಕೊಂಡರುʼ:
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು 2027 ರ ಫೆಬ್ರವರಿ–ಮಾರ್ಚ್ನಲ್ಲಿ ನಡೆಯುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳದಂತೆಯೇ ಉತ್ತರ ಪ್ರದೇಶದಲ್ಲೂ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮತದಾರರ ಹೆಸರುಗಳನ್ನು ತಪ್ಪಾಗಿ ಸೇರಿಸುವುದು ಅಥವಾ ಅಳಿಸುವುದು ಗಂಭೀರ ರಾಜಕೀಯ ಪರಿಣಾಮಗಳನ್ನು ಉಂಟುಮಾಡಬಹುದು.
ಉತ್ತರ ಪ್ರದೇಶದ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ, ಇತರ ಯಾವುದೇ ರಾಜ್ಯದಲ್ಲಿ ಕಂಡುಬರದ ರೀತಿಯಲ್ಲಿ ಅನುಮಾನಾಸ್ಪದವಾಗಿ ಹೆಸರುಗಳನ್ನು ಸೇರಿಸುವುದು ಮತ್ತು ಅಳಿಸುವುದು ನಡೆದಿರುವುದು ಕಂಡುಬಂದಿದೆ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ವರದಿ ತಿಳಿಸಿದೆ.
ಸಂಸ್ಥೆಯ ಮೊದಲ ತನಿಖೆಯಲ್ಲಿ, ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದ 16.18 ಲಕ್ಷ ಮತದಾರರ ವಿವರಗಳನ್ನು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸಾರ್ವಜನಿಕರಿಗೆ ಲಭ್ಯವಾಗದಂತೆ ಇರಿಸಿದ್ದರು ಎಂಬುದು ಬಹಿರಂಗವಾಗಿತ್ತು. ಮತದಾರರ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ಇರಿಸುವುದು ಕಾನೂನುಬಾಹಿರ ಎಂದು ವರದಿ ಹೇಳಿತ್ತು.
ಈ ಕುರಿತು ರಿನ್ವಾ ಅವರನ್ನು ಸಂಪರ್ಕಿಸಿದಾಗ, ಅವರು ದೂರವಾಣಿಯಲ್ಲಿ ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದ್ದರು ಮತ್ತು ಇಮೇಲ್ ಮೂಲಕ ಕೇಳಲಾಗಿದ್ದ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ. ಆದರೆ, ವರದಿ ಪ್ರಕಟವಾದ ಬಳಿಕ, ಕಾನೂನು ಮತ್ತು ECIಯ ಆಂತರಿಕ ಸೂಚನೆಗಳಿಗೆ ಅನುಗುಣವಾಗಿಯೇ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.
ಬಳಿಕ, ECIಯ ಆಂತರಿಕ ಸೂಚನೆಗಳನ್ನು ಪರಿಶೀಲಿಸಿದ 'ದಿ ರಿಪೋರ್ಟರ್ಸ್ ಕಲೆಕ್ಟಿವ್', ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಆ ಸೂಚನೆಗಳನ್ನು ಉಲ್ಲಂಘಿಸಿತ್ತು ಎಂಬುದನ್ನು ಬಹಿರಂಗಪಡಿಸಿತು.
►ಹೆಸರು ಅಳಿಸಲು ಸ್ಪಷ್ಟ ಕಾರಣ ಕಡ್ಡಾಯ:
ಮತದಾರರ ಹೆಸರನ್ನು ಅಳಿಸುವಾಗ ಅದಕ್ಕೆ ಸ್ಪಷ್ಟ ಕಾರಣ ನೀಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.
SIR ಕುರಿತು ವರದಿ ಮಾಡುವ ಸಂದರ್ಭದಲ್ಲಿ, ಮತದಾರರ ಪಟ್ಟಿಯನ್ನು ನಿಯಮಿತವಾಗಿ ನವೀಕರಿಸಲು ಇರುವ ಹಲವು ನಿಯಮಗಳನ್ನು ECI ಕಡೆಗಣಿಸಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿದೆ.
ಕರಡು ಮತದಾರರ ಪಟ್ಟಿಯಲ್ಲಿ ಅನುಮಾನಾಸ್ಪದವೆಂದು ಪರಿಗಣಿಸಲಾದ ಮತದಾರರ ಕುರಿತು ಚುನಾವಣಾಧಿಕಾರಿಯು ಸ್ವಯಂಪ್ರೇರಿತವಾಗಿ (suo motu) ವಿಚಾರಣೆ ನಡೆಸಿದರೆ, ಅದಕ್ಕೆ ಸಂಬಂಧಿಸಿದಂತೆ 'ಸ್ಪಷ್ಟ ಕಾರಣ ಸಹಿತ ಆದೇಶ' (speaking order) ಹೊರಡಿಸಬೇಕು ಎಂದು ECI ನಿಯಮಗಳಲ್ಲಿ ತಿಳಿಸಲಾಗಿದೆ. ಅಂದರೆ, ಮತದಾರರ ಹೆಸರನ್ನು ಅಳಿಸಲು ನಿರ್ಧರಿಸಿದರೆ ಅದಕ್ಕೆ ಕಾರಣವನ್ನು ಉಲ್ಲೇಖಿಸಿ ಲಿಖಿತ ಆದೇಶ ನೀಡಬೇಕು.
