Photo Credit : aljazeera.com

ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ ಮತ್ತು ಆಕಾಶ ಏರ್ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 10ರವರೆಗೆ ರಿಯಾದ್‌ ಗೆ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿವೆ. ಸೌದಿ ರಾಜಧಾನಿಯಲ್ಲಿರುವ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ತಾವು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದೇವೆ ಎಂದು ಯೆಮೆನ್ ನ ಹೌತಿ ಬಂಡುಕೋರರು ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ವಿಮಾನ ರದ್ದತಿಯಿಂದ ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ಪೂರ್ಣ ಹಣವನ್ನು ಮರುಪಾವತಿಸುವುದಾಗಿ ವಿಮಾನಯಾನ ಸಂಸ್ಥೆಗಳು ಭರವಸೆ ನೀಡಿವೆ.

► ಇಂಡಿಗೋ, ಏರ್ ಇಂಡಿಯಾ, ಆಕಾಶ ಏರ್ ವಿಮಾನಗಳು ರದ್ದು

"ಪ್ರದೇಶದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಅಕ್ಟೋಬರ್ 10ರವರೆಗೆ ರಿಯಾದ್‌ ಗೆ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿದ್ದೇವೆ. ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣದ ದಿನಾಂಕ ಬದಲಾಯಿಸಿಕೊಳ್ಳಲು ಅಥವಾ ಟಿಕೆಟ್ ರದ್ದುಗೊಳಿಸಿದರೆ ಪೂರ್ಣ ಹಣವನ್ನು ಮರುಪಾವತಿಸಲು ಅವಕಾಶ ನೀಡಲಾಗುತ್ತಿದೆ. ನಾವು ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದ್ದೇವೆ" ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ನ ವಕ್ತಾರರು 'ಹಿಂದೂಸ್ತಾನ್ ಟೈಮ್ಸ್'ಗೆ ತಿಳಿಸಿದ್ದಾರೆ.

ರಿಯಾದ್ ನಲ್ಲಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಆಕಾಶ ಏರ್, ಅಕ್ಟೋಬರ್ 8ರಂದು ನಿಗದಿಯಾಗಿದ್ದ ಕೊಚ್ಚಿ–ರಿಯಾದ್ ಮತ್ತು ರಿಯಾದ್–ಕೊಚ್ಚಿ ವಿಮಾನಗಳ ಸಂಚಾರವನ್ನು ಮುಂದೂಡಿದೆ.

ಪ್ರಯಾಣಿಕರು ಪೂರ್ಣ ಹಣ ಮರುಪಾವತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಏಳು ದಿನಗಳಲ್ಲಿ ಅವರ ಹಣ ಮೂಲ ಖಾತೆಗೆ ಜಮೆಯಾಗಲಿದೆ ಎಂದು ಅಕ್ಟೋಬರ್ 8ರಂದು ವಿಮಾನಯಾನ ಸಂಸ್ಥೆ ಹೇಳಿಕೆ ನೀಡಿದೆ.

ಸುರಕ್ಷತೆಯ ಕುರಿತ ಕಳವಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಗೋ ಕೂಡ ತನ್ನ ರಿಯಾದ್ ವಿಮಾನ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮೂಲಗಳ ಪ್ರಕಾರ, ಹೈದರಾಬಾದ್ನಿಂದ ರಿಯಾದ್‌ ಗೆ ಹೊರಟಿದ್ದ ಇಂಡಿಗೋದ 6E 93 ವಿಮಾನವನ್ನು ದಮಾಮ್ ಗೆ ತಿರುಗಿಸಲಾಗಿದೆ. ಅಲ್ಲದೆ, ದಿಲ್ಲಿ–ರಿಯಾದ್ ವಿಮಾನ ಸೇವೆಯನ್ನು ಅಂದಿನ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಅಕ್ಟೋಬರ್ 9ರಂದು ನಿಗದಿಯಾಗಿದ್ದ ದಿಲ್ಲಿ–ರಿಯಾದ್, ಮುಂಬೈ–ರಿಯಾದ್ ಮತ್ತು ಹೈದರಾಬಾದ್–ರಿಯಾದ್ ವಿಮಾನ ಸೇವೆಗಳನ್ನು ಆ ವಿಮಾನಯಾನ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಹೌತಿ ಬಂಡುಕೋರರು ಹೊಸ ದಾಳಿಯ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರಿಯಾದ್ ವಿಮಾನ ನಿಲ್ದಾಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ವಿಮಾನಯಾನ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿವೆ. ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಇದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಹೌತಿ ಸೇನಾ ವಕ್ತಾರ ಯಾಹ್ಯಾ ಸಾರೀ ತಿಳಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕಳೆದ ಎರಡು ದಿನಗಳಲ್ಲಿ ಅಭಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ಮಾರಣಾಂತಿಕ ದಾಳಿಗಳು ನಡೆದಿವೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಸೌದಿ ಅರೇಬಿಯದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪ್ರಕಾರ, ಈ ದಾಳಿಗಳಲ್ಲಿ ಮೂವರು ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿದ್ದಾರೆ.

►ಸೌದಿ ವಿಮಾನ ನಿಲ್ದಾಣಗಳ ಮೇಲೆ ಹಿಂದೆಯೂ ನಡೆದಿದ್ದ ದಾಳಿ

ರಿಯಾದ್ ವಿಮಾನ ನಿಲ್ದಾಣದ ಸಮೀಪವಿರುವ ಸೌದಿ ಸರಕಾರದ ಒಡೆತನದ ಅರಾಮ್ಕೊ (Aramco) ತೈಲ ಕಂಪೆನಿಯ ಇಂಧನ ಟ್ಯಾಂಕ್ ಗಳು ಮತ್ತು ಇತರ ಉಪಕರಣಗಳ ಸುತ್ತಲೂ ಈ ವಾರ ಹೊಸ ಪಂಜರದಂತಹ ತಂತಿ ಬೇಲಿಗಳನ್ನು ನಿರ್ಮಿಸಲಾಗಿದೆ.

ಸೆಪ್ಟೆಂಬರ್ 18ರಂದು, ರಿಯಾದ್ ವಿಮಾನ ನಿಲ್ದಾಣದ ಕಡೆಗೆ ಯೆಮೆನ್‌ ನಿಂದ ಹೌತಿ ಬಂಡುಕೋರರು ಹಾರಿಸಿದ್ದ ಕ್ಷಿಪಣಿಯೊಂದನ್ನು ತಡೆದು ನಾಶಪಡಿಸಲಾಗಿದೆ ಎಂದು ಸೌದಿ ನೇತೃತ್ವದ ಮೈತ್ರಿಕೂಟದ ಪಡೆಗಳು ತಿಳಿಸಿದ್ದವು.

ಮರುದಿನ, ಅಂದರೆ ಸೆಪ್ಟೆಂಬರ್ 19ರಂದು, ರಿಯಾದ್ ವಿಮಾನ ನಿಲ್ದಾಣದ ಬಳಿ ಕನಿಷ್ಠ ಒಂದು ಸ್ಫೋಟದ ಶಬ್ದ ಕೇಳಿಬಂದಿದ್ದು, ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಂಧನ ಸಂಗ್ರಹಣಾ ಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ಕಪ್ಪು ಹೊಗೆ ಮೇಲಕ್ಕೆ ಏರುತ್ತಿರುವುದು ಕಂಡುಬಂದಿದೆ.

ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಕಾರ್ಯತಂತ್ರದ ಬಾಬ್ ಅಲ್-ಮಂಡೆಬ್ ಜಲಸಂಧಿಯ ವಿಶಾಲ ಪ್ರದೇಶವನ್ನು ವಶಪಡಿಸಿಕೊಂಡಿರುವ ಇರಾನ್ ಬೆಂಬಲಿತ ಹೌತಿ ಪಡೆಗಳೊಂದಿಗೆ, ಯೆಮೆನ್ ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸರಕಾರದ ಸೌದಿ ಬೆಂಬಲಿತ ಪಡೆಗಳು ತೀವ್ರ ಹೋರಾಟ ನಡೆಸುತ್ತಿವೆ.

ಬುಧವಾರ ಬೆಳಿಗ್ಗೆ ಹೌತಿ ಬಂಡುಕೋರರು ಏಡನ್ ವಿಮಾನ ನಿಲ್ದಾಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ಗಳ ಮೂಲಕ ದಾಳಿ ನಡೆಸಿದ್ದಾರೆ ಎಂದು ಯೆಮೆನ್ ನ ಅಧಿಕೃತ ಸರಕಾರ ತಿಳಿಸಿದೆ. ಈ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.

ಈ ನಡುವೆ, ಸೌದಿ ಅರೇಬಿಯದಲ್ಲಿ ಮುಂದುವರಿದಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಿಯಾದ್ ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು ಅಲ್ಲಿರುವ ಅಮೆರಿಕನ್ನರಿಗೆ ಮತ್ತೊಂದು ಭದ್ರತಾ ಎಚ್ಚರಿಕೆ ನೀಡಿದ್ದು, ಎಲ್ಲರೂ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

►ಸೌದಿ ವಿಮಾನ ನಿಲ್ದಾಣಗಳ ಮೇಲಿನ ದಾಳಿಯನ್ನು ಖಂಡಿಸಿದ ಭಾರತ

ಸೌದಿ ವಿಮಾನ ನಿಲ್ದಾಣಗಳ ಮೇಲಿನ ದಾಳಿಯನ್ನು ಭಾರತ ಕಟುವಾಗಿ ಖಂಡಿಸಿದ್ದು, ಇಂತಹ ದಾಳಿಗಳು ಸ್ವೀಕಾರಾರ್ಹವಲ್ಲ ಎಂದು ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ರಿಯಾದ್ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಭಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ನಡೆದಿರುವ ದಾಳಿಗಳನ್ನು ಭಾರತ ಖಂಡಿಸುತ್ತದೆ. ಈ ದಾಳಿಗಳಲ್ಲಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

"ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಮ್ಮ ಸಂತಾಪವನ್ನು ಸೂಚಿಸುತ್ತೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸೌದಿ ಅರೇಬಿಯಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿರುವ ಭಾರತ, ಸೌದಿ ಜನತೆ ಮತ್ತು ಸರಕಾರದೊಂದಿಗೆ ನಿಲ್ಲುವುದಾಗಿ ಪುನರುಚ್ಚರಿಸಿದೆ.

ಅದೇ ವೇಳೆ, ಸೌದಿ ಅರೇಬಿಯದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ ಭಾರತೀಯ ರಾಯಭಾರ ಕಚೇರಿಯು ಸಲಹಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. "ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸೌದಿ ಅರೇಬಿಯ ಸಾಮ್ರಾಜ್ಯದಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರುವಂತೆ, ಅಗತ್ಯವಿದ್ದಾಗ ಮನೆಯಲ್ಲೇ ಇರುವಂತೆ ಹಾಗೂ ಅಧಿಕೃತ ಮಾಧ್ಯಮಗಳ ಮೂಲಕ ಸ್ಥಳೀಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ" ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಮುಂದುವರಿದು, ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದ ಯಾವುದೇ ವಿಡಿಯೊಗಳು ಅಥವಾ ಸುದ್ದಿಗಳನ್ನು ಹಂಚಿಕೊಳ್ಳಬಾರದು ಎಂದು ಭಾರತೀಯ ನಾಗರಿಕರಿಗೆ ಸೂಚಿಸಲಾಗಿದೆ.

NDTV ಉಲ್ಲೇಖಿಸಿರುವ ಮಾರ್ಗಸೂಚಿಯ ಪ್ರಕಾರ, ಜಿದ್ದಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕೂಡ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಅಗತ್ಯವಿದ್ದಂತೆ ಮುಂದಿನ ನವೀಕರಣಗಳು ಮತ್ತು ಮಾರ್ಗಸೂಚಿಗಳನ್ನು ನೀಡುವುದಾಗಿ ರಾಯಭಾರ ಕಚೇರಿ ತಿಳಿಸಿದೆ. ಪ್ರವಾಸಿ ಭಾರತೀಯ ಸಹಾಯ ಕೇಂದ್ರದ (PBSK) 24 ಗಂಟೆಗಳ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 8002471234 ಅನ್ನು ಒದಗಿಸಲಾಗಿದೆ.

►ಸೌದಿ ಅರೇಬಿಯದಲ್ಲಿದ್ದಾರೆ 27.4 ಲಕ್ಷ ಭಾರತೀಯರು

'ದಿ ಇಂಡಿಯನ್ ಎಕ್ಸ್ಪ್ರೆಸ್' ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಸೌದಿ ಅರೇಬಿಯದಲ್ಲಿ ಸುಮಾರು 27.4 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಈ ಸಮುದಾಯದಲ್ಲಿ ನುರಿತ ಮತ್ತು ಅರೆಕುಶಲ ಕಾರ್ಮಿಕರು, ವೃತ್ತಿಪರರು, ಉದ್ಯಮಿಗಳು ಹಾಗೂ ಇತರರು ಸೇರಿದ್ದಾರೆ. ಅಲ್ಲದೆ, ಭಾರತೀಯರ ಜನಸಂಖ್ಯೆ ಒಂದೇ ನಗರಕ್ಕೆ ಸೀಮಿತವಾಗಿಲ್ಲ. ರಿಯಾದ್, ಜಿದ್ದಾ ಮತ್ತು ದಮಾಮ್ ಸೇರಿದಂತೆ ಪ್ರಮುಖ ನಗರಗಳು ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಭಾರತೀಯರು ವಾಸಿಸುತ್ತಿದ್ದಾರೆ ಹಾಗೂ ಕೆಲಸ ಮಾಡುತ್ತಿದ್ದಾರೆ.

ಸೌದಿ ಅರೇಬಿಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಭಾರತೀಯರು ನೆಲೆಸಿರುವುದಕ್ಕೆ ಉದ್ಯೋಗಾವಕಾಶಗಳೇ ಪ್ರಮುಖ ಕಾರಣ. ತಾಂತ್ರಿಕ ಮತ್ತು ದೈಹಿಕ ಉದ್ಯೋಗಗಳಿಂದ ಹಿಡಿದು ವೃತ್ತಿಪರ ಹಾಗೂ ವ್ಯವಸ್ಥಾಪಕ ಹುದ್ದೆಗಳವರೆಗೆ ವಿವಿಧ ವೃತ್ತಿಗಳಲ್ಲಿ ಮತ್ತು ಕೌಶಲ್ಯ ಮಟ್ಟಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ.

ಅಲ್ಲದೆ, ಸೌದಿ ಅರೇಬಿಯದಲ್ಲಿ 'ಸೌದಿ ವಿಷನ್ 2030' (Saudi Vision 2030) ಎಂಬ ಆರ್ಥಿಕ ವೈವಿಧ್ಯೀಕರಣ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ. ಈ ಕಾರ್ಯಕ್ರಮವು ದೇಶದ ಆರ್ಥಿಕತೆಯ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಪ್ರವಾಸೋದ್ಯಮ, ತಂತ್ರಜ್ಞಾನ, ಡಿಜಿಟಲ್ ಸೇವೆಗಳು ಹಾಗೂ ವ್ಯಾಪಾರ ಸೇರಿದಂತೆ ಇತರ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಗಮನಹರಿಸಿದೆ.

ನವೆಂಬರ್ನಲ್ಲಿ ಸೌದಿ ಅರೇಬಿಯದಲ್ಲಿರುವ ಭಾರತೀಯ ವೃತ್ತಿಪರರೊಂದಿಗೆ NDTV ನಡೆಸಿದ ಸಂದರ್ಶನದ ಪ್ರಕಾರ, ರಿಯಾದ್ ವೃತ್ತಿಪರರು ಮತ್ತು ಕಾರ್ಮಿಕರನ್ನು ಹೆಚ್ಚು ಮುಕ್ತವಾಗಿ ಸ್ವಾಗತಿಸುತ್ತದೆ. ರಾಜಧಾನಿಯಲ್ಲಿ ಒಂದು ದಶಕದಿಂದ ವಾಸಿಸುತ್ತಿರುವ ಚಾರ್ಟರ್ಡ್ ಅಕೌಂಟೆಂಟ್ ನವೀನ್ ಗೋಯಲ್ NDTV ಜತೆ ಮಾತನಾಡಿ, "ಕೆಲಸದ ದೃಷ್ಟಿಯಿಂದ ರಿಯಾದ್ ಯಾವಾಗಲೂ ಸ್ವಾಗತಾರ್ಹವಾಗಿದೆ. ನಾನು 2015ರಲ್ಲಿ ಬಂದಿದ್ದೆ. ಆ ಸಮಯದಲ್ಲಿ ಬದಲಾವಣೆಗಳು ಆಗುತ್ತಿದ್ದವು. ನಾವು ಬೇರೆ ದೇಶಕ್ಕೆ ಸೇರಿದವರು ಎಂಬ ಭಾವನೆ ಇಲ್ಲಿ ಎಂದಿಗೂ ಮೂಡುವುದಿಲ್ಲ" ಎಂದಿದ್ದಾರೆ.

ಅವರ ಸಹೋದ್ಯೋಗಿ ಅವಿನಾಶ್ ಗುಪ್ತಾ ಮಾತನಾಡಿ, "ನಮ್ಮ ಪ್ರಧಾನಿಯವರ ದೃಷ್ಟಿಕೋನವನ್ನು ಈಡೇರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಬಿಗ್ ಫೋರ್ (Big Four)ನಂತಹ ಭಾರತೀಯ ಕಂಪೆನಿಯನ್ನು ನಿರ್ಮಿಸುವ ಉದ್ದೇಶ ನಮ್ಮದು. ನಮ್ಮೊಂದಿಗೆ ಭಾರತದಲ್ಲಿ ಸುಮಾರು 450 ಜನರು ಕೆಲಸ ಮಾಡುತ್ತಾರೆ. ನಾವು ದುಬೈನಲ್ಲಿ ಪ್ರಾರಂಭಿಸಿದೆವು. ಬಳಿಕ ರಿಯಾದ್ ನಲ್ಲೂ ಆರಂಭಿಸಿದೆವು" ಎಂದು ಹೇಳಿದರು.

ಕೆಲಸದ ಹೊರತಾಗಿ, ಭಾರತೀಯರು ಸೌದಿ ಅರೇಬಿಯಕ್ಕೆ ಪ್ರಯಾಣಿಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಟುಗಳೂ ಕಾರಣವಾಗಿವೆ. ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ಎರಡು ನಗರಗಳಾದ ಮಕ್ಕಾ ಮತ್ತು ಮದೀನಾ ಸೌದಿ ಅರೇಬಿಯದಲ್ಲಿವೆ. ಭಾರತದಲ್ಲಿರುವ 20 ಕೋಟಿಗೂ ಅಧಿಕ ಮುಸ್ಲಿಮರಲ್ಲಿ ದೊಡ್ಡ ಸಂಖ್ಯೆಯ ಜನರು ಹಜ್ ಹಾಗೂ ಉಮ್ರಾ ಯಾತ್ರೆಗಾಗಿ ಈ ಎರಡು ನಗರಗಳಿಗೆ ಪ್ರಯಾಣಿಸುತ್ತಾರೆ. ಈ ಪ್ರಯಾಣಗಳು ಎರಡೂ ದೇಶಗಳ ನಡುವೆ ಪ್ರತ್ಯೇಕ ಮತ್ತು ಗಣನೀಯ ಪ್ರಮಾಣದ ಸಂಚಾರ ಮಾರ್ಗವನ್ನು ಸೃಷ್ಟಿಸುತ್ತವೆ.

ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಭಾರತದ ವಾರ್ಷಿಕ ಹಜ್ ಕೋಟಾ 1,75,025 ಯಾತ್ರಿಗಳು. ಹಜ್ ಯಾತ್ರೆಯು ಸಾರಿಗೆ, ವಸತಿ, ಪರವಾನಗಿಗಳು ಮತ್ತು ಇತರ ಸೇವೆಗಳ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಆದ್ದರಿಂದ, ವಿಮಾನ ನಿಲ್ದಾಣಗಳು ಅಥವಾ ವಿಮಾನ ವೇಳಾಪಟ್ಟಿಯಲ್ಲಿ ಉಂಟಾಗುವ ವ್ಯತ್ಯಯಗಳು ಯಾತ್ರೆಯ ಸಂದರ್ಭದಲ್ಲಿ ಪ್ರಯಾಣಿಸುವ ಯಾತ್ರಿಕರ ಮೇಲೆ ಪರಿಣಾಮ ಬೀರಬಹುದು.

►ದಾಳಿಗಳು ಭಾರತೀಯರ ಮೇಲೆ ಮತ್ತು ಅವರ ಪ್ರಯಾಣದ ಮೇಲೆ ಹೇಗೆ ಪರಿಣಾಮ ಬೀರಬಹುದು?

ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ವಿಮಾನ ಸಂಚಾರದ ಮೇಲ್ವಿಚಾರಣಾ ಸಂಸ್ಥೆಯಾದ 'ಫ್ಲೈಟ್ಅವೇರ್' (FlightAware) ದತ್ತಾಂಶದ ಆಧಾರದ ಮೇಲೆ, ಅಕ್ಟೋಬರ್ 8ರಂದು ವಿಮಾನ ನಿಲ್ದಾಣದಲ್ಲಿ 275ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಂದು ನಿಗದಿಯಾಗಿದ್ದ ಒಟ್ಟು ಆಗಮನಗಳ ಪೈಕಿ ಶೇ. 40ರಷ್ಟು ಮತ್ತು ನಿರ್ಗಮನಗಳ ಪೈಕಿ ಶೇ 30ರಷ್ಟು ವಿಮಾನಗಳು ರದ್ದಾಗಿವೆ.

ಹಲವಾರು ವಿಮಾನಯಾನ ಸಂಸ್ಥೆಗಳು ತಮ್ಮ ನಿಗದಿತ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಏರ್ ಇಂಡಿಯಾ ಸಂಸ್ಥೆಯು ಅಕ್ಟೋಬರ್ 10ರವರೆಗೆ ರಿಯಾದ್‌ ಗೆ ಮತ್ತು ಅಲ್ಲಿಂದ ಬರುವ ಸೇವೆಗಳನ್ನು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ, ದಿಲ್ಲಿಯಿಂದ ರಿಯಾದ್‌ ಗೆ ಹೊರಟಿದ್ದ ವಿಮಾನವೊಂದು ವಾಪಸ್ ದಿಲ್ಲಿಗೆ ಬಂದಿದ್ದು, ಬಳಿಕ ಅದರ ಸಂಚಾರವನ್ನು ರದ್ದುಗೊಳಿಸಲಾಯಿತು. ಹಾಗೆಯೇ, ಆಕಾಶ ಏರ್ ಮತ್ತು ಇಂಡಿಗೋ ಸಂಸ್ಥೆಗಳು ತಮ್ಮ ವಿಮಾನಗಳ ಸಂಚಾರವನ್ನು ಕ್ರಮವಾಗಿ ಅಕ್ಟೋಬರ್ 9 ಮತ್ತು ಅಕ್ಟೋಬರ್ 10ರವರೆಗೆ ರದ್ದುಗೊಳಿಸಿವೆ.

ಆದರೆ, ಭಾರತ ಮತ್ತು ಸೌದಿ ಅರೇಬಿಯ ನಡುವಿನ ಎಲ್ಲ ಮಾರ್ಗಗಳ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಭಾವಿಸುವುದು ಸರಿಯಲ್ಲ. ಅಧಿಕೃತ ಮಾಹಿತಿಯ ಪ್ರಕಾರ, ರಿಯಾದ್‌ ಗೆ ಸಂಬಂಧಿಸಿದ ವಿಮಾನ ಸೇವೆಗಳಲ್ಲಿ ಮಾತ್ರ ವ್ಯತ್ಯಯ ಉಂಟಾಗಿದೆಯೇ ಹೊರತು, ಎರಡೂ ದೇಶಗಳನ್ನು ಸಂಪರ್ಕಿಸುವ ಎಲ್ಲ ವಿಮಾನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor