×
Ad

ಕೆನಡಾದ ಕೆಲಸದ ಪರವಾನಗಿಯಲ್ಲಿ ಬದಲಾವಣೆ; ಅಪಾಯದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಭಾರತೀಯ ವಲಸಿಗರು!

Update: 2026-01-06 19:20 IST

Photo Credit : indiatoday.in

ಕೆನಡಾದಲ್ಲಿ ಕೆಲಸದ ಪರವಾನಗಿ ಕಳೆದುಕೊಳ್ಳುವ ಅಥವಾ ದಾಖಲೆರಹಿತ ಕಾರ್ಮಿಕರಾಗುವ ಅಪಾಯದಲ್ಲಿರುವವರಲ್ಲಿ ಅರ್ಧದಷ್ಟು ಭಾರತೀಯರೇ ಇದ್ದಾರೆ.

ಕೆನಡಾದಲ್ಲಿ ಈ ವರ್ಷ ಎರಡು ದಶಲಕ್ಷಕ್ಕೂ ಹೆಚ್ಚು ಕೆಲಸದ ಪರವಾನಗಿಗಳು ಮುಗಿಯಲಿದ್ದು, ತಾತ್ಕಾಲಿಕ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಹೊಸ ವೀಸಾ ಅಥವಾ ಶಾಶ್ವತವಾಗಿ ನೆಲೆಸಲು ಪರವಾನಗಿ ಪಡೆಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಆದರೆ ಕೆನಡಾ ಇತ್ತೀಚೆಗೆ ವಲಸೆ ನೀತಿಯನ್ನು ಬಿಗಿಗೊಳಿಸಿದ ನಂತರ ಸುಲಭವಾಗಿ ಕೆಲಸದ ಪರವಾನಗಿ ಸಿಗುತ್ತಿಲ್ಲ. ಹೀಗೆ ಕೆಲಸದ ಪರವಾನಗಿ ಕಳೆದುಕೊಳ್ಳುವ ಅಥವಾ ದಾಖಲೆರಹಿತ ಕಾರ್ಮಿಕರಾಗುವ ಅಪಾಯದಲ್ಲಿರುವವರಲ್ಲಿ ಅರ್ಧದಷ್ಟು ಭಾರತೀಯರೇ ಇದ್ದಾರೆ ಎಂದು India Today ವರದಿ ಮಾಡಿದೆ.

ಮಾರ್ಕ್ ಕಾರ್ನಿ ಆಡಳಿತದಲ್ಲಿ ಕೆನಡಾದ ವಲಸೆ ನೀತಿಗೆ ಹೊಸ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಅಭೂತಪೂರ್ವ ಪ್ರಮಾಣದಲ್ಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಕೆಲಸದ ಪರವಾನಗಿ ಕೊನೆಗೊಳ್ಳಲಿದ್ದು, ದಾಖಲೆರಹಿತ ವಲಸಿಗರ ಸಂಖ್ಯೆ ಹೆಚ್ಚಾಗಲಿದೆ. ಕೆನಡಾದ ವಲಸೆ ನಿರಾಶ್ರಿತರು ಮತ್ತು ಪೌರತ್ವದ ದತ್ತಾಂಶದ ಪ್ರಕಾರ 2025ರ ಅಂತ್ಯದಲ್ಲಿ ಸುಮಾರು 1,053,000 ಕೆಲಸದ ಪರವಾನಗಿಗಳು ಅವಧಿ ಮೀರಿವೆ. ಮಿಸ್ಸಿಸೌಗಾ ಮೂಲದ ವಲಸೆ ಸಲಹೆಗಾರ ಕನ್ವರ್ ಸೈರಾಹ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ 2026ರಲ್ಲಿ 9,27,000ರಷ್ಟು ಕೆಲಸದ ಪರವಾನಗಿಗಳು ರದ್ದಾಗಲಿವೆ.

ಕೆಲಸದ ಪರವಾನಗಿ ಮುಗಿದಾಗ ಕಾರ್ಮಿಕರು ದಾಖಲೆ ರಹಿತರಾಗುತ್ತಾರೆ. ಅವರು ಹೊಸ ವೀಸಾ ಪಡೆಯಬೇಕು ಅಥವಾ ಶಾಶ್ವತವಾಗಿ ನಿವಾಸಿಯಾಗಬೇಕು. ಆದರೆ ಇತ್ತೀಚೆಗೆ ಕೆನಡಾದಲ್ಲಿ ವಲಸಿಗರಿಗೆ ನಿಯಮವನ್ನು ಬಿಗಿಗೊಳಿಸಿದ ನಂತರ ಈ ಆಯ್ಕೆಗಳು ಕಠಿಣವಾಗಿವೆ. ಮುಖ್ಯವಾಗಿ ತಾತ್ಕಾಲಿಕ ಕಾರ್ಮಿಕರು ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಂತಹ ಶಾಶ್ವತವಲ್ಲದ ವರ್ಗಗಳಲ್ಲಿ ನಿಯಮಗಳು ಬಿಗಿಯಾಗಿವೆ. ಆಶ್ರಯ ಹಕ್ಕುಗಳನ್ನು ನಿಯಂತ್ರಿಸಲು ಕೈಗೊಂಡಿರುವ ಹೊಸ ಕ್ರಮಗಳಿಂದ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ.

ಭಾರತೀಯ ವಲಸಿಗರೇಕೆ ಅಪಾಯದಲ್ಲಿದ್ದಾರೆ?

ಇಷ್ಟೊಂದು ಪ್ರಮಾಣದಲ್ಲಿ ದಾಖಲೆರಹಿತ ವಲಸಿಗರನ್ನು ನಿಭಾಯಿಸಿದ ಅನುಭವ ಕೆನಡಾಗೆ ಇಲ್ಲದ ಕಾರಣ ಗೊಂದಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2026ರ ಮೊದಲ ತ್ರೈಮಾಸಿಕ ಅವಧಿಯಲ್ಲಿಯೇ 3,15,000 ಕೆಲಸದ ಪರವಾನಗಿ ರದ್ದಾಗಲಿದೆ. ಈಗಾಗಲೇ 2025ರಲ್ಲಿ 2,91,000 ಕ್ಕೂ ಮೀರಿ ಕೆಲಸದ ಪರವಾನಗಿಗಳು ರದ್ದಾಗಿವೆ. ಹೀಗಾಗಿ 2026 ಮಧ್ಯಭಾಗದಲ್ಲಿ ಕೆನಡಾದಲ್ಲಿ 20 ಲಕ್ಷ ದಾಖಲೆರಹಿತ ವಲಸಿಗರು ಇರಲಿದ್ದಾರೆ. ಅದರಲ್ಲಿ ಅರ್ಧದಷ್ಟು ಮಂದಿ ಭಾರತೀಯರೇ ಇದ್ದಾರೆ.

ಈಗಾಗಲೇ ಗ್ರೇಟರ್ ಟೊರೊಂಟೊ ಪ್ರದೇಶದ ಕೆಲವು ಭಾಗಗಳಲ್ಲಿ ಸಮಸ್ಯೆಯ ತೀವ್ರತೆ ಗೋಚರಿಸುತ್ತಿದ್ದು, ಬ್ರಾಂಪ್ಟನ್ ಮತ್ತು ಕ್ಯಾಲೆಡನ್‌ನ ಅರಣ್ಯ ಪ್ರದೇಶಗಳಲ್ಲಿ ವಲಸಿಗರು ಬೀಡುಬಿಟ್ಟಿದ್ದಾರೆ. ಅನುಕೂಲಕ್ಕಾಗಿ ವಿವಾಹವಾಗುವ ವ್ಯವಸ್ಥೆಯ ಬ್ಯೂರೋಗಳನ್ನು ತೆರೆಯಲಾಗಿದೆ. ಹೀಗೆ ಅನಿಶ್ಚಿತತೆಯಲ್ಲಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾರ್ಮಿಕ ಹಕ್ಕುಗಳಿಗೆ ಪ್ರತಿಭಟನೆಗಳನ್ನು ನಡೆಸುವ ಯೋಜನೆಗಳೂ ರೂಪುಗೊಳ್ಳುತ್ತಿವೆ ಎಂದು ಕೆನಡಾ ಮೂಲದ ಪತ್ರಕರ್ತರು ಮಾಧ್ಯಮಗಳಲ್ಲಿ ಬರೆದಿದ್ದಾರೆ.

ಅಭೂತಪೂರ್ವ ಸಂಖ್ಯೆಯಲ್ಲಿ ದಾಖಲೆರಹಿತ ಕಾರ್ಮಿಕರು

ಕಾರ್ಮಿಕರಿಗೆ ಕೆನಡಾದಲ್ಲಿ ಕಾನೂನುಬದ್ಧವಾಗಿ ನೆಲೆಯೂರಲು ವಲಸಿಗರ ಪರವಾನಗಿಗೆ ಹಾದಿಯ ಕೊರತೆ ವಿರುದ್ಧ ಜನವರಿಯಲ್ಲಿ ಪ್ರತಿಭಟನೆಯಾಗುವ ಸಾಧ್ಯತೆಯಿದೆ. 2028ರವರೆಗೆ ವಲಸೆ ಸಂಖ್ಯೆಗೆ ಮಿತಿ ಹೇರುವ ಕೆನಡಾದ ನಿರ್ಧಾರದಿಂದಾಗಿ 2026ರಲ್ಲಿ ಶಾಶ್ವತ ನಿವಾಸಿಗಳಾಗುವವರ ಸಂಖ್ಯೆ 3,80,000ಕ್ಕೆ ಮಿತಿಗೊಳಿಸಲಾಗಿದೆ.

