ವೈರಲ್ ಆಗುತ್ತಿದೆ ಕತ್ತಲ ಸ್ನಾನ; ಒತ್ತಡ ಮತ್ತು ನಿದ್ರೆಗೆ ಸಹಕಾರಿ?
ಸಾಂದರ್ಭಿಕ ಚಿತ್ರ | Photo Credit : freepik
ಕತ್ತಲ ಸ್ನಾನದಿಂದ ದೃಶ್ಯರೂಪದ ಅಡಚಣೆಗಳಿಲ್ಲದೆ ಕೇವಲ ನೀರಿನ ಬೆಚ್ಚಗಿನ ಅನುಭವ, ಸಾಬೂನಿನ ಪರಿಮಳ ಮತ್ತು ನಿಮ್ಮ ಉಸಿರಾಟದ ಲಯ ಎಲ್ಲವನ್ನೂ ಅನುಭವಿಸಬಹುದಾಗಿದೆ!
ತಣ್ಣೀರಿನ ಸ್ನಾನದಿಂದ ಆರಂಭಿಸಿ ಭೂಮಿಗೆ ಪಾದಸ್ಪರ್ಶಿಸುವವರೆಗೆ ಆರೋಗ್ಯ ಯೋಗಕ್ಷೇಮದ ಅಭ್ಯಾಸಗಳು ಆಧುನಿಕತೆಯೊಂದಿಗೆ ಬೆಸೆದು ಮರುಪ್ರವೇಶಿಸುವ ಅಭ್ಯಾಸವನ್ನು ಹೊಂದಿದೆ. ಅಂತಹುದೇ ಒಂದು ಅಭ್ಯಾಸ ಇದೀಗ ಆನ್ಲೈನ್ನಲ್ಲಿ ಬಹಳ ಪ್ರಚಾರ ಪಡೆಯುತ್ತಿದೆ. ಅದೇ ʼಡಾರ್ಕ್ ಶವರ್ʼ! ಅಂದರೆ, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಲು ಮಂದ ಬೆಳಕಿನಲ್ಲಿ ಅಥವಾ ಸಂಪೂರ್ಣ ಕತ್ತಲೆಯಲ್ಲಿ ಸ್ನಾನ ಮಾಡುವುದು. ಕತ್ತಲೆ ಸ್ನಾನವೆಂದರೆ ಕೇವಲ ದೀಪಗಳನ್ನು ಆಫ್ ಮಾಡುವುದಲ್ಲ. ಕತ್ತಲೆ ಸ್ನಾನದಿಂದ ಇಂದ್ರಿಯಗಳು ಪುನಶ್ಚೇತನಗೊಳ್ಳುತ್ತವೆ ಎಂದು ನಂಬಲಾಗಿದೆ. ದೃಶ್ಯರೂಪದ ಅಡಚಣೆಗಳಿಲ್ಲದೆ ಕೇವಲ ನೀರಿನ ಬೆಚ್ಚಗಿನ ಅನುಭವ, ಸಾಬೂನಿನ ಪರಿಮಳ ಮತ್ತು ನಿಮ್ಮ ಉಸಿರಾಟದ ಲಯ ಎಲ್ಲವನ್ನೂ ಅನುಭವಿಸಬಹುದಾಗಿದೆ!
ಕತ್ತಲಸ್ನಾನದಿಂದ ನಿದ್ರೆಗೆ ಮತ್ತು ಒತ್ತಡದ ಸಮಸ್ಯೆಗೆ ಪರಿಹಾರ
ತಜ್ಞರು ಕೂಡ ಇದರಿಂದ ನಿದ್ರೆಗೆ ಮತ್ತು ಒತ್ತಡದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಬ್ರಿಟಿಷ್ ಸ್ಲೀಪ್ ಸೊಸೈಟಿ ಅಧ್ಯಕ್ಷರಾದ ಡಾ. ಆಲಿ ಹೇರ್ ಹೇಳಿರುವ ಪ್ರಕಾರ, ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಸ್ನಾನ ಮಾಡುವುದರಿಂದ ಮನಃಪೂರ್ವಕವಾಗಿ ಸ್ನಾನದ ಆನಂದವನ್ನು ಅನುಭವಿಸಬಹುದು ಮತ್ತು ಆರಾಮದಾಯಕ ಅನುಭವ ಕೊಡಬಹುದು. ಮಲಗುವ ಮೊದಲು ಕತ್ತಲ ಸ್ನಾನ ಮಾಡಿದಲ್ಲಿ ಎಲ್ಲಾ ಚಿಂತೆಗಳಿಂದ ಮುಕ್ತರಾಗಿ ವಿಶ್ರಾಂತ ಮನಸ್ಕರಾಗಿ ನಿದ್ರೆಗೆ ಜಾರಲು ನೆರವಾಗುತ್ತದೆ. ಮಂದ ಬೆಳಕಿನಲ್ಲಿ ಸ್ನಾನ ಮಾಡುವುದರಿಂದ ದೇಹಕ್ಕೆ ಮಲಗುವ ಸಮಯ ಎನ್ನುವ ಸಂಕೇತವನ್ನು ರವಾನಿಸಲು ಸಾಧ್ಯವಾಗುತ್ತದೆ. ಇದರಿಂದ ನಿದ್ರೆಯ ಪ್ರಮುಖ ಹಾರ್ಮೋನ್ ಆಗಿರುವ ಮೆಲಟೊನಿನ್ಗೆ ಸಂಕೇತ ಹೋಗುತ್ತದೆ” ಎಂದು ಅವರು ವಿವರಿಸಿದ್ದಾರೆ. ಮುಖ್ಯವಾಗಿ ನಿದ್ರೆಯ ಸಮಸ್ಯೆ ಮತ್ತು ಒತ್ತಡ ನಿರ್ವಹಣೆಯಲ್ಲಿ ಸಂಕಷ್ಟಪಡುವವರಿಗೆ ದೈನಂದಿನ ಜೀವನದಲ್ಲಿ ಇದನ್ನು ಹೇಗೆ ಅಭ್ಯಾಸ ಮಾಡುವುದು ಎನ್ನುವುದು ಪ್ರಶ್ನೆಯಾಗಿದೆ.
ಕತ್ತಲ ಸ್ನಾನ ಮತ್ತು ಮೆಲಟೊನಿನ್ ಬಗ್ಗೆ ಮನಶ್ಶಾಸ್ತ್ರಜ್ಞರು ಏನು ಹೇಳುತ್ತಾರೆ?
ಮನಶ್ಶಾಸ್ತ್ರಜ್ಞ ಸಲಹಾ ತಜ್ಞರ ಪ್ರಕಾರ, “ಮೆಲಟೊನಿನ್ ನಮ್ಮ ನಿದ್ರೆ ಮತ್ತು ಎಚ್ಚರದ ಸೈಕಲ್ ಅನ್ನು ನಿಯಂತ್ರಿಸುವ ಹಾರ್ಮೋನ್ ಆಗಿದ್ದು, ಅದರ ಬಿಡುಗಡೆ ಮೇಲೆ ಬೆಳಕಿನ ಪ್ರಭಾವ ಹೆಚ್ಚಿರುತ್ತದೆ. ಬಲ್ಬ್ಗಳು, ಪರದೆಗಳಿಂದ ಬರುವ ಪ್ರಕಾಶಮಾನವಾದ ಬೆಳಕು ಮೆಲಟೊನಿನ್ ಉತ್ಪಾದನೆಯನ್ನು ನಿಗ್ರಹಿಸುತ್ತದೆ. ಆದರೆ ಕತ್ತಲಿನ ಪರಿಸರ ಅದನ್ನು ಪ್ರೋತ್ಸಾಹಿಸುತ್ತದೆ. ಕತ್ತಲ ಸ್ನಾನದಿಂದಾಗಿ ಮಲಗುವ ಮೊದಲು ಕೃತಕ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ. ಇದರಿಂದ ಮೆದುಳಿಗೆ ಮೆಲಟೊನಿನ್ ಬಿಡುಗಡೆಗೆ ಸಂಕೇತ ಹೋಗುತ್ತದೆ. ಹಾಗೆಂದು ಒಂದು ದಿನ ಕತ್ತಲೆ ಸ್ನಾನ ಮಾಡಿದಲ್ಲಿ ಬದಲಾವಣೆಯಾಗದು. ನಿತ್ಯದ ಅಭ್ಯಾಸದಲ್ಲಿ ರೂಢಿಸಿಕೊಂಡಲ್ಲಿ ಕಾಲಾನುಸಾರ ದೇಹವನ್ನು ಸಹಜವಾಗಿ ವಿಶ್ರಾಂತಿಗೆ ದೂಡಲು ನೆರವಾಗಬಹುದು.
ಒತ್ತಡ ಮತ್ತು ಖಿನ್ನತೆ ರೋಗಕ್ಕೆ ಹೇಗೆ ನೆರವಾಗುತ್ತದೆ?
ಕತ್ತಲ ಸ್ನಾನವು ಒತ್ತಡ ಶಮನಕ್ಕೆ ಉತ್ತಮ ಹಾದಿ! ದೃಶ್ಯರೂಪದ ಪ್ರಚೋದನೆಗಳಿಲ್ಲದಾಗ ದೇಹ ಸ್ಪರ್ಶ, ಧ್ವನಿ ಮತ್ತು ಪರಿಮಳದ ಮೇಲೆ ಅವಲಂಬಿಸಿರುತ್ತದೆ. ಸ್ನಾನದ ಬೆಚ್ಚನೆಯ ಅನುಭವ ಮತ್ತು ನೀರಿನ ಹರಿವು, ಸಾಬೂನಿನ ಪರಿಮಳ ಮನಸ್ಸಿಗೆ ಸಮಾಧಾನ ನೀಡಬಹುದು. ಇಂದ್ರಿಯಗಳ ಬದಲಾವಣೆಯಿಂದ ನರವ್ಯೂಹ ವ್ಯವಸ್ಥೆ ಶಾಂತಗೊಳ್ಳಬಹುದು. ಹೀಗೆ ಚಿಂತೆಗಳನ್ನು ಕಡಿಮೆ ಮಾಡಬಹುದು. ಒಂದು ರೀತಿಯ ಧ್ಯಾನದ ಅನುಭವ ಕೊಡಬಹುದು. ಖಿನ್ನತೆ ಸಮಸ್ಯೆ ಇರುವವರಿಗೆ ಅಂತಹ ಅಭ್ಯಾಸ ಉತ್ತಮ.
ಕತ್ತಲ ಸ್ನಾನ ಈ ಸಂದರ್ಭಗಳಲ್ಲಿ ಬೇಡ
ಆರೋಗ್ಯಕರ ವ್ಯಕ್ತಿಗಳಿಗೆ ಮಾತ್ರ ಕತ್ತಲ ಸ್ನಾನ ನೆರವಾಗಬಹುದು. ಆದರೆ ಎಲ್ಲರಿಗೂ ಅದು ಸಹಾಯ ಮಾಡದು. ಮುಖ್ಯವಾಗಿ ಸಮತೋಲನದ ಸಮಸ್ಯೆ ಇರುವವರು, ತಲೆತಿರುಗುವುದು ಅಥವಾ ದೃಷ್ಟಿ ದೋಷ ಇರುವವರಿಗೆ ಅಪಾಯ ಹೆಚ್ಚಿರುವ ಸಾಧ್ಯತೆಯಿದೆ. “ಇಂದ್ರಿಯಗಳ ಸೂಕ್ಷ್ಮತೆಯ ಸಮಸ್ಯೆ ಇರುವವರಿಗೆ ದೃಶ್ಯ ಸೂಚನೆಗಳಿಲ್ಲದೆ ಅನನುಕೂಲತೆ ಅನುಭವಿಸಬಹುದು. ಅಂತಹ ಸಂದರ್ಭದಲ್ಲಿ ಮಂದ ಬೆಳಕನ್ನು ಒದಗಿಸುವುದರಿಂದ ಬೆಳಕಿನ ಪ್ರಕಾಶ ಕಡಿಮೆಗೊಳಿಸಿ ಸುರಕ್ಷತೆಯನ್ನೂ ನೀಡಬಹುದು. ಅಂತಿಮವಾಗಿ ಹೇಳುವುದಾದರೆ ಕತ್ತಲ ಸ್ನಾನದಿಂದ ಬಹಳ ಉಪಯೋಗವಿದೆ. ಆದರೆ ಸುರಕ್ಷತೆಯನ್ನು ಗಮನದಲ್ಲಿರಿಸಿ ಅಳವಡಿಸಿಕೊಳ್ಳಬೇಕು” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.