ಭಾರತದಲ್ಲಿ ಕಲುಷಿತ ನೀರು ಪ್ರಕರಣ | ಪೈಪ್‌ಲೈನ್ ಮೂಲಕ ಸರಬರಾಜಾಗುವ ನೀರು ಹಾಗೆಯೇ ಕುಡಿಯಬಹುದಾ?
ಸಾಂದರ್ಭಿಕ ಚಿತ್ರ | Photo Credit : freepik
ಇಂದೋರ್ ನ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದು, 398 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 256 ಮಂದಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ ನಲ್ಲಿ ಕಲುಷಿತ ನೀರು ಪ್ರಕರಣ ವರದಿಯಾದ ನಂತರ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ ಇ.ಕೋಲಿ, ಸಾಲ್ಮೊನೆಲ್ಲಾ ಹಾಗೂ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾಗಳಂತಹ ಮಾರಕ ರೋಗಾಣುಗಳು ಪತ್ತೆಯಾಗಿವೆ.
ಆದರೆ ಇಂದೋರ್ ದುರಂತ ಒಂದು ಪ್ರತ್ಯೇಕ ಘಟನೆ ಅಲ್ಲ. ಇದಕ್ಕೂ ಮೊದಲು 2025ರಲ್ಲಿ ಗುರ್ಗಾಂವ್‌ನ ಸೆಕ್ಟರ್ 70A, ಅಕ್ಟೋಬರ್ ನಲ್ಲಿ ಪುಣೆಯ ಬವ್ಧಾನ್, ಭೂಸಾರಿ ಕಾಲೋನಿ ಮತ್ತು ಭುಗಾಂವ್ ಪ್ರದೇಶಗಳಲ್ಲಿ, ಸೆಪ್ಟೆಂಬರ್ ನಲ್ಲಿ ದಿಲ್ಲಿಯ ಜನಕ್‌ಪುರಿ ಹಾಗೂ ವಸಂತ್ ಕುಂಜ್ ಪ್ರದೇಶಗಳಲ್ಲಿಯೂ ಕಲುಷಿತ ನೀರಿನ ಪ್ರಕರಣಗಳು ವರದಿಯಾಗಿದ್ದವು. ಇಂದೋರ್ ದುರಂತದಂತೆಯೇ, ಚೆನ್ನೈ ಸಮೀಪದ ತಿರುವಲ್ಲೂರು ಜಿಲ್ಲೆಯ ಕಾರ್ಲಂಬಕ್ಕಂ ಕಾಲೋನಿಯಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದರು. ಪ್ರಮುಖ ನಗರಗಳಲ್ಲಿ ಕುಡಿಯುವ ನೀರು ಸುರಕ್ಷಿತವಲ್ಲ ಎಂಬುದನ್ನು ಈ ಪ್ರಕರಣಗಳು ಸ್ಪಷ್ಟಪಡಿಸುತ್ತವೆ.
►ನಿರ್ದಿಷ್ಟ ಸಮಯದಲ್ಲಿ ಮಾತ್ರ ನೀರು ಪೂರೈಕೆ, ಸವೆದ ಪೈಪ್‌ಗಳು
ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅರ್ಬನ್ ಗವರ್ನೆನ್ಸ್ ಆಂಡ್ ಎನ್ವಿರಾನ್ಮೆಂಟ್‌ನ ಮಾಜಿ ನಿರ್ದೇಶಕ ಶ್ರೀನಿವಾಸ ಚಾರಿ ವೇದಾಲ ಅವರು, “ನೀರು ಪೈಪ್‌ಗಳಲ್ಲಿ ಸೀಮಿತ ಗಂಟೆಗಳ ಕಾಲ ಮಾತ್ರ ಹರಿಯುವಾಗ, ವಿತರಣಾ ಪೈಪ್‌ಗಳು ದೀರ್ಘಕಾಲ ಖಾಲಿಯಾಗಿರುತ್ತವೆ. ಈ ಸಂದರ್ಭದಲ್ಲಿ ಒಳಗಿನ ಒತ್ತಡ ಕುಸಿದು, ಕಲುಷಿತ ಅಂತರ್ಜಲ ಅಥವಾ ಹಳೆಯ ಪೈಪ್‌ಗಳಲ್ಲಿನ ಬಿರುಕುಗಳ ಮೂಲಕ ಒಳಚರಂಡಿ ನೀರನ್ನು ಒಳಗೆ ಎಳೆದುಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.
ಈ ರೀತಿಯ ಮಾಲಿನ್ಯ ವಿತರಣಾ ಪೈಪ್‌ಗಳಲ್ಲಿ ಮಾತ್ರವಲ್ಲದೆ ಮನೆಗಳ ಒಳಗೂ ಸಂಭವಿಸಬಹುದು. ಮನೆಗಳಲ್ಲಿ ನೀರು ಸಂಗ್ರಹಿಸುವ ಪಾತ್ರೆಗಳು ಶುಚಿಯಾಗಿರದಿದ್ದರೆ ರೋಗಾಣುಗಳು ಹರಡುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಸಿದ್ದಾರೆ.
1948ರಲ್ಲಿ ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಎಂಜಿನಿಯರಿಂಗ್ ಸಂಸ್ಥೆ (CPHEEO) ಪ್ರಕಟಿಸಿದ ಮೊದಲ ಕೈಪಿಡಿಯಲ್ಲಿ, 12–15 ಮೀಟರ್ ಎತ್ತರದವರೆಗೆ ನೀರು ತಲುಪಲು ಸಾಕಷ್ಟು ಒತ್ತಡದೊಂದಿಗೆ 24x7 ನೀರು ಪೂರೈಕೆಯನ್ನು ಶಿಫಾರಸು ಮಾಡಲಾಗಿತ್ತು. ಆದರೆ ಯಾವುದೇ ಪ್ರಮುಖ ಭಾರತೀಯ ನಗರವೂ ಇದನ್ನು ಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ ಎಂದು ವೇದಾಲ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನೀರು ಮತ್ತು ನೈರ್ಮಲ್ಯ ತಜ್ಞ ವಿಶ್ವನಾಥ್ ಎಸ್ ಅವರ ಪ್ರಕಾರ, ಈ ವಿನ್ಯಾಸವು ಪೈಪ್ ಗಳನ್ನು ನಿರಂತರವಾಗಿ ತುಂಬಿಟ್ಟುಕೊಳ್ಳುವ ಮೂಲಕ ಮಾಲಿನ್ಯದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿತ್ತು. ಮಾಲಿನ್ಯದ ವಿರುದ್ಧ ಒತ್ತಡದೊಂದಿಗೆ ನಡೆಯುವ ನೀರು ಪೂರೈಕೆಯೇ ಅತ್ಯಂತ ಪರಿಣಾಮಕಾರಿ ರಕ್ಷಣೆಯಾಗಿದೆ. ಸರಬರಾಜು ಪೈಪ್‌ಗಳಲ್ಲಿ ಸೋರಿಕೆಗಳನ್ನು ಪತ್ತೆಹಚ್ಚಲು ಪ್ರೆಶರ್ ಮೀಟರ್‌ಗಳು ಹಾಗೂ ಜಿಐಎಸ್ ಆಧಾರಿತ ವ್ಯವಸ್ಥೆಗಳನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ನೀರು ಸರಬರಾಜು ವ್ಯವಸ್ಥೆಯಲ್ಲಿನ ಕುಂದುಕೊರತೆಗಳ ಕುರಿತು ಜುಲೈ ತಿಂಗಳಲ್ಲೇ ಭಾಗೀರಥಪುರ ನಿವಾಸಿಗಳು ದೂರು ನೀಡಿದ್ದರು. ದುರ್ವಾಸನೆಯುಳ್ಳ ಕಲುಷಿತ ನೀರಿನ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೇ ಇದ್ದುದೇ ಪರಿಸ್ಥಿತಿ ತೀವ್ರಗೊಳ್ಳಲು ಕಾರಣವಾಯಿತು.
ಭಾರತದ ಬಹುತೇಕ ನಗರಗಳಲ್ಲಿ ತಂತ್ರಜ್ಞಾನ ಲಭ್ಯವಿದ್ದರೂ, ಜಿಐಎಸ್ ಆಧಾರಿತ ನೀರು ಸರಬರಾಜು ಜಾಲಗಳ ಮ್ಯಾಪಿಂಗ್ ಮತ್ತು ನಿರಂತರ ಸೋರಿಕೆ ಮೇಲ್ವಿಚಾರಣೆಯ ಅನುಷ್ಠಾನ ಇನ್ನೂ ಸೀಮಿತವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲೂ ಇದು ಮುಖ್ಯವಾಗಿ ಪ್ರದೇಶ ಆಧಾರಿತ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ.
