ಗಣಿತದಲ್ಲಿ ಹಿಂದೆ ಬೀಳುವ ಮಕ್ಕಳು; ಸಂಶೋಧಕರು ಹೇಳುವುದೇನು?
ಸಾಂದರ್ಭಿಕ ಚಿತ್ರ | Photo Credit : freepik
ನಿಮ್ಮ ಮಕ್ಕಳು ಗಣಿತದ ಸಂಖ್ಯೆಗಳನ್ನು ಮತ್ತು ಸಣ್ಣ ಲೆಕ್ಕಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆಯೆ? ಸಮಸ್ಯೆ ಮೆದುಳಿನಲ್ಲಿದೆಯೇ ವಿನಾ ಮಕ್ಕಳ ಶೈಕ್ಷಣಿಕ ಪ್ರಯತ್ನದಲ್ಲಲ್ಲ!
ಅನೇಕ ಮಕ್ಕಳಿಗೆ ಗಣಿತ ಎನ್ನುವುದು ಕಬ್ಬಿಣದ ಕಡಲೆ. ತಮ್ಮ ಸಮಕಾಲೀನ ಮಕ್ಕಳ ಸಮಕ್ಕೆ ಬರಲು ಹೆಣಗಾಡುತ್ತಾರೆ. ಅಜಾಗರೂಕತೆಯಿಂದ ತಪ್ಪುಗಳನ್ನು ಮಾಡುವುದು ಮತ್ತು ಒತ್ತಡದಲ್ಲಿ ತಪ್ಪು ಮಾಡುವುದು ಸಾಮಾನ್ಯವಾಗಿರುತ್ತದೆ.
ಸಂಖ್ಯೆಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಕೆಲವೊಮ್ಮೆ ವೈಯಕ್ತಿಕ ಸಮಸ್ಯೆ ಎಂದು ಕಂಡುಬರಬಹುದು. ಆದರೆ ಗಣಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸಮಸ್ಯೆ ನಾವು ಯೋಚಿಸಿರುವುದಕ್ಕಿಂತ ಹೆಚ್ಚು ಸೂಕ್ಷ್ಮವಾಗಿರಬಹುದು ಮತ್ತು ಮೆದುಳಿನ ಆಳದಲ್ಲಿ ಅಡಗಿರಬಹುದು.
ಮಕ್ಕಳು ಸಂಖ್ಯೆ ಮತ್ತು ಚಿಹ್ನೆಗಳ ಸಮಸ್ಯೆ ಏಕೆ ಎದುರಿಸುತ್ತಾರೆ?
ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಬಹಿರಂಗವಾಗಿರುವ ಪ್ರಕಾರ, ಸರಳ ಗಣಿತದ ಲೆಕ್ಕಗಳನ್ನು ಕೊಟ್ಟಾಗ ಕಲಿಕೆಯ ಸಮಸ್ಯೆಯನ್ನು ಎದುರಿಸುವ ಮಕ್ಕಳು ತಮ್ಮ ಉತ್ತರದ ಬಗ್ಗೆ ಹೆಚ್ಚು ಜಾಗರೂಕರಾಗಿರುವುದಿಲ್ಲ ಮತ್ತು ದೋಷಗಳನ್ನು ಮಾಡಿದ ನಂತರವೂ ಗಣಿತದ ಸಮಸ್ಯೆ ಬಿಡಿಸುವುದನ್ನು ನಿಧಾನಗೊಳಿಸಲಿಲ್ಲ.
ಗಣಿತದಲ್ಲಿ ಉತ್ತಮ ಕೌಶಲ್ಯವಿರುವ ಮಕ್ಕಳಲ್ಲಿ ಭಿನ್ನ ವರ್ತನೆ ಕಂಡುಬಂದಿದೆ. ಆದರೆ ಪರಿಮಾಣಗಳನ್ನು ಅರೆಬಿಕ್ ಸಂಖ್ಯೆಯ ಚಿಹ್ನೆಗಳಿಗೆ ಬದಲಾಗಿ ಚುಕ್ಕೆಗಳಲ್ಲಿ ಪ್ರತಿನಿಧಿಸಿದಾಗ ಮಕ್ಕಳಲ್ಲಿರುವ ವ್ಯತ್ಯಾಸ ಕಣ್ಮರೆಯಾಗಿರುವುದು ಕಂಡುಬಂದಿದೆ.
