ಪ್ರವಾಸಿ ವೀಸಾದಲ್ಲಿ ಮಲೇಷ್ಯಾಕ್ಕೆ ಭಾರತೀಯ ಕಾರ್ಮಿಕರ ಕಳ್ಳಸಾಗಣೆ: ಜಾನುವಾರುಗಳಂತೆ ಮಾರಾಟವಾಗಿ ಅಲ್ಲಿ ಸಿಲುಕಿದ ಕಾರ್ಮಿಕರ ಕರಾಳ ಬದುಕಿನ ಕತೆ
ಪ್ರೇಮಾ ಶ್ರೀದೇವಿ - theprobe. in ವರದಿ
ಬಬ್ಬರ್ - ಸಮೀರ್ | Photo Credit : theprobe
ಸೆಪ್ಟೆಂಬರ್ ಮೊದಲ ವಾರದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಅಸಿಲ್ಪುರ್ ಗ್ರಾಮಕ್ಕೆ ಬಬ್ಬರ್ ಬರಿಗೈಯಲ್ಲಿ ವಾಪಸಾದರು. ಯಾವುದೇ ಸಂಬಳವಿಲ್ಲ, ಉಳಿತಾಯವಿಲ್ಲ. ಅವರು ಈಗ ತಾವು ಮೊದಲು ಕೆಲಸ ಮಾಡುತ್ತಿದ್ದ ಕಬ್ಬಿನ ಗದ್ದೆಗಳಿಗೆ ಮರಳಿದ್ದು, ದಿನಗೂಲಿಗಾಗಿ ಕಬ್ಬು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ‘ದಿ ಪ್ರೋಬ್’ ಜತೆ ಮಾತನಾಡಿದ ಅವರು, ‘ನಾನು ಕೆಲಸಕ್ಕೆ ಹೋಗುತ್ತಿರುವುದು ಇದು ಮೂರನೇ ದಿನ’ ಎಂದರು. 16 ಮತ್ತು 15 ವರ್ಷದ ಇಬ್ಬರು ಹೆಣ್ಣು ಮಕ್ಕಳು ಶುಲ್ಕ ಕಟ್ಟಲು ಸಾಧ್ಯವಾಗದ ಕಾರಣ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ‘ಒಂದು ಪ್ಯಾಕೆಟ್ ಉಪ್ಪು ಖರೀದಿಸಲು ಸಹ ನನ್ನಲ್ಲಿ ಹಣವಿಲ್ಲ’ ಎಂದು ಅಸಹಾಯಕತೆಯ ದನಿಯಲ್ಲಿ ಹೇಳಿದರು ಬಬ್ಬರ್.
ಆರು ತಿಂಗಳ ಹಿಂದೆ, ಮಲೇಷ್ಯಾದಲ್ಲಿ ಉತ್ತಮ ಸಂಬಳ ಬರುವ ಪ್ಯಾಕಿಂಗ್ ಕೆಲಸ ಸಿಗುತ್ತದೆ ಎಂದು ಹೇಳಿದ್ದನ್ನು ನಂಬಿ ಬಬ್ಬರ್ ಅಲ್ಲಿಗೆ ಹೋಗಿದ್ದರು. ಆದರೆ ಅವರನ್ನು ಪ್ರವಾಸಿ ವೀಸಾದಲ್ಲಿ ಮಲೇಷ್ಯಾಕ್ಕೆ ಕಳ್ಳಸಾಗಣೆ ಮಾಡಲಾಯಿತು. ಅಲ್ಲಿ ಅವರು ನಡೆದುಕೊಂಡೇ ಅಂತರರಾಷ್ಟ್ರೀಯ ಗಡಿಯನ್ನು ದಾಟಿದರು. ಅವರ ಪಾಸ್ಪೋರ್ಟ್ ಅನ್ನು ಕಸಿದುಕೊಳ್ಳಲಾಯಿತು. ಬಲವಂತದ ಕಾರ್ಮಿಕರಾಗಿ ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಮಾರಾಟ ಮಾಡಲಾಯಿತು. ಉತ್ತರ ಪ್ರದೇಶದ ಎರಡು ಜಿಲ್ಲೆಗಳ ಕನಿಷ್ಠ ಐವರು ಪುರುಷರನ್ನು ಒಂದೇ ಜಾಲದ ಮೂಲಕ ಅದೇ ಮಾರ್ಗದ ಮುಖಾಂತರ ಕರೆದೊಯ್ಯಲಾಗಿತ್ತು. ಅವರಲ್ಲಿ ಮತ್ತೊಬ್ಬರಾದ ಸಮೀರ್, ಬಬ್ಬರ್ ಹೊರಟ ಅದೇ ದಿನ ದಿಲ್ಲಿಯಿಂದ ತೆರಳಿದ್ದರು. ಅವರು ಇನ್ನೂ ಮಲೇಷ್ಯಾ ಜೈಲಿನಲ್ಲಿದ್ದಾರೆ. ಜುಲೈ 20ರಿಂದ ಅವರ ಕುಟುಂಬಕ್ಕೆ ಸಮೀರ್ನೊಂದಿಗೆ ಯಾವುದೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ.
ಇದು ಪಶ್ಚಿಮ ಉತ್ತರ ಪ್ರದೇಶದ ಬಡ ಪುರುಷರನ್ನು ಮಲೇಷ್ಯಾಕ್ಕೆ ಹೇಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಮತ್ತು ಅದನ್ನು ತಡೆಯಲು ಕುಟುಂಬಗಳು ಹೇಳುವಂತೆ ಭಾರತೀಯ ಪೊಲೀಸರು ಮತ್ತು ಅಧಿಕಾರಿಗಳು ಏನೂ ಮಾಡಲಿಲ್ಲ ಎಂಬುದನ್ನು ತೋರಿಸುವ ವಾಸ್ತವ ಸಂಗತಿ.
► ಮಲೇಷ್ಯಾಕ್ಕೆ ಹೋಗಲು ತನ್ನ ಬಳಿಯಿದ್ದ ಏಕೈಕ ಆಸ್ತಿಯನ್ನು ಮಾರಿದ ಬಬ್ಬರ್
ಬಬ್ಬರ್ ದಿನಗೂಲಿ ಕಾರ್ಮಿಕನಾಗಿ ದಿನಕ್ಕೆ 200ರಿಂದ 300 ರೂ. ಸಂಪಾದಿಸುತ್ತಿದ್ದಾಗ, ಇಶಾ ಎಂಬ ವ್ಯಕ್ತಿ ಅವರನ್ನು ಸಂಪರ್ಕಿಸಿದನು. ಇಶಾ ಅದೇ ಗ್ರಾಮದವನಾಗಿದ್ದು, ಗ್ರಾಮದ ಅಂಚಿನಲ್ಲಿ ವಾಸಿಸುತ್ತಿದ್ದ. ಬಬ್ಬರ್ ಗೆ ಆತ ಅಷ್ಟೊಂದು ಪರಿಚಿತನಾಗಿರಲಿಲ್ಲ. ‘ಒಂದು ದಿನ ಆತ ನನ್ನ ಬಳಿ ಬಂದು, “ಅಣ್ಣಾ, ನಿಮ್ಮ ಸಹೋದರ ಬಿಲ್ಲುಗೆ ನಾನು ಗೊತ್ತು. ಇಡೀ ಗ್ರಾಮಕ್ಕೆ ನಾನು ಗೊತ್ತು, ಆದರೆ ನಿನಗೆ ನಾನು ಗೊತ್ತಿಲ್ಲ” ಎಂದು ಹೇಳಿದ್ದನ್ನು’ ಬಬ್ಬರ್ ನೆನಪಿಸಿಕೊಳ್ಳುತ್ತಾರೆ.
ಆ ವಂಚನೆಯ ಆಫರ್ ಸರಳವಾಗಿತ್ತು. ಆತ, ‘ಅಣ್ಣಾ, ನೀನು ಇಲ್ಲಿ 200, 250, 300 ರೂ. ಸಂಪಾದಿಸುತ್ತೀಯಾ. ನಾನು ನಿನ್ನನ್ನು ಮಲೇಷ್ಯಾಕ್ಕೆ ಕಳುಹಿಸುತ್ತೇನೆ. ಪ್ಯಾಕಿಂಗ್ ಕೆಲಸಕ್ಕೆ ನಿನಗೆ 60,000ದಿಂದ 70,000 ರೂ. ಸಂಬಳ ಸಿಗುತ್ತದೆ’ ಎಂದು ಹೇಳಿದ್ದ.
ಬಬ್ಬರ್ ಗೆ ಐದು ಮಕ್ಕಳಿದ್ದು, ಹಿರಿಯರಿಬ್ಬರು ಹೆಣ್ಣುಮಕ್ಕಳು. ‘ನನ್ನ ಹೆಣ್ಣುಮಕ್ಕಳು ದೊಡ್ಡವರಾಗುತ್ತಿದ್ದಾರೆ. ಸಂಬಳ 60,000ದಿಂದ 70,000 ರೂ. ಸಿಗುತ್ತದೆ ಎಂದು ಹೇಳಿದ್ದರಿಂದ, ಒಂದೆರಡು ವರ್ಷ ಅಥವಾ ಬಹುಶಃ ನಾಲ್ಕು ವರ್ಷಗಳ ಕಾಲ ಅಲ್ಲಿಗೆ ಹೋಗಿ, ನನ್ನ ಮಕ್ಕಳ ಮದುವೆಗೆ ಆಗುವಷ್ಟು ಹಣ ಸಂಪಾದಿಸಬಹುದು ಎಂದು ನಾನು ಭಾವಿಸಿದೆ’ ಎನ್ನುತ್ತಾರೆ ಬಬ್ಬರ್.
