×
Ad

60 ವರ್ಷ; 11 ಅಧ್ಯಕ್ಷರು: ಕ್ಯೂಬಾಗೆ ಮಣಿದ ಅಮೆರಿಕಾ

► ಫಿಡೆಲ್ ಕಾಸ್ಟ್ರೋ ನೇತೃತ್ವದ ಕ್ಯೂಬಾ ಕ್ರಾಂತಿಯ ಐತಿಹಾಸಿಕ ಪಾಠ ► ಸಾಮ್ರಾಜ್ಯಶಾಹಿಗೆ ಸವಾಲು ಹಾಕಿದ ಫಿಡೆಲ್ ಕಾಸ್ಟ್ರೋ ವಿರುದ್ಧ 600 ಹತ್ಯೆ ಯತ್ನಗಳು !

Update: 2026-01-06 16:38 IST

ಅಂತರರಾಷ್ಟ್ರೀಯ ರಾಜಕೀಯದಲ್ಲಿ ಸಾರ್ವಭೌಮತೆ ಎಂಬುದು ದೇಶಗಳ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚೆಗೆ ವೆನೆಝುವೆಲಾದ ರಾಜಧಾನಿ ಕಾರಕಾಸ್‌ನಲ್ಲಿ ನಡೆದ ಅಮೆರಿಕಾದ ಸೈನಿಕ ಕಾರ್ಯಾಚರಣೆ, ರಾಷ್ಟ್ರಗಳ ಸಾರ್ವಭೌಮತೆಗೆ ಬಲವಂತದ ಮೂಲಕ ಯಾವಾಗ ಬೇಕಾದರೂ ಧಕ್ಕೆ ತರಬಹುದು ಎಂಬ ವಾಸ್ತವವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಇಟ್ಟಿದೆ. ಬಲವೊಂದಿದ್ದರೆ ಏನನ್ನಾದರೂ ಮಾಡಬಹುದು ಎಂಬ ಹೊಸ ಜಾಗತಿಕ ವಾಸ್ತವದ ನಡುವೆಯೇ, ಇತಿಹಾಸದಲ್ಲಿ ಅಮೆರಿಕಾದ ಸಾಮ್ರಾಜ್ಯಶಾಹಿಗೆ ದೀರ್ಘಕಾಲ ಪ್ರತಿರೋಧ ತೋರಿದ ಕ್ಯೂಬಾ ಮತ್ತು ಅದರ ನಾಯಕ ಫಿಡೆಲ್ ಕಾಸ್ಟ್ರೋ ಮತ್ತೆ ಚರ್ಚೆಗೆ ಬಂದಿದ್ದಾರೆ.

Full View

ಅಮೆರಿಕಾದಂತಹ ಜಗತ್ತಿನ ಅತಿ ಬಲಿಷ್ಠ ಮಿಲಿಟರಿ ಶಕ್ತಿಯನ್ನು ಸುಮಾರು ಆರು ದಶಕಗಳ ಕಾಲ ಎದುರಿಸಿದ ಪುಟ್ಟ ದ್ವೀಪ ರಾಷ್ಟ್ರ ಕ್ಯೂಬಾ, ತನ್ನ ಸಾರ್ವಭೌಮತೆಯನ್ನು ಹೇಗೆ ಉಳಿಸಿಕೊಂಡಿತು ಎಂಬ ಪ್ರಶ್ನೆಗೆ ಉತ್ತರ ನೀಡುವಂತಹ ಇತಿಹಾಸ ಇದು.

ಕ್ರಾಂತಿಯ ಆರಂಭ

1953ರ ಅಕ್ಟೋಬರ್‌ನಲ್ಲಿ ಫಿಡೆಲ್ ಅಲೆಕ್ಸಾಂಡರ್ ಕಾಸ್ಟ್ರೋ ರುಝ್ ಕ್ಯೂಬಾದಲ್ಲಿ ಕ್ರಾಂತಿಯ ಬೀಜ ಬಿತ್ತಿದರು. ಅಮೆರಿಕಾದ ಆರ್ಥಿಕ ಹಾಗೂ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದ ಕ್ಯೂಬಾದ ಸ್ಥಿತಿಗೆ ವಿರೋಧವಾಗಿ, ಕಾಸ್ಟ್ರೋ ಮೋನ್ಕಾಡಾ ಬ್ಯಾರಕ್ ಮೇಲೆ ದಾಳಿ ನಡೆಸಿದರು. ಸುಮಾರು 150 ಯುವಕರು, 120 ರೈಫಲ್‌ಗಳೊಂದಿಗೆ ನಡೆಸಿದ ಈ ದಾಳಿ ವಿಫಲವಾಯಿತು. ಕಾಸ್ಟ್ರೋ ಬಂಧಿತರಾಗಿ, 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ನಂತರ ಅವರನ್ನು ಮೆಕ್ಸಿಕೋಗೆ ಗಡಿಪಾರು ಮಾಡಲಾಯಿತು.

ಸಿಯೆರಾ ಮಾಯೆಸ್ಟ್ರಾದಲ್ಲಿ ಸಂಘಟನೆ

ಮೆಕ್ಸಿಕೋದಿಂದ ಮರಳಿದ ಕಾಸ್ಟ್ರೋ, ಸಿಯೆರಾ ಮಾಯೆಸ್ಟ್ರಾ ಪರ್ವತ ಪ್ರದೇಶದಲ್ಲಿ ರೈತರು ಮತ್ತು ಕಾರ್ಮಿಕರನ್ನು ಸಂಘಟಿಸಿದರು. ಈ ಹೋರಾಟದಲ್ಲಿ ಅವರ ಜೊತೆಯಲ್ಲಿದ್ದವರು ಕ್ರಾಂತಿಕಾರಿ ಚೇ ಗೆವಾರಾ. ದೀರ್ಘ ಗುೆರಿಲ್ಲಾ ಹೋರಾಟದ ಬಳಿಕ, 1959ರ ಜನವರಿ 1ರಂದು ಕಾಸ್ಟ್ರೋ ನೇತೃತ್ವದ ಪಡೆ ಕ್ಯೂಬಾ ರಾಜಧಾನಿಗೆ ಪ್ರವೇಶಿಸಿತು. ಅಮೆರಿಕಾ ಬೆಂಬಲಿತ ಸರ್ವಾಧಿಕಾರಿ ಫುಲ್ಹೆನ್ಸಿಯೋ ಬಾಟಿಸ್ಟಾ ಅಧಿಕಾರದಿಂದ ಪತನಗೊಂಡರು.

ರಾಷ್ಟ್ರೀಕರಣ ಮತ್ತು ಸೋಷಿಯಲಿಸ್ಟ್ ನೀತಿ

ಅಧಿಕಾರಕ್ಕೆ ಬಂದ ಬಳಿಕ ಕಾಸ್ಟ್ರೋ ಸರ್ಕಾರ ಅಮೆರಿಕಾದ ಯುನೈಟೆಡ್ ಫ್ರೂಟ್ ಕಂಪೆನಿಯ ಭೂಮಿಗಳನ್ನು ವಶಪಡಿಸಿಕೊಂಡಿತು. ತೈಲ ನಿಕ್ಷೇಪಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಸಹಕಾರಿ ತತ್ವ ಮತ್ತು ಸೋಷಿಯಲಿಸಂ ಜಾರಿಗೆ ಬಂದು, ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಆರಂಭವಾದವು. ಕ್ಯೂಬಾ ಶೇ.100ರಷ್ಟು ಸಾಕ್ಷರತೆಯತ್ತ ಸಾಗಿತು. ಈ ಬೆಳವಣಿಗೆಗಳು ಅಮೆರಿಕಾದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾದವು.

ಬೇ ಆಫ್ ಪಿಗ್ಸ್ ಮತ್ತು ಕ್ಷಿಪಣಿ ಸಂಕಟ

1961ರ ಏಪ್ರಿಲ್‌ನಲ್ಲಿ ಅಮೆರಿಕಾ ಬೆಂಬಲಿತ ಕ್ಯೂಬನ್ ಬಂಡುಕೋರರು ಕ್ಯೂಬಾದ ದಕ್ಷಿಣ ತೀರದಲ್ಲಿ ದಾಳಿ ನಡೆಸಿದರು. ಆದರೆ ಸುಮಾರು 79 ಗಂಟೆಗಳ ಹೋರಾಟದ ಬಳಿಕ ಅವರು ಸೋಲನ್ನು ಕಂಡರು. ಈ ಘಟನೆ ಅಮೆರಿಕಾದ ಇತಿಹಾಸದಲ್ಲಿ “ಬೇ ಆಫ್ ಪಿಗ್ಸ್ ದಾಳಿ” ಎಂದು ಪ್ರಸಿದ್ಧವಾಗಿದೆ. ಆಗಿನ ಅಮೆರಿಕಾ ಅಧ್ಯಕ್ಷ ಜಾನ್ ಎಫ್. ಕೆನಡಿ ಇದನ್ನು ಅಮೆರಿಕಾದ ದೊಡ್ಡ ತಪ್ಪು ಎಂದು ಒಪ್ಪಿಕೊಂಡಿದ್ದರು.

1962ರಲ್ಲಿ ಕ್ಯೂಬಾದಲ್ಲಿ ರಷ್ಯಾ ಬೆಂಬಲಿತ ಕ್ಷಿಪಣಿಗಳು ಪತ್ತೆಯಾಗಿದ್ದು, ಜಗತ್ತು ಮೂರನೇ ಮಹಾಯುದ್ಧದ ಅಂಚಿಗೆ ತಲುಪಿತು. ಸುಮಾರು 13 ದಿನಗಳ ಗಂಭೀರ ಉದ್ವಿಗ್ನತೆಯ ಬಳಿಕ ಅಮೆರಿಕಾ–ರಷ್ಯಾ ಒಪ್ಪಂದದ ಮೂಲಕ ಸಂಕಟ ಶಮನಗೊಂಡಿತು. ಅಮೆರಿಕಾ ಕ್ಯೂಬಾದ ಆಂತರಿಕ ವ್ಯವಹಾರಗಳಲ್ಲಿ ತಲೆಹಾಕುವುದಿಲ್ಲ ಎಂಬ ಭರವಸೆ ನೀಡಿತು.

ನಿರಂತರ ಹತ್ಯೆ ಯತ್ನಗಳು

ಆದರೂ ಅಮೆರಿಕಾದ ವಿರೋಧ ನಿಂತಿಲ್ಲ. ಫಿಡೆಲ್ ಕಾಸ್ಟ್ರೋ ಅವರನ್ನು ಕೊಲ್ಲಲು ಸುಮಾರು 600ಕ್ಕೂ ಹೆಚ್ಚು ಬಾರಿ ಪ್ರಯತ್ನಗಳು ನಡೆದಿವೆ ಎಂಬುದು ನಂತರ ಬಹಿರಂಗವಾಗಿದೆ. ವಿಷಭರಿತ ಸಿಗಾರ್‌ನಿಂದ ಹಿಡಿದು ವೈಯಕ್ತಿಕ ಆಮಿಷಗಳವರೆಗೆ ಹಲವು ಯೋಜನೆಗಳು ರೂಪಿಸಲ್ಪಟ್ಟವು. ಸುಮಾರು 11 ಅಮೆರಿಕಾ ಅಧ್ಯಕ್ಷರು ಬದಲಾದರೂ, ಕ್ಯೂಬಾ ವಿರುದ್ಧದ ಶತ್ರುತ್ವ ನೀತಿ ಮುಂದುವರಿದೇ ಇತ್ತು.

ಇತಿಹಾಸದ ಪಾಠ

ಫಿಡೆಲ್ ಕಾಸ್ಟ್ರೋ 90 ವರ್ಷಗಳ ಕಾಲ ಬದುಕಿ, ನೈಸರ್ಗಿಕವಾಗಿ ನಿಧನರಾದರು. ಅಮೆರಿಕಾದ ಎಲ್ಲಾ ಪ್ರಯತ್ನಗಳ ನಡುವೆಯೂ ಕ್ಯೂಬಾ ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡಿತು. ಇಂದಿನ ಜಾಗತಿಕ ರಾಜಕೀಯ ಬೆಳವಣಿಗೆಗಳ ನಡುವೆ, ಕಾಸ್ಟ್ರೋ ನೇತೃತ್ವದ ಕ್ಯೂಬಾ ಪ್ರತಿರೋಧದ ಕಥೆ, ಸಾರ್ವಭೌಮತೆ ಮತ್ತು ಸ್ವಾಭಿಮಾನಕ್ಕಾಗಿ ಸಣ್ಣ ರಾಷ್ಟ್ರಗಳ ಹೋರಾಟಕ್ಕೆ ಮಹತ್ವದ ಪಾಠವಾಗಿ ಉಳಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News