►AMRUT ಯೋಜನೆಯ ಈಡೇರದ ಭರವಸೆ
2021ರಲ್ಲಿ ಪ್ರಾರಂಭವಾದ ಅಟಲ್ ಮಿಷನ್ ಫಾರ್ ರಿಜುವನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫರ್ಮೇಷನ್ (AMRUT) 2.0 ಅಡಿಯಲ್ಲಿ, 24x7 ನೀರು ಸರಬರಾಜು ಯೋಜನೆಗಳನ್ನು ಮತ್ತು ಕನಿಷ್ಠ ಒಂದು ವಾರ್ಡ್ ಅಥವಾ ಜಿಲ್ಲಾ ಮಾಪಕ ಪ್ರದೇಶದಲ್ಲಿ (DMA) 2,000ಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡ ನಲ್ಲಿಯಿಂದ ನೀರು ಪೂರೈಕೆಯನ್ನು ಉತ್ತೇಜಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 20% ವರೆಗೆ ಹೆಚ್ಚುವರಿ ಅನುದಾನ ನೀಡುತ್ತದೆ.
ಆದರೆ ಈ ಯೋಜನೆಯ ಅನುಷ್ಠಾನ ತೃಪ್ತಿಕರವಾಗಿಲ್ಲ. ಒಡಿಶಾದಲ್ಲಿ ಸುಮಾರು 10 ನಗರಗಳಲ್ಲಿ ನಲ್ಲಿಯಿಂದ 24x7 ಕುಡಿಯುವ ನೀರು ಲಭ್ಯವಿದ್ದರೆ, 20 ನಗರಗಳಲ್ಲಿ ಈ ಸೌಲಭ್ಯ 60% ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ. ಅಂದರೆ, ನಿವಾಸಿಗಳು ಯಾವುದೇ ಶುದ್ಧೀಕರಣ ಉಪಕರಣಗಳನ್ನು ಬಳಸದೇ ನೇರವಾಗಿ ನಲ್ಲಿಯಿಂದ ನೀರನ್ನು ಕುಡಿಯಬಹುದಾಗಿದೆ.
ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (JNNURM) ಸೇರಿದಂತೆ ಹಿಂದಿನ ಪ್ರಮುಖ ಯೋಜನೆಗಳೂ ಕೆಲವು ವಾರ್ಡ್‌ಗಳನ್ನು ಮೀರಿದ ಮಟ್ಟದಲ್ಲಿ ಯಶಸ್ಸು ಸಾಧಿಸಲು ವಿಫಲವಾಗಿವೆ. ಹೆಚ್ಚಿನ ಅನುಷ್ಠಾನ ನಗರಗಳ ಆಯ್ದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ.
ವಿಶ್ವಬ್ಯಾಂಕ್ ಉಲ್ಲೇಖಿಸಿದ 2010ರ ಸಮೀಕ್ಷೆಯ ಪ್ರಕಾರ, ಈ ನಗರಗಳಲ್ಲಿ ಕಡಿಮೆ ಆದಾಯದ ಕುಟುಂಬಗಳು ಉತ್ತಮ ಸೇವೆಗೆ ಕಡಿಮೆ ಹಣ ಪಾವತಿಸಿದ್ದರೆ, ಮೇಲ್ಛಾವಣಿ ಪಂಪಿಂಗ್ ಅಗತ್ಯವಿಲ್ಲದ ಕಾರಣ ಹೆಚ್ಚಿನ ಆದಾಯದ ಕುಟುಂಬಗಳು ವಿದ್ಯುತ್ ವೆಚ್ಚದಲ್ಲಿ ಉಳಿತಾಯ ಮಾಡಿಕೊಂಡಿವೆ. ಸಾರ್ವಜನಿಕ ಆರೋಗ್ಯ ಲಾಭಗಳ ಜೊತೆಗೆ, ಮಹಿಳಾ ಕಾರ್ಯಪಡೆ ಭಾಗವಹಿಸುವಿಕೆ ಮತ್ತು ಶಾಲಾ ಹಾಜರಾತಿಯಂತಹ ಸಾಮಾಜಿಕ ಸೂಚ್ಯಂಕಗಳಲ್ಲೂ ಸುಧಾರಣೆ ಕಂಡುಬಂದಿದೆ ಎಂದು ವರದಿ ಉಲ್ಲೇಖಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಮಾದರಿಗಳ ಸೀಮಿತ ಪರಿಣಾಮ ಕೇಂದ್ರ ಸರ್ಕಾರದ ಸಮೀಕ್ಷೆಗಳಲ್ಲೂ ಪ್ರತಿಬಿಂಬಿಸಿದೆ. ಫೆಬ್ರವರಿ 2024ರಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ನಡೆಸಿದ ಮೊದಲ ‘ಪೇ ಜಲ್ ಸರ್ವೇಕ್ಷಣ್’ ಪ್ರಶಸ್ತಿ ಕಾರ್ಯಕ್ರಮದಲ್ಲಿ, 485 ಅಮೃತ್ ನಗರಗಳಲ್ಲಿ ಕೇವಲ 46 ನಗರಗಳ ನೀರಿನ ಮಾದರಿಗಳು ಮಾತ್ರ ಕುಡಿಯಲು ಯೋಗ್ಯವಾಗಿವೆ ಎಂದು ತಿಳಿಸಿದೆ. ಮುಖ್ಯ ಕಾರ್ಯಕ್ರಮ ರದ್ದಾದ ನಂತರ ಸಮೀಕ್ಷೆಯ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ.
ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) 2024ರ ವರದಿಯ ಪ್ರಕಾರ, ಹೊಸದಿಲ್ಲಿಯ ಸಂಗಮ್ ವಿಹಾರ್‌ನಂತಹ ದೊಡ್ಡ ಯೋಜಿತವಲ್ಲದ ನಗರ ಪ್ರದೇಶಗಳಲ್ಲಿ ನೀರು ಮತ್ತು ತ್ಯಾಜ್ಯ ನೀರಿನ ಯೋಜನೆಗಳು ಸುರಕ್ಷಿತ ನೀರಿನ ನೈಜ ವಿತರಣೆಯಿಗಿಂತ ಪೈಪ್‌ಲೈನ್‌ಗಳ ಉದ್ದ ಮತ್ತು ನಲ್ಲಿ ಸಂಪರ್ಕಗಳ ಸಂಖ್ಯೆಯಂತಹ ಮೂಲಸೌಕರ್ಯ-ಕೇಂದ್ರಿತ ಮಾನದಂಡಗಳ ಮೇಲೆ ಹೆಚ್ಚು ಗಮನ ಹರಿಸುತ್ತಿವೆ.
ಪ್ರಸ್ತುತ ಒಡಿಶಾದ ಹತ್ತು ನಗರ ಕೇಂದ್ರಗಳು ನಲ್ಲಿಯಿಂದ ಕುಡಿಯುವ ನೀರಿನ ಸೌಲಭ್ಯದಲ್ಲಿ 100% ವ್ಯಾಪ್ತಿಯನ್ನು ಹೊಂದಿದ್ದು, ಇನ್ನೂ 14 ನಗರಗಳಲ್ಲಿ ಕಾರ್ಯ ನಡೆಯುತ್ತಿದೆ. ಆದಾಗ್ಯೂ, ಉತ್ತಮವಾಗಿ ನಿರ್ವಹಿಸಲ್ಪಟ್ಟ ಅನೇಕ ಭಾರತೀಯ ನಗರಗಳಲ್ಲೂ ಪ್ಯಾನ್-ಸಿಟಿ ಮಟ್ಟದಲ್ಲಿ ಈ ಉಪಕ್ರಮಗಳನ್ನು ಜಾರಿಗೆ ತರಲು ಸವಾಲುಗಳು ಮುಂದುವರಿದಿವೆ.
►ಮೂಲಸೌಕರ್ಯ ವಿಸ್ತರಣೆ
ಆಗಸ್ಟ್ 2019ರಲ್ಲಿ ಆರಂಭವಾದ ಜಲ ಜೀವನ್ ಮಿಷನ್ ವಿಶ್ವದ ಅತಿದೊಡ್ಡ ನೀರಿನ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಈ ಮಿಷನ್ ಮನೆಮನೆಗೆ ನೀರು ಪೂರೈಕೆಯ ಮೇಲೆ ಕೇಂದ್ರೀಕರಿಸಿ, ಪ್ರತಿಯೊಂದು ಗ್ರಾಮೀಣ ಮನೆಯಿಗೂ ನಲ್ಲಿ ನೀರಿನ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿತ್ತು.
2019ರಲ್ಲಿ ಗ್ರಾಮೀಣ ಮನೆಗಳಲ್ಲಿ ನಲ್ಲಿ ನೀರಿನ ಸಂಪರ್ಕ 16.7% ಇದ್ದರೆ, 2024ರ ಅಂತ್ಯದ ವೇಳೆಗೆ ಇದು 81%ಕ್ಕಿಂತ ಹೆಚ್ಚಾಗಿದೆ. ಈ ಯೋಜನೆಯ ಅನುಷ್ಠಾನವು ಗ್ರಾಮೀಣ ಭಾರತದಲ್ಲಿ ನೀರಿನ ಲಭ್ಯತೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
500 ನಗರಗಳನ್ನು ಗುರಿಯಾಗಿಸಿಕೊಂಡು ಅಟಲ್ ಮಿಷನ್ ಅಡಿಯಲ್ಲಿ ನಗರ ಪ್ರದೇಶಗಳಲ್ಲೂ ಬದಲಾವಣೆ ಕಂಡುಬಂದಿದೆ. ಹಿಂದೆ ಹ್ಯಾಂಡ್‌ಪಂಪ್, ಟ್ಯಾಂಕರ್‌ಗಳು ಅಥವಾ ಅಸುರಕ್ಷಿತ ಮೇಲ್ಮೈ ನೀರಿನ ಮೂಲಗಳನ್ನು ಅವಲಂಬಿಸಿದ್ದ ಲಕ್ಷಾಂತರ ಜನರಿಗೆ ಪೈಪ್ ಮೂಲಕ ನೀರು ಪೂರೈಕೆ ಲಭ್ಯವಾಗಿದೆ.
►ಕಲುಷಿತ ನೀರು, ಜಲ ಮಾಲಿನ್ಯ
ಭಾರತದ ನೀರು ಸರಬರಾಜಿನ ಪ್ರಮುಖ ಮೂಲ ಅಂತರ್ಜಲವೇ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿ 80%ಕ್ಕಿಂತ ಹೆಚ್ಚು ಅಂತರ್ಜಲದಿಂದಲೇ ದೊರೆಯುತ್ತದೆ.
ಕೇಂದ್ರೀಯ ಅಂತರ್ಜಲ ಮಂಡಳಿ (CGWB)ಯ 2024ರ ವಾರ್ಷಿಕ ಅಂತರ್ಜಲ ಗುಣಮಟ್ಟ ವರದಿ ಪ್ರಕಾರ, ದೇಶದಾದ್ಯಂತ 15,259 ಕೇಂದ್ರಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಸುಮಾರು 20%ರಲ್ಲಿ ನೈಟ್ರೇಟ್ ಪ್ರಮಾಣವು ಅನುಮತಿಸಲಾದ ಮಿತಿಯನ್ನು ಮೀರಿದೆ. ಫ್ಲೋರೈಡ್ ಮತ್ತು ಆರ್ಸೆನಿಕ್ ಕ್ರಮವಾಗಿ 9.04% ಮತ್ತು 3.35% ಮಾದರಿಗಳಲ್ಲಿ ಮಿತಿಯನ್ನು ಮೀರಿವೆ. ಈ ಮಾಲಿನ್ಯಕಾರಕಗಳು ಹೆಚ್ಚಾಗಿ ಮಣ್ಣಿನಿಂದಲೇ ಉಂಟಾಗುತ್ತಿದ್ದು, ಫ್ಲೋರೋಸಿಸ್, ಮೆಥೆಮೊಗ್ಲೋಬಿನೆಮಿಯಾ ಮತ್ತು ಕ್ಯಾನ್ಸರ್‌ನಂತಹ ರೋಗಗಳಿಗೆ ಕಾರಣವಾಗುತ್ತವೆ.
ಬಹುತೇಕ ಭಾರತೀಯ ನಗರಗಳಲ್ಲಿ ಪೈಪ್ ನೀರು ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಸರಬರಾಜಾಗುತ್ತದೆ. ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ವರದಿ ಸೇರಿದಂತೆ ಸರ್ಕಾರಿ ಲೆಕ್ಕಪರಿಶೋಧನೆಗಳು, ಈ ರೀತಿಯ ಪೂರೈಕೆಯಲ್ಲಿ ಪೈಪ್‌ಗಳಲ್ಲಿ ನೀರು ಹರಿಯದ ಸಮಯದಲ್ಲಿ ಒತ್ತಡ ಕುಸಿಯುವುದರಿಂದ ಕಲುಷಿತ ಹಾಗೂ ಒಳಚರಂಡಿ ನೀರು ಒಳಗೆ ನುಗ್ಗುವ ಅಪಾಯ ಹೆಚ್ಚುತ್ತದೆ ಎಂದು ಎಚ್ಚರಿಸಿವೆ.
ಈ ರೀತಿಯ ಪೂರೈಕೆಯ ಹಿನ್ನೆಲೆಯಲ್ಲಿ ಮನೆಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳು ಮತ್ತು ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಲಾಗುತ್ತದೆ. ಇಂತಹ ಸಂಗ್ರಹಿತ ನೀರಿನಲ್ಲಿ ರೋಗಾಣುಗಳ ಕಂಡುಬರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಹಾಗೂ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಅಡಿಯಲ್ಲಿ ನಡೆದ ಸಮೀಕ್ಷೆಗಳು ಬಹಿರಂಗಪಡಿಸಿವೆ.
►ಪ್ರಯೋಗಾಲಯಗಳಲ್ಲಿ ಮೂಲಸೌಕರ್ಯ ಕೊರತೆ
ಅನೇಕ ಜಿಲ್ಲಾ ಮಟ್ಟದ ನೀರಿನ ಪರೀಕ್ಷಾ ಪ್ರಯೋಗಾಲಯಗಳು ಅಗತ್ಯ ಮಾನ್ಯತೆ ಮತ್ತು ಸೂಕ್ತ ಉಪಕರಣಗಳನ್ನು ಹೊಂದಿಲ್ಲ ಎಂದು ಸಮೀಕ್ಷೆಗಳು ತಿಳಿಸುತ್ತವೆ. ತರಬೇತಿ ಪಡೆದ ರಸಾಯನಶಾಸ್ತ್ರಜ್ಞರು ಮತ್ತು ಸೂಕ್ಷ್ಮಜೀವಶಾಸ್ತ್ರಜ್ಞರ ಕೊರತೆಯೂ ಇದೆ. ವಿಶ್ವಾಸಾರ್ಹ ಪ್ರಯೋಗಾಲಯ ಪರೀಕ್ಷೆಗಳಿಲ್ಲದೆ, ಗ್ರಾಹಕರಿಗೆ ನೀರು ತಲುಪುವ ಮೊದಲು ಮಾಲಿನ್ಯವನ್ನು ಗುರುತಿಸುವುದು ಕಷ್ಟಕರವಾಗಿದೆ.
ಜಲ ಜೀವನ್ ಮಿಷನ್ ಸಮುದಾಯ ಮಟ್ಟದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಕ್ಷೇತ್ರ ಪರೀಕ್ಷಾ ಕಿಟ್‌ಗಳನ್ನು ಬಳಸಲು ಮಹಿಳೆಯರಿಗೆ ತರಬೇತಿ ನೀಡಿದೆ. ಆದರೆ ಈ ಕಿಟ್‌ಗಳಿಗೆ ಮಿತಿಗಳಿವೆ. ಇವುಗಳಿಂದ ಬ್ಯಾಕ್ಟೀರಿಯಾದ ಪರೀಕ್ಷೆಗೆ, ಉಪಸ್ಥಿತಿ ಅನುಪಸ್ಥಿತಿಯ ಪರೀಕ್ಷೆಗಳು ಅಪಾಯದ ಮಟ್ಟವನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲ.ಕ್ಷೇತ್ರ ಪರೀಕ್ಷಾ ಕಿಟ್‌ಗಳು ಹೆಚ್ಚಿನ ತನಿಖೆಗೆ ಸೂಚನೆ ನೀಡುವ ಸಾಧನಗಳಾಗಬಹುದು, ಆದರೆ ನೀರಿನ ಮೂಲಗಳನ್ನು ಸಂಪೂರ್ಣ ಸುರಕ್ಷಿತವೆಂದು ಘೋಷಿಸಲು ಸಾಕಾಗುವುದಿಲ್ಲ.