ಈ ಪ್ರಕರಣದ ಕುರಿತು ECI ಪ್ರಧಾನ ಕಚೇರಿ ಮೌನ ವಹಿಸಿದ್ದು, ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಯ ಪರವಾಗಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ.
ಇದರ ನಡುವೆ, ಅಕ್ಟೋಬರ್ 9ರಂದು ECI ಹೊಸ ಆದೇಶವೊಂದನ್ನು ಹೊರಡಿಸಿತು. ಅದರ ಪ್ರಕಾರ, ಯಾವುದೇ ವ್ಯಕ್ತಿ ಒಂದು ತಿಂಗಳಲ್ಲಿ ಮತದಾರರ ಹೆಸರು ಅಳಿಸುವಂತೆ 30ಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸುವಂತಿಲ್ಲ.
ಈ ಹೊಸ ಮಿತಿಯ ಮೂಲಕ SIR ಪ್ರಕ್ರಿಯೆಯ ನಿಯಮಾವಳಿಗಳನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದೆ. ಇದಕ್ಕೂ ಮೊದಲು, SIR ಪ್ರೋಟೋಕಾಲ್ನಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಸಾಮೂಹಿಕವಾಗಿ ಅರ್ಜಿಗಳನ್ನು ಸಲ್ಲಿಸುವುದರ ಮೇಲಿದ್ದ ಮಿತಿಯನ್ನು ECI ತೆಗೆದುಹಾಕಿತ್ತು.
►ಅವಧಿ ಮುಗಿದ ಬಳಿಕ ಅರ್ಜಿ ಸಲ್ಲಿಕೆ
ECIಯ ERONET ತಂತ್ರಾಂಶವು ಮತದಾರರ ಹೆಸರು ಅಳಿಸಲು ಯಾವುದೇ ಕಾರಣವನ್ನು ನಮೂದಿಸದೆ ಸ್ವಯಂಚಾಲಿತವಾಗಿ ನಮೂನೆಗಳನ್ನು ಸೃಷ್ಟಿಸಿತ್ತು ಎಂಬುದನ್ನು ತನಿಖೆ ಬಹಿರಂಗಪಡಿಸಿದೆ. ಅಲ್ಲದೆ, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ ಮುಗಿದ ಬಳಿಕ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂಬುದನ್ನೂ ವರದಿ ಪತ್ತೆಹಚ್ಚಿದೆ.
ಮತದಾರರ ಹೆಸರು ಅಳಿಸಲು ಕಾರಣವೇನು ಎಂಬುದನ್ನು ಸಂಬಂಧಪಟ್ಟ ಮತದಾರರು ತಿಳಿದುಕೊಳ್ಳುವಂತಿರಬೇಕು ಎಂದು ಕಾನೂನು ಹೇಳುತ್ತದೆ.
ಆದರೆ, ವರದಿಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ, 'ಫಾರ್ಮ್ 7' ಮೂಲಕ ಹೆಸರು ಅಳಿಸಲಾದ ಪ್ರತಿಯೊಬ್ಬ ಮತದಾರರಿಗೂ ವಿಚಾರಣೆಯ ಕಾರಣವನ್ನು ತಿಳಿಸುವ ನೋಟಿಸ್ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ. ಮತದಾರರ ವಿವರಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗದಿರುವುದು ಅಥವಾ ದಾಖಲೆಗಳಲ್ಲಿ 'ತಾರ್ಕಿಕ ವ್ಯತ್ಯಾಸಗಳು' ಕಂಡುಬಂದಿರುವುದು ಈ ನೋಟಿಸ್ಗಳಿಗೆ ಕಾರಣ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಆದರೂ, ಮ್ಯಾಪ್ ಮಾಡಲಾಗದ ಮತದಾರರು ಮತ್ತು ದಾಖಲೆಗಳಲ್ಲಿ ತಾರ್ಕಿಕ ವ್ಯತ್ಯಾಸಗಳನ್ನು ಹೊಂದಿದ್ದ ಮತದಾರರು ಎಂಬ ಎರಡು ವಿಭಾಗಗಳಲ್ಲಿ ಎಷ್ಟು ಜನರ ಹೆಸರುಗಳನ್ನು ಅಳಿಸಲಾಗಿದೆ ಎಂಬುದನ್ನು ರಿನ್ವಾ ಬಹಿರಂಗಪಡಿಸಿಲ್ಲ. ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಾಗಲಿ, ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ಬಳಿಕ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯಲ್ಲಾಗಲಿ ಅವರು ಈ ಅಂಕಿಅಂಶಗಳನ್ನು ಹಂಚಿಕೊಂಡಿರಲಿಲ್ಲ ಎಂದು ವರದಿ ತಿಳಿಸಿದೆ.
ಸೌಜನ್ಯ: reporters-collective.in