ಸಾಂದರ್ಭಿಕ ಚಿತ್ರ | Photo Credit : magnific

ಆರೋಗ್ಯವಂತ ವಯಸ್ಕರು ಸಾಂದರ್ಭಿಕವಾಗಿ ಹೆಚ್ಚುವರಿ ಡೋಸ್ ತೆಗೆದುಕೊಂಡರೆ ಅದರಿಂದ ಗಂಭೀರ ಹಾನಿಯಾಗದಿರಬಹುದು. ಆದರೆ, ವೈದ್ಯರ ಸಲಹೆಗಿಂತ ಹೆಚ್ಚು ಬಾರಿ ಪದೇಪದೆ ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮಗಳ ಅಪಾಯ ಹೆಚ್ಚಾಗುತ್ತದೆ.

ಅಲರ್ಜಿ ಉಲ್ಬಣಗೊಂಡಾಗ ಮತ್ತು ರೋಗಲಕ್ಷಣಗಳು ಕಡಿಮೆಯಾಗದಿದ್ದಾಗ ಹೆಚ್ಚುವರಿ ಸೆಟಿರಿಜಿನ್ ಮಾತ್ರೆ ತೆಗೆದುಕೊಳ್ಳುವ ಆಲೋಚನೆ ಬರುವುದು ಸಹಜ. ಆದರೆ, ಇದನ್ನು ಪದೇಪದೆ ತೆಗೆದುಕೊಳ್ಳುವುದರಿಂದ ಉತ್ತಮ ಪರಿಹಾರ ಸಿಗದು. ಬದಲಿಗೆ, ಅಡ್ಡಪರಿಣಾಮಗಳ ಅಪಾಯ ಹೆಚ್ಚಾಗಬಹುದು.

ಥಾಣೆಯ ಜ್ಯುಪಿಟರ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ನಿರ್ದೇಶಕ ಡಾ. ಅಮಿತ್ ಸರಫ್ ಅವರ ಪ್ರಕಾರ, ಸೆಟಿರಿಜಿನ್ ಅನ್ನು ಸಾಮಾನ್ಯವಾಗಿ ದಿನಕ್ಕೆ ಒಮ್ಮೆ, ಶಿಫಾರಸು ಮಾಡಿದ ಪ್ರಮಾಣದಲ್ಲಿ ತೆಗೆದುಕೊಳ್ಳಲಾಗುತ್ತದೆ.

“ಆರೋಗ್ಯವಂತ ವಯಸ್ಕರು ಸಾಂದರ್ಭಿಕವಾಗಿ ಹೆಚ್ಚುವರಿ ಡೋಸ್ ತೆಗೆದುಕೊಂಡರೆ ಅದರಿಂದ ಗಂಭೀರ ಹಾನಿಯಾಗದಿರಬಹುದು. ಆದರೆ, ವೈದ್ಯರ ಸಲಹೆಗಿಂತ ಹೆಚ್ಚು ಬಾರಿ ಪದೇಪದೆ ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮಗಳ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಅತಿಯಾದ ನಿದ್ರೆ, ತಲೆತಿರುಗುವಿಕೆ ಮತ್ತು ಎಚ್ಚರ ತಪ್ಪುವಿಕೆ ಅಥವಾ ಏಕಾಗ್ರತೆ ಕುಂದುವಂತಹ ಸಮಸ್ಯೆಗಳು ಉಂಟಾಗಬಹುದು” ಎಂದು ಅವರು ಹೇಳುತ್ತಾರೆ.

ವ್ಯಕ್ತಿಯ ವಯಸ್ಸು, ಮೂತ್ರಪಿಂಡದ ಕಾರ್ಯಕ್ಷಮತೆ ಮತ್ತು ಅವರು ತೆಗೆದುಕೊಳ್ಳುತ್ತಿರುವ ಇತರ ಔಷಧಿಗಳನ್ನು ಅವಲಂಬಿಸಿ ಸೂಕ್ತವಾದ ಡೋಸ್ ಮತ್ತು ಚಿಕಿತ್ಸೆಯ ಅವಧಿ ಬದಲಾಗಬಹುದು.

“ಅಲರ್ಜಿ ಲಕ್ಷಣಗಳು ಕಡಿಮೆಯಾಗದಿದ್ದಾಗ, ಕೇವಲ ಲಕ್ಷಣಗಳು ಮುಂದುವರಿದಿವೆ ಎಂಬ ಕಾರಣಕ್ಕೆ ಔಷಧಿ ತೆಗೆದುಕೊಳ್ಳುವ ಆವರ್ತನವನ್ನು ಹೆಚ್ಚಿಸುವುದು ಸರಿಯಲ್ಲ. ಲಕ್ಷಣಗಳು ಹಾಗೆಯೇ ಮುಂದುವರಿದರೆ ಅದಕ್ಕೆ ವಿಭಿನ್ನ ಚಿಕಿತ್ಸಾ ವಿಧಾನದ ಅಗತ್ಯವಿರಬಹುದು” ಎಂದು ಡಾ. ಸರಫ್ ಅಭಿಪ್ರಾಯಪಟ್ಟರು.