ಈ ಸಂಶೋಧನೆಯು ವಿಜ್ಞಾನಿಗಳು ಬಹಳ ಹಿಂದಿನಿಂದಲೇ ಸಂಶಯಪಡುತ್ತಿದ್ದ ವಿಷಯವನ್ನು ಸಾಬೀತುಮಾಡಿದೆ. ಗಣಿತ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳು ಚಿಹ್ನೆಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ವಿಫಲರಾಗುತ್ತಾರೆ. ಅಂದರೆ ಪರಿಮಾಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಮಸ್ಯೆ ಇರುವುದಿಲ್ಲ. ಬದಲಾಗಿ ಲಿಖಿತ ಸಂಖ್ಯೆಗಳೊಂದಿಗೆ ವ್ಯವಹರಿಸುವುದು ಸಮಸ್ಯೆಯಾಗಿರುತ್ತದೆ.
ಮೆದುಳಿನ ಸ್ಕ್ಯಾನ್‌ನಲ್ಲಿ ತಿಳಿದು ಬಂದಿರುವುದೇನು?
ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ ತಿಳಿದು ಬಂದಿರುವ ಪ್ರಕಾರ ಗಣಿತದಲ್ಲಿ ಹಿಂದೆ ಇರುವ ಮಕ್ಕಳ ವೈಫಲ್ಯಕ್ಕೆ ಮಿಡಲ್ ಫ್ರಂಟಲ್ ಗೈರಸ್‌ನಲ್ಲಿ ಕಡಿಮೆ ಚಟುವಟಿಕೆಗೆ ತಳಕು ಹಾಕಿಕೊಂಡಿರುವುದು ತಿಳಿದುಬಂದಿದೆ. ಗಣಿತದ ಕಲಿಕೆಯಲ್ಲಿ ಮಿಡಲ್ ಫ್ರಂಟಲ್ ಗೈರಸ್ ಎನ್ನುವ ಭಾಗವು ಸಂಖ್ಯೆಗಳನ್ನು ಪ್ರಕ್ರಿಯೆಗೊಳಿಸುವುದು, ಗಮನ, ಪ್ರಚೋದನೆ ನಿಯಂತ್ರಣ ಮತ್ತು ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವಿಕೆಗೆ ಸಂಬಂಧಿಸಿದ ಮೆದುಳಿನ ಪ್ರದೇಶವಾಗಿದೆ.
ಇದಲ್ಲದೆ ದೋಷಗಳ ನಂತರವೂ ನಿಧಾನಗೊಳಿಸದೆ ಇರುವುದಕ್ಕೂ ಕಾರಣವಿದೆ. ತಪ್ಪುಗಳನ್ನು ಪತ್ತೆ ಮಾಡುವ ಮತ್ತು ಕಾರ್ಯಕ್ಷಮತೆ ಮೇಲ್ವಿಚಾರಣೆ ಮಾಡುವ ಮೆದುಳಿನ ಭಾಗವಾಗಿರುವ ಮುಂಭಾಗದ ಸಿಂಗ್ಯುಲೇಟ್ ಕಾರ್ಟೆಕ್ಸ್‌ನಲ್ಲಿನ ಚಟುವಟಿಕೆಯ ಕೊರತೆಯಿಂದಾಗಿ, ದೋಷದ ಹೊರತಾಗಿಯೂ ಮಕ್ಕಳು ಸಮಸ್ಯೆ ಪರಿಹಾರವನ್ನು ನಿಧಾನಿಸುವುದಿಲ್ಲ.
ಮಕ್ಕಳನ್ನು ಸಂಖ್ಯೆಯ ಚಿಹ್ನೆಗಳ ಬದಲಿಗೆ ಚುಕ್ಕೆಗಳೊಂದಿಗೆ ಪರೀಕ್ಷಿಸಿದಾಗ ಮೆದುಳಿನ ಚಟುವಟಿಕೆಯಲ್ಲಿನ ವ್ಯತ್ಯಾಸಗಳು ಸಂಪೂರ್ಣವಾಗಿ ಮರೆಯಾಯಿತು. ಅಂದರೆ ಗಣಿತ ಕಲಿಕೆಯಲ್ಲಿ ಕಡಿಮೆ ಸಾಮರ್ಥ್ಯ ಹೊಂದಿರುವ ಮಕ್ಕಳೂ ತಮ್ಮ ಸಮಕಾಲೀನರಂತೆ ಉತ್ತಮ ಪ್ರದರ್ಶನ ತೋರಿದರು.
ಹಾಗಿದ್ದರೆ ಗಣಿತವನ್ನು ಭಿನ್ನವಾಗಿ ಕಲಿಸಬೇಕೆ?
ಸಂಶೋಧಕರ ಪ್ರಕಾರ, ಮೆದುಳಿನಲ್ಲಿ ಒಂದು ಗಣಿತದ ಪ್ರದೇಶ ವಿಫಲಗೊಳ್ಳುವುದರಲ್ಲಿ ಗಣಿತದಲ್ಲಿನ ಮಕ್ಕಳ ವೈಫಲ್ಯವನ್ನು ವಿವರಿಸಲು ಸಾಧ್ಯವಿಲ್ಲ. ಬದಲಾಗಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ಮತ್ತು ದೋಷಗಳನ್ನು ಪತ್ತೆ ಮಾಡುವ ಮೆದುಳಿನ ಪ್ರದೇಶಗಳು ಸಮಸ್ಯೆಯ ಕೇಂದ್ರವಾಗಿವೆ. ಹೀಗಾಗಿ ಗಣಿತದಲ್ಲಿ ಹಿಂದೆ ಬಿದ್ದಿರುವ ಮಕ್ಕಳಿಗೆ ಹೇಳಿಕೊಡುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಮತ್ತು ವಿಶೇಷಜ್ಞರಿಗೆ ಹೊಸ ಬಾಗಿಲು ತೆರೆದಂತಾಗಿದೆ.
ಅಧ್ಯಯನವನ್ನು ನಡೆಸಿದ ಸಂಶೋಧಕರ ಪ್ರಕಾರ ಮಕ್ಕಳು ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಿದ್ದಾರೆ ಎಂಬುದರ ಬಗ್ಗೆ ಸಕ್ರಿಯವಾಗಿ ಚಿಂತಿಸುವುದನ್ನು ಕಲಿಸುವುದು ಮತ್ತು ವಿಭಿನ್ನ ಸಮಸ್ಯೆ ಪರಿಹಾರ ತಂತ್ರಗಳನ್ನು ಅವರಿಗೆ ಪರಿಚಯಿಸುವುದು ಮಾಡಬೇಕಾಗುತ್ತದೆ. ಅಂದರೆ ಆಲೋಚನೆ ಮಾಡುವುದು ಮತ್ತು ಸ್ವಯಂ ಮೇಲ್ವಿಚಾರಣೆ ಎರಡರ ಬಗ್ಗೆಯೂ ತರಬೇತಿ ನೀಡುವುದನ್ನು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಕಲಿಕೆಯು ಅಭಿವೃದ್ಧಿ ಹೊಂದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಮತ್ತು ಮೂರನೇ ತರಗತಿಯ ಮಕ್ಕಳನ್ನು ಅಧ್ಯಯನ ಮಾಡಿ ಸಂಶೋಧನೆ ನಡೆಸಲಾಗಿದೆ. ಮಕ್ಕಳು ಹೇಗೆ ಗಣಿತದ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಿದ್ದಾರೆ ಎನ್ನುವ ಬಗ್ಗೆ ವಿವರವಾದ ಗಣಿತದ ವಿಶ್ಲೇಷಣೆ ಮಾಡಲಾಗಿತ್ತು.
ಮಕ್ಕಳು ಸರಿಯಾದ ಉತ್ತರ ನೀಡಿದ್ದಾರೆಯೇ ಎನ್ನುವುದರ ಮೇಲೆ ಅಧ್ಯಯನದ ಗಮನವಿರಲಿಲ್ಲ. ಅವರು ಗಣಿತದ ಸಮಸ್ಯೆ ಪರಿಹರಿಸಲು ಯಾವ ವರ್ತನೆಯನ್ನು ತೋರಿಸಿದರು ಎಂದು ಗಮನಿಸಲಾಗಿತ್ತು. ಫಲಿತಾಂಶವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ, ಗಣಿತದಲ್ಲಿ ಹಿಂದಿರುವ ಮತ್ತು ಮುಂದಿರುವ ಮಕ್ಕಳು ಸಮಸ್ಯೆಯನ್ನು ಹೇಗೆ ಭಿನ್ನವಾಗಿ ಬಿಡಿಸಿದರು ಎಂದು ಅರಿತುಕೊಳ್ಳುವುದು ಉದ್ದೇಶವಾಗಿತ್ತು.
ಕೃಪೆ: indiatoday.in