×
Ad

ಮುಂಭಡ್ತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಈಗಲೂ ವಂಚನೆ

371 ಜೆ ಕಾಯ್ದೆ ಜಾರಿಗೊಂಡು 10 ವರ್ಷಗಳಾದರೂ ಖಾಲಿ ಇರುವ ಹುದ್ದೆಗಳ ಪೈಕಿ ಶೇ.80ರಷ್ಟು ಭರ್ತಿಯಾಗಿಲ್ಲ

Update: 2026-01-07 08:30 IST

 ಬೆಂಗಳೂರು : 371 ಜೆ ಕಾಯ್ದೆ ಜಾರಿಯಾಗಿ 10 ವರ್ಷಗಳು ಕಳೆದರೂ ಸಹ ಕಲ್ಯಾಣ ಕರ್ನಾಟಕದಲ್ಲಿ ನೇಮಕಾತಿ ಮತ್ತು ಸೇವೆಯಲ್ಲಿರುವ ಅಧಿಕಾರಿ ಮತ್ತು ನೌಕರರು ಮುಂಭಡ್ತಿಯಲ್ಲಿ ಅರ್ಹ ಅಭ್ಯರ್ಥಿಗಳು ಈಗಲೂ ವಂಚನೆಗೊಳಗಾಗುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತು ಮುಂಭಡ್ತಿ ಸಮಸ್ಯೆಗಳು ಈಗಲೂ ನಿವಾರಣೆಯಾಗಿಲ್ಲ. ಈ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಹಲವು ಇಲಾಖೆಗಳು ವಿಫಲವಾಗಿವೆ.

371 ಜೆ ಅಡಿ ಹೊರಡಿಸಿರುವ ಎಲ್ಲಾ ಬಗೆಯ ಆದೇಶಗಳ ಅನುಷ್ಠಾನದಲ್ಲಿ ಪ್ರಗತಿ ಸಾಧಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿಯು ಹಲವಾರು ಬಾರಿ ಇಲಾಖೆಗಳಿಗೆ ಸೂಚಿಸುತ್ತಲೇ ಬಂದಿದೆ. ಆದರೂ ಬಹುತೇಕ ಇಲಾಖೆಗಳು ಅನುಷ್ಠಾನದ ವರದಿಗಳನ್ನೇ ಸಲ್ಲಿಸುತ್ತಿಲ್ಲ. ರಾಜ್ಯಪಾಲರ ಆದೇಶದಂತೆ ರಚನೆಯಾಗಿರುವ ಸಮಿತಿಯ ನಿರ್ಣಯವನ್ನೇ ಅಧಿಕಾರಿಗಳು ಪಾಲಿಸುತ್ತಿಲ್ಲ.

ಈ ಕಾಯ್ದೆ ಜಾರಿಗೊಂಡು 10 ವರ್ಷಗಳಾದರೂ ಸಹ ಖಾಲಿ ಇರುವ ಹುದ್ದೆಗಳ ಪೈಕಿ ಶೇ.80ರಷ್ಟು ಭರ್ತಿಯಾಗಿಲ್ಲ. ವಿಶೇಷವೆಂದರೆ 371 ಜೆ ಕುರಿತು ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿಯೇ ನೇರ ನೇಮಕಾತಿ ಅಡಿ 487 ಹುದ್ದೆಗಳು ಬಾಕಿ ಇವೆ. ಹೀಗಾಗಿ 2026ರ ಜನವರಿ 2ರಂದು ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ ಇಲಾಖೆಯು ಎಲ್ಲಾ ಇಲಾಖೆಗಳ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿದೆ.

2026ರ ಜನವರಿ 2ರಂದು ಹೊರಡಿಸಿರುವ ಟಿಪ್ಪಣಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ. 2025ರ ನವೆಂಬರ್ 26ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ಸೇರಿತ್ತು. ಈ ಸಭೆಯಲ್ಲಿ ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿತ್ತು. ಆದರೆ ಇಲಾಖೆಗಳ ಮುಖ್ಯಸ್ಥರು ಈ ಸಂಬಂಧ ಯಾವುದೇ ಪ್ರಗತಿ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ 2026ರ ಜನವರಿ 2ರಂದು ಯೋಜನೆ ಇಲಾಖೆಯು ಮತ್ತೊಂದು ನೆನಪೋಲೆ ಬರೆದಿದೆ.