ಹಾಗೆಯೇ ತಾತ್ಕಾಲಿಕ ವಿದೇಶಿ ಕಾರ್ಮಿಕರ ನೇಮಕಾತಿಯಲ್ಲೂ ಕುಸಿತವಾಗಲಿದೆ. ವಿದ್ಯಾರ್ಥಿ ವೀಸಾಗಳು ಮತ್ತು ನಿರಾಶ್ರಿತರ ಭರ್ತಿಯಲ್ಲೂ ಕಡಿತವಾಗಲಿದೆ. 2027ರೊಳಗೆ ತಾತ್ಕಾಲಿಕ ನಿವಾಸಿಗರ ಸಂಖ್ಯೆಯನ್ನು ಶೇ 7ರಿಂದ ಶೇ 5ಕ್ಕೆ ಇಳಿಸಲು ಕೆನಡಾ ನಿರ್ಧರಿಸಿದೆ.

ತಾತ್ಕಾಲಿಕ ನಿವಾಸಿಗರು ವೀಸಾ ಮುಗಿದ 90 ದಿನಗಳೊಳಗೆ ಹೊಸ ವೀಸಾಗಾಗಿ ಅರ್ಜಿ ಸಲ್ಲಿಸಬಹುದು. ಆದರೆ ಪ್ರಕ್ರಿಯೆ ದುಬಾರಿಯಾಗಿದೆ. ಅರ್ಜಿಗಳು ಪ್ರಕ್ರಿಯೆಯಲ್ಲಿರುವಾಗ ಕೆಲಸ ಮಾಡುವುದನ್ನು ತಡೆಹಿಡಿಯಲಾಗಿದೆ. ವೀಸಾ ಸಿಗಲು ತಿಂಗಳುಗಟ್ಟಲೆ ಕಾಯಬೇಕಾಗಿ ಬರಬಹುದು.

ಕೆನಡಾ ಕಾನೂನುಬದ್ಧ ವಸತಿ ಸೌಲಭ್ಯಕ್ಕೆ ಮಿತಿ ಹೇರುತ್ತಿರುವುದೇಕೆ?

ಕೆನಡಾ 2022ರಿಂದ 2023ರ ನಡುವೆ 1.2 ದಶಲಕ್ಷ ಹೊಸ ವಲಸಿಗರನ್ನು ಆಹ್ವಾನಿಸಿದೆ. ಹೀಗಾಗಿ 1950ಗೆ ಹೋಲಿಸಿದಲ್ಲಿ ದೇಶದ ಜನಸಂಖ್ಯೆಯಲ್ಲಿ ವೇಗದ ಪ್ರಗತಿಗೆ ಕಾರಣವಾಗಿದೆ. ಹೀಗಾಗಿ ವಸತಿ ಮತ್ತು ಆರೋಗ್ಯಸೇವೆ ಸಂಪನ್ಮೂಲದ ಮೇಲೆ ಒತ್ತಡ ಬಿದ್ದಿದೆ.

ಆಂಗಸ್ ರೈಡ್ ಸಂಸ್ಥೆಯ ಸಮೀಕ್ಷೆಯಲ್ಲಿ ಕಂಡುಬಂದಿರುವ ಪ್ರಕಾರ ಶೇ. 28ರಷ್ಟು ಕೆನಡಾದ ಪ್ರಜೆಗಳು ವಸತಿ ಸೌಲಭ್ಯದ ಕೊರತೆಯಿಂದ ತಮ್ಮ ಪ್ರಸ್ತುತ ಪ್ರದೇಶವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಮತ್ತೊಂದು ಸಮೀಕ್ಷೆಯ ಪ್ರಕಾರ ವಲಸಿಗರು ಹೆಚ್ಚಾಗಿ ವಸತಿ ಬಿಕ್ಕಟ್ಟು ಬಂದೊದಗಿದೆ ಎಂದು ಶೇ 44.5ರಷ್ಟು ಕೆನಡಿಯನ್ನರು ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ ವೇಗವಾಗಿ ವಿಸ್ತರಿಸುತ್ತಿರುವ ಜನಸಂಖ್ಯೆಗೆ ವೈದ್ಯರ ಕೊರತೆ ಮತ್ತು ಕ್ಲಿನಿಕ್‌ಗಳ ಕೊರತೆ ಕಾಣಿಸುತ್ತಿದೆ. ಈ ದೇಶಿ ಒತ್ತಡಗಳ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸಿಗರಿಗೆ ಮಿತಿ ಹೇರಲು ಒತ್ತಡ ಹೇರಿರುವುದು ವಲಸೆ ನೀತಿ ಬಿಗಿಗೊಳಿಸಲು ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News