×
Ad

ಗುರುತ್ವಾಕರ್ಷಣೆ ಇಲ್ಲದ ಸ್ಥಳದಲ್ಲಿ 24 ಗಂಟೆಗಳು ಕಳೆದರೆ ನಿಮ್ಮ ದೇಹದಲ್ಲಿ ಏನಾಗುತ್ತದೆ?

Update: 2026-03-05 15:35 IST

ಸಾಂದರ್ಭಿಕ ಚಿತ್ರ | Photo Credit : freepik

ಆರೋಗ್ಯವಂತ ವ್ಯಕ್ತಿಗಳಿಗೆ 24 ಗಂಟೆಗಳ ಕಾಲ ಗುರುತ್ವವಿಲ್ಲದ ಕೋಣೆಯಲ್ಲಿರುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ. ಆದರೆ ರಕ್ತಪರಿಚಲನೆ, ಸಮತೋಲನ ಮತ್ತು ಮೆದುಳಿನ ಕಾರ್ಯದಲ್ಲಿ ಗಣನೀಯ ಬದಲಾವಣೆ ಆಗುತ್ತದೆ.

ಗುರುತ್ವವೇ ಇಲ್ಲದ ಕೋಣೆಗೆ ಹೋಗುವುದನ್ನು ಊಹಿಸಿ ನೋಡಿ. ಅಲ್ಲಿ ನಿಮ್ಮ ದೇಹ ತೇಲಾಡುತ್ತಿದೆ ಮತ್ತು ತೂಕರಹಿತವಾಗಿರುತ್ತದೆ. ಆದರೆ ದೇಹದ ಒಳಗೆ ಎಲ್ಲವೂ ವೇಗವಾಗಿ ಬದಲಾಗುತ್ತವೆ. ಆರೋಗ್ಯವಂತ ವ್ಯಕ್ತಿಗಳಿಗೆ 24 ಗಂಟೆಗಳ ಕಾಲ ಗುರುತ್ವವಿಲ್ಲದ ಕೋಣೆಯಲ್ಲಿರುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ. ಆದರೆ ರಕ್ತಪರಿಚಲನೆ, ಸಮತೋಲನ ಮತ್ತು ಮೆದುಳಿನ ಕಾರ್ಯದಲ್ಲಿ ಗಣನೀಯ ಬದಲಾವಣೆ ಆಗುತ್ತದೆ.

24 ಗಂಟೆಗಳಲ್ಲಿ ದೇಹದಲ್ಲಿ ಆಗುವ ಬದಲಾವಣೆ

ಆರೋಗ್ಯವಂತ ವ್ಯಕ್ತಿ 24 ಗಂಟೆಗಳ ಕಾಲ ಶೂನ್ಯ ಗುರುತ್ವದಲ್ಲಿ ಇದ್ದರೆ ಕೆಲವೇ ನಿಮಿಷಗಳಲ್ಲಿ ದೇಹ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತದೆ ಎನ್ನುತ್ತಾರೆ ಗುರುಗ್ರಾಮ್ನ ಪಾರಸ್ ಹೆಲ್ತ್ನ ಇಂಟರ್ನಲ್ ಮೆಡಿಸಿನ್ ಮುಖ್ಯಸ್ಥರಾದ ಡಾ ಆರ್ ಆರ್ ದತ್ತಾ.

ಭೂಮಿಯ ಮೇಲಿರುವಾಗ ಗುರುತ್ವಾಕರ್ಷಣೆಯು ರಕ್ತವನ್ನು ಕಾಲುಗಳ ಕಡೆಗೆ ಎಳೆಯುತ್ತದೆ. ತೂಕವಿಲ್ಲದಿರುವಾಗ ಭೂಮಿಯ ಕಡೆಗಿನ ಸೆಳೆತ ಕಡಿಮೆಯಾಗುತ್ತದೆ. ರಕ್ತ ಮತ್ತು ಇತರ ದ್ರವಗಳು ಎದೆ ಮತ್ತು ತಲೆಯ ಕಡೆಗೆ ಚಲಿಸುತ್ತವೆ ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳುವುದು, ಮೂಗಿನಲ್ಲಿ ದಟ್ಟಣೆ ಮತ್ತು ಕೆಲವೊಮ್ಮೆ ಸಣ್ಣ ತಲೆನೋವು ಕಾಣಿಸಿಕೊಳ್ಳಬಹುದು.

“ಆರಂಭಿಕ ಸಮಯದಲ್ಲಿ ಕೆಳಗಿನ ಅಂಗಗಳಲ್ಲಿ ಸಂಗ್ರಹವಾಗುವ ರಕ್ತವು ಗುರುತ್ವಾಕರ್ಷಣೆ ಇಲ್ಲದ ಕಾರಣ ಎದೆ ಮತ್ತು ತಲೆಯ ಕಡೆಗೆ ಚಲಿಸುತ್ತದೆ. ದೇಹ ಇದನ್ನು ಹೆಚ್ಚುವರಿ ದ್ರವ ಎಂದು ತಿಳಿದುಕೊಂಡು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಪರಿಣಾಮವಾಗಿ ಪ್ಲಾಸ್ಮಾ ಪ್ರಮಾಣವು ಮೊದಲ 24 ಗಂಟೆಗಳಲ್ಲಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ.

ಹೃದಯ ಮತ್ತು ರಕ್ತದೊತ್ತಡದಲ್ಲಿ ಬದಲಾವಣೆ

ಗುರುತ್ವವಿಲ್ಲದೆ ಇದ್ದಾಗ ಹೃದಯವು ರಕ್ತವನ್ನು ಮೇಲಕ್ಕೆ ಪಂಪ್ ಮಾಡಲು ಹೆಚ್ಚು ಶ್ರಮಪಡುವ ಅಗತ್ಯವಿರುವುದಿಲ್ಲ. ತೂಕವಿಲ್ಲದ ಸ್ಥಿತಿಯಲ್ಲಿ ಸುಗಮವಾಗಿ ಹೃದಯದಿಂದ ರಕ್ತವು ಮೆದುಳಿಗೆ ಮತ್ತು ದೇಹಕ್ಕೆ ಪಂಪ್ ಆಗುತ್ತದೆ. ಆರಂಭದಲ್ಲಿ ರಕ್ತದೊತ್ತಡದಲ್ಲಿ ಸೌಮ್ಯ ಏರಿಳಿತಗಳು ಇರಬಹುದು, ಆದರೆ ಪ್ಲಾಸ್ಮಾ ಪ್ರಮಾಣ ಕಡಿಮೆಯಾದಂತೆ ರಕ್ತದೊತ್ತಡ ಕಡಿಮೆಯಾಗಬಹುದು. 24 ಗಂಟೆಗಳಲ್ಲಿ ಈ ಹೃದಯ ಸಂಬಂಧಿ ಬದಲಾವಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳು ಈ ಬದಲಾವಣೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ.

ಮುಖ್ಯವಾಗಿ ಒಂದು ದಿನದಲ್ಲಿ ಸ್ನಾಯು ಕ್ಷೀಣತೆ ಅಥವಾ ಮೂಳೆ ನಷ್ಟವಾಗುವುದಿಲ್ಲ. ವಾರಗಳವರೆಗೆ ಅಥವಾ ದಿನಗಟ್ಟಲೆ ಗುರುತ್ವರಹಿತ ಪರಿಸರದಲ್ಲಿ ಇದ್ದಲ್ಲಿ ಸ್ನಾಯು ಕ್ಷೀಣತೆ ಮತ್ತು ಮೂಳೆ ವಿಖನಿಜೀಕರಣ (ಖನಿಜ ಪದಾರ್ಥಗಳಾದ ಲವಣಗಳು ಮೊದಲಾದವು ತೆಗೆಯುವುದು) ಕಂಡುಬರಬಹುದು. ಹೀಗಾಗಿ 24 ಗಂಟೆಗಳಲ್ಲಿ ಹೆಚ್ಚು ದೌರ್ಬಲ್ಯಗಳು ಕಂಡುಬರುವುದಿಲ್ಲ.

ಪಾರಸ್ ಹೆಲ್ತ್ನಲ್ಲಿ ನರವಿಜ್ಞಾನಿಯಾಗಿರುವ ಪೂಜಾ ಆನಂದ್ ಹೇಳುವ ಪ್ರಕಾರ, ನರವೈಜ್ಞಾನಿಕ ದೃಷ್ಟಿಕೋನದಿಂದ, ಶೂನ್ಯ ಗುರುತ್ವಾಕರ್ಷಣೆಯ ಬಹಳ ಭ್ರಾಂತಿಗೆ ಒಳಪಡುವಂತಹದು. ಭಂಗಿ ಮತ್ತು ದೃಷ್ಟಿಕೋನಕ್ಕಾಗಿ ಮೆದುಳು ನಿರಂತರವಾಗಿ ಕಿವಿ, ಕಣ್ಣು, ಸ್ನಾಯು ಮತ್ತು ಕೀಲುಗಳಿಂದ ವಿವರಗಳನ್ನು ಪಡೆದುಕೊಳ್ಳುತ್ತದೆ. ಗುರುತ್ವದ ಕೊರತೆಯಲ್ಲಿ ಈ ಸಂಘಟಿತ ವ್ಯವಸ್ಥೆಗೆ ಅಡ್ಡಿಯಾಗಿರುತ್ತದೆ. ಒಳಗಿನ ಕಿವಿಯ ವೆಸ್ಟಿಬ್ಯುಲರ್ ಅಪರಟಸ್ ಎನ್ನುವ ಗುರುತ್ವಾಕರ್ಷಣೆಯನ್ನು ಗ್ರಹಿಸುವ ಒಟೋಲಿತ್ ಅಂಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಣೆ ಮಾಡುವುದಿಲ್ಲ. ಹೀಗಾಗಿ ದೃಶ್ಯ ಸೂಚನೆಗಳು ಮತ್ತು ಸಮತೋಲನದ ನಡುವಿನ ಸಂಕೇತಗಳ ಹೊಂದಾಣಿಕೆ ತಪ್ಪುತ್ತದೆ. ಮೆದುಳಿಗೆ ಸೂಕ್ತ ಮಾಹಿತಿ ಹೋಗದೆ ಗೊಂದಲಗೊಳ್ಳುತ್ತದೆ. ಕೆಲವೊಮ್ಮೆ ವಾಖರಿಕೆ, ತಲೆತಿರುಗುವುದು ಮತ್ತು ವಾಂತಿಯಾಗುತ್ತದೆ. ಸಾಮಾನ್ಯವಾಗಿ ಇದನ್ನು ಬಾಹ್ಯಾಕಾಶ ಚಲನೆಯ ಕಾಯಿಲೆ ಎಂದು ಕರೆಯಲಾಗುತ್ತದೆ. ಮೆದುಳು ಮರಳಿ ಎಲ್ಲವನ್ನೂ ಹೊಂದಿಸಿಕೊಳ್ಳುವ ಕಾರಣದಿಂದ 24ರಿಂದ 48 ಗಂಟೆಗಳಲ್ಲಿ ಈ ಸಮಸ್ಯೆ ಸುಧಾರಿಸುತ್ತದೆ.”

ಮರಳಿ ಗುರುತ್ವಕ್ಕೆ ಬರುವ ಸಮಸ್ಯೆ

ಅಚ್ಚರಿಯೆಂದರೆ ಗುರುತ್ವವನ್ನು ಬಿಡುವುದಕ್ಕಿಂತ ಹೆಚ್ಚಾಗಿ ಮರಳಿ ಬರುವುದು ದೊಡ್ಡ ಸಮಸ್ಯೆಯಾಗಿರುತ್ತದೆ. ಶೂನ್ಯ ಗುರುತ್ವಕ್ಕೆ ಒಮ್ಮೆ ದ್ರವದ ಮಟ್ಟಗಳು ಹೊಂದಿಕೆಯಾದ ಮೇಲೆ ಗುರುತ್ವಕ್ಕೆ ಬಂದಾಗ ಮತ್ತೆ ರಕ್ತ ಕಾಲುಗಳ ಕಡೆಗೆ ಹರಿಯಲಾರಂಭಿಸುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಹೀಗಾಗಿ ತಲೆತಿರುಗುವಿಕೆ ಮತ್ತು ಪ್ರಜ್ಞೆ ತಪ್ಪುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಈ ಸ್ಥಿತಿಯನ್ನು ಆರ್ತೊಸ್ಟಾಟಿಕ್ ಇನ್ಟಾಲರೆನ್ಸ್ ಎಂದು ಕರೆಯಲಾಗುತ್ತದೆ. ವೆಸ್ಟಿಬ್ಯುಲರ್ ವ್ಯವಸ್ಥೆ ಮತ್ತೆ ಗುರುತ್ವಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಹೀಗಾಗಿ ಸ್ವಲ್ಪ ಸಮಯದವವರೆಗೆ ತಲೆ ಹಗುರವಾಗುವುದು ಅಥವಾ ಅಸಮತೋಲನದ ಅನುಭವವಾಗಬಹುದು.

24 ಗಂಟೆಗಳು ಅಪಾಯಕಾರಿಯೆ?

ಆರೋಗ್ಯಕರ ವ್ಯಕ್ತಿಗೆ ಶೂನ್ಯ ಗುರುತ್ವದಲ್ಲಿ ಒಂದು ದಿನ ಕಳೆಯುವುದು ಅಹಿತಕರವೆನಿಸಬಹುದು ಆದರೆ ಹಾನಿಕರವಲ್ಲ. ಮುಖ ಊದಿಕೊಳ್ಳಬಹುದು, ವಾಕರಿಕೆ, ತಲೆತಿರುಗುವಿಕೆ ಮತ್ತು ತಾತ್ಕಾಲಿಕ ಸಮನ್ವಯದ ಬದಲಾವಣೆಯನ್ನು ಎದುರಿಸಬಹುದು. ಆದರೆ, ಶಾಶ್ವತವಾದ ಸ್ನಾಯು ಅಥವಾ ಮೂಳೆ ಹಾನಿಯಾಗುವುದಿಲ್ಲ. ಗುರುತ್ವಾಕರ್ಷಣೆ ಇಲ್ಲದೆ ಇದ್ದಾಗಲೂ ಮಾನವ ದೇಹ ಬೇಗನೇ ಹೊಂದಿಕೊಳ್ಳುತ್ತದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News