371 ಜೆ ಕಾಯ್ದೆ ಪ್ರಕಾರ ಶಿಕ್ಷಣ, ಉದ್ಯೋಗ ಮತ್ತು ಮುಂಭಡ್ತಿಗೆ ಸಂಬಂಧಿಸಿದಂತೆ 2014ರಿಂದ ಕಾಯ್ದೆ ಜಾರಿಯಾಗಿದೆ. ಹಲವಾರು ಇಲಾಖೆಗಳು ಈ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಹೀಗಾಗಿ ಅರ್ಹ ಅಭ್ಯರ್ಥಿಗಳು ಇದ್ದರೂ ಸಹ ಮುಂಭಡ್ತಿಗಳಿಂದ ವಂಚಿಸಲಾಗಿದೆ. ವಂಚಿತ ಅಧಿಕಾರಿ, ನೌಕರಕರು ಸಮಿತಿಯ ಗಮನಕ್ಕೆ ನೂರಾರು ಮನವಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಸಮಿತಿಯು ಸಮಸ್ಯೆಗಳನ್ನು ಪರಿಹರಿಸುವ ಕೋಶವಾಗಿ ಪರಿವರ್ತನೆಯಾಗಿದೆ ಎಂದು ನವೆಂಬರ್ 26ರಂದು ನಡೆದಿದ್ದ ಸಭೆಯಲ್ಲಿ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿತ್ತು.

371 ಜೆ ಅಡಿಯಲ್ಲಿ ರಾಜ್ಯ ಮಟ್ಟದ ಸ್ಥಳೀಯ ವೃಂದರಲ್ಲಿ ಗ್ರೂಪ್ ಎ, ಬಿ, ಸಿ ಮತ್ತು ಡಿ ಗುಂಪಿನಲ್ಲಿ ಒಟ್ಟಾರೆ 12,502 ಹುದ್ದೆಗಳನ್ನು ಗುರುತಿಸಿದೆ. ರಾಜ್ಯಮಟ್ಟದ ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿಯಡಿ ಈ ನಾಲ್ಕು ಗುಂಪಿನಲ್ಲಿ ಒಟ್ಟಾರೆಯಾಗಿ 7,229 ಹುದ್ದೆಗಳು ಭರ್ತಿಯಾಗಿವೆ. ಭರ್ತಿಗೆ ಇನ್ನೂ 5,773 ಹುದ್ದೆಗಳು ಬಾಕಿ ಇವೆ.

ಅದೇ ರೀತಿ ಕೆಪಿಎಸ್ಸಿಯಲ್ಲಿ 1,040 ಹುದ್ದೆಗಳು, ಕೆಇಎ ಸೇರಿ ಇತರ ನೇಮಕಾತಿ ಸಂಸ್ಥೆಗಳಲ್ಲಿ 987, ರಾಜ್ಯಮಟ್ಟದ ಸ್ಥಳೀಯ ವೃಂದದಲ್ಲಿ ಕಾಲಂ 5 ಮತ್ತು 6ರ ಹೊರತಾಗಿ ಇನ್ನೂ ನೇಮಕಾತಿ ಪ್ರಕ್ರಿಯೆ ಆರಂಭವಾಗದೇ ಇರುವ ಹುದ್ದೆಗಳ ಸಂಖ್ಯೆಯು 3,246ರಷ್ಟಿದೆ.

371 ಜೆ ಅಡಿಯಲ್ಲಿ ಮುಂಭಡ್ತಿಗೆ 40,735 ಹುದ್ದೆಗಳನ್ನು ಗುರುತಿಸಿದೆ. ಈ ಪೈಕಿ 25,847 ಹುದ್ದೆಗಳು ಭರ್ತಿಯಾಗಿವೆ. 1,465 ಅಭ್ಯರ್ಥಿಗಳು ಮುಂಭಡ್ತಿಗೆ ಅನರ್ಹರಾಗಿದ್ದಾರೆ. ಇನ್ನೂ ಮುಂಭಡ್ತಿಯಡಿಯಲ್ಲಿ 14,628 ಹುದ್ದೆಗಳು ಬಾಕಿ ಇವೆ.

ಸಚಿವಾಲಯದ ಅಧಿಕಾರಿಗಳಿಗೆ ಕಾಲ್ಪನಿಕ ಜ್ಯೇಷ್ಠತೆ ನೀಡಿ, ಜ್ಯೇಷ್ಠತಾ ಪಟ್ಟಿಯನ್ನು ನವೀಕರಿಸಿದ ಮಾದರಿಯಲ್ಲಿಯೇ ಇತರ ಇಲಾಖೆಗಳು ಅರ್ಹ ಅಧಿಕಾರಿ, ನೌಕರರಿಗೆ ಉದ್ದೇಶಪೂರ್ವಕವಾಗಿ ಮುಂಭಡ್ತಿ ನೀಡುತ್ತಿಲ್ಲ ಎಂಬ ಕುರಿತೂ ಸಭೆಯಲ್ಲಿ ಚರ್ಚೆಯಾಗಿತ್ತು. ಒಂದೊಮ್ಮೆ ಉದ್ದೇಶಪೂರ್ವಕವಾಗಿ ಮುಂಭಡ್ತಿ ನೀಡದೇ ಇದ್ದಲ್ಲಿ ಅಂತಹ ಅಧಿಕಾರಿ, ನೌಕರರಿಗೆ ಸಭೆಯ ನಿರ್ಣಯದ ಪ್ರಕಾರ ಜ್ಯೇಷ್ಠತೆಯನ್ನು ಕಾಲ್ಪನಿಕವಾಗಿ ನಿಗದಿಪಡಿಸಬೇಕು ಮತ್ತು ಅವರು ಕರ್ತವ್ಯ ನಿರ್ವಹಿಸಿದ ದಿನದಿಂಧ ಆರ್ಥಿಕ ಸೌಲಭ್ಯಗಳನ್ನು ನೀಡಲುಪರಿಶೀಲಿಸಬಹುದು ಎಂದು ಮಾಹಿತಿ ನೀಡಿದ್ದರು. ಆದರೆ ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇದರ ಅನುಪಾಲನೆ ವರದಿಯನ್ನೇ ನೀಡಿಲ್ಲ. ಅಷ್ಟೇ ಅಲ್ಲ, ಇಂತಹ ಸಮಸ್ಯೆಯು ಯಾವ ಯಾವ ಇಲಾಖೆಯಲ್ಲಿದೆ ಎಂಬ ಬಗೆಗಿನ ಮಾಹಿತಿಯೂ ಸಹ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಳಿ ಇಲ್ಲ ಎಂದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಕಾನೂನು ಇಲಾಖೆ ಅಭಿಪ್ರಾಯವೇನು?

ರಾಜ್ಯ ವೃಂದದಲ್ಲಿ ಟಾರ್ಗೆಟ್ ಮೀಸಲಾತಿ ಬದಲಿಗೆ ರಿಕ್ತ ಸ್ಥಾನ ಆದರಿತ ಶೇ.8ರಷ್ಟು ಮೀಸಲಾತಿ ನಿಗದಿಪಡಿಸಲು ಸೂಕ್ತ ತಿದ್ದುಪಡಿಗೆ ಸಂಬಂಧಿಸಿದಂತೆ ಕಾನೂನು ಇಲಾಖೆಯು ತನ್ನ ಅಭಿಪ್ರಾಯವನ್ನು ನೀಡಿದೆ. ಇದರ ಪ್ರಕಾರ ಪ್ರಸ್ತುತ ಇರುವ ನಿಯಮಗಳನ್ನೇ ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದೆ.