ಇಶಾ ಕೇಳಿದ ಬೆಲೆ 1,60,000 ರೂ. ಅದನ್ನು ಸಂಗ್ರಹಿಸಲು ಬಬ್ಬರ್ ತಮ್ಮ ಕುಟುಂಬದ ಬಳಿಯಿದ್ದ ಏಕೈಕ ಆಸ್ತಿಯನ್ನು ಮಾರಿದರು. ‘ನನ್ನ ಹತ್ತಿರ ಒಂದು ಎಮ್ಮೆ ಇತ್ತು. ಅದನ್ನು 90,000 ರೂ.ಗೆ ಮಾರಿದೆ. ಬಾಕಿ ಹಣವನ್ನು ನನ್ನ ಸಹೋದರರಿಂದ ಸಾಲವಾಗಿ ಪಡೆದೆ ಮತ್ತು ನೆರೆಹೊರೆಯವರೊಬ್ಬರ ಬಳಿಯೂ ಬಡ್ಡಿಗೆ ಹಣ ತೆಗೆದುಕೊಂಡೆ. ನಾನು ಒಟ್ಟು 1,60,000 ರೂ. ಜೋಡಿಸಿ ಇಶಾಗೆ ಕೊಟ್ಟೆ.’
ಬಬ್ಬರ್ ಆ ಹಣವನ್ನು ನಗದಾಗಿ ನೀಡಿದ್ದು, ಹಣ ಪಡೆದುಕೊಂಡಿದ್ದಕ್ಕೆ ಇಶಾ ಕೈಯಿಂದ ಅವರಿಗೆ ಯಾವುದೇ ರಸೀದಿ ಅಥವಾ ದಾಖಲೆ ಸಿಗಲಿಲ್ಲ.
► ಪ್ರಯಾಣದ ಮಾರ್ಗ: ದಿಲ್ಲಿ, ಮುಂಬೈ, ಥೈಲ್ಯಾಂಡ್ ಮತ್ತು ನಡೆದುಕೊಂಡೇ ದಾಟಿದ ಗಡಿ
ಬಂಧಿತ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ರಾಷ್ಟ್ರೀಯ ಅಭಿಯಾನ ಸಮಿತಿಯ ಸಂಚಾಲಕರಾದ ನಿರ್ಮಲ್ ಗೊರನಾ ಅವರು ಈ ರೀತಿಯ ಪ್ರಕರಣಗಳನ್ನು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಇಶಾ ಬಳಸಿದ ವಿಧಾನವು ಅಚ್ಚುಕಟ್ಟಾದ ವಂಚನೆ ಎನ್ನುತ್ತಾರೆ ಅವರು.
‘ಮೊದಲು ಆತ ಬಡ ಜನರನ್ನು ಗುರುತಿಸುತ್ತಾನೆ. ನಂತರ ಅವರ ಬಳಿ ಹೋಗಿ ಸುಳ್ಳು ಭರವಸೆಗಳನ್ನು ನೀಡುತ್ತಾನೆ. ನಾನು ನಿನ್ನನ್ನು ಮಲೇಷ್ಯಾಕ್ಕೆ ಕಳುಹಿಸುತ್ತೇನೆ, ನಿನಗೆ 80,000ರಿಂದ 90,000 ರೂ. ಸಿಗುತ್ತದೆ ಎಂದು ಹೇಳುತ್ತಾನೆ. ನಂತರ ವಿಮಾನದ ಟಿಕೆಟ್ ಮತ್ತು ವೀಸಾಕ್ಕಾಗಿ ಹಣ ನೀಡುವಂತೆ ಕೇಳುತ್ತಾನೆ. ಈ ಬಡ ಜನರು ತಮ್ಮ ಜಮೀನು ಮಾರಿಯೋ, ಸಾಲ ಮಾಡಿಯೋ ಹಣ ಪಾವತಿಸುತ್ತಾರೆ. ಆದರೆ ಇಶಾ ಮಾಡುವುದೇನೆಂದರೆ, ಆತ ಕೇವಲ ಪ್ರವಾಸಿ ವೀಸಾವನ್ನು ಮಾತ್ರ ಮಾಡಿಸುತ್ತಾನೆ. ಅಲ್ಲಿ ಯಾವುದೇ ಕೆಲಸದ ಪರವಾನಗಿ ಇರುವುದಿಲ್ಲ’ ಎಂದು ಗೊರನಾ ಹೇಳಿದ್ದಾರೆ.
ಬಬ್ಬರ್ ಅವರನ್ನು ಕರೆದೊಯ್ದದ್ದು ಇದೇ ರೀತಿ. ಇಶಾ ಕೇವಲ ಒಂದು ದಿನದ ಮುಂಚಿತವಾಗಿ ಬಬ್ಬರ್ ಗೆ ಫೋನ್ ಮಾಡಿ ದಿಲ್ಲಿಗೆ ಕರೆದಿದ್ದ.
‘ಆತ ಬೆಳಿಗ್ಗೆ ನನಗೆ ಕರೆ ಮಾಡಿ, “ಬೇಗ ಬಾ. ದಿಲ್ಲಿಯಲ್ಲಿ ನಿನ್ನಂತೆ ಮೂವರು ವ್ಯಕ್ತಿಗಳಿದ್ದಾರೆ. ಟಿಕೆಟ್ ಸಿದ್ಧವಾಗಿದೆ” ಎಂದನು. ನಿಝಾಮುದ್ದೀನ್ ರೈಲು ನಿಲ್ದಾಣದಲ್ಲಿ ಬಬ್ಬರ್, ತಮ್ಮೊಂದಿಗೆ ಪ್ರಯಾಣಿಸಬೇಕಿದ್ದ ಇತರರನ್ನು ಭೇಟಿಯಾದರು. ಅವರಲ್ಲಿ ಪ್ರಸ್ತುತ ಮಲೇಷ್ಯಾ ಜೈಲಿನಲ್ಲಿರುವ ಸಮೀರ್ ಕೂಡ ಒಬ್ಬರಾಗಿದ್ದರು.
ಥೈಲ್ಯಾಂಡ್ನಲ್ಲಿ ಗುಂಪನ್ನು ಬಸ್ ನಲ್ಲಿ ಕರೆದೊಯ್ದು ಹೋಟೆಲ್ ನಲ್ಲಿ ಇರಿಸಲಾಯಿತು.
‘ಮರುದಿನ, ಅಲ್ಲಿನ ಏಜೆಂಟ್ ನಮ್ಮಲ್ಲಿ ಮೂರು ಅಥವಾ ನಾಲ್ಕು ಜನರನ್ನು ಒಟ್ಟಿಗೆ ಗಡಿಯಾಚೆ ಮಲೇಷ್ಯಾಕ್ಕೆ ಕರೆದೊಯ್ದನು’ ಎನ್ನುತ್ತಾರೆ ಬಬ್ಬರ್. ‘ನಾವು ನಡೆದುಕೊಂಡೇ ಗಡಿ ದಾಟಿದೆವು. ಗಡಿ ದಾಟುವಾಗ ಸಮವಸ್ತ್ರ ಧರಿಸಿದ ಅಧಿಕಾರಿಗಳು ಕಾವಲು ಕಾಯುತ್ತಾ ಕುಳಿತಿದ್ದರು. ಅವರ ಸಮವಸ್ತ್ರದ ಮೇಲೆ ಮೂರು ಅಥವಾ ನಾಲ್ಕು ನಕ್ಷತ್ರಗಳಿದ್ದವು. ಆದರೆ ಅವರು ನಮ್ಮ ಗುಂಪನ್ನು ತಡೆಯದೆ ಹಾಗೇ ಕಳುಹಿಸಿದರು. ಇದು ಯಾವುದೇ ಲೋಪದಂತೆ ಕಾಣಲಿಲ್ಲ, ಬದಲಿಗೆ ಅದೊಂದು ವ್ಯವಸ್ಥಿತ ಜಾಲದಂತಿತ್ತು. ಅಲ್ಲಿ ಏನಾಗುತ್ತಿದೆ ಎಂಬುದು ಆ ಅಧಿಕಾರಿಗಳಿಗೆ ಸಂಪೂರ್ಣವಾಗಿ ಅರಿವಿತ್ತು.’
ಮಲೇಷ್ಯಾ ಪ್ರವೇಶಿಸಿದ ಕೂಡಲೇ ಆ ವ್ಯಕ್ತಿಗಳನ್ನು ಮೊದಲು ರೈಲಿನಲ್ಲಿ, ನಂತರ ಬಸ್ ನಲ್ಲಿ ಮತ್ತು ಬಳಿಕ ಗ್ರ್ಯಾಬ್ ಟ್ಯಾಕ್ಸಿಯಲ್ಲಿ ಶಮೀಮ್ ಎಂಬ ಏಜೆಂಟ್ ನ ಕೊಠಡಿಗೆ ಕರೆದೊಯ್ಯಲಾಯಿತು. ತಮ್ಮನ್ನು ಪ್ರವಾಸಿ ವೀಸಾದಲ್ಲಿ ಮಲೇಷ್ಯಾಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುವ ಯಾವುದೇ ಹಕ್ಕು ತಮಗಿಲ್ಲ ಎಂಬುದು ಬಬ್ಬರ್ ಗೆ ತಡವಾಗಿ ತಿಳಿಯಿತು.
‘ಆ ಸಮಯದಲ್ಲಿ ನಮಗೆ ಇದರ ಬಗ್ಗೆ ಯಾವುದೂ ಗೊತ್ತಿರಲಿಲ್ಲ.’
ಶಮೀಮ್ ಮೊದಲು ಮಾಡಿದ ಕೆಲಸ ಪಾಸ್ಪೋರ್ಟ್ ಗಳನ್ನು ಕಸಿದುಕೊಂಡದ್ದು.
‘ಇದ್ಯಾಕೆ ಬೇಕು ಎಂದು ನಾನು ಅವರನ್ನು ಕೇಳಿದಾಗ, ಅವರು, “ನನಗೆ ಬೇಕು, ಹಾಗಾಗಿ ಕೊಡಿ” ಎಂದರು.’
► ‘ಇದು ನಿಮ್ಮಪ್ಪನ ಮನೆ ಅಲ್ಲ, ನೀವು ಕೆಲಸ ಮಾಡಲೇಬೇಕು’
ಬಬ್ಬರ್ ಅವರನ್ನು ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಬಿಹಾರದ ಇತರೆ 17–18 ಕಾರ್ಮಿಕರಿದ್ದ, ಕೇವಲ ಎರಡು ಫ್ಯಾನ್ಗಳಿದ್ದ ಒಂದು ಕೋಣೆಯಲ್ಲಿ ಕೂರಿಸಲಾಯಿತು. ಜ್ವರವಿದ್ದು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದ ರಂಝಾನ್ ಎಂಬ ಭಾರತೀಯ ಕಾರ್ಮಿಕನಿಗೆ ಏನಾಯಿತು ಎಂಬುದನ್ನು ನೋಡಿದ ಕೆಲವೇ ದಿನಗಳಲ್ಲಿ ಬಬ್ಬರ್ ಗೆ ಅನುಮಾನ ಆರಂಭವಾಯಿತು.
ಅಮನ್ ಆತನಿಗೆ ಗೋಡೆಗೆ ಬಡಿಯುವಷ್ಟು ಜೋರಾಗಿ ಕಪಾಳಮೋಕ್ಷ ಮಾಡಿದ. ‘ನೀವು ಭಾರತದಿಂದ ಬಂದು ಎಲ್ಲವೂ ಉಚಿತವಾಗಿ ಸಿಗುತ್ತದೆ ಎಂದುಕೊಳ್ಳುತ್ತೀರಿ. ಇಲ್ಲಿ ವಿದ್ಯುತ್ ಉಚಿತವಲ್ಲ, ನೀರೂ ಉಚಿತವಲ್ಲ’ ಎಂದು ಏಜೆಂಟ್ ಆಡಿದ್ದ ಮಾತುಗಳನ್ನು ಬಬ್ಬರ್ ನೆನಪಿಸಿಕೊಂಡರು.
ನಂತರ ಅದೇ ಪರಿಸ್ಥಿತಿ ಬಬ್ಬರ್ ಗೂ ಎದುರಾಯಿತು. GNT ಎಂದು ಗುರುತಿಸಿದ ಕಂಪೆನಿಯೊಂದರಲ್ಲಿ 30ರಿಂದ 55 ಕೆಜಿ ತೂಕದ ಚೀಲಗಳನ್ನು ಕನ್ವೇಯರ್ ಮೇಲೆ ಹತ್ತಿಸುವ ಮತ್ತು ಇಳಿಸುವ ಕೆಲಸವನ್ನು ಬಬ್ಬರ್ ಗೆ ವಹಿಸಲಾಯಿತು.
‘ಅದು ನಮಗೆ ನಿಭಾಯಿಸಲು ಸಾಧ್ಯವಾಗದ ಕೆಲಸವಾಗಿತ್ತು. ಒಂಭತ್ತು ಅಥವಾ ಹತ್ತು ಗಂಟೆಗಳ ಕೆಲಸದ ಭರವಸೆ ನೀಡಿದ್ದರೂ, ಅವರಿಂದ ಹನ್ನೆರಡು ಗಂಟೆ ಕೆಲಸ ಮಾಡಿಸಿಕೊಳ್ಳಲಾಯಿತು. ಆದರೆ ಯಾವುದೇ ಸಂಬಳ ನೀಡಲಿಲ್ಲ. ಅಸ್ವಸ್ಥರಾಗಿದ್ದಾಗಲೂ ಗದರಿಸಿ ಎಬ್ಬಿಸಲಾಗುತ್ತಿತ್ತು. “ಏಳು. ಇದು ನಿಮ್ಮಪ್ಪನ ಮನೆ ಅಲ್ಲ. ನೀನು ಕೆಲಸಕ್ಕೆ ಹೋಗಲೇಬೇಕು” ಎನ್ನುತ್ತಿದ್ದರು. ಸಸ್ಯಾಹಾರಿಗಳಾದ ನಮಗೆ ಯಾವುದೋ ಮಾಂಸವನ್ನು ತಿನ್ನುವಂತೆ ಬಲವಂತಪಡಿಸಲಾಯಿತು. ಅವರು ನನಗೆ ಬಲವಂತವಾಗಿ ತಿನ್ನಿಸಿದರು. ಅದು ಯಾವ ರೀತಿಯ ಮಾಂಸವೆಂದು ನನಗೆ ಗೊತ್ತಿಲ್ಲ. ಈ ಅವಧಿಯಲ್ಲಿ ನಮಗೆ ಯಾವುದೇ ಕೂಲಿ ಹಣವನ್ನೂ ನೀಡಲಿಲ್ಲ.’
ಮೊದಲ ಕಂಪೆನಿಯಿಂದ ಬಬ್ಬರ್ ಅವರನ್ನು ಅಲಿ ಎಂಬ ಮತ್ತೊಬ್ಬ ಏಜೆಂಟನಿಗೆ ಮಾರಾಟ ಮಾಡಲಾಯಿತು ಮತ್ತು ಜೋಹರ್ ಬಹ್ರುವಿನಲ್ಲಿ ವಿಕೆ ವೆಜ್ ಎಂಬ ಸಂಸ್ಥೆಗೆ ಕಳುಹಿಸಲಾಯಿತು. ಅಲ್ಲಿ ತರಕಾರಿಗಳನ್ನು ಕತ್ತರಿಸುವ ಮತ್ತು ಪ್ಯಾಕ್ ಮಾಡುವ ಕೆಲಸವಿತ್ತು. ಅಲ್ಲಿ 12 ಗಂಟೆಯ ಬದಲಿಗೆ ನಮ್ಮಿಂದ 15, 16, 17, ಕೊನೆಗೆ 18 ಗಂಟೆಗಳ ಕಾಲವೂ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಮೂರನೇ ಕಂಪೆನಿಗೆ ಮಾರಾಟವಾಗುವವರೆಗೆ ಅವರು ಅಲ್ಲಿ ಸುಮಾರು ಮೂರು ತಿಂಗಳ ಕಾಲ ಯಾವುದೇ ಸಂಬಳವಿಲ್ಲದೆ ದುಡಿದರು.
‘ಕಂಪೆನಿ ಸಂಬಳವನ್ನು ಕೊಡುತ್ತಿತ್ತು, ಆದರೆ ಏಜೆಂಟರೇ ಆ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬ ವ್ಯವಸ್ಥೆಯ ಬಗ್ಗೆ ಬರೇಲಿಯ ಫೋರ್ಮನ್ ಆಗಿದ್ದ ಮತ್ತೊಬ್ಬ ಭಾರತೀಯ ಕಾರ್ಮಿಕ ನನಗೆ ವಿವರಿಸಿದರು. “ಕಂಪೆನಿ ಸಂಬಳ ನೀಡಿದೆ, ನಿಮ್ಮ ಏಜೆಂಟರು ಆ ಹಣವನ್ನು ತೆಗೆದುಕೊಂಡಿದ್ದಾರೆ” ಎಂದು ಫೋರ್ಮನ್ ತಿಳಿಸಿದರು.’
ಗೊರನಾ ಅವರು ವಿವರಿಸಿದ್ದ ಸಂಗತಿಯೂ ನಿಜವಾಗಿತ್ತು. ಅಂದರೆ, ಈ ವಂಚನೆ ಜಾಲದಲ್ಲಿ ಮಲೇಷ್ಯಾ ಯಜಮಾನ ನೇರವಾಗಿ ಕಳ್ಳಸಾಗಣೆದಾರನಿಗೆ ಕಾರ್ಮಿಕನ ಕೂಲಿ ಹಣವನ್ನು ಪಾವತಿಸುತ್ತಾನೆ.
ಬಬ್ಬರ್ ಹೇಳುವಂತೆ, ಕೆಲವೊಮ್ಮೆ ಅವರು ಏನನ್ನೂ ತಿನ್ನುತ್ತಿರಲಿಲ್ಲ.
‘ಕೆಲವೊಮ್ಮೆ ನಾನು ಎರಡು ದಿನಗಳ ಕಾಲ ಆಹಾರವಿಲ್ಲದೆ ಇದ್ದೆ. ಕೆಲವೊಮ್ಮೆ ಮೂರು ದಿನಗಳ ಕಾಲವೂ ಉಪವಾಸವಿರಬೇಕಾಯಿತು.’
► ರಾಯಭಾರ ಕಚೇರಿಯ ಸಹಾಯವೂ ಸಿಗಲಿಲ್ಲ
ಪರಿಸ್ಥಿತಿ ಹದಗೆಟ್ಟಾಗ, ಬಬ್ಬರ್ ಮತ್ತು ಇತರ ಕಾರ್ಮಿಕರು ಭಾರತದಲ್ಲಿದ್ದ ಗೊರನಾ ಅವರನ್ನು ಸಂಪರ್ಕಿಸಿದರು. ಅವರು ಮಲೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದರು. ರಾಯಭಾರ ಕಚೇರಿಯ ಅಧಿಕಾರಿಗಳು ಕರೆ ಮಾಡಿ, ಸ್ಥಳದ ವಿವರ ಪಡೆದುಕೊಂಡರೂ ವಾರಗಳವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬಬ್ಬರ್ ಹೇಳುತ್ತಾರೆ.
‘ಅವರು ಇವತ್ತು ಬರುತ್ತೇವೆ, ನಾಳೆ ಬರುತ್ತೇವೆ ಎಂದು ಹೇಳುತ್ತಲೇ ಇದ್ದರು. ಸುಮಾರು 20 ದಿನಗಳ ಕಾಲ ನಮ್ಮನ್ನು ಕಾಯಿಸಿದರು. ಯಾರೂ ನಮ್ಮ ಬಳಿಗೆ ಬರಲಿಲ್ಲ. ಒಂದು ಹಂತದಲ್ಲಿ, ಯಾವುದೇ ಹಣವಿಲ್ಲದ ಆ ಕಾರ್ಮಿಕರಿಗೆ ಸ್ವತಃ ಬಸ್ ನಿಲ್ದಾಣಕ್ಕೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದರು. “ನಮಗೆ ಸಂಬಳ ಬಂದಿಲ್ಲ. ನಮ್ಮ ಬಳಿ ಹಣವಿಲ್ಲ. ನಾವು ಹೇಗೆ ಪ್ರಯಾಣಿಸುವುದು?” ಎಂದು ಪ್ರಶ್ನಿಸಿದೆ’ ಎನ್ನುತ್ತಾರೆ ಬಬ್ಬರ್.
‘ರಾಯಭಾರ ಕಚೇರಿಯಿಂದ ನಮಗೆ ಯಾವುದೇ ಸಹಾಯ ಸಿಗಲಿಲ್ಲ. ನೀವೇ ಅವರನ್ನು ಕೇಳಬಹುದು’ ಎಂದು ಬಬ್ಬರ್ ಹೇಳಿದ್ದಾರೆ.
ಕೊನೆಗೆ, ತನ್ನನ್ನು ಹೊರಬರುವಂತೆ ಮಾಡಿದ್ದು ಭಾರತೀಯ ಸರ್ಕಾರವಲ್ಲ. ಕಂಪೆನಿಯ ಒಳಗೆ ಇದ್ದ ನಮ್ಮ ಮೇಲೆ ಸಹಾನುಭೂತಿ ಹೊಂದಿದ್ದ ಭಾರತೀಯ ಫೋರ್ಮನ್ ಅವರೇ ಟ್ಯಾಕ್ಸಿ ಶುಲ್ಕ ಭರಿಸಿದರು ಮತ್ತು ಭಾರತದಲ್ಲಿದ್ದ ನಿರ್ಮಲ್ ಗೊರನಾ ಅವರ ಒತ್ತಡವೂ ಕಾರಣವಾಯಿತು.
ಆಗಸ್ಟ್ 30ರ ದಿನಾಂಕದ ವಿಮಾನ ಟಿಕೆಟ್ ಪಡೆದು ಪ್ರಯಾಣಿಸಿದ ಬಬ್ಬರ್ ಸೆಪ್ಟೆಂಬರ್ 1ರಂದು ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರ ಬಳಿಯಿರುವ ದಾಖಲೆಗಳು ಈ ಪ್ರಯಾಣವನ್ನು ದೃಢಪಡಿಸುತ್ತವೆ. ಕೌಲಾಲಂಪುರದಲ್ಲಿರುವ ಭಾರತೀಯ ಹೈಕಮಿಷನ್ ನೀಡಿದ ತುರ್ತು ಪ್ರಮಾಣಪತ್ರ ಮತ್ತು ಆಗಸ್ಟ್ 30ರ ದಿನಾಂಕವಿರುವ ಮಲೇಷ್ಯಾ ನಿರ್ಗಮನದ ಮುದ್ರೆ ಇದಕ್ಕೆ ಸಾಕ್ಷಿ.
‘ನನಗೆ ಅತಿ ಹೆಚ್ಚು ಸಹಾಯ ಮಾಡಿದ ವ್ಯಕ್ತಿ ನಿರ್ಮಲ್ ಸರ್’ ಎನ್ನುತ್ತಾರೆ ಬಬ್ಬರ್.
► ಅಪರಾಧವನ್ನೇ ಮುಚ್ಚಿಹಾಕಿದ FIR
ಜುಲೈ ಆರಂಭದಿಂದಲೂ ಬಬ್ಬರ್ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವಂತೆ ಪ್ರಯತ್ನಿಸುತ್ತಿತ್ತು. ಮೀರತ್ನ ಕಿಥೋರ್ ಪೊಲೀಸ್ ಠಾಣೆಯಲ್ಲಿ ಬಿಲ್ಲು ಲಿಖಿತ ದೂರು ದಾಖಲಿಸಿದ್ದರು.
‘ಜುಲೈ 2ರಂದು ನಾವು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುವಂತೆ ಕೋರಿದ್ದೆವು, ಆದರೆ ಪೊಲೀಸರು ನಿರಾಕರಿಸಿದರು’ ಎಂದು ಬಿಲ್ಲು ಹೇಳಿದ್ದಾರೆ. ಬಬ್ಬರ್ ವಾಪಸಾದ ಅದೇ ದಿನ ಅಂದರೆ ಸೆಪ್ಟೆಂಬರ್ 1ರಂದು ಮಾತ್ರ FIR ದಾಖಲಾಯಿತು.
ಕೊನೆಗೂ FIR ದಾಖಲಾದಾಗ, ಅದು ಸಂಪೂರ್ಣವಾಗಿ ದುರ್ಬಲಗೊಂಡಿತ್ತು ಎನ್ನುತ್ತಾರೆ ಗೊರನಾ.
‘ಅವರು ಇಡೀ FIR ಅನ್ನು ತಿದ್ದಿದ್ದಾರೆ. ಅವರು ಬಲವಂತದ ಕಾರ್ಮಿಕ ಪದ್ಧತಿ ಅಥವಾ ಮಾನವ ಕಳ್ಳಸಾಗಣೆ ಸೆಕ್ಷನ್ ಗಳನ್ನು ಬಳಸಿಲ್ಲ. ಅದನ್ನು ಕೇವಲ ವಂಚನೆ ಪ್ರಕರಣವನ್ನಾಗಿ ಮಾತ್ರ ಬದಲಾಯಿಸಿದ್ದಾರೆ. ದಾಖಲೆಯೂ ಇದನ್ನು ದೃಢಪಡಿಸುತ್ತದೆ. 2026ರ ಸೆಪ್ಟೆಂಬರ್ 1ರಂದು ಕಿಥೋರ್ ಪೊಲೀಸ್ ಠಾಣೆಯಲ್ಲಿ ದಾಖಲಾದ FIR ನಂ. 0359ರಲ್ಲಿ, ದೂರಿನಲ್ಲಿ ವಿವರಿಸಲಾದ ಕಳ್ಳಸಾಗಣೆ ಅಥವಾ ಬಲವಂತದ ಕಾರ್ಮಿಕ ಪದ್ಧತಿಯ ಸೆಕ್ಷನ್ ಗಳ ಬದಲಿಗೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) (ವಂಚನೆ) ಮತ್ತು 61(2) (ಅಪರಾಧ ಪಿತೂರಿ) ಅಡಿಯಲ್ಲಿ ಮಾತ್ರ ಪ್ರಕರಣ ದಾಖಲಾಗಿದೆ.’
ಯಾವ ಕಳ್ಳಸಾಗಣೆದಾರನೂ ದಾಖಲೆಗಳನ್ನು ನೀಡದ ಕಾರಣ, ದೂರು ದಾಖಲಿಸಲು ಮುಂದಾದಾಗ ಪೊಲೀಸರು ನಗದು ಪಾವತಿಯ ಪುರಾವೆಯನ್ನು ಕೇಳಿದರು ಎಂದು ಬಬ್ಬರ್ ಹೇಳುತ್ತಾರೆ.
‘ಪೊಲೀಸ್ ಅಧಿಕಾರಿ, “ನಿಮ್ಮ ಬಳಿ ಯಾವುದಾದರೂ ಸಾಕ್ಷ್ಯವಿದೆಯೇ? ಹಣವನ್ನು ಯಾವಾಗ ನೀಡಿದ್ದೀರಿ? ಯಾವುದೇ ದಾಖಲೆಗಳಿವೆಯೇ?” ಎಂದು ಕೇಳಿದರು. ಆದರೆ ನಮ್ಮ ಬಳಿ ಲಿಖಿತವಾಗಿ ಯಾವುದೇ ದಾಖಲೆ ಇರಲಿಲ್ಲ.’
ತಾನು ಮಲೇಷ್ಯಾದಲ್ಲಿ ಸಿಲುಕಿಕೊಂಡಿದ್ದಾಗಲೂ ಒಬ್ಬ ಭಾರತೀಯ ಪೊಲೀಸ್ ಅಧಿಕಾರಿ ತನ್ನನ್ನು ಕಡೆಗಣಿಸಿದ್ದರು.
‘ಮಲೇಷ್ಯಾದಲ್ಲಿ ನನಗೆ ಯಾರೂ ಪರಿಚಯವಿಲ್ಲ. ನೀವು ಏನೇ ಚರ್ಚಿಸುವುದಿದ್ದರೂ ನಿಮ್ಮ ಏಜೆಂಟ್ ನೊಂದಿಗೆ ಚರ್ಚಿಸಿ’ ಎಂದಿದ್ದರು.
ಬಬ್ಬರ್ ಮತ್ತು ಗೊರನಾ ಇಬ್ಬರೂ ಹೇಳುವ ಪ್ರಕಾರ, ಪ್ರಕರಣವನ್ನು ಮುಂದುವರಿಸುವ ಬದಲು ಇಶಾ ಜತೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಬಬ್ಬರ್ ಮೇಲೆ ಒತ್ತಡ ಹೇರಿದ್ದರು.
‘ಪೊಲೀಸರು ಬಬ್ಬರ್ ಗೆ ಕಳ್ಳಸಾಗಣೆದಾರನ ಜೊತೆ ರಾಜಿ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ’ ಎಂದಿದ್ದಾರೆ ಗೊರನಾ.
ತಮ್ಮ ಬಳಿ ಯಾವುದೇ ಸಾಕ್ಷ್ಯವಿಲ್ಲ ಮತ್ತು ಕೋರ್ಟ್ ನಲ್ಲಿಯೂ ಗೆಲ್ಲಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದರೆಂದು ಬಬ್ಬರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
‘ಪೊಲೀಸರು, “ಇದು ಹಾಗಲ್ಲ. ನಿಮ್ಮ ಬಳಿ ಯಾವುದೇ ಸಾಕ್ಷ್ಯವಿಲ್ಲ. ನೀವು ಕೋರ್ಟ್ ನಲ್ಲಿ ಏನು ಮಾಡಲು ಸಾಧ್ಯ?” ಎಂಬ ರೀತಿಯಲ್ಲಿ ಮಾತನಾಡಿದರು. ಕೊನೆಗೆ ಪೊಲೀಸರು ಇಶಾನನ್ನು ರಕ್ಷಿಸುತ್ತಿದ್ದಾರೆ ಎಂಬುದು ಬಬ್ಬರ್ ಗೆ ಗೊತ್ತಾಯಿತು. ಎರಡು ತಿಂಗಳು ಕಳೆದರೂ, “ಅವರು ಇಶಾನನ್ನು ವಶಕ್ಕೆ ತೆಗೆದುಕೊಂಡಿಲ್ಲ ಅಥವಾ ನನ್ನ ಮುಂದೆ ಕೂರಿಸಿ ವಿಚಾರಣೆ ನಡೆಸಿಲ್ಲ”’ ಎಂದು ಬಬ್ಬರ್ ಅಳಲು ತೋಡಿಕೊಂಡಿದ್ದಾರೆ.
‘ದಿ ಪ್ರೋಬ್’ ಈ ಎಲ್ಲಾ ಆರೋಪಗಳನ್ನು ಕಿಥೋರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುಬೋಧ್ ಕುಮಾರ್ ಸಕ್ಸೆನಾ ಅವರ ಮುಂದೆ ಪ್ರಸ್ತಾಪಿಸಿತು. ಆದರೆ ಅವರು ಅವುಗಳನ್ನು ತಳ್ಳಿಹಾಕಿದ್ದು, ಪೊಲೀಸರು ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂಬ ಅಥವಾ ವಿಡಿಯೊ ವಾಪಸ್ ಪಡೆಯುವಂತೆ ಕೇಳಿದ್ದಾರೆಂಬ ಆರೋಪಗಳು ‘ಯಾವುದೇ ಆಧಾರವಿಲ್ಲದ ಸುಳ್ಳು ಆರೋಪಗಳು’ ಎಂದಿದ್ದಾರೆ.
ಎರಡು ತಿಂಗಳು ತಡವಾಗಿ FIR ದಾಖಲಿಸಿರುವ ಕುರಿತು ಪ್ರತಿಕ್ರಿಯಿಸುತ್ತಾ, FIR ದಾಖಲಿಸುವ ಮೊದಲು ಪೊಲೀಸರು ತನಿಖೆ ಮಾಡಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು. ಪ್ರಮುಖ ಆರೋಪಿ ಇಶಾನನ್ನು ಯಾಕೆ ಇನ್ನೂ ಬಂಧಿಸಿಲ್ಲ ಎಂದು ಕೇಳಿದಾಗ, FIR ದಾಖಲಾಗಿದೆ ಮತ್ತು ತನಿಖೆ ಮುಂದುವರಿದಿದೆ ಎಂದಷ್ಟೇ ಹೇಳಿದ ಅವರು, ‘ಸಾಕ್ಷ್ಯ ಸಿಕ್ಕ ತಕ್ಷಣ’ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಶಾ ಮೀರತ್ ನಲ್ಲಿಲ್ಲ, ಮುಝಫರ್ ನಗರದಲ್ಲಿದ್ದಾನೆ. ಜನರನ್ನು ಕೆಲಸಕ್ಕಾಗಿ ವಿದೇಶಕ್ಕೆ ಕಳುಹಿಸುವ ಇಂತಹ ಹಲವು ‘ಏಜೆಂಟ್ ಗಳು’ ಇದ್ದಾರೆ ಎಂದು ನೇಮಕಾತಿದಾರರ ಬಗ್ಗೆ ಹೇಳಿದರು. ತನಿಖೆ ಪೂರ್ಣಗೊಂಡ ಕೂಡಲೇ ಚಾರ್ಜ್ಶೀಟ್ ಸಲ್ಲಿಸುವುದಾಗಿ ಅವರು ತಿಳಿಸಿದರಾದರೂ, ಅದಕ್ಕೆ ಯಾವುದೇ ನಿಖರವಾದ ದಿನಾಂಕವನ್ನು ನೀಡಲಿಲ್ಲ.
► ಮಲೇಷ್ಯಾ ಜೈಲಿನಲ್ಲಿದ್ದಾರೆ ಸಮೀರ್
ಮುಝಫರ್ ನಗರದ ನಾಸಿರ್ಪುರ್ ಗ್ರಾಮದ ವಕೀಲ್ ಅವರ ಮಗ ಸಮೀರ್ ನನ್ನೂ ಅದೇ ಜಾಲದ ಮೂಲಕ ಕರೆದೊಯ್ದಿದ್ದು, ಆತ ಬಬ್ಬರ್ ಜೊತೆ ದಿಲ್ಲಿಯಿಂದ ಹೊರಟಿದ್ದನು.
‘ಅವರಿಬ್ಬರೂ ಮಾರ್ಚ್ 9ರಂದು ಒಟ್ಟಿಗೆ ತೆರಳಿದ್ದರು’ ಎಂದು ಸಮೀರ್ ಅವರ ಪತ್ನಿ ಶೆಹನಾಝ್ ‘ದಿ ಪ್ರೋಬ್’ಗೆ ತಿಳಿಸಿದ್ದಾರೆ.
ಸಮೀರ್ ಕುಟುಂಬವು ಬಬ್ಬರ್ ಗಿಂತ ಹೆಚ್ಚಿನ ಹಣ ಅಂದರೆ 2,00,000 ರೂ.ಗಳನ್ನು ಪಾವತಿಸಿತ್ತು ಮತ್ತು ಅದಕ್ಕಾಗಿ ಸಾಲವನ್ನೂ ಮಾಡಿತ್ತು.
‘ನಾವು ಸಂಪೂರ್ಣ ಹಣವನ್ನು ನಗದಾಗಿಯೇ ನೀಡಿದೆವು’ ಎಂದು ಶೆಹನಾಝ್ ಹೇಳಿದರು. ‘ನಾವು ಸಾಲ ಮಾಡಿದ್ದೇವೆ.’
ಈ ಸಾಲಕ್ಕೆ ಸಂಬಂಧಿಸಿದ ದಾಖಲೆಯೂ ಲಭ್ಯವಿದೆ. ವಕೀಲ್ ಅವರ ಹೆಸರಿನಲ್ಲಿ, ಸಮೀರ್ ಸಹ-ಸಾಲಗಾರರಾಗಿ ಉಜ್ಜಿವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ 2,00,000 ರೂ. ಮುಂಗಡ ಸಾಲ ಪಡೆದಿದ್ದರು.
ಬಬ್ಬರ್ ಯಾವ ಕಾರಣಕ್ಕಾಗಿ ತೆರಳಿದ್ದರೋ, ಅದೇ ಕಾರಣಕ್ಕಾಗಿ ಸಮೀರ್ ಕೂಡ ಹೋಗಿದ್ದರು. ಈ ಬಗ್ಗೆ ವಿವರಿಸಿದ ಅವರ ಹಿರಿಯ ಸಹೋದರ ಸೊಹೈಲ್, ‘ಮದುವೆಯಾಗದ ಮೂವರು ಹೆಣ್ಣುಮಕ್ಕಳು ಇದ್ದಾರೆ. ಅವನಿಗೆ ಒಬ್ಬ ಮಗನಿದ್ದಾನೆ. ನಾವು ಹೆಣ್ಣುಮಕ್ಕಳ ಮದುವೆ ಮಾಡಬೇಕಿತ್ತು. ಅದಕ್ಕಾಗಿಯೇ ನಾವು ಸಮೀರ್ ಅವರನ್ನು ಅಲ್ಲಿಗೆ ಕಳುಹಿಸಿದೆವು’ ಎಂದರು.
ಮಲೇಷ್ಯಾದಲ್ಲಿ ಸಮೀರ್ ಕಥೆಯೂ ಬಬ್ಬರ್ ಕಥೆಯಂತೆಯೇ ಇತ್ತು. ದಿನಕ್ಕೆ ಎಂಟು ಗಂಟೆ ಕೆಲಸದ ಭರವಸೆ ನೀಡಿದ್ದರೂ, ಅವರಿಂದ 17ರಿಂದ 18 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳಲಾಯಿತು. ಅವರ ಪಾಸ್ಪೋರ್ಟ್ ಅನ್ನು ಕಸಿದುಕೊಳ್ಳಲಾಯಿತು. ಯಾವುದೇ ಸಂಬಳ ನೀಡಲಿಲ್ಲ.
‘ಅವರು ನಮ್ಮ ಬಳಿ, “ನನ್ನನ್ನು ವಾಪಸ್ ಕರೆಸಿಕೊಳ್ಳಿ. ಅವರು ನನಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಸಿಕ್ಕಾಪಟ್ಟೆ ಕೆಲಸಗಳನ್ನು ಮಾಡಿಸುತ್ತಿದ್ದಾರೆ” ಎಂದು ಹೇಳುತ್ತಿದ್ದರು’ ಎನ್ನುತ್ತಾರೆ ಶೆಹನಾಝ್. ‘ಆದರೆ ಅವರು ಪಾಸ್ಪೋರ್ಟ್ ನೀಡಲಿಲ್ಲ, ಸಂಬಳವನ್ನೂ ಕೊಡಲಿಲ್ಲ.’
ಕುಟುಂಬಕ್ಕೆ ತಲುಪಿದ ಏಕೈಕ ಹಣವೆಂದರೆ, ಆರಂಭದಲ್ಲಿ ಸಮೀರ್ ಅವರ ಸ್ವಂತ ಕೂಲಿಯಿಂದ ಕಳುಹಿಸಿಕೊಟ್ಟಿದ್ದ ಎರಡು ಕಂತುಗಳ ಹಣ 38,000 ರೂ. ಮತ್ತು 20,000 ರೂ. ಮಾತ್ರ. ಅದಾದ ಬಳಿಕ ಹಣ ಬರುವುದು ಸಂಪೂರ್ಣವಾಗಿ ನಿಂತುಹೋಯಿತು.
ನಂತರ ಜುಲೈ 20ರಂದು, ಆ ಕುಟುಂಬ ಎಂದಿಗೂ ಕೇಳಲು ಬಯಸದ ಆ ಆಘಾತಕಾರಿ ಕರೆ ಬಂದಿತು.
‘ಅವನು ಅರೆಸ್ಟ್ ಆದ ದಿನ ನಾನು ಅವನೊಂದಿಗೆ ಕೆಲವು ನಿಮಿಷಗಳಷ್ಟೇ ಮಾತನಾಡಿದೆ’ ಎಂದು ಶೆಹನಾಝ್ ಹೇಳಿದರು. ‘ಮಲೇಷ್ಯಾದ ವಲಸೆ ಇಲಾಖೆ ಅಧಿಕಾರಿಗಳು ನನ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವನು ಹೇಳಿದ. ಆ ಬಳಿಕ ನಾನು ಅವನೊಂದಿಗೆ ಮಾತನಾಡಿಲ್ಲ.’
ವೀಸಾ ಅವಧಿ ಮೀರಿದ ಕಾರಣಕ್ಕಾಗಿ ಸಮೀರ್ ಅವರನ್ನು ಬಂಧಿಸಲಾಗಿತ್ತು. ಅಂದರೆ, ಕಳ್ಳಸಾಗಣೆದಾರರು ಅವರ ಮೇಲೆ ಹೇರಿದ್ದ ಪ್ರವಾಸಿ ವೀಸಾದಿಂದಲೇ ಅವರು ಬಂಧನಕ್ಕೊಳಗಾಗಬೇಕಾಯಿತು. ದಂಡ ಪಾವತಿಸಬೇಕಾಗುತ್ತದೆ ಎಂದೂ, ಆ ಹಣವನ್ನು ಇಶಾ ಪಾವತಿಸುತ್ತಾನೆ ಎಂದೂ ಸಮೀರ್ ತಮ್ಮ ಪತ್ನಿಗೆ ತಿಳಿಸಿದ್ದರು. ಆದರೆ ಇಶಾ ಆ ಹಣವನ್ನು ಪಾವತಿಸಲೇ ಇಲ್ಲ.
‘ಇಂದಿಗೂ ಇಶಾ ನಮ್ಮ ಫೋನ್ ಕರೆಗಳಿಗೂ ಉತ್ತರಿಸುತ್ತಿಲ್ಲ’ ಎಂದು ಶೆಹನಾಝ್ ಹೇಳಿದ್ದಾರೆ.
ಈ ಬಂಧನದ ಹಿಂದಿನ ಕ್ರೂರ ಸತ್ಯವನ್ನು ಗೊರನಾ ದೃಢಪಡಿಸುತ್ತಾರೆ. ಅವನ ಟೂರಿಸ್ಟ್ ವೀಸಾಅವಧಿ ಮುಗಿದಿತ್ತು ಮತ್ತು ಅವಧಿ ಮೀರಿ ಅಲ್ಲೇ ಉಳಿದುಕೊಂಡಿದ್ದ. ಅಧಿಕಾರಿಗಳು ಅವನಲ್ಲಿ, ‘ನೀವು ಇಲ್ಲೇಕೆ ಇದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವನು, ‘ನಾನು ಕೆಲಸ ಮಾಡಲು ಬಂದಿದ್ದೇನೆ’ ಎಂದಿದ್ದಾನೆ. ಆಗ ಅವರು, ‘ನಿಮ್ಮ ಬಳಿ ಕೆಲಸದ ಪರವಾನಗಿ ಇಲ್ಲ, ಹೀಗಿರುವಾಗ ನೀವು ಹೇಗೆ ಕೆಲಸ ಮಾಡುತ್ತಿದ್ದೀರಿ?’ ಎಂದು ಕೇಳಿದ್ದಾರೆ.
ಈ ಬಡ ಜನರಿಗೆ ಕೆಲಸದ ಪರವಾನಗಿ ಬಗ್ಗೆ ಏನೂ ಗೊತ್ತಿರುವುದಿಲ್ಲ. ಅವರು ಕಳ್ಳಸಾಗಣೆದಾರರನ್ನು ಸಂಪೂರ್ಣವಾಗಿ ನಂಬಿ ಮೋಸಹೋಗಿದ್ದಾರೆ.
► ಸಮೀರ್ ಗೆ ಸಂಬಂಧವೇ ಇಲ್ಲದ ಜಾಮೀನು ಪತ್ರ
ಕುಟುಂಬದವರು ನಂಬಿಕೆ ಇಟ್ಟುಕೊಂಡಿದ್ದ ಒಂದೇ ಒಂದು ಕಾಗದಪತ್ರವಿದೆ. ಇಶಾ ಅದನ್ನು ಅವರಿಗೆ ನೀಡುತ್ತಾ, ಸಮೀರ್ ಗೆ ಜಾಮೀನು ಸಿಕ್ಕಿದೆ ಮತ್ತು ಅವರು ಬಿಡುಗಡೆಯಾಗಿ ಬರುತ್ತಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಹೇಳಿದ್ದನು.
ಅದು ಮಲಯ ಭಾಷೆಯಲ್ಲಿದ್ದ ದಾಖಲೆಯಾಗಿದ್ದು, ಇಂಗ್ಲಿಷ್ ಭಾಷೆಯೂ ಬಾರದ ಆ ಕುಟುಂಬಕ್ಕೆ ಆ ಭಾಷೆಯು ಸಂಪೂರ್ಣವಾಗಿ ಅಪರಿಚಿತವಾಗಿತ್ತು. ಗೊರನಾ ಆ ದಾಖಲೆಯನ್ನು ಪಡೆದು ಪರಿಶೀಲಿಸಿದಾಗ ಅದಕ್ಕೂ ಸಮೀರ್ಗೂ ಯಾವುದೇ ಸಂಬಂಧವಿರಲಿಲ್ಲ.
ಆ ಕಾಗದವು ತೀವ್ರ ಶೋಧ ನಡೆಸಿದಾಗ ಕಾರ್ಮಿಕರಿಂದ ತುಂಬಿದ್ದ ಮನೆಯೊಂದರ ಮಾಲೀಕನಾದ ಟಿಯು ಚಿನ್ ಹಾಂಗ್ (Tiew Chin Hong) ಎಂಬಾತನಿಗೆ ಮಲೇಷ್ಯಾ ಪೊಲೀಸರು ನೀಡಿದ್ದ ಜಾಮೀನು ಪತ್ರವಾಗಿತ್ತು. ಆ ಮನೆಮಾಲೀಕನಿಗೆ ಮಾತ್ರ ಜಾಮೀನು ಮಂಜೂರಾಗಿತ್ತು. ಆದರೆ ಸಮೀರ್ ಮಾತ್ರ ಜೈಲಲ್ಲೇ ಉಳಿದುಕೊಂಡಿದ್ದರು.
ಅಂದರೆ, ಇಶಾ ಒಬ್ಬ ಅಪರಿಚಿತ ವ್ಯಕ್ತಿಯ ಜಾಮೀನು ದಾಖಲೆಯನ್ನು ತೆಗೆದುಕೊಂಡು, ತಮ್ಮ ಮಗ ಬಿಡುಗಡೆಯಾಗಿದ್ದಾನೆ ಎಂದು ನಂಬಿಸಿ ಆ ಕುಟುಂಬವನ್ನು ವಂಚಿಸಿದ್ದನು.
‘ಕಳ್ಳಸಾಗಣೆದಾರ ಇಶಾ ಜನರನ್ನು ಈ ರೀತಿಯೆಲ್ಲಾ ಮೂರ್ಖರನ್ನಾಗಿ ಮಾಡುತ್ತಾ ಬಂದಿದ್ದಾನೆ’ ಎಂದು ಗೊರನಾ ಹೇಳಿದರು.
► ಮೂರು ದೂರುಗಳು, ಒಂದೂ FIR ಇಲ್ಲ
ಬಬ್ಬರ್ ಪ್ರಕರಣದಲ್ಲಂತೂ ಹೇಗೋ ಒಂದು FIR ದಾಖಲಾಯಿತು, ಆದರೆ ಸಮೀರ್ ವಿಷಯದಲ್ಲಿ ಏನೂ ಆಗಲಿಲ್ಲ. ಜುಲೈನಿಂದಲೇ ದೂರುಗಳನ್ನು ನೀಡುತ್ತಾ ಬಂದಿದ್ದರೂ, ವರದಿ ಪ್ರಕಟವಾಗುವವರೆಗೆ ಯಾವುದೇ FIR ದಾಖಲಾಗಿರಲಿಲ್ಲ.
ಸಮೀರ್ ಅವರ ಸಹೋದರ ಸೊಹೈಲ್ ಮತ್ತು ಕಾರ್ಯಕರ್ತ ನಿರ್ಮಲ್ ಗೊರನಾ ಹೇಳುವಂತೆ, ಜುಲೈ ತಿಂಗಳಲ್ಲಿ ಮಲೇಷ್ಯಾ ಪೊಲೀಸರು ಸಮೀರ್ ಅವರನ್ನು ಬಂಧಿಸಿದ ತಕ್ಷಣವೇ ಕುಟುಂಬವು ಸಹಾಯಕ್ಕಾಗಿ ಪ್ರಯತ್ನಿಸಲು ಆರಂಭಿಸಿತ್ತು. ಅವರು ಮೊದಲು ಗಾಂಧಿ ಕಾಲೋನಿ ಪೊಲೀಸ್ ಹೊರಠಾಣೆಯನ್ನು ಸಂಪರ್ಕಿಸಿದರು, ಆದರೆ ಅಲ್ಲಿನ ಅಧಿಕಾರಿಗಳು ಕಾಲಹರಣ ಮಾಡಿದರು. ದೂರಿನ ಸ್ವೀಕೃತಿಯನ್ನೂ ನೀಡಲಿಲ್ಲ ಮತ್ತು ಬೇರೆ ಯಾವುದೇ ಠಾಣೆಗೆ ಹೋಗಬೇಡಿ, ನಾವೇ ಇದನ್ನು ಬಗೆಹರಿಸುತ್ತೇವೆ ಎಂದು ಹೇಳಿ ಕಳುಹಿಸಿದರು.
ನಂತರ ಕುಟುಂಬದವರು ಮುಝಫರ್ ನಗರದ ನೈ ಮಂಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೆ ದೂರು ದಾಖಲಿಸಿದರು. ಆದರೆ ಇಲ್ಲೂ ಕೂಡ ಅವರಿಗೆ ಯಾವುದೇ ಸ್ವೀಕೃತಿ ಪತ್ರವನ್ನು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅದರ ನಂತರ ಶೆಹನಾಝ್ ವಿವರಿಸುವಂತೆ, ಕಚೇರಿಯಿಂದ ಕಚೇರಿಗೆ ಅಲೆದದ್ದೇ ಆಯಿತು.
‘ನಾವು ಜಿಲ್ಲಾಧಿಕಾರಿಗಳ ಬಳಿಗೆ ಹೋದೆವು. ಅವರು, “ಈಗ ಎಸ್ಎಸ್ಪಿ ಬಳಿ ಹೋಗಿ” ಎಂದರು. ನಂತರ ನಾವು ಎಸ್ಎಸ್ಪಿ ಬಳಿಗೆ ಹೋದೆವು. ಅವರು ನಮ್ಮನ್ನು ನೈ ಮಂಡಿ ಪೊಲೀಸ್ ಠಾಣೆಗೆ ಕಳುಹಿಸಿದರು. ತಾವು ಹೋದ ಪ್ರತಿಯೊಂದು ಕಚೇರಿಯಲ್ಲೂ ದೂರು ಸ್ವೀಕೃತಿ ಪತ್ರವನ್ನು ನೀಡುವಂತೆ ಕೇಳಿದೆವು. ಅದು ನಮ್ಮ ಹಕ್ಕು. ಆದರೆ ಇಲ್ಲಿ ಅಂತಹ ಯಾವುದೇ ವ್ಯವಸ್ಥೆ ಇಲ್ಲ’ ಎಂದಿದ್ದಾರೆ.
ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ‘ದಿ ಪ್ರೋಬ್’ ಪ್ರಯತ್ನಿಸಿತು. ಕುಟುಂಬದವರು ಮೊದಲು ಹೋಗಿದ್ದ ಗಾಂಧಿ ಕಾಲೋನಿ ಪೊಲೀಸ್ ಹೊರಠಾಣೆಗೆ ಪದೇ ಪದೇ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.
ನೈ ಮಂಡಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಹರಿ ಓಂ ಸಿಂಗ್ ಮಾತನಾಡಿ, ಸಮೀರ್ ಪ್ರಕರಣದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲವೆಂದೂ, ಯಾವುದೇ FIR ದಾಖಲಾಗದಿರಲು ಕಾರಣವೇನು ಎಂಬುದನ್ನು ತಿಳಿಯಲು ಮೊದಲು ಠಾಣಾಧಿಕಾರಿಯೊಂದಿಗೆ ಮಾತನಾಡಬೇಕಾಗುತ್ತದೆ ಎಂದರು.
ಇನ್ನು ಮುಝಫರ್ ನಗರದ ಎಸ್ಎಸ್ಪಿ ಸಂಜಯ್ ಕುಮಾರ್ ವರ್ಮಾ ಅವರ ಕಚೇರಿಯ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಎಸ್ಎಸ್ಪಿ ಅವರು ಸಭೆಯಲ್ಲಿದ್ದಾರೆ ಎಂದು ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಕರಣ್ ತಿಳಿಸಿದರು. ತಮಗೂ ಈ ಪ್ರಕರಣದ ಯಾವುದೇ ವಿವರಗಳಿಲ್ಲವೆಂದೂ, ನೈ ಮಂಡಿ ಠಾಣಾಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ ಎಂದೂ ಹೇಳಿದರು.
ಕುಟುಂಬದವರಿಗೆ ದೂರುಗಳ ಸ್ವೀಕೃತಿ ಪತ್ರ ಏಕೆ ಸಿಕ್ಕಿಲ್ಲ ಎಂಬ ಪ್ರಶ್ನೆಗೂ, ತಾವು ಠಾಣಾಧಿಕಾರಿಯನ್ನು ಸಂಪರ್ಕಿಸಬೇಕು ಎಂದಷ್ಟೇ ಅವರು ಉತ್ತರಿಸಿದರು. ಆದರೆ ಠಾಣಾಧಿಕಾರಿಗಳು ಮಾತ್ರ ಪ್ರತಿಕ್ರಿಯಿಸಲು ಲಭ್ಯವಿರಲಿಲ್ಲ.
► ವಂಚನೆ ಜಾಲ
ಬಬ್ಬರ್ ಮತ್ತು ಸಮೀರ್ ಅವರಿಗಾದ ಅನುಭವಗಳನ್ನು ಗಮನಿಸಿದರೆ, ಇದು ಯಾರೋ ಒಬ್ಬ ಏಕಾಂಗಿ ವ್ಯಕ್ತಿಯ ಕೃತ್ಯವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಇದರದ್ದೇ ಆದ ನಿರ್ದಿಷ್ಟ ವಿಧಾನವಿದೆ.
ಅತ್ಯಂತ ಬಡವರನ್ನು ಗುರುತಿಸುವುದು, ತಿಂಗಳಿಗೆ 70,000 ರೂ. ಸಂಬಳದ ಕೆಲಸದ ಆಮಿಷ ಒಡ್ಡುವುದು, 1.6ರಿಂದ 2 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡುವುದು, ಕೆಲಸದ ಪರವಾನಗಿ ಬದಲಿಗೆ ಟೂರಿಸ್ಟ್ ವೀಸಾನೀಡುವುದು, ಥೈಲ್ಯಾಂಡ್ ಮೂಲಕ ಹಾಗೂ ಕಾಲ್ನಡಿಗೆಯಲ್ಲಿ ಗಡಿ ದಾಟಿಸಿ ಮಲೇಷ್ಯಾಕ್ಕೆ ಕರೆದೊಯ್ಯುವುದು, ಅವರ ಪಾಸ್ ಪೋರ್ಟ್ ಗಳನ್ನು ಕಸಿದುಕೊಳ್ಳುವುದು ಮತ್ತು ಕಾರ್ಮಿಕರ ವೇತನವನ್ನು ಕಳ್ಳಸಾಗಣೆದಾರರೇ ಜೇಬಿಗಿಳಿಸಿಕೊಂಡು, ಆ ಕಾರ್ಮಿಕರನ್ನು ಯಾವುದೇ ಕೂಲಿ ನೀಡದೆ ಅಥವಾ ಕಡಿಮೆ ಕೂಲಿಗೆ ಕಂಪೆನಿಯಿಂದ ಕಂಪೆನಿಗೆ ಮಾರಾಟ ಮಾಡುವುದು. ಎರಡು ಬೇರೆ ಬೇರೆ ಜಿಲ್ಲೆಗಳ ಕುಟುಂಬಗಳ ದೂರುಗಳಲ್ಲಿ ಇಶಾ, ನದೀಮ್, ತಾಲೀಬ್, ತಯ್ಯಬ್, ದಿಲ್ಶಾದ್ ಮುಂತಾದ ಒಂದೇ ಹೆಸರುಗಳು ಪದೇ ಪದೇ ಕೇಳಿಬರುತ್ತಿವೆ.
ಈ ಜಾಲವು ಕಾರ್ಮಿಕರನ್ನು ರಕ್ಷಿಸಬೇಕಾದ ವ್ಯವಸ್ಥೆಯಲ್ಲಿರುವ ಲೋಪಗಳನ್ನೇ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತದೆ. ಭಾರತವು ‘ವಲಸೆ ತಪಾಸಣೆ ಅಗತ್ಯವಿರುವ’ ಎಂದು ಪಟ್ಟಿ ಮಾಡಿರುವ 18 ದೇಶಗಳಲ್ಲಿ ಮಲೇಷ್ಯಾವೂ ಒಂದಾಗಿದೆ. ಸರಳವಾಗಿ ಹೇಳುವುದಾದರೆ, ಸರ್ಕಾರದ ವಲಸೆ ರಕ್ಷಕರ ಅನುಮತಿ ಸಿಗುವವರೆಗೆ ಮತ್ತು ಪರವಾನಗಿ ಪಡೆದ ನೇಮಕಾತಿ ಏಜೆಂಟ್ ಹಾಗೂ ನೋಂದಾಯಿತ ಉದ್ಯೋಗದಾತರ ಮೂಲಕ ಕೆಲಸ ಸಿಗದ ಹೊರತು, ಔಪಚಾರಿಕ ಶಿಕ್ಷಣವಿಲ್ಲದ ಕಾರ್ಮಿಕರನ್ನು ಕಾನೂನುಬದ್ಧವಾಗಿ ಅಲ್ಲಿಗೆ ಕೆಲಸಕ್ಕೆ ಕಳುಹಿಸಲು ಸಾಧ್ಯವಿಲ್ಲ.
ಇಲ್ಲಿ ಆರೋಪ ಹೊರಿಸಲಾಗಿರುವ ಯಾರೂ ಕೂಡ ಪರವಾನಗಿ ಪಡೆದ ಅಧಿಕೃತ ಏಜೆಂಟ್ಗಳಲ್ಲ. ಕಾರ್ಮಿಕರನ್ನು ಪ್ರವಾಸಿಗರಂತೆ ಥೈಲ್ಯಾಂಡ್ ಮೂಲಕ ಮತ್ತು ಕಾಲ್ನಡಿಗೆಯಲ್ಲಿ ಗಡಿ ದಾಟಿಸಿ ಕಳುಹಿಸುವ ಮೂಲಕ ಕಳ್ಳಸಾಗಣೆದಾರರು ಈ ಎಲ್ಲಾ ತಪಾಸಣೆಗಳನ್ನು ಸಂಪೂರ್ಣವಾಗಿ ತಪ್ಪಿಸಿಕೊಳ್ಳುತ್ತಾರೆ. ಸಮೀರ್ ಅಥವಾ ಇತರರಿಗಾಗಿ ಅಂತಹ ಯಾವುದೇ ಅಧಿಕೃತ ಅನುಮತಿಯನ್ನು ಪಡೆದುಕೊಂಡಿರಲಿಲ್ಲ.
ಈ ಕಳ್ಳಸಾಗಣೆ ಜಾಲವು ಬಹಳ ದೊಡ್ಡದಾಗಿದೆ ಎಂದು ಬಬ್ಬರ್ ನಂಬುತ್ತಾರೆ. ಮಲೇಷ್ಯಾದಲ್ಲಿ 18 ಕಾರ್ಮಿಕರಿದ್ದ ಒಂದು ಕೋಣೆಯನ್ನು ಮತ್ತು ಅಲ್ಲಿ ನಿರಂತರವಾಗಿ ಭಾರತೀಯರು ಬಂದುಹೋಗುತ್ತಿದ್ದರು.
ದಾಖಲೆಗಳು ಸೂಚಿಸುವಂತೆ ಇದೊಂದು ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಮತ್ತು ಅಂತರರಾಷ್ಟ್ರೀಯ ಬಂಧಿತ ಕಾರ್ಮಿಕ ಪದ್ಧತಿಯ ದೊಡ್ಡ ಪ್ರಕರಣವಾಗಿದೆ ಎಂದು ಗೊರನಾ ಹೇಳಿದ್ದಾರೆ.
► ಉತ್ತರವಿಲ್ಲದ ಪ್ರಶ್ನೆಗಳು
ಒಂದೇ ದಿನ ದಿಲ್ಲಿಯಿಂದ ಹೊರಟ ಇಬ್ಬರು ವ್ಯಕ್ತಿಗಳಿಗೆ, ಒಂದೇ ರೀತಿಯ ಸುಳ್ಳು ಹೇಳಿ ವಂಚಿಸಲಾಗಿತ್ತು. ಒಬ್ಬ ಹೇಗೋ ಮಾಡಿ ಮನೆಗೆ ವಾಪಸಾದನು, ಆದರೆ ಅಲ್ಲಿ ಆತನನ್ನು ಕಾಯುತ್ತಿದ್ದುದು ಸಾಲದ ಸುಳಿ, ಆಹಾರವಿಲ್ಲದ ಮನೆ ಮತ್ತು ಶಾಲೆಗೆ ಹೋಗುವುದನ್ನು ನಿಲ್ಲಿಸಿದ ಇಬ್ಬರು ಹೆಣ್ಣುಮಕ್ಕಳು. ಇಂದು ಆತ ಕಬ್ಬಿನ ಗದ್ದೆಯಲ್ಲಿ ದಿನಗೂಲಿಗಾಗಿ ಕಬ್ಬು ಕಟ್ಟುವ ಕೆಲಸ ಮಾಡುತ್ತಿದ್ದಾನೆ.
ಮತ್ತೊಬ್ಬ ವ್ಯಕ್ತಿ ಸುಮಾರು ಎರಡು ತಿಂಗಳಿಂದ ಮಲೇಷ್ಯಾ ಜೈಲಿನಲ್ಲಿದ್ದಾನೆ. ಆತನ ಆರೋಗ್ಯ ಹೇಗಿದೆ ಎಂದು ಕುಟುಂಬಕ್ಕೆ ತಿಳಿದಿಲ್ಲ. ತನ್ನನ್ನು ಬಂಧಿಸಲಾಗಿದೆ ಎಂದು ಆತ ಕೊನೆಯದಾಗಿ ಫೋನ್ ಮಾಡಿ ಮಾತನಾಡಿದ ಬಳಿಕ ಆತನ ಧ್ವನಿಯನ್ನು ಕುಟುಂಬದವರು ಕೇಳಿಲ್ಲ.
ಎರಡು ಜಿಲ್ಲೆಗಳ ಪೊಲೀಸ್ ದೂರುಗಳಲ್ಲಿ ಹೆಸರಿಸಲಾಗಿರುವ ಇಶಾ ಎಂಬ ಕಳ್ಳಸಾಗಣೆದಾರನನ್ನು ಈವರೆಗೂ ಯಾವುದೇ ಪ್ರಕರಣದಲ್ಲೂ ಬಂಧಿಸಿಲ್ಲ. ಆತ ಇನ್ನೂ ಮುಕ್ತವಾಗಿ ತಿರುಗಾಡುತ್ತಿದ್ದಾನೆ.
‘ಇಷ್ಟು ಜನರ ಜೀವನದೊಂದಿಗೆ ಆಟವಾಡಿದರೂ ಆತ ಹೇಗೆ ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ ಸೊಹೈಲ್.
‘ಈ ರೀತಿಯಾಗಿ ಜನರನ್ನು ಮೋಸಗೊಳಿಸಿ ಸಿಲುಕಿಸುವವರನ್ನು ಜೈಲಿಗೆ ಹಾಕಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಶೆಹನಾಝ್ ಹೇಳಿದರು.
‘ಹಾಗೆಯೇ ನನ್ನ ಪತಿಯನ್ನು ಬಿಡುಗಡೆ ಮಾಡಿ ಭಾರತಕ್ಕೆ ವಾಪಸ್ ಕರೆತರಬೇಕು. ಆತ ಅಪರಾಧಿಯಲ್ಲ, ಬದಲಿಗೆ ಒಬ್ಬ ಸಂತ್ರಸ್ತ. ಎರಡೂ ಕಡೆಯ ಅಧಿಕಾರಿಗಳಿಗೆ ಇದು ಯಾವಾಗ ಅರ್ಥವಾಗುತ್ತದೆ?’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆಲ್ಲದರ ನಡುವೆ ಅಧಿಕಾರಿಗಳು ಉತ್ತರಿಸಬೇಕಾದ ಪ್ರಶ್ನೆಗಳು ಹಾಗೆಯೇ ಉಳಿದಿವೆ. ಸಮೀರ್ ಅವರನ್ನು ಬಂಧಿಸಿ ಸುಮಾರು ಎರಡು ತಿಂಗಳು ಕಳೆದುಹೋಗಿದ್ದರೂ ಮತ್ತು ನಾಲ್ಕು ಬೇರೆ ಬೇರೆ ಕಚೇರಿಗಳಿಗೆ ದೂರು ನೀಡಿದ್ದರೂ ಇದುವರೆಗೆ ಯಾಕೆ FIR ದಾಖಲಾಗಿಲ್ಲ? ಬಬ್ಬರ್ ಪ್ರಕರಣದಲ್ಲಿ ಎರಡು ತಿಂಗಳು ತಡವಾಗಿ FIR ದಾಖಲಿಸಿದ್ದು ಯಾಕೆ ಮತ್ತು ಅದರಲ್ಲಿ ಕಳ್ಳಸಾಗಣೆ ಅಥವಾ ಬಲವಂತದ ಕಾರ್ಮಿಕ ಪದ್ಧತಿಯ ಸೆಕ್ಷನ್ಗಳನ್ನು ಯಾಕೆ ಸೇರಿಸಿಲ್ಲ? ಮುಖ್ಯ ಆರೋಪಿಯ ವಿಳಾಸ ತಿಳಿದಿದ್ದರೂ, ಎರಡೂ ಜಿಲ್ಲೆಗಳಲ್ಲಿ ಆತನನ್ನು ಯಾಕೆ ಇನ್ನೂ ಬಂಧಿಸಿಲ್ಲ? ಸಂತ್ರಸ್ತ ವ್ಯಕ್ತಿಯ ಹೇಳಿಕೆ ಪ್ರಕಾರ, ಮಲೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯಾವುದೇ ಸಹಾಯ ಮಾಡದಿರಲು ಕಾರಣವೇನು? ಹಾಗೂ ಮಲೇಷ್ಯಾಕ್ಕೆ ಕಳ್ಳಸಾಗಣೆಯಾದವರ ಕುಟುಂಬಗಳು ನೀಡಿದ ದೂರುಗಳಿಗೆ ಕನಿಷ್ಠ ಸ್ವೀಕೃತಿ ಪತ್ರವನ್ನೂ ನೀಡದೆ, ‘ಇಲ್ಲಿ ಅಂತಹ ಯಾವುದೇ ವ್ಯವಸ್ಥೆ ಇಲ್ಲ’ ಎಂದು ಯಾಕೆ ತಿರಸ್ಕರಿಸಲಾಯಿತು?
ಈ ಪ್ರಶ್ನೆಗಳಿಗೆ ಉತ್ತರ ಸಿಗದ ಪ್ರತಿ ವಾರವೂ, ಇಶಾನಂಥಿರುವ ವ್ಯಕ್ತಿಗಳು ಮತ್ತಷ್ಟು ಜನರನ್ನು ವಿದೇಶಗಳಿಗೆ ಕಳುಹಿಸುತ್ತಲೇ ಇರುತ್ತಾರೆ ಎಂದು ಕುಟುಂಬಗಳು ಮತ್ತು ಗೊರನಾ ಎಚ್ಚರಿಸಿದ್ದಾರೆ.
ಕಳ್ಳಸಾಗಣೆ ಜಾಲದ ವ್ಯಾಪ್ತಿ ಹೇಗಿದೆ ಎಂಬುದನ್ನು ಬಬ್ಬರ್ ಕಣ್ಣಾರೆ ಕಂಡಿದ್ದಾರೆ. ಮಲೇಷ್ಯಾದಲ್ಲಿ ತಾನು ಕಳೆದ ತಿಂಗಳುಗಳಲ್ಲಿ ನೂರಾರು ಸಂತ್ರಸ್ತ ಭಾರತೀಯ ಕಾರ್ಮಿಕರನ್ನು ನೋಡಿದ್ದಾರೆ. ತಾನು ಹೋದ ಅದೇ ಮಾರ್ಗದಲ್ಲಿ ಸಾವಿರಾರು ಜನರನ್ನು ಮಲೇಷ್ಯಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ.
‘ಈ ಕೃತ್ಯದಲ್ಲಿ ಭಾಗಿಯಾಗಿರುವುದು ಇಶಾ ಮಾತ್ರವಲ್ಲ. ನನ್ನಂತಹ ಸಾವಿರಾರು ಜನರು ಹೊರಗಿದ್ದಾರೆ, ಮತ್ತು ಇಶಾನಂತಹ ಇನ್ನೂ ಹಲವರಿದ್ದಾರೆ. ಇಶಾ ಕೇವಲ ಈ ದೊಡ್ಡ ಸಿಂಡಿಕೇಟ್ನ ಒಂದು ಸಣ್ಣ ಭಾಗ ಮಾತ್ರ, ಪೊಲೀಸರಿಗೆ ಆತನ ಬಗ್ಗೆ ಗೊತ್ತಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.’
ಸೌಜನ್ಯ: theprobe.in