×
Ad

ಮಹಾರಾಷ್ಟ್ರದಲ್ಲಿ BMC ಚುನಾವಣೆ: ಮತ್ತೆ ಒಂದಾದ ಪವಾರ್ ಕುಟುಂಬ, ಠಾಕ್ರೆ ಸಹೋದರರು; ಹೇಗಿದೆ ಪವರ್ ಗೇಮ್?

Update: 2026-01-06 20:04 IST

Photo Credit : PTI 

ಮಹಾರಾಷ್ಟ್ರದ 29 ಸ್ಥಳೀಯ ಸಂಸ್ಥೆಗಳಿಗೆ ಜನವರಿ 15 ರಂದು ಚುನಾವಣೆಗಳು ನಡೆಯಲಿದ್ದು, 2026ರ ಮೊದಲ ಚುನಾವಣಾ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಮಹಾರಾಷ್ಟ್ರ ಚುನಾವಣಾ ಆಯೋಗದ ಪ್ರಕಾರ, ಈ ನಿಗಮಗಳಿಗೆ 2015 ಮತ್ತು 2018ರ ನಡುವೆ ವಿಭಿನ್ನ ದಿನಾಂಕಗಳಲ್ಲಿ ಚುನಾವಣೆಗಳು ನಡೆದಿದ್ದವು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮತ್ತು ಇತರ 19 ಪ್ರಮುಖ ನಗರಗಳಿಗೆ ಕೊನೆಯದಾಗಿ 2017ರಲ್ಲಿ ಚುನಾವಣೆಗಳು ನಡೆದವು. ವಸಾಯಿ–ವಿರಾರ್, ಕೊಲ್ಹಾಪುರ, ಔರಂಗಾಬಾದ್, ನವಿ ಮುಂಬೈ ಮತ್ತು ಕಲ್ಯಾಣ್–ಡೊಂಬಿವಲಿ ಸೇರಿದಂತೆ ಐದು ಪುರಸಭೆಗಳಿಗೆ 2015ರಲ್ಲಿ ಚುನಾವಣೆ ನಡೆದಿದ್ದು, ಧುಲೆ, ಜಲಗಾಂವ್, ಅಹ್ಮದ್‌ನಗರ ಮತ್ತು ಸಾಂಗ್ಲಿ–ಮಿರಾಜ್–ಕುಪ್ವಾಡ್‌ ಗಳು 2018ರಲ್ಲಿ ತಮ್ಮ ಮೇಯರ್‌ ಗಳನ್ನು ಆಯ್ಕೆ ಮಾಡಿದ್ದವು.

ಈ ಚುನಾವಣೆಗೆ ಮುನ್ನ ಮಹಾರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಸಂಭವಿಸಿವೆ. ಠಾಕ್ರೆ ಮತ್ತು ಪವಾರ್ ಕುಟುಂಬಗಳು ಮತ್ತೆ ಒಂದಾಗಿದ್ದು, ವಿವಿಧ ಪಕ್ಷಗಳ ಅನೇಕ ಕಾರ್ಪೊರೇಟರ್‌ ಗಳು ಚುನಾವಣೆಗೆ ಮುಂಚೆಯೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. BMC 74,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಬಜೆಟ್ ಹೊಂದಿದ್ದು ದೇಶದ ಅತ್ಯಂತ ಶ್ರೀಮಂತ ಪುರಸಭೆಯಾಗಿದೆ. ಅದರ ಸಂಪತ್ತು ಮತ್ತು ಅಲ್ಲಿನ ಕೈಗಾರಿಕೆಗಳ ಕಾರಣದಿಂದ ಈ ಪ್ರದೇಶ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ. ಆದ್ದರಿಂದ, ಈ ಪ್ರದೇಶಗಳ ನಿಗಮಗಳು ರಾಜಕೀಯ ಪಕ್ಷಗಳಿಗೆ ಬಹಳ ಮುಖ್ಯವಾಗಿವೆ. ಮಹಾಯುತಿ ಮತ್ತು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (MVA) ಪ್ರಮುಖ ಸ್ಪರ್ಧಿಗಳಾಗಿವೆ. ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳೂ ಕಣದಲ್ಲಿದ್ದು, ನಗರ ಆಡಳಿತದ ಸ್ಥಳೀಯ ಮಟ್ಟದಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಲು ನಿರ್ಧರಿಸಿವೆ.

ಮಹಾಯುತಿಯ ಘಟಕಗಳಾದ ಬಿಜೆಪಿ ಮತ್ತು ಶಿವಸೇನಾ ಕ್ರಮವಾಗಿ 137 ಮತ್ತು 90 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಮಹಾಯುತಿ ಒಕ್ಕೂಟದ ಮೂರನೇ ಮಿತ್ರ ಪಕ್ಷವಾದ NCP ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, 94 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಂದರೆ ಯಾವುದೇ ನಾಮಪತ್ರಗಳನ್ನು ಹಿಂತೆಗೆದುಕೊಳ್ಳದಿದ್ದರೆ, ಪಕ್ಷವು ಸುಮಾರು 100 ಸ್ಥಾನಗಳಲ್ಲಿ ತನ್ನ ರಾಜ್ಯ ಮಟ್ಟದ ಪಾಲುದಾರರೊಂದಿಗೆ ಸ್ಪರ್ಧಿಸಲಿದೆ. ವಿರೋಧ ಪಕ್ಷ ಕಾಂಗ್ರೆಸ್ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅದರ ಹೊಸ ಮಿತ್ರ ಪಕ್ಷವಾದ ಮಾಜಿ ಸಂಸದ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ್ ಅಘಾಡಿ (VBA)ಗೆ ಚುನಾವಣಾ ಪೂರ್ವ ಒಪ್ಪಂದದಲ್ಲಿ 62 ಸ್ಥಾನಗಳನ್ನು ನೀಡಿದ್ದರೂ, 42 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಮಿತ್ರ ಪಕ್ಷವಾದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ) ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) 150ಕ್ಕೂ ಹೆಚ್ಚು ಸ್ಥಾನಗಳಲ್ಲಿ, NCP (ಎಸ್‌ಪಿ) 11 ಸ್ಥಾನಗಳಲ್ಲಿ ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಉಳಿದ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. 20 ವರ್ಷಗಳ ನಂತರ ಠಾಕ್ರೆ ಸಹೋದರರಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗಿದ್ದಾರೆ.

►ಮರಾಠಿ ಅಸ್ಮಿತೆ

ಶಿವಸೇನಾ (UBT) ಮತ್ತು ಎಂಎನ್‌ಎಸ್ ತಮ್ಮ ರಾಜಕೀಯ ಪರಂಪರೆಯನ್ನು ದಿವಂಗತ ಬಾಳಾ ಠಾಕ್ರೆ ಸ್ಥಾಪಿಸಿದ ಶಿವಸೇನಾದಿಂದ ಪಡೆದಿದ್ದು, ಅದು ಮರಾಠಿ ಅಸ್ಮಿತೆಯನ್ನು ಆಧರಿಸಿದೆ. ಅಂದಿನಿಂದ ಮರಾಠಿ ಅಸ್ಮಿತೆ ಈ ಎರಡೂ ಪಕ್ಷಗಳಿಗೆ ಭಾವನಾತ್ಮಕ ವಿಷಯವಾಗಿದೆ. 2006ರಲ್ಲಿ ಎಂಎನ್‌ಎಸ್ ಸ್ಥಾಪಿಸಿದ ಬಳಿಕ, ರಾಜ್ ಠಾಕ್ರೆ ತಮ್ಮ ರಾಜಕೀಯ ಟ್ರೇಡ್‌ಮಾರ್ಕ್ ಆಗಿ ಉತ್ತರ ಭಾರತ ವಿರೋಧಿ ನಿಲುವಿನ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಮತ್ತೊಂದೆಡೆ, ಉದ್ಧವ್ ಠಾಕ್ರೆ ತಮ್ಮ ಕಾರ್ಯಸೂಚಿಯನ್ನು ಮುನ್ನಡೆಸಲು ‘ಮರಾಠಿ ಮನೂಸ್’ ನಿರೂಪಣೆಯನ್ನು ಬೆಂಬಲಿಸಿದ್ದಾರೆ.

2024ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಕಳಪೆ ಪ್ರದರ್ಶನ ನೀಡಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ, ಹಿಂದಿ ಹೇರಿಕೆಗೆ ವಿರೋಧದ ಮೂಲಕ ಮರಾಠಿ ಅಸ್ಮಿತೆಯ ವಿಷಯವು ಮತದಾರರಲ್ಲಿ ಮರಾಠಿ ಹೆಮ್ಮೆಯನ್ನು ಹುಟ್ಟುಹಾಕಲು ಎರಡೂ ಪಕ್ಷಗಳಿಗೆ ಹೊಸ ಶಕ್ತಿಯನ್ನು ನೀಡಿದೆ.

►‘ಪವರ್’ ಮೈತ್ರಿ

ಇತ್ತ ಅಜಿತ್ ಪವಾರ್ ನೇತೃತ್ವದ NCP ಕೂಡ ಪಿಂಪ್ರಿ–ಚಿಂಚ್‌ವಾಡ್ ಮತ್ತು ಪುಣೆ ಸ್ಥಳೀಯ ಸಂಸ್ಥೆ ಚುನಾವಣೆಯನ್ನು NCP (ಶರದ್ ಪವಾರ್ ಬಣ) ಜೊತೆ ಸೇರಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಪಿಂಪ್ರಿ–ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ‘ಗಡಿಯಾರ’ ಮತ್ತು ‘ತುತ್ತೂರಿ’ ಒಂದಾಗಿವೆ. ಹಿರಿಯ ನಾಯಕರ ಗುಂಪಿನೊಂದಿಗೆ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಪಕ್ಷದಿಂದ ಬೇರ್ಪಟ್ಟು, ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆಯೊಂದಿಗೆ ಕೈಜೋಡಿಸಿದ ಎರಡು ವರ್ಷಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಶರದ್ ಪವಾರ್ ಅವರಿಗೆ ವಯಸ್ಸಾಗಿದ್ದು ಪಕ್ಷವನ್ನು ಮುನ್ನಡೆಸುವುದನ್ನು ಅಜಿತ್ ಪವಾರ್ ವಿರೋಧಿಸಿದ್ದರು. ಹೊಸ ಮೈತ್ರಿಕೂಟದಡಿಯಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ಒಕ್ಕೂಟದೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಆದರೆ ಶರದ್ ಪವಾರ್ ಅವರ ಬಣವು ವಿರೋಧ ಪಕ್ಷದೊಂದಿಗೆ ಉಳಿಯುವುದಾಗಿ ಘೋಷಿಸಿತು. ಬಳಿಕ ಚುನಾವಣಾ ಆಯೋಗವು ಅಜಿತ್ ಪವಾರ್ ಅವರ ಬಣವನ್ನು ಕಾನೂನುಬದ್ಧ NCPಯಾಗಿ ಗುರುತಿಸಿ ‘ಗಡಿಯಾರ’ ಚಿಹ್ನೆಯನ್ನು ಅವರಿಗೆ ನೀಡಿತು. ಶರದ್ ಪವಾರ್ ಅವರ ಬಣಕ್ಕೆ ‘ತುತ್ತೂರಿ’ ಚಿಹ್ನೆ ದೊರಕಿತು. ಎರಡೂ ಬಣಗಳು ಪ್ರತ್ಯೇಕವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಿವೆ. 2024ರ ಲೋಕಸಭಾ ಚುನಾವಣೆಯ ನಂತರ ಹಿನ್ನಡೆ ಅನುಭವಿಸಿದಾಗ ಕುಟುಂಬವನ್ನು ಕೈಬಿಟ್ಟಿದ್ದು ‘ತಪ್ಪು’ ಎಂದು ಅಜಿತ್ ಪವಾರ್ ಒಪ್ಪಿಕೊಂಡರು.

►NDA ಜತೆ ಕೈಜೋಡಿಸಲಿದೆಯೇ NCP (ಎಸ್‌ಪಿ)?

ಪ್ರಚಾರದ ವೇಳೆ ಶಿವಸೇನಾ ಸಚಿವ ಸಂಜಯ್ ಶಿರ್ಸತ್ ಅವರು, NCP (ಎಸ್‌ಪಿ) ಬಿಜೆಪಿ ನೇತೃತ್ವದ NDA ಸರ್ಕಾರಕ್ಕೆ ಸೇರುವ ಸಾಧ್ಯತೆಯ ಕುರಿತು ಊಹಾಪೋಹಗಳನ್ನು ಹುಟ್ಟುಹಾಕಿದ್ದರು. ಭವಿಷ್ಯದಲ್ಲಿ ಶರದ್ ಪವಾರ್ NDA ಸೇರುವ ಸಾಧ್ಯತೆ ಇದೆ. ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಕೈಜೋಡಿಸುತ್ತಾರೆ ಎಂದು ಯಾರಾದರೂ ನಂಬಿದ್ದರೆ? ಆದರೆ ಅವರು ಹಾಗೆ ಮಾಡಿದರು. ಅವರು ಎರಡುವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಅವರು ಸೋನಿಯಾ ಗಾಂಧಿಯನ್ನು ವಿರೋಧಿಸಿ ಕಾಂಗ್ರೆಸ್ ತೊರೆದರು. ನಂತರ ತಕ್ಷಣವೇ ಅವರೊಂದಿಗೆ ಮೈತ್ರಿ ಮಾಡಿಕೊಂಡರು. ಅವರು NDA ಸೇರಿದರೆ ಆಶ್ಚರ್ಯವೇನಿಲ್ಲ. ರಾಜಕೀಯವನ್ನು ಅಧ್ಯಯನ ಮಾಡಿದರೆ, ಇದು ಅವರ ವೃತ್ತಿಜೀವನದ ಮಾದರಿಯೇ ಎಂದು ಶಿರ್ಸತ್ ಹೇಳಿದ್ದಾರೆ.

►ಮೈತ್ರಿ ಲೆಕ್ಕಾಚಾರ

ರಾಜ್ಯಾದ್ಯಂತ ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಬಿಜೆಪಿ ಹೆಚ್ಚಿನ ಸ್ಥಳಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ. ಗೆಲುವಿನ ಸಾಧ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ, ವಿಶೇಷವಾಗಿ ಮುಂಬೈನಲ್ಲಿ, ಅದು ಶಿಂಧೆ ಅವರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ವಿರೋಧ ಪಕ್ಷಗಳು ಪರಸ್ಪರ ಕೈಜೋಡಿಸಿವೆ. ಪಿಂಪ್ರಿ–ಚಿಂಚ್‌ವಾಡ್‌ನಲ್ಲಿ ಪವಾರ್ ಅವರ ಎರಡೂ ಬಣಗಳು ಒಟ್ಟಾಗಿವೆ. ನಾಸಿಕ್‌ನಲ್ಲಿ ಶಿಂಧೆ ಮತ್ತು ಅಜಿತ್ ಪವಾರ್ ಬಿಜೆಪಿ ವಿರುದ್ಧ ಒಗ್ಗಟ್ಟಾಗಿದ್ದಾರೆ.

ಕಾಂಗ್ರೆಸ್ ಕೂಡ ದೀರ್ಘಕಾಲೀನ ಕಾರ್ಯತಂತ್ರವನ್ನು ಅನುಸರಿಸಿದ್ದು, ರಾಜ್ಯದ ಏಕೈಕ ವಿಶ್ವಾಸಾರ್ಹ ಬಿಜೆಪಿ ವಿರೋಧಿ ಪಕ್ಷವೆಂದು ತನ್ನನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂಬೈ, ಲಾತೂರ್ ಮತ್ತು ನಾಂದೇಡ್‌ನಲ್ಲಿ ವಿಬಿಎ ಜೊತೆ ಹಾಗೂ ಧಂಗರ್ (ಕುರುಬ) ಸಮುದಾಯದ ಬಲವಾದ ಬೆಂಬಲ ಹೊಂದಿರುವ ಮಹಾದೇವ್ ಜಂಕರ್ ಅವರ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿದೆ. ಇಚಲಕರಂಜಿಯಲ್ಲಿ ಕಾಂಗ್ರೆಸ್ ರಾಜು ಶೆಟ್ಟಿ ಅವರ ಸ್ವಾಭಿಮಾನಿ ಪಕ್ಷವನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. ಶರದ್ ಪವಾರ್ ಅವರ ರಾಜಕೀಯ ಶೈಲಿಗೆ ತೀವ್ರ ವಿರೋಧ ಹೊಂದಿದ್ದ ಕಾರಣ ಪ್ರಕಾಶ್ ಅಂಬೇಡ್ಕರ್, ಜಂಕರ್ ಮತ್ತು ಶೆಟ್ಟಿ ಕಾಂಗ್ರೆಸ್‌ನಿಂದ ದೂರ ಉಳಿದಿದ್ದರು. ವರ್ಷಗಳ ಕಾಲ ಮಹಾರಾಷ್ಟ್ರ ಕಾಂಗ್ರೆಸ್ ಪವಾರ್ ಅವರ ನಿಷ್ಠಾವಂತ ಮಿತ್ರನಾಗಿ ಉಳಿದಿತ್ತು. ಆದರೆ ಪವಾರ್ ಬಿಜೆಪಿಗೆ ಹತ್ತಿರವಾಗುತ್ತಿದ್ದಂತೆ, ಕಾಂಗ್ರೆಸ್ ತನ್ನದೇ ಆದ ಹಾದಿಯನ್ನು ರೂಪಿಸಿಕೊಳ್ಳಲು ಮುಂದಾಗಿದೆ.

►MVA ವಿಭಜನೆಯಾಗುತ್ತದೆಯೇ?

ಅಧಿಕಾರಕ್ಕಾಗಿ ಠಾಕ್ರೆ ಸಹೋದರರು ಮತ್ತು ಹಿರಿಯ–ಕಿರಿಯ ಪವಾರ್‌ ಗಳ ಒಗ್ಗೂಡಿಕೆ ಮಹಾ ವಿಕಾಸ್ ಅಘಾಡಿ (MVA) ತೆರೆಮರೆಗೆ ಸರಿಯುತ್ತಿರುವುದನ್ನು ಸೂಚಿಸುತ್ತದೆ. ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ NCPಯೊಂದಿಗೆ 2019ರಲ್ಲಿ ರಚಿಸಿದ ಒಕ್ಕೂಟವೇ MVA. 2024ರ ಲೋಕಸಭಾ ಚುನಾವಣೆಯಲ್ಲಿ ಈ ವಿರೋಧ ಪಕ್ಷದ ಒಕ್ಕೂಟ ರಾಜ್ಯದ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದಿತು. ಆದರೆ ಅದೇ ವರ್ಷದ ಕೊನೆಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ MVA 288 ಸ್ಥಾನಗಳಲ್ಲಿ ಕೇವಲ 46 ಸ್ಥಾನಗಳನ್ನು ಮಾತ್ರ ಗಳಿಸಿತು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ, ರಾಜ್ ಠಾಕ್ರೆ ಅವರ ಎಂಎನ್‌ಎಸ್ ಉತ್ತರ ಭಾರತೀಯರನ್ನು ‘ಹೊರಗಿನವರು’ ಎಂದು ಹೇಳಿದ್ದರಿಂದ ಕಾಂಗ್ರೆಸ್ ಮೈತ್ರಿಕೂಟದಿಂದ ದೂರ ಉಳಿದಿದೆ. ಜನವರಿ 15ರ ಚುನಾವಣೆಯಲ್ಲಿ ಎಲ್ಲಾ 227 ವಾರ್ಡ್‌ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮೊದಲೇ ಘೋಷಿಸಿದ್ದ ಕಾಂಗ್ರೆಸ್ ಈಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಿಬಿಎ ಜೊತೆ ಕೈಜೋಡಿಸಿ 62 ಸ್ಥಾನಗಳನ್ನು ಹಂಚಿಕೊಂಡಿದೆ. ವಿಬಿಎ ಹೊರತುಪಡಿಸಿ, ಕಾಂಗ್ರೆಸ್ ಆರ್‌ಎಸ್‌ಪಿಗೆ 10 ಸ್ಥಾನಗಳು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಗವಾಯಿ ಬಣ)ಗೆ ಎರಡು ಸ್ಥಾನಗಳನ್ನು ಹಂಚಿದೆ. ಮಹಾರಾಷ್ಟ್ರದಲ್ಲಿ ತನ್ನದೇ ಆದ ಹಾದಿಯನ್ನು ರೂಪಿಸಲು ಕಾಂಗ್ರೆಸ್ ತೆಗೆದುಕೊಂಡ ಈ ನಡೆ ದಿಟ್ಟ ತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ.

2009ರವರೆಗೆ ರಾಜ್ಯ ರಾಜಕೀಯದಲ್ಲಿ ಬಲವಾದ ಅಸ್ತಿತ್ವ ಹೊಂದಿದ್ದ ಕಾಂಗ್ರೆಸ್ ನಂತರ ಕ್ರಮೇಣ ಸ್ಥಾನಗಳನ್ನು ಕಳೆದುಕೊಂಡಿದೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ 101 ಸ್ಥಾನಗಳಲ್ಲಿ ಕೇವಲ 16 ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಅದರ ಮತ ಹಂಚಿಕೆ 12.42% ಆಗಿದೆ.

►ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿದ್ದು ಯಾರು?

ಹಿಂದಿನ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಪ್ರಾಬಲ್ಯ ಸಾಧಿಸಿ ಮುಂಬೈ ಮತ್ತು ಥಾಣೆ ಸೇರಿದಂತೆ 15 ಪುರಸಭೆಗಳಲ್ಲಿ ಸರ್ಕಾರ ರಚಿಸಿವೆ. ಪುಣೆ, ಜಲಗಾಂವ್, ಮೀರಾ–ಭಯಂದರ್, ನಾಗ್ಪುರ ಮತ್ತು ಪಿಂಪ್ರಿ–ಚಿಂಚ್‌ವಾಡ್ ಸೇರಿದಂತೆ 13 ನಿಗಮಗಳಲ್ಲಿ ಬಿಜೆಪಿ ಬಹುಮತ ಗಳಿಸಿತ್ತು. ಶಿವಸೇನಾ ತನ್ನ ಭದ್ರಕೋಟೆಯಾದ ಥಾಣೆಯಲ್ಲಿ ಬಹುಮತ ಸಾಧಿಸಿತು. ಮುಂಬೈನಲ್ಲಿ 2022ರಲ್ಲಿ ಅಧಿಕಾರಾವಧಿ ಮುಗಿಯುವವರೆಗೆ ಎರಡೂ ಪಕ್ಷಗಳು ಪಾಲುದಾರರಾಗಿ ಆಡಳಿತ ನಡೆಸಿದವು.

►ಪುರಸಭೆ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಯಾರು?

2025ರ ಡಿಸೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟ 288 ಪುರಸಭೆಗಳು ಮತ್ತು ನಗರ ಪಂಚಾಯತ್‌ಗಳಲ್ಲಿ ಸುಮಾರು 207ರಲ್ಲಿ ಅಧ್ಯಕ್ಷ ಸ್ಥಾನಗಳನ್ನು ಗೆದ್ದಿತು. 117ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಅತಿದೊಡ್ಡ ಲಾಭ ಗಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News