ಈಗಾಗಲೇ ಎಲ್ಲಾ ಇಲಾಖೆಗಳಲ್ಲಿ ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದಗಳ ಪ್ರತ್ಯೇಕ ಘಟಕಗಳನ್ನು ವಿಂಗಡಿಸಿ ಜ್ಯೇಷ್ಠತೆ ಪಟ್ಟಿಗಳನ್ನು ಸಿದ್ಧಪಡಿಸಿ ಮುಂಭಡ್ತಿಗಳನ್ನು ನೀಡಲಾಗುತ್ತಿದೆ. ಪುನಃ ಒಂದೇ ಜೇಷ್ಠತೆ ಪಟ್ಟಿಯನ್ನು ಪ್ರಕಟಿಸಲು ನಿರ್ಣಯ ಕೈಗೊಂಡಲ್ಲಿ ಈಗಾಗಲೇ ಮಾಡಲಾಗಿರುವ ಮುಂಬಡ್ತಿಗಳಲ್ಲಿ ವ್ಯತ್ಯಾಸಗಳು ಆಗುವ ಸಾಧ್ಯತೆಗಳಿವೆ. ಎಲ್ಲಾ ಇಲಾಖೆಗಳಲ್ಲಿ ನ್ಯಾಯಾಲಯ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯದಲ್ಲಿ ವಿವರಿಸಿದೆ.

ಖಾಲಿ ಹುದ್ದೆಗಳ ಮಾಹಿತಿ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲ

ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಕುರಿತು ಸಮಿತಿಗೆ ಸರಿಯಾದ ಮಾಹಿತಿ ನೀಡಿಲ್ಲ. ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದ್ದ ಮುಖ್ಯ ಆಡಳಿತ ಅಧಿಕಾರಿಯವರು ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಮಾಹಿತಿಗಳ ಪ್ರಕಾರ ಇಲಾಖೆಯಲ್ಲಿ 8,248 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 7,955 ಹುದ್ದೆಗಳು ಭರ್ತಿಯಾಗಿವೆ. 293 ಹುದ್ದೆಗಳು ಬಾಕಿ ಇವೆ.

ಅಪೆಕ್ಸ್ ಬ್ಯಾಂಕ್‌ಗೆ 371 ಜೆ ಅನ್ವಯವಾಗುವುದಿಲ್ಲವೆಂದ ಸಹಕಾರ ಇಲಾಖೆ

ಮತ್ತೊಂದು ವಿಶೇಷವೆಂದರೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಸರಕಾರದ ಯಾವುದೇ ನಿಯಂತ್ರಣಕ್ಕೆ ಒಳಪಡದ ಕಾರಣ, 371 ಜೆ ಮೀಸಲಾತಿ ನಿಯಮವು ಅನ್ವಯವಾಗುವುದಿಲ್ಲ ಎಂದು ಸಹಕಾರ ಇಲಾಖೆಯು ಸಮಿತಿಗೆ ವರದಿ ಮಾಡಿದೆ.

371 ಜೆ ಕಾಯ್ದೆಯ ಅಧ್ಯಾಯ 2ರಲ್ಲಿ ರಾಜ್ಯಮಟ್ಟದ ಕಚೇರಿಗಳು ಅಥವಾ ರಾಜ್ಯ ಮಟ್ಟದ ಸಂಸ್ಥೆಗಳು ಅಥವಾ ಅಪೆಕ್ಸ್ ಸಂಸ್ಥೆಗಳಲ್ಲಿನ ಎಲ್ಲಾ ಇಲಾಖೆಗಳಲ್ಲಿ ಶೇ.8ರಷ್ಟು ಹುದ್ದೆಗಳನ್ನು ಮತ್ತು ಗ್ರೂಪ್ ಎ ಹಿರಿಯ ಶ್ರೇಣಿ ಮಟ್ಟದವರೆಗಿನ ಹುದ್ದೆಗಳನ್ನು ಆ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಸಹ ಸಹಕಾರ ಇಲಾಖೆಯು 371 ಜೆ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ವರದಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಾರಿಗೆ ಇಲಾಖೆಯಲ್ಲಿ 371 ಜೆ ಅಡಿಯಲ್ಲಿ ನೇರ ನೇಮಕಾತಿಗೆ 296, ಮುಂಭಡ್ತಿಯಡಿಯಲ್ಲಿ 270 ಹುದ್ದೆಗಳು ಬಾಕಿ ಇವೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಬಾಕಿ ಇದ್ದ 270 ಮುಂಭಡ್ತಿ ಹುದ್ದೆಗಳ ಪೈಕಿ 123 ಹುದ್ದೆಗಳಿಗೆ ಮುಂಭಡ್ತಿ ನೀಡಲಾಗುತ್ತಿದೆ. ಸಾರಿಗೆ ಇಲಾಖೆಯಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಾರಿಗೆ, ರಸ್ತೆ ಸುರಕ್ಷತೆ ಆಯುಕ್ತರು ಕೆಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ 371 ಜೆ ಅಡಿಯಲ್ಲಿ ಭರ್ತಿ ಮಾಡಲು ಆರ್ಥಿಕ ಇಲಾಖೆಯ ಸಹಮತಿ ಅಗತ್ಯವಿಲ್ಲದಿದ್ದರೂ ಸಹ ಕಾಲಹರಣ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ನೇರ ನೇಮಕಾತಿ ಅಡಿ 1,783 ಹಾಗೂ ಮುಂಭಡ್ತಿಯಡಿಯಲ್ಲಿ 540 ಹುದ್ದೆಗಳು ಬಾಕಿ ಇವೆ. ನೇಮಕಾತಿ ಸಂಬಂಧ ಪತ್ರ ವ್ಯವಹಾರದಲ್ಲಿಯೇ ಕಾಲಹರಣ ಮಾಡಲಾಗಿದೆ. ಒಳಾಡಳಿತ ಇಲಾಖೆಯಲ್ಲಿ ನೇರ ನೇಮಕಾತಿ ಅಡಿಯಲ್ಲಿ 1,402 ಹುದ್ದೆಗಳು ಬಾಕಿ ಇವೆ. ಮುಂಭಡ್ತಿ ಸೇರಿದಂತೆ ಒಟ್ಟಾರೆ 2,158 ಹುದ್ದೆಗಳು ಬಾಕಿ ಇವೆ.

371 ಜೆ ಜಾರಿ ಬಂದ ನಂತರ ಲೋಕೋಪಯೋಗಿ ಇಲಾಖೆಯಲ್ಲಿ ಅರ್ಹ ಅಭ್ಯರ್ಥಿಗಳ ಹುದ್ದೆಗಳು ಖಾಲಿ ಇವೆ. ಆದರೂ ಪಿಡಬ್ಲ್ಯಡಿ ಸೇರಿದಂತೆ ಇತರ ಇಲಾಖೆಗಳಲ್ಲಿ ಅಭ್ಯರ್ಥಿಗಳಿಗೆ ಮುಂಭಡ್ತಿ ನೀಡಿಲ್ಲ. ಈ ಕುರಿತೂ ಹಲವು ಮನವಿಗಳು ಸಮಿತಿಗೆ ಸಲ್ಲಿಕೆಯಾಗಿವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿಯೇ 487 ಹುದ್ದೆಗಳು ಬಾಕಿ ಇವೆ. ಇಂಧನ ಇಲಾಖೆಯಲ್ಲಿ 2,645 ಹುದ್ದೆಗಳು ನೇಮಕಾತಿಗೆ ಬಾಕಿ ಇವೆ.

ಕರ್ನಾಟಕ ವಿದ್ಯುತ್ ನಿಗಮದಲ್ಲಿ 371 ಜೆ ಅಡಿ ಸ್ಥಳೀಯ ವೃಂದ ಹಾಗೂ ಉಳಿಕೆ ಮೂಲ ವೃಂದ ಜ್ಯೇಷ್ಠತೆ ಪಟ್ಟಿ ಪ್ರಕಟಿಸುವ ಮೊದಲೇ ನಾನ್ ಎಚ್ ಕೆ ಸಹಾಯಕ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಮುಂಭಡ್ತಿ ನೀಡಿದೆ. ಇದರಿಂದ ಹಲವು ಅಭ್ಯರ್ಥಿಗಳಿಗೆ ವಂಚನೆ ಆದಂತಾಗಿದೆ. ಆರ್ಥಿಕ ಇಲಾಖೆಯಲ್ಲಿಯೂ ನೇರ ನೇಮಕಾತಿಯಡಿ 841 ಹುದ್ದೆಗಳು ಬಾಕಿ ಇವೆ. ಈ ಹುದ್ದೆಗಳ ಭರ್ತಿಗಾಗಿ ಬಿರುಸಿನ ಕ್ರಮಗಳನ್ನು ಕೈಗೊಂಡಿಲ್ಲ.

ಭರ್ತಿಯಾಗದ21,381 ಹುದ್ದೆಗಳು

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಒಟ್ಟಾರೆ 10,000 ಶಿಕ್ಷಕರ ಹುದ್ದೆಗಳ ಪೈಕಿ 5,267 ಶಿಕ್ಷಕರ ಹುದ್ದೆಗಳ ಭರ್ತಿಗೆ 2024ರ ಅಕ್ಟೋಬರ್ 7ರಂದು ಆರ್ಥಿಕ ಇಲಾಖೆಯು ಅನುಮತಿ ನೀಡಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿ, ಉಪ ವರ್ಗೀಕರಣ ಪ್ರಕ್ರಿಯೆಯು ಚಾಲ್ತಿಯಲ್ಲಿರುವ ಕಾರಣ ಮುಂದಿನ ಅಧಿಸೂಚನೆ ತನಕ ಯಾವುದೇ ಹುದ್ದೆಗಳಿಗೆ ನೇಮಕಾತಿ ಹೊರಡಿಸದಂತೆ ಸೂಚಿಸಲಾ ಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 17,274 ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 4,107 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಸೇರಿ 21,381 ಹುದ್ದೆಗಳು ಖಾಲಿ ಇರುವ ಕುರಿತು ಸಮಿತಿಯು ಚರ್ಚಿಸಿದೆ.

 ಶೇ.8ರಷ್ಟು ಮೀಸಲಾತಿ ನಿಗದಿ

ಒಂದೇ ಜ್ಯೇಷ್ಠತೆಯನ್ನು ಪ್ರಕಟಿಸುವ ಸಂಬಂಧವೂ ಚರ್ಚೆಯಾಗಿತ್ತು. ಜ್ಯೇಷ್ಠತೆಯಲ್ಲಿ ಅಧಿಕಾರಿ, ನೌಕರರ ಹೆಸರಿನ ಮುಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ನಮೂದಿಸುವ ರೀತಿಯಲ್ಲಿಯೇ 371 ಜೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, 371 ಜೆ ಮಹಿಳೆ ಎಂದು ನಮೂದಿಸಬೇಕು. ಹಾಗೂ ರಾಜ್ಯ ವೃಂದದಲ್ಲಿ ಟಾರ್ಗೆಟ್ ಮೀಸಲಾತಿ ಬದಲಿಗೆ ರಿಕ್ತ ಸ್ಥಾನ(ಖಾಲಿ ಇರುವ ಹುದ್ದೆ) ಆಧಾರಿತ ಶೇ.8ರಷ್ಟು ಮೀಸಲಾತಿ ನಿಗದಿಪಡಿಸಲು ಸೂಕ್ತ ತಿದ್ದುಪಡಿ ಪ್ರಸ್ತಾವ ಮಂಡಿಸಬೇಕು ಎಂದು ಸಮಿತಿಯು 2 ತಿಂಗಳ ಹಿಂದೆಯೇ ಸೂಚಿಸಿತ್ತು.

ಕಲಬುರಗಿ ಹೆಚ್ಚುವರಿ ಆಯುಕ್ತರಿಂದಲೇ ಅಸ್ಪಷ್ಟ ಮಾಹಿತಿ

ಇದೇ ವಿಚಾರದ ಕುರಿತು 2023ರ ಆಗಸ್ಟ್ 17ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ನೀಡಿದ್ದ ಸೂಚನೆಗಳ ಪಾಲನೆ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಅನುಪಾಲನೆ ವರದಿಯನ್ನೇ ಸಲ್ಲಿಸಿಲ್ಲ. ವಿಶೇಷವೆಂದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಲಬುರಗಿಯ ಹೆಚ್ಚುವರಿ ಆಯುಕ್ತರು ಸಹ ಸಮಿತಿಗೆ ಅಸ್ಪಷ್ಟ ಮಾಹಿತಿಯನ್ನು ನೀಡಿದ್ದರು.

ಮಾಹಿತಿ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 15,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದವು. ಈ ಪೈಕಿ 2022ರ ಮಾರ್ಚ್ 22ರಂದು ಈ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಇಲಾಖೆಯು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ 15,000 ಹುದ್ದೆಗಳನ್ನು ಭರ್ತಿ ಮಾಡಲು 2022ರ ಮಾರ್ಚ್ 22ರಂದು ಅಧಿಸೂಚನೆ ಹೊರಡಿಸಿತ್ತು. ಒಟ್ಟು 15,000 ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 5,000 ಹುದ್ದೆಗಳನ್ನು ಹಂಚಿಕೆ ಮಾಡಿತ್ತು. ಈ ಪೈಕಿ 4,193 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದರಲ್ಲಿ ಇದುವರೆಗೂ 3,837 ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳು ಉಚ್ಚ ನ್ಯಾಯಾಲಯದಲ್ಲಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ 59 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದು ಬಾಕಿ ಇದೆ. ಈ ಪ್ರಕರಣದೊಂದಿಗೆ ಪೊಲೀಸ್ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ಪ್ರಕರಣಗಳನ್ನೂ ಸಹ ಜೋಡಣೆ ಮಾಡಿದೆ. ವಿಚಾರಣೆಯು ಅಂತಿಮ ಹಂತದಲ್ಲಿದೆ. ಹಾಗೆಯೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಹಲವಾರು ತಡೆಯಾಜ್ಞೆಗಳು ಈಗಲೂ ಇವೆ. ಇವುಗಳನ್ನು ತೆರವುಗೊಳಿಸಲು ಕ್ರಮಗಳನ್ನು ಕೈಗೊಂಡಿಲ್ಲ. ಈ ವಿಚಾರದಲ್ಲಿ ಲೋಪ ಎಸಗಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿ ಕೈ ತೊಳೆದುಕೊಂಡಿದೆ.

ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟಾರೆ 4,973 ಹುದ್ದೆಗಳನ್ನು ಅಧಿಸೂಚಿಸಿದೆ. ಬಳ್ಳಾರಿಯಲ್ಲಿ 523, ಬೀದರ್‌ನಲ್ಲಿ 647, ಕಲಬುರಗಿಯಲ್ಲಿ 953, ಕೊಪ್ಪಳದಲ್ಲಿ 557, ರಾಯಚೂರಿನಲ್ಲಿ 918, ವಿಜಯನಗರದಲ್ಲಿ 512, ಯಾದಗಿರಿಯಲ್ಲಿ 863 ಹುದ್ದೆಗಳನ್ನು ಅಧಿಸೂಚಿಸಿದೆ. ಸಿಎಸಿ ಆಯ್ಕೆ ಪಟ್ಟಿಯಲ್ಲಿ ಈ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟಾರೆ 4,050 ಹುದ್ದೆಗಳಿವೆ. ಈ ಜಿಲ್ಲೆಗಳಲ್ಲಿ ಇದುವರೆಗೆ 3,813 ನೇಮಕ ಆದೇಶ ನೀಡಲಾಗಿದೆ. ನ್ಯಾಯಾಲಯದಲ್ಲಿ 56 ಪ್ರಕರಣಗಳು ಬಾಕಿ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor

Similar News