“ಇದರ ಅತ್ಯಂತ ಸಾಮಾನ್ಯ ಅಡ್ಡಪರಿಣಾಮವೆಂದರೆ ಮಂಪರು ಅಥವಾ ಸುಸ್ತು. ಹಾಗಿದ್ದರೂ, ಹಳೆಯ ಆಂಟಿಹಿಸ್ಟಮೈನ್ ಗಳಿಗೆ ಹೋಲಿಸಿದರೆ ಸೆಟಿರಿಜಿನ್ ಕಡಿಮೆ ಪ್ರಮಾಣದ ನಿದ್ರಾಭಾವನೆ ಉಂಟುಮಾಡುತ್ತದೆ ಎಂದು ಪರಿಗಣಿಸಲಾಗಿದೆ” ಎಂದು ಸರಫ್ ಹೇಳಿದ್ದಾರೆ.

ಕೆಲವರಿಗೆ ಬಾಯಿ ಒಣಗುವುದು, ತಲೆನೋವು, ತಲೆತಿರುಗುವಿಕೆ ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ವಾಹನ ಚಾಲನೆ ಮಾಡುವವರು, ಯಂತ್ರಗಳನ್ನು ನಿರ್ವಹಿಸುವವರು ಅಥವಾ ನಿರಂತರ ಏಕಾಗ್ರತೆಯ ಅಗತ್ಯವಿರುವ ಕೆಲಸಗಳಲ್ಲಿ ತೊಡಗಿರುವವರು ನಿದ್ರೆ ಅಥವಾ ಮಂಪರು ಬರುವ ಸಾಧ್ಯತೆಯ ಬಗ್ಗೆ ಅರಿವಿರಿಸಿಕೊಳ್ಳುವುದು ಬಹಳ ಮುಖ್ಯ. ಔಷಧಿ ಸೇವಿಸಿದ ನಂತರವಷ್ಟೇ ಅದು ತಮ್ಮ ಗಮನದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಒಬ್ಬರು ಅರಿತುಕೊಳ್ಳಲು ಸಾಧ್ಯವಾಗಬಹುದು.

“ಔಷಧಿ ಸೇವಿಸಿದ ನಂತರ ಯಾರಲ್ಲಾದರೂ ತೀವ್ರವಾದ ಮಂಪರು ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ, ಅವರು ಔಷಧಿಯ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗುವ ಬದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು” ಎಂದು ಡಾ. ಸರಫ್ ಅಭಿಪ್ರಾಯಪಟ್ಟರು.

ಆಂಟಿಹಿಸ್ಟಮೈನ್ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅವು ಕೆಲಸ ಮಾಡುವುದನ್ನು ನಿಲ್ಲಿಸಬಹುದು ಎಂಬ ಸಾಮಾನ್ಯ ಕಳವಳವಿದೆ. ಆದರೆ, ದೀರ್ಘಕಾಲದವರೆಗೆ ಬಳಸಿದ ಕಾರಣದಿಂದ ಸೆಟಿರಿಜಿನ್ ತನ್ನ ಪರಿಣಾಮವನ್ನು ಕಳೆದುಕೊಳ್ಳುತ್ತದೆ ಎಂದು ತೀರ್ಮಾನಿಸಲು ಯಾವುದೇ ಬಲವಾದ ಕಾರಣವಿಲ್ಲ ಎನ್ನುತ್ತಾರೆ ತಜ್ಞರು.

ಅವರು ಹೇಳುವಂತೆ, ಇಲ್ಲಿನ ದೊಡ್ಡ ಕಳವಳಕಾರಿ ವಿಷಯವೆಂದರೆ ಆ ಔಷಧಿಯ ಅಗತ್ಯ ಇನ್ನೂ ಇದೆಯೇ ಅಥವಾ ಮೂಲ ಅಲರ್ಜಿ ಸಮಸ್ಯೆಗೆ ಬೇರೆ ಚಿಕಿತ್ಸಾ ವಿಧಾನದ ಅಗತ್ಯವಿದೆಯೇ ಎಂದು ಪರಿಶೀಲಿಸದೆ ನಿರಂತರವಾಗಿ ಔಷಧಿ ಸೇವಿಸುವುದು.

ದೀರ್ಘಕಾಲದವರೆಗೆ ಪ್ರತಿದಿನ ಸೆಟಿರಿಜಿನ್ ಸೇವಿಸುತ್ತಿರುವವರು ಮತ್ತೊಂದು ಅಂಶವನ್ನೂ ಗಮನಿಸಬೇಕಾಗುತ್ತದೆ. ಕೆಲವರು ಔಷಧಿಯನ್ನು ನಿಲ್ಲಿಸಿದ ಕೆಲವೇ ದಿನಗಳಲ್ಲಿ ತೀವ್ರವಾದ ತುರಿಕೆಯನ್ನು ಅನುಭವಿಸಬಹುದು. ಆದರೆ, ಇಂತಹ ವಿತ್ಡ್ರಾವಲ್ ರಿಯಾಕ್ಷನ್ (ಔಷಧಿ ನಿಲ್ಲಿಸಿದಾಗ ಕಾಣಿಸಿಕೊಳ್ಳುವ ಪ್ರತಿಕ್ರಿಯೆ) ಅಪರೂಪ ಎನ್ನುತ್ತಾರೆ ತಜ್ಞರು.

ವೈದ್ಯರ ಪ್ರಕಾರ, ಪ್ರತಿಯೊಬ್ಬರೂ ಔಷಧಿಯನ್ನು ಒಂದೇ ರೀತಿಯಲ್ಲಿ ಬಳಸುವುದಿಲ್ಲ. ವಯಸ್ಸಾದವರು ಮತ್ತು ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆಯಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor