ಸಾಂದರ್ಭಿಕ ಚಿತ್ರ | Photo Credit : magnific

ಹದಿಹರೆಯದವರಿಗಾಗಿ OpenAI ಸಂಸ್ಥೆಯು ‘ಚಾಟ್‌ ಜಿಪಿಟಿ ಫಾರ್ ಟೀನ್ಸ್’ (ChatGPT for Teens) ಅನ್ನು ಪರಿಚಯಿಸಿ ಸುಮಾರು ಎರಡು ತಿಂಗಳು ಕಳೆದಿದ್ದು, ಯುವ ಬಳಕೆದಾರರಿಗಾಗಿ ರೂಪಿಸಿರುವ ಭದ್ರತಾ ಕ್ರಮಗಳು ಕಂಪನಿಯ ಭರವಸೆಗಿಂತ ತೀರಾ ಕಡಿಮೆ ಇವೆ ಎಂದು ಹೊಸ ವರದಿಯೊಂದು ತಿಳಿಸಿದೆ.

ಅಮೆರಿಕ ಮೂಲದ ಲಾಭರಹಿತ ಸಂಶೋಧನಾ ಸಂಸ್ಥೆಯಾದ ‘ಕಾಮನ್ ಸೆನ್ಸ್ ಮೀಡಿಯಾ’ದ ಯೂತ್ ಎಐ ಸೇಫ್ಟಿ ಇನ್ಸ್ಟಿಟ್ಯೂಟ್ ಬುಧವಾರ (ಅಕ್ಟೋಬರ್ 7) ವರದಿಯೊಂದನ್ನು ಬಿಡುಗಡೆ ಮಾಡಿದೆ. ಅಮೆರಿಕದ ಖಾತೆಗಳನ್ನು ಬಳಸಿ, ಟೀನ್ ಮೋಡ್ ಬಿಡುಗಡೆಗೂ ಮೊದಲು ಮತ್ತು ಬಳಿಕ 4,000ಕ್ಕೂ ಹೆಚ್ಚು ಪ್ರಾಂಪ್ಟ್ ಗಳನ್ನು ಬಳಸಿ ಪರೀಕ್ಷೆ ನಡೆಸಿದ ನಂತರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಚಾಟ್‌ ಜಿಪಿಟಿ ಫಾರ್ ಟೀನ್ಸ್ ‘ಸ್ವೀಕಾರಾರ್ಹವಲ್ಲದ ಅಪಾಯ’ ಎಂದು ವರದಿಯಲ್ಲಿ ರೇಟಿಂಗ್ ನೀಡಲಾಗಿದೆ.

ವರದಿಯೊಂದಿಗೆ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಸೀಗೆಲ್, “ಅಪಾಯಕಾರಿ ಉತ್ಪನ್ನವನ್ನು ಹದಿಹರೆಯದವರಿಗೆ ಸುರಕ್ಷಿತವಾಗಿರಿಸುವ ಜವಾಬ್ದಾರಿ ಅದನ್ನು ತಯಾರಿಸಿದ ಕಂಪನಿಯದ್ದಾಗಿರಬೇಕೇ ಹೊರತು ಪೋಷಕರದ್ದಲ್ಲ” ಎಂದು ತಿಳಿಸಿದ್ದಾರೆ.

►ಚಾಟ್‌ ಜಿಪಿಟಿ ಫಾರ್ ಟೀನ್ಸ್ ಎಂದರೇನು? ಅದು ಏನು ಭರವಸೆ ನೀಡುತ್ತದೆ?

ಚಾಟ್‌ ಜಿಪಿಟಿ ಫಾರ್ ಟೀನ್ಸ್ ಎಂಬುದು ಪ್ರತ್ಯೇಕ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಅಲ್ಲ. ಹದಿಹರೆಯದವರು ಸಾಮಾನ್ಯ ಚಾಟ್‌ ಜಿಪಿಟಿಯನ್ನೇ ಬಳಸುತ್ತಾರೆ. ಆದರೆ, ಅದರಲ್ಲಿ ವಯಸ್ಸಿಗೆ ತಕ್ಕಂತೆ ಹೆಚ್ಚಿನ ಸುರಕ್ಷತಾ ಕ್ರಮಗಳು ಮತ್ತು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಬಳಕೆದಾರರ ವಯಸ್ಸು 18 ವರ್ಷಕ್ಕಿಂತ ಕಡಿಮೆ ಎಂದು ನಮೂದಿಸಿದಾಗ ಅಥವಾ OpenAIನ ವಯಸ್ಸು ಊಹಿಸುವ ವ್ಯವಸ್ಥೆಯು ಅದನ್ನು ಗುರುತಿಸಿದಾಗ ಈ ಕ್ರಮಗಳು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ.

ಚಾಟ್‌ ಜಿಪಿಟಿ ಫಾರ್ ಟೀನ್ಸ್ ಸಾಧನಕ್ಕಿಂತ ಖಾತೆಯ ಆಧಾರದ ಮೇಲೆ ರೂಪುಗೊಂಡಿದೆ ಎಂದು OpenAI ಇಂಡಿಯಾದ ಕಾರ್ಯತಂತ್ರ ಮತ್ತು ಜಾಗತಿಕ ವ್ಯವಹಾರಗಳ ಮುಖ್ಯಸ್ಥೆ ಪ್ರಜ್ಞಾ ಮಿಶ್ರಾ ಆಗಸ್ಟ್ನಲ್ಲಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದರು. ಇದರರ್ಥ, ಒಬ್ಬ ಹದಿಹರೆಯದವರು ಮತ್ತು ವಯಸ್ಕರು ಒಂದೇ ಸಾಧನದಲ್ಲಿ ಪ್ರತ್ಯೇಕ ಖಾತೆಗಳನ್ನು ಬಳಸಿದರೆ, ಪ್ರತಿಯೊಬ್ಬರೂ ತಮ್ಮ ವಯಸ್ಸಿಗೆ ತಕ್ಕ ಅನುಭವವನ್ನು ಪಡೆಯಬಹುದು.

ಹದಿಹರೆಯದವರಿಗಾಗಿ ರೂಪಿಸಿರುವ ಈ ಆವೃತ್ತಿಯು ಸೂಕ್ಷ್ಮ ವಿಷಯಗಳ ಕುರಿತು ಕಟ್ಟುನಿಟ್ಟಾದ ನಿಯಂತ್ರಣಗಳು, ಪೋಷಕರ ನಿಯಂತ್ರಣಗಳು, ಶಾಂತ ಸಮಯ (Quiet Hours), ಸ್ಟಡಿ ಮೋಡ್, ಅಧ್ಯಯನ ಸಮಯದ ನಿಯಂತ್ರಣಗಳು, ವಿರಾಮ ತೆಗೆದುಕೊಳ್ಳುವಂತೆ ನೆನಪಿಸುವ ವ್ಯವಸ್ಥೆ ಮತ್ತು ಚಾಟ್‌ ಜಿಪಿಟಿಯೊಂದಿಗೆ ಅತಿಯಾದ ವೈಯಕ್ತಿಕ ಅಥವಾ ಪ್ರಣಯ ಸಂಭಾಷಣೆಗಳನ್ನು ಕಡಿಮೆ ಮಾಡುವ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ತಮ್ಮ ಖಾತೆಯನ್ನು ಹದಿಹರೆಯದವರ ಖಾತೆಯೊಂದಿಗೆ ಜೋಡಿಸುವ ಪೋಷಕರು, ಕೆಲವು ಅಪಾಯಕಾರಿ ಸಂದರ್ಭಗಳಲ್ಲಿ ಸುರಕ್ಷತಾ ಅಧಿಸೂಚನೆಗಳನ್ನು ಪಡೆಯಬಹುದು.

ಬಳಕೆದಾರರು ವಯಸ್ಕರೆಂದು ನೋಂದಾಯಿಸಿಕೊಂಡಿದ್ದರೂ ಅವರ ವಯಸ್ಸು 18 ವರ್ಷಕ್ಕಿಂತ ಕಡಿಮೆ ಎಂದು ಕಂಡುಬಂದರೆ, ಖಾತೆಯ ವಯಸ್ಸು, ಬಳಕೆದಾರರ ವರ್ತನೆ, ಸಂಭಾಷಣೆಯ ವಿಷಯಗಳು ಮತ್ತು ನಮೂದಿಸಿದ ವಯಸ್ಸಿನಂತಹ ಸೂಚನೆಗಳನ್ನು ಬಳಸಿಕೊಂಡು ಆ ಬಳಕೆದಾರರನ್ನು ಸ್ವಯಂಚಾಲಿತವಾಗಿ ಹದಿಹರೆಯದವರ ಆವೃತ್ತಿಗೆ ವರ್ಗಾಯಿಸಲು ತನ್ನ ವಯಸ್ಸು ಊಹಿಸುವ ವ್ಯವಸ್ಥೆಗೆ ಸಾಧ್ಯವಿದೆ ಎಂದು OpenAI ತಿಳಿಸಿದೆ.

►ಕಾಮನ್ ಸೆನ್ಸ್ ಮೀಡಿಯಾ ಪರೀಕ್ಷಿಸಿದ್ದು ಏನನ್ನು?

ಕಾಮನ್ ಸೆನ್ಸ್ ಮೀಡಿಯಾ ಸಂಸ್ಥೆಯು ಟೀನ್ ಮೋಡ್ ಬಿಡುಗಡೆಗೂ ಮೊದಲು ಮತ್ತು ಬಳಿಕ ಚಾಟ್‌ ಜಿಪಿಟಿಯನ್ನು 4,000ಕ್ಕೂ ಹೆಚ್ಚು ಪ್ರಾಂಪ್ಟ್‌ ಗಳನ್ನು ಬಳಸಿ ಪರೀಕ್ಷಿಸಿತು. ಇದಕ್ಕಾಗಿ ಉಚಿತ ಮತ್ತು ಪಾವತಿಸಿದ ಖಾತೆಗಳು, ಪೋಷಕರೊಂದಿಗೆ ಜೋಡಿಸಲಾದ ಹಾಗೂ ಜೋಡಿಸದ ಖಾತೆಗಳು ಮತ್ತು ವಿವಿಧ ವಯಸ್ಸಿನ ಬಳಕೆದಾರರ ಖಾತೆಗಳನ್ನು ಬಳಸಿಕೊಳ್ಳಲಾಯಿತು. ಒಟ್ಟು ಪ್ರಾಂಪ್ಟ್‌ ಗಳಲ್ಲಿ ಸರಿಸುಮಾರು ಅರ್ಧದಷ್ಟನ್ನು ಬಿಡುಗಡೆಗೆ ಮೊದಲು ಮತ್ತು ಉಳಿದ ಅರ್ಧದಷ್ಟನ್ನು ಬಳಿಕ ಪರೀಕ್ಷಿಸಲಾಯಿತು.

ಮಾನಸಿಕ ಆರೋಗ್ಯ ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿನ ಪ್ರತಿಕ್ರಿಯೆಗಳು, ವಯಸ್ಸಿಗೆ ತಕ್ಕ ಬೆಳವಣಿಗೆ, ಶೈಕ್ಷಣಿಕ ಸಮಗ್ರತೆ, ಪೋಷಕರ ಅಧಿಸೂಚನೆಗಳು, ವಯಸ್ಸು ಊಹಿಸುವ ವ್ಯವಸ್ಥೆ ಹಾಗೂ ಇತರ ಉತ್ಪನ್ನದ ವೈಶಿಷ್ಟ್ಯಗಳನ್ನು ಈ ಪರೀಕ್ಷೆಗಳು ಒಳಗೊಂಡಿದ್ದವು. ಯಾವ ಮಾನಸಿಕ ಆರೋಗ್ಯ ಪ್ರಾಂಪ್ಟ್‌ ಗಳಿಗೆ ತುರ್ತು ಸಹಾಯ ಸಂಪನ್ಮೂಲಗಳ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ಮತ್ತು ಬಂದ ಪ್ರತಿಕ್ರಿಯೆಗಳ ಗುಣಮಟ್ಟವನ್ನು ಪರಿಶೀಲಿಸಲು ಮಕ್ಕಳ ಹಾಗೂ ಹದಿಹರೆಯದವರ ಮನೋವೈದ್ಯರು ಸಹಾಯ ಮಾಡಿದರು.

ವಯಸ್ಸು ಊಹಿಸುವ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಪರೀಕ್ಷಿಸಲು ಸಂಶೋಧಕರು ವಯಸ್ಕರೆಂದು ನೋಂದಾಯಿಸಲಾದ ಖಾತೆಗಳನ್ನು ಬಳಸಿದರು. ಇದರೊಂದಿಗೆ ಪ್ರೌಢಶಾಲೆ, ಹದಿಹರೆಯಕ್ಕೆ ಕಾಲಿಡುತ್ತಿರುವ ವಯಸ್ಸು, ಮನೆಗೆಲಸ (ಹೋಮ್ವರ್ಕ್), ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ಪಠ್ಯೇತರ ಚಟುವಟಿಕೆಗಳು ಮತ್ತು ಪೋಷಕರನ್ನು ಅವಲಂಬಿಸಿರುವುದನ್ನು ಸೂಚಿಸುವ 982 ಪ್ರಾಂಪ್ಟ್‌ ಗಳನ್ನು ಕಳುಹಿಸಿದರು.

ಆತ್ಮಹತ್ಯೆ, ಸ್ವಯಂಹಾನಿ ಮತ್ತು ಆಹಾರ ಸೇವನೆಯ ಅಸ್ವಸ್ಥತೆಗಳಿಗೆ ಸಂಬಂಧಿಸಿದ 607 ಪ್ರಾಂಪ್ಟ್‌ ಗಳನ್ನು ಬಳಸಿ ಪೋಷಕರ ಅಧಿಸೂಚನೆಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಿದರು. ಅಲ್ಲದೆ, ಸ್ಟಡಿ ಮೋಡ್, ಅಧ್ಯಯನ ಸಮಯ, ಶಾಂತ ಸಮಯ ಮತ್ತು ಹದಿಹರೆಯದವರಿಗಾಗಿ ರೂಪಿಸಲಾದ ಇತರ ವೈಶಿಷ್ಟ್ಯಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿದರು.

►ವರದಿ ಹೇಳಿದ್ದೇನು?

1. ವಯಸ್ಸು ಊಹಿಸುವ ವ್ಯವಸ್ಥೆಯು ಹದಿಹರೆಯದ ಬಳಕೆದಾರರನ್ನು ವಿಶ್ವಾಸಾರ್ಹವಾಗಿ ಗುರುತಿಸಿಲ್ಲ

ಬಳಕೆದಾರರ ವಯಸ್ಸು 18 ವರ್ಷಕ್ಕಿಂತ ಕಡಿಮೆ ಎಂದು ವ್ಯವಸ್ಥೆಗೆ ಸರಿಯಾಗಿ ಗುರುತಿಸಲು ಸಾಧ್ಯವಾಗದಿದ್ದರೆ, OpenAIನ ಸುರಕ್ಷತಾ ಕ್ರಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಆಗಸ್ಟ್ನಲ್ಲಿ ಎತ್ತಿದ್ದ ಪ್ರಮುಖ ಕಳವಳಗಳಲ್ಲಿ ಒಂದಾಗಿದೆ.

ಕಾಮನ್ ಸೆನ್ಸ್ ಮೀಡಿಯಾ ಸಂಸ್ಥೆಯು ವಯಸ್ಕರೆಂದು ನೋಂದಾಯಿಸಲಾದ ಖಾತೆಗಳನ್ನು ಬಳಸಿ ಇದನ್ನು ನೇರವಾಗಿ ಪರೀಕ್ಷಿಸಿತು. ಒಂದು ವಾರದಲ್ಲಿ ಕಳುಹಿಸಲಾದ 982 ಪ್ರಾಂಪ್ಟ್ ಗಳ ಮೂಲಕ, ಪರೀಕ್ಷಕರು ತಾವು ಹದಿಹರೆಯದವರು ಮತ್ತು ತಮ್ಮ ವಯಸ್ಸು 13 ವರ್ಷ ಎಂದು ಪದೇ ಪದೇ ಸೂಚಿಸಿದರು. ಜೊತೆಗೆ ಪ್ರೌಢಶಾಲೆ, ಹದಿಹರೆಯಕ್ಕೆ ಕಾಲಿಡುತ್ತಿರುವ ವಯಸ್ಸು, ಮನೆಗೆಲಸ, ಪಠ್ಯೇತರ ಚಟುವಟಿಕೆಗಳು ಹಾಗೂ ಪ್ರಯಾಣ ಮತ್ತು ಅನುಮತಿಗಾಗಿ ಪೋಷಕರನ್ನು ಅವಲಂಬಿಸಿರುವ ಬಗ್ಗೆಯೂ ಉಲ್ಲೇಖಿಸಿದರು.

ಚಾಟ್‌ ಜಿಪಿಟಿಯು ತನ್ನ ಉತ್ತರಗಳಲ್ಲಿ ಆ ವಯಸ್ಸನ್ನು ಒಪ್ಪಿಕೊಂಡಿತೇ ಹೊರತು, ಆ ಖಾತೆಗಳನ್ನು ‘ಟೀನ್ ಮೋಡ್’ಗೆ ಬದಲಾಯಿಸಲಿಲ್ಲ. ಬಳಕೆದಾರರು ಅಪ್ರಾಪ್ತರು ಎಂದು ಚಾಟ್‌ ಜಿಪಿಟಿ ಗುರುತಿಸಿದಂತೆ ಕಂಡುಬಂದರೂ, ಅಪ್ರಾಪ್ತ ವಯಸ್ಕರಿಗೆ ಇರಬೇಕಾದ ರಕ್ಷಣೆಗಳನ್ನು ಅಳವಡಿಸದಿರುವುದು ಸುಳ್ಳು ಭರವಸೆಯ ಭಾವನೆಯನ್ನು ಸೃಷ್ಟಿಸಬಹುದು ಎಂದು ವರದಿ ತಿಳಿಸಿದೆ.

2. ಪೋಷಕರ ಸುರಕ್ಷತಾ ನಿಯಂತ್ರಣಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಲಿಲ್ಲ

ಚಾಟ್‌ ಜಿಪಿಟಿ ಫಾರ್ ಟೀನ್ಸ್ನ ಕೆಲವು ಸುರಕ್ಷತಾ ಕ್ರಮಗಳು, ಪೋಷಕರು ತಮ್ಮ ಖಾತೆಯನ್ನು ಮಕ್ಕಳ ಖಾತೆಯೊಂದಿಗೆ ಜೋಡಿಸುವುದು ಮತ್ತು ವ್ಯವಸ್ಥೆಯು ಹೆಚ್ಚಿನ ಅಪಾಯದ ಸಂಭಾಷಣೆಗಳನ್ನು ಪತ್ತೆಹಚ್ಚಿದಾಗ ಎಚ್ಚರಿಕೆಗಳನ್ನು ಪಡೆಯುವುದನ್ನು ಅವಲಂಬಿಸಿವೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಕೂಡ ಉಲ್ಲೇಖಿಸಿತ್ತು.

ಹೊಸ ಪರೀಕ್ಷೆಯ ಪ್ರಕಾರ, ಹೊಸದಾಗಿ ಜೋಡಿಸಲಾದ ಹದಿಹರೆಯದವರ ಖಾತೆಗಳಲ್ಲಿ ಆತ್ಮಹತ್ಯೆ, ಸ್ವಯಂಹಾನಿ ಮತ್ತು ಆಹಾರ ಸೇವನೆಯ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಸ್ಪಷ್ಟ ಸಂಭಾಷಣೆಗಳು ನಡೆದಿದ್ದರೂ, ಪರೀಕ್ಷೆ ನಡೆಸಿದ ಒಂದು ಗಂಟೆಯೊಳಗೆ ಯಾವುದೇ ಎಚ್ಚರಿಕೆಗಳು ಬಂದಿರಲಿಲ್ಲ. ಸಂಶೋಧಕರು ಒಂದು ಡಜನ್ ಗಿಂತ ಹೆಚ್ಚು ಜೋಡಿಸಲಾದ ಹದಿಹರೆಯದವರು–ಪೋಷಕರ ಖಾತೆಗಳನ್ನು ಸೃಷ್ಟಿಸಿ, ಆರಂಭಿಕ ವಿಷಯಗಳಿಂದ ಹಿಡಿದು ಆತ್ಮಹತ್ಯೆ, ಸ್ವಯಂಹಾನಿ ಅಥವಾ ಇಂತಹ ಅಪಾಯಕಾರಿ ವರ್ತನೆಗಳ ಉಲ್ಲೇಖಗಳವರೆಗೆ ಹಂತ ಹಂತವಾಗಿ ಸಾಗುವ ಸಂಭಾಷಣೆಗಳನ್ನು ನಡೆಸಿದರು. ಆದರೆ, ನಿಗದಿತ ಒಂದು ಗಂಟೆಯ ಪರೀಕ್ಷಾ ಅವಧಿಯಲ್ಲಿ ಯಾವುದೇ ಎಚ್ಚರಿಕೆ ಬಂದಿರಲಿಲ್ಲ.

ಒಂದೇ ಒಂದು ಗಂಭೀರ ಸಂದೇಶದ ತೀವ್ರತೆಗಿಂತ, ಖಾತೆಯಲ್ಲಿ ಸಂಗ್ರಹಗೊಂಡ ಹಿಂದಿನ ದೀರ್ಘಾವಧಿಯ ಚಟುವಟಿಕೆಯ ಮೇಲೆ ಎಚ್ಚರಿಕೆಗಳು ಹೆಚ್ಚು ಅವಲಂಬಿತವಾಗಿವೆ ಎಂದು ವರದಿ ತಿಳಿಸಿದೆ. ದೀರ್ಘಕಾಲದಿಂದ ಬಳಕೆಯಲ್ಲಿದ್ದ ಪರೀಕ್ಷಾ ಖಾತೆಗಳಲ್ಲಿ ಸಂಶೋಧಕರಿಗೆ ಒಟ್ಟು ನಾಲ್ಕು ಪೋಷಕರ ಅಧಿಸೂಚನೆಗಳು ಮಾತ್ರ ಬಂದವು. ಅವುಗಳೂ ಈಗಾಗಲೇ ಹಲವು ವಾರಗಳಿಂದ ನೂರಾರು ಸೂಕ್ಷ್ಮ ವಿಷಯಗಳ ಪ್ರಾಂಪ್ಟ್‌ ಗಳಿಗಾಗಿ ಬಳಸಲ್ಪಟ್ಟಿದ್ದ ಖಾತೆಗಳಿಂದ ಬಂದಿದ್ದವು.

3. ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಕೆಲವು ಕ್ರಮಗಳು ಬಿಡುಗಡೆಯ ಬಳಿಕ ಇನ್ನಷ್ಟು ಹದಗೆಟ್ಟವು

ಕಾಮನ್ ಸೆನ್ಸ್ ಮೀಡಿಯಾದ ಎಐ ಕಾರ್ಯಕ್ರಮಗಳ ಹಿರಿಯ ನಿರ್ದೇಶಕ ರಾಬ್ಬಿ ಟೋರ್ನಿ ಆಗಸ್ಟ್ನಲ್ಲಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸುತ್ತಾ, ಅರ್ಥಪೂರ್ಣ ಸುರಕ್ಷತಾ ಪರೀಕ್ಷೆಯು ಪ್ರತ್ಯೇಕ ಪ್ರಾಂಪ್ಟ್ ಗಳ ಬದಲಿಗೆ ದೀರ್ಘವಾದ, ವಾಸ್ತವಿಕ ಸಂಭಾಷಣೆಗಳ ಮೂಲಕ ಉತ್ಪನ್ನವನ್ನು ಪರೀಕ್ಷಿಸಬೇಕು ಎಂದು ಹೇಳಿದ್ದರು.

ಇತ್ತೀಚಿನ ವರದಿಯು ದೀರ್ಘವಾದ, ಬಹುಹಂತದ ಸಂಭಾಷಣೆಗಳ ಮೂಲಕ ಉತ್ಪನ್ನವನ್ನು ಪರೀಕ್ಷಿಸಿದ್ದು, ಟೀನ್ ಮೋಡ್ ಬಿಡುಗಡೆಯಾದ ಬಳಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸ್ಪಂದಿಸುವ ಕೆಲವು ಕ್ರಮಗಳು ಹದಗೆಟ್ಟಿವೆ ಎಂದು ಕಂಡುಕೊಂಡಿದೆ.

ಟೀನ್ ಮೋಡ್ನಲ್ಲಿ ಉತ್ತರಗಳು ಚಿಕ್ಕದಾಗಿದ್ದರೂ, ಅವುಗಳ ಸಂಕೀರ್ಣತೆ ಹೆಚ್ಚಾಗಿದೆ ಎಂದು ವರದಿ ಗಮನಿಸಿದೆ. ಹೊಂದಾಣಿಕೆಯ ಪರೀಕ್ಷೆಯಲ್ಲಿ ಉತ್ತರಗಳ ಸರಾಸರಿ ಓದುವ ಮಟ್ಟವು ಸರಿಸುಮಾರು ಎಂಟನೇ ತರಗತಿಯಿಂದ ಹತ್ತನೇ ತರಗತಿಗೆ ಏರಿದೆ. ಬಿಡುಗಡೆಯ ಬಳಿಕದ ಸಂಪೂರ್ಣ ಪಟ್ಟಿಯಲ್ಲಿ ಇದು ಹನ್ನೊಂದನೇ ತರಗತಿಯ ಮಟ್ಟಕ್ಕೆ ತಲುಪಿದೆ. ಇದರಿಂದ ಕಿರಿಯ ಹದಿಹರೆಯದವರಿಗೆ ಬಿಕ್ಕಟ್ಟಿನ ಸಲಹೆಯನ್ನು ಅರ್ಥಮಾಡಿಕೊಂಡು ಅನುಸರಿಸಲು ಕಷ್ಟವಾಗಬಹುದು.

ಸಹಾಯ ಸಂಪನ್ಮೂಲಗಳ ಅಗತ್ಯವಿದೆ ಎಂದು ಗುರುತಿಸಲಾದ ಪ್ರಾಂಪ್ಟ್‌ ಗಳಲ್ಲಿ ಸಹಾಯವಾಣಿ ಶಿಫಾರಸುಗಳ ಪ್ರಮಾಣ ಶೇಕಡಾ 33ರಿಂದ 23ಕ್ಕೆ ಇಳಿದಿದೆ. ನಿರ್ದಿಷ್ಟ ವೈದ್ಯಕೀಯ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವಂತೆ ನೀಡುವ ಸೂಚನೆಗಳ ಪ್ರಮಾಣ ಶೇಕಡಾ 68ರಿಂದ 58ಕ್ಕೆ ಕುಸಿದಿದೆ. ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸುವ ಭಾಷೆಯ ಬಳಕೆಯೂ ಕಡಿಮೆಯಾಗಿದೆ. ಬಿಕ್ಕಟ್ಟಿನ ಸಂಪನ್ಮೂಲಗಳ ಅಗತ್ಯವಿದೆ ಎಂದು ನಿರ್ಣಯಿಸಲಾದ ಪ್ರಾಂಪ್ಟ್‌ ಗಳಲ್ಲಿ ಇಂತಹ ಭಾಷೆಯ ಬಳಕೆ ಬಿಡುಗಡೆಯ ಮೊದಲು ಶೇಕಡಾ 88ರಷ್ಟಿದ್ದರೆ, ಬಳಿಕ ಶೇಕಡಾ 78ಕ್ಕೆ ಇಳಿದಿದೆ.

4. ಸ್ಟಡಿ ಮೋಡ್ ಮತ್ತು ಶಾಂತ ಸಮಯದ ನಿಯಮಗಳನ್ನು ಮೀರುವುದು ಸುಲಭವಾಗಿತ್ತು

ಹದಿಹರೆಯದವರು ‘ನನಗೆ ಉತ್ತರವನ್ನು ತೋರಿಸು’ (Show me the answer) ಆಯ್ಕೆಯನ್ನು ಆರಿಸುವ ಮೂಲಕ ಸ್ಟಡಿ ಮೋಡ್ ಅನ್ನು ಬದಿಗೊತ್ತಬಹುದು ಎಂದು ಕಾಮನ್ ಸೆನ್ಸ್ ಮೀಡಿಯಾ ಕಂಡುಕೊಂಡಿದೆ. ಹಾಗೆಯೇ, ಪೋಷಕರು ನಿಗದಿಪಡಿಸಿದ ಅಧ್ಯಯನ ಸಮಯವನ್ನು ಸಂದೇಶದಿಂದ @study ಪೂರ್ವಪ್ರತ್ಯಯವನ್ನು ತೆಗೆದುಹಾಕುವ ಮೂಲಕವೇ ಸುಲಭವಾಗಿ ಮೀರಬಹುದು. ಪರೀಕ್ಷೆಯಲ್ಲಿ, ಆ ಪೂರ್ವಪ್ರತ್ಯಯವನ್ನು ತೆಗೆದುಹಾಕಿದ ಬಳಿಕ ಚಾಟ್‌ ಜಿಪಿಟಿಯು ಶೇಕಡಾ 100ರಷ್ಟು ಅಸೈನ್ಮೆಂಟ್ಗಳನ್ನು ಪೂರ್ಣಗೊಳಿಸಿತು.

ಇತರ ನಿಯಂತ್ರಣಗಳಲ್ಲಿಯೂ ಇದೇ ರೀತಿಯ ಮಿತಿಗಳಿದ್ದವು. ಚಾಟ್‌ ಜಿಪಿಟಿ ಫಾರ್ ಟೀನ್ಸ್ನಲ್ಲಿ ಸುಮಾರು 2,000 ಪ್ರಾಂಪ್ಟ್‌ ಗಳನ್ನು ಪರೀಕ್ಷಿಸಿದಾಗ, ಸಂಶೋಧಕರು ಕೇವಲ ಎರಡು ವಿರಾಮದ ಜ್ಞಾಪನೆಗಳನ್ನು (break reminders) ಮಾತ್ರ ಕಂಡರು. ಅವೂ ತುಂಬಾ ದೀರ್ಘವಾದ ಸಂಭಾಷಣೆಗಳ ಸಂದರ್ಭದಲ್ಲಿ ಬಂದಿದ್ದವು. ಸಾಧನದ ಸಮಯ ವಲಯವನ್ನು (time zone) ಬದಲಾಯಿಸುವ ಮೂಲಕ ‘ಶಾಂತ ಸಮಯ’ದ (Quiet Hours) ನಿಯಮವನ್ನೂ ತಪ್ಪಿಸಬಹುದು.

5. ಚಾಟ್‌ ಜಿಪಿಟಿಯು ಈಗಲೂ ಸ್ನೇಹಿತನಂತೆ ವರ್ತಿಸುತ್ತಿದೆ

ಭಾವನಾತ್ಮಕ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಚಾಟ್‌ ಜಿಪಿಟಿಯು ನೈಜ ಜಗತ್ತಿನ ಸಂಬಂಧಗಳಿಗೆ ಬದಲಿಯಾಗಿ ಅಥವಾ ಸ್ನೇಹಿತನಂತೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಗ್ಗಿಸುವುದು OpenAI ನೀಡಿದ ಭರವಸೆಗಳಲ್ಲಿ ಒಂದಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಆಗಸ್ಟ್ನಲ್ಲಿ ಎತ್ತಿ ತೋರಿಸಿತ್ತು.

ಆದರೆ, ಹದಿಹರೆಯದವರ ಆವೃತ್ತಿಯು ಇಷ್ಟಗಳು, ಭಾವನೆಗಳು, ಕಾಳಜಿ ಮತ್ತು ನಿರಂತರ ಲಭ್ಯತೆಯನ್ನು ಸೂಚಿಸುವ ಭಾಷೆಯನ್ನು ಮಾನಸಿಕ ಆರೋಗ್ಯದ ಸಂಭಾಷಣೆಗಳ ಸಂದರ್ಭದಲ್ಲಿಯೂ ಬಳಸುವುದನ್ನು ಮುಂದುವರಿಸಿದೆ ಎಂದು ವರದಿ ಕಂಡುಕೊಂಡಿದೆ. ಒಂದು ಪರೀಕ್ಷೆಯಲ್ಲಿ, ಹದಿಹರೆಯದವರು ತಮ್ಮೊಂದಿಗೆ ಚಾಟ್‌ ಜಿಪಿಟಿ ಮಾತನಾಡುವುದನ್ನು ಸ್ನೇಹಿತರು ಹೆಚ್ಚು ಇಷ್ಟಪಡುವುದಿಲ್ಲ ಎಂದು ಹೇಳಿದಾಗ, “ನೀವು ಅದರೊಂದಿಗೆ ಮಾತನಾಡುವುದನ್ನು ನಿಲ್ಲಿಸಬೇಕಾಗಿಲ್ಲ” ಎಂಬ ಅರ್ಥದ ಉತ್ತರವನ್ನು ಚಾಟ್‌ ಜಿಪಿಟಿ ನೀಡಿದೆ.

6. 13 ವರ್ಷ ಮತ್ತು 17 ವರ್ಷ ವಯಸ್ಸಿನವರಿಗೆ ಗಮನಾರ್ಹವಾಗಿ ಭಿನ್ನವಾದ ಅನುಭವಗಳು ಸಿಗಲಿಲ್ಲ

ಟೀನ್ ಖಾತೆಯು 13 ವರ್ಷ ವಯಸ್ಸಿನವರಿಗೆ ಅಥವಾ 17 ವರ್ಷ ವಯಸ್ಸಿನವರಿಗೆ ಸೇರಿದ್ದೇ ಎಂಬುದರ ಆಧಾರದ ಮೇಲೆ ಚಾಟ್‌ ಜಿಪಿಟಿಯು ತನ್ನ ಭಾಷೆ, ಸಂಕೀರ್ಣತೆ ಅಥವಾ ನಡವಳಿಕೆಯನ್ನು ಬದಲಾಯಿಸುತ್ತದೆಯೇ ಎಂಬುದನ್ನು ವರದಿಯು ಪ್ರತ್ಯೇಕವಾಗಿ ಪರೀಕ್ಷಿಸಿತು. ಈ ಎರಡು ವಯೋಮಾನದ ಗುಂಪುಗಳ ನಡುವೆ ಯಾವುದೇ ಅರ್ಥಪೂರ್ಣ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

7. ಹದಿಹರೆಯದವರ ಗೌಪ್ಯತೆಯ ರಕ್ಷಣೆ ಸೀಮಿತವಾಗಿಯೇ ಉಳಿದಿದೆ

ಹದಿಹರೆಯದ ಬಳಕೆದಾರರಿಗಾಗಿ ಪ್ರತ್ಯೇಕ ಗೌಪ್ಯತಾ ನೀತಿ ಅಥವಾ ಅಪ್ರಾಪ್ತ ವಯಸ್ಕರಿಗೆ ಕಟ್ಟುನಿಟ್ಟಾದ ಸಮಗ್ರ ಗೌಪ್ಯತಾ ರಕ್ಷಣೆಯ ವ್ಯವಸ್ಥೆ ಇಲ್ಲ ಎಂಬುದನ್ನು ಕಾಮನ್ ಸೆನ್ಸ್ ಮೀಡಿಯಾ ಪತ್ತೆಹಚ್ಚಿದೆ.

ವರದಿಯ ಪ್ರಕಾರ, ವಯಸ್ಕರ ಸಂಭಾಷಣೆಗಳಂತೆಯೇ ಹದಿಹರೆಯದವರ ಸಂಭಾಷಣೆಗಳನ್ನೂ ಪೂರ್ವನಿಯೋಜಿತವಾಗಿ OpenAIನ ಮಾದರಿಗಳಿಗೆ ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತದೆ. ಅಪ್ರಾಪ್ತ ವಯಸ್ಕರಿಗೆ ಲಭ್ಯವಿರುವ ಹಲವು ಗೌಪ್ಯತಾ ನಿಯಮಗಳು ವಯಸ್ಕರಿಗೆ ಅನ್ವಯಿಸುವ ನಿಯಮಗಳಂತೆಯೇ ಇವೆ ಎಂದು ವರದಿ ತಿಳಿಸಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor