ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಪದಕ ನೀಡಿದ ಮಚಾದೊ; ನೊಬೆಲ್ ಪ್ರಶಸ್ತಿ ವರ್ಗಾಯಿಸಬಹುದೆ?
ನಿಯಮ ಹೇಳುವುದೇನು?
Photo Credit ; @wikileaks
ವೆನೆಜುವೆಲಾದ ನೊಬೆಲ್ ಪ್ರಶಸ್ತಿ ವಿಜೇತರಾದ ಮಾರಿಯ ಮಚಾದೊ ತಮ್ಮ ನೊಬೆಲ್ ಪ್ರಶಸ್ತಿಯನ್ನು ಟ್ರಂಪ್ ಗೆ ನೀಡಿದ್ದಾರೆ. ಹೀಗೆ ನೊಬೆಲ್ ಹಸ್ತಾಂತರಿಸಬಹುದೆ?
ವೆನೆಜುವೆಲಾದ ಮಾರಿಯ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪುರಸ್ಕಾರವನ್ನು ಡೊನಾಲ್ಡ್ ಟ್ರಂಪ್ ಗೆ ನೀಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿಯನ್ನು ಸ್ವಯಂ ಇಚ್ಛೆಯಿಂದ ಹಸ್ತಾಂತರಿಸಲಾಗಿದೆ.
ನೊಬೆಲ್ ಸಮಿತಿಯ ನಿಯಮದಂತೆ ಪ್ರಶಸ್ತಿಯನ್ನು ವರ್ಗಾಯಿಸಲು ಅವಕಾಶವಿಲ್ಲದೆ ಇದ್ದರೂ, ಮಚಾದೊ ಅವರ ಈ ನಡೆ ವೆನಜುವೆಲಾಗೆ ಅಮೆರಿಕದ ಬೆಂಬಲ ಬಲಪಡಿಸಲು ರೂಪಿಸಿದ ರಾಜಕೀಯ ತಂತ್ರ ಎಂದು ವಿಶ್ಲೇಷಿಸಲಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಶಸ್ತಿಯನ್ನು ಪಡೆದು “ಪರಸ್ಪರ ಗೌರವದ ಅದ್ಭುತ ಸೂಚಕ” ಎಂದು ಪ್ರಶಂಸಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪಡೆಯಬೇಕು ಎನ್ನುವುದು ಟ್ರಂಪ್ ಅವರ ಬಹುದೊಡ್ಡ ಕನಸಾಗಿತ್ತು. ಅವರು ಬಹಿರಂಗವಾಗಿಯೇ ಅನೇಕ ಸಲ ತಮ್ಮ ಆಶಯವನ್ನು ಮುಂದಿಟ್ಟಿದ್ದರು. ಬಹುತೇಕ ಬೇಡಿಕೆಯನ್ನೂ ಇಟ್ಟಿದ್ದರು.
ನೊಬೆಲ್ ಪ್ರಶಸ್ತಿ ಹಸ್ತಾಂತರಿಸಬಹುದೆ?
ಮಚಾದೊ ತಮ್ಮ ಪದಕವನ್ನು ಟ್ರಂಪ್ ಗೆ ನೀಡಿರುವುದಲ್ಲದೆ, ಅದನ್ನು ಶ್ವೇತಭವನದಲ್ಲಿ ಬಿಟ್ಟು ಮರಳಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಹೀಗೆ ನೊಬೆಲ್ ಪ್ರಶಸ್ತಿಯನ್ನು ಸ್ವಯಂ ಇಚ್ಛೆಯಿಂದ ಹಸ್ತಾಂತರಿಸಲಾಗಿದೆ. ಆದರೆ ಹೀಗೆ ನೊಬೆಲ್ ಪ್ರಶಸ್ತಿಯನ್ನು ವರ್ಗಾಯಿಸಬಹುದೆ? ನಾರ್ವೆ ಮೂಲದ ನೊಬೆಲ್ ಇನ್ಸ್ಟಿಟ್ಯೂಟ್ ಮಚಾದೊ ಶ್ವೇತಭವನಕ್ಕೆ ಭೇಟಿ ಕೊಡುವ ಮೊದಲೇ ಈ ವಿಚಾರವನ್ನು ಸ್ಪಷ್ಟಪಡಿಸಿದೆ.
ಕಳೆದ ರವಿವಾರದಂದು ನೊಬೆಲ್ ಸಂಸ್ಥೆಯು ಪ್ರಶಸ್ತಿಯನ್ನು ವರ್ಗಾಯಿಸುವಂತಿಲ್ಲ, ಹಂಚುವಂತಿಲ್ಲ ಅಥವಾ ರದ್ದುಪಡಿಸುವಂತಿಲ್ಲ ಎಂದು ತಮ್ಮ ನಿಯಮವನ್ನು ಬಹಿರಂಗಪಡಿಸಿದೆ. ಸಂಸ್ಥೆ ನೀಡಿರುವ ಸ್ಪಷ್ಟನೆಯಲ್ಲಿ, “ನೊಬೆಲ್ ಪ್ರಶಸ್ತಿ ನೀಡುವ ನಿರ್ಧಾರ ಅಂತಿಮ ಮತ್ತು ಶಾಶ್ವತ” ಎಂದು ಹೇಳಿದೆ.
“ನೊಬೆಲ್ ಪ್ರತಿಷ್ಠಾನದ ಕಾನೂನುಗಳು ವಿನಂತಿಗಳಿಗೆ ಅನುಮತಿಸುವುದಿಲ್ಲ. ಪ್ರಶಸ್ತಿ ಸ್ವೀಕರಿಸಿದ ನಂತರ ಪ್ರಶಸ್ತಿ ವಿಜೇತರ ಕ್ರಮಗಳು ಅಥವಾ ಹೇಳಿಕೆಗಳ ಬಗ್ಗೆ ನೊಬೆಲ್ ಸಮಿತಿಗಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಒಮ್ಮೆ ಪ್ರಶಸ್ತಿ ಘೋಷಿಸಿದ ನಂತರ ಅದನ್ನು ಹಿಂಪಡೆಯಲು, ಹಂಚಿಕೊಳ್ಳಲು ಅಥವಾ ಇತರರಿಗೆ ವರ್ಗಾಯಿಸಲು ಸಾಧ್ಯವಿಲ್ಲ” ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಮಚಾದೊ ತಮ್ಮ ನೊಬೆಲ್ ನೀಡಿರುವುದೇಕೆ?
ಮಾನವೀಯತೆಗೆ ಅತಿದೊಡ್ಡ ನೆರವು ನೀಡಿದವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತದೆ. ಈ ವರ್ಷ ಮಚಾದೊ ಅವರು ನೊಬೆಲ್ ಶಾಂತಿ ಪುರಸ್ಕಾರ ಪಡೆದಿದ್ದರು. ಆದರೆ ಅಮೆರಿಕ ವೆನೆಜುವೆಲಾವನ್ನು ವಶಪಡಿಸಿಕೊಂಡ ನಂತರ ಅವರು ತಮ್ಮ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್ ಗೆ ನೀಡುವುದಾಗಿ ಘೋಷಿಸಿದ್ದರು.
ವೆನೆಜುವೆಲಾದ ಜನರ ಸ್ವಾತಂತ್ರ್ಯಕ್ಕೆ ಟ್ರಂಪ್ ತೋರಿಸಿರುವ ಬದ್ಧತೆಯನ್ನು ಗುರುತಿಸಿ ಈ ಉಡುಗೊರೆ ನೀಡುತ್ತಿರುವುದಾಗಿ ಮಚಾದೊ ಹೇಳಿದ್ದಾರೆ. “ನಾನು ಅಮೆರಿಕದ ಅಧ್ಯಕ್ಷರಿಗೆ ನನ್ನ ಪ್ರಶಸ್ತಿಯ ಮೆಡಲ್ ನೀಡಿದ್ದೇನೆ. ನಮ್ಮ ಸ್ವಾತಂತ್ರ್ಯಕ್ಕೆ ಅವರು ತೋರಿದ ಬದ್ಧತೆಗಾಗಿ ನನ್ನ ಪ್ರಶಸ್ತಿಯನ್ನು ಅವರಿಗೆ ನೀಡಿದ್ದೇನೆ” ಎಂದು ಅವರು ಹೇಳಿದ್ದಾರೆ.
‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬರೆದು, “ನಾನು ಮಾಡಿದ ಕೆಲಸಕ್ಕಾಗಿ ಮಾರಿಯಾ ನನಗೆ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿದ್ದಾರೆ. ಇದು ಪರಸ್ಪರ ಗೌರವದ ಅತ್ಯುತ್ತಮ ಸೂಚಕವಾಗಿರುತ್ತದೆ” ಎಂದು ಹೇಳಿದ್ದಾರೆ.