ಮನಸ್ಸಿನ ಮೇಲೂ ತೂಕದ ʼಭಾರʼ | ಯುವಕರಲ್ಲಿ ಇಮೇಜ್ ಕಾಳಜಿ; AIIMS ಅಧ್ಯಯನದಲ್ಲಿ ಬಹಿರಂಗ
CREDIT:deccanherald
ಬೊಜ್ಜು ಹೊಂದಿರುವವರಲ್ಲಿ ದೇಹದ ಬಗ್ಗೆ ಸ್ವಯಂಪ್ರಜ್ಞೆಯ ಕಾಳಜಿ ಇದ್ದರೆ, ಕಡಿಮೆ ತೂಕದವರಲ್ಲಿ ಆತ್ಮವಿಶ್ವಾಸದ ಕೊರತೆಯಿದೆ ಎಂದು ಏಮ್ಸ್ ಅಧ್ಯಯನ ತಿಳಿಸಿದೆ.
ಒಂದು ಸಾವಿರ ಹದಿಹರೆಯದ ಯುವಕರ ಮೇಲೆ ಅಧ್ಯಯನ ನಡೆಸಿರುವ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಕಡಿಮೆ ತೂಕ ಅಥವಾ ಹೆಚ್ಚು ತೂಕ ಹೊಂದಿರುವ ಮಕ್ಕಳಲ್ಲಿ ಅರ್ಧದಷ್ಟು ಮಂದಿಗೆ ಒಂದು ರೀತಿಯ ಸ್ವಯಂಪ್ರಜ್ಞೆ ಅಥವಾ ಆತ್ಮವಿಶ್ವಾಸದ ಕೊರತೆ ಇರುವುದನ್ನು ಕಂಡುಕೊಂಡಿದೆ. ಇವರಲ್ಲಿ ಕೆಲವರಿಗೆ ಗಂಭೀರ ಸಮಸ್ಯೆಗಳಿದ್ದರೆ, ಇನ್ನು ಕೆಲವರಿಗೆ ಮಧ್ಯಮ ಮಟ್ಟದ ಸಮಸ್ಯೆಗಳಿರುವುದು ಪತ್ತೆಯಾಗಿದೆ.
ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು, ಅಂದರೆ ಶೇ 37.5ರಷ್ಟು ಮಂದಿ, ಇತರರು ತಮ್ಮ ತೂಕವನ್ನು ಅವಹೇಳನಕಾರಿಯಾಗಿ ಕಾಣುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಲ್ಕನೇ ಒಂದು ಭಾಗದಷ್ಟು, ಅಂದರೆ ಶೇ 24.5ರಷ್ಟು ಮಂದಿ, ತೂಕಕ್ಕೆ ಸಂಬಂಧಿಸಿದ ಖಿನ್ನತೆಯನ್ನು ಅನುಭವಿಸಿದ್ದಾರೆ ಎಂದು ಏಮ್ಸ್ ಹೇಳಿದೆ.
ಜರ್ನಲ್ ಆಫ್ ಎಜುಕೇಶನ್ ಆಂಡ್ ಹೆಲ್ತ್ ಪ್ರೊಮೋಷನ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಬೊಜ್ಜು ಹೊಂದಿರುವವರು ಒಂದು ರೀತಿಯ ಸ್ವಯಂಪ್ರಜ್ಞೆಯನ್ನು ಹೊಂದಿದ್ದಾರೆ ಎನ್ನುವುದು ಸೂಚಿಸಲಾಗಿದೆ. ಕಡಿಮೆ ತೂಕ ಹೊಂದಿದವರಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಿರುವುದು ಕಂಡುಬಂದಿದೆ.
ಸಾಮಾನ್ಯ ತೂಕ ಹೊಂದಿದ ಶೇ 35.8ರಷ್ಟು ಮತ್ತು ಹೆಚ್ಚು ತೂಕ ಹೊಂದಿದ ಶೇ 35.5ರಷ್ಟು ಮಂದಿಗೆ ಹೋಲಿಸಿದರೆ, ಅರ್ಧದಷ್ಟು ಮಂದಿ ಅಂದರೆ ಶೇ 47.1ರಷ್ಟು ಕಡಿಮೆ ತೂಕ ಹೊಂದಿದವರು ಹಾಗೂ ಶೇ 49.6ರಷ್ಟು ಬೊಜ್ಜು ಹೊಂದಿದ ಯುವಕರು ದೇಹಕ್ಕೆ ಸಂಬಂಧಿಸಿದಂತೆ ಮಧ್ಯಮ ಅಥವಾ ಗಂಭೀರ ಸ್ವಯಂಪ್ರಜ್ಞೆಯನ್ನು ಹೊಂದಿದ್ದಾರೆ.
ಹೀಗಾಗಿ, ಯುವಕರಲ್ಲಿ ದೇಹದ ತೂಕವು ಮಾನಸಿಕವಾಗಿ ಪ್ರಭಾವ ಬೀರುತ್ತದೆ ಎಂಬುದು ಖಚಿತವಾಗಿದೆ. ದೇಹದ ತೂಕಕ್ಕೆ ಸಂಬಂಧಿಸಿದ ವರ್ಚಸ್ಸಿನ ಕುರಿತ ಮಾನಸಿಕ ಸ್ಥಿತಿ ಅಧ್ಯಯನದಲ್ಲಿ ಭಾಗವಹಿಸಿದ ಅನೇಕ ವರ್ಗದವರಲ್ಲಿ — ಅಂದರೆ ಕಡಿಮೆ ತೂಕ, ಸಾಮಾನ್ಯ ತೂಕ, ಹೆಚ್ಚು ತೂಕ ಮತ್ತು ಬೊಜ್ಜು ಹೊಂದಿದವರಲ್ಲಿ — ವಿಭಿನ್ನವಾಗಿತ್ತು. ಬೊಜ್ಜು ಹೊಂದಿದ ಪ್ರತಿನಿಧಿಗಳಲ್ಲಿ ಸ್ವಯಂಪ್ರಜ್ಞೆ ಹೆಚ್ಚಾಗಿದ್ದರೆ, ಕಡಿಮೆ ತೂಕ ಹೊಂದಿದವರಲ್ಲಿ ಆತ್ಮವಿಶ್ವಾಸದ ಕೊರತೆ ಕಂಡುಬಂದಿದೆ. ಬೊಜ್ಜು ಹೊಂದಿದವರಲ್ಲಿ ಆತ್ಮವಿಶ್ವಾಸದ ಸಮಸ್ಯೆ ಹೆಚ್ಚಾಗಿ ಕಾಣಿಸಿಲ್ಲ.
ಅಧ್ಯಯನವು ಕಂಡುಕೊಂಡಿರುವ ಪ್ರಕಾರ, ದೇಹದ ತೂಕಕ್ಕೆ ಸಂಬಂಧಿಸಿದ ಇಮೇಜ್ ಕಾಳಜಿಯನ್ನು ಪರಿಹರಿಸಲು ಸಮಗ್ರ ಆರೋಗ್ಯ ನೀತಿಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸೇವಾ ವ್ಯವಸ್ಥೆಗಳು ದೇಹದ ಕಾಳಜಿ ಕುರಿತಂತೆ ಜಾಗೃತಿ ಹರಡುವುದು ಅಗತ್ಯವಾಗಿದೆ. ತಮ್ಮ ತೂಕಕ್ಕೆ ಸಂಬಂಧಿಸಿದಂತೆ ಸುಸ್ಥಿರ ಮನಸ್ಥಿತಿಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ನೀತಿ ನಿರೂಪಕರು ಎಲ್ಲರನ್ನೊಳಗೊಂಡ, ಕಳಂಕ-ರಹಿತ (ಸ್ಟಿಗ್ಮಾ-ಫ್ರೀ) ಆರೋಗ್ಯಸೇವಾ ಪರಿಸರವನ್ನು ರಚಿಸುವತ್ತ ಗಮನಹರಿಸಬೇಕು ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ.