ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಾಯಿ ವಿವಾದ | ಮಾರ್ಕರ್ ಪೆನ್ VS ಅಳಿಸಲಾಗದ ಶಾಯಿ; ಏನಿದು ವಿವಾದ?
ಇನ್ನು ಮುಂದೆ ಕರ್ನಾಟಕದ ಶಾಯಿ ಬಳಸಲು ನಿರ್ಧಾರ
Screengrab : X \ @sachin_inc
ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ಮಹಾರಾಷ್ಚ್ರದ 29 ನಗರ ಪಾಲಿಕೆಗಳಲ್ಲಿ ಗುರುವಾರ ಮತದಾನ ನಡೆದಿದ್ದು ಶೇ 52.94 ರಷ್ಟು ಮತಗಳು ಚಲಾವಣೆ ಆಗಿದೆ. ಶುಕ್ರವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಿದ್ದು, ಹೆಚ್ಚಿನ ವಾರ್ಡ್ ಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಮಹಾರಾಷ್ಚ್ರ ಸಿಎಂ ದೇವೇಂದ್ರ ಫಡ್ನವಿಸ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ ಎಣಿಕೆ ಪ್ರಗತಿಯಲ್ಲಿದ್ದು ಸಂಜೆ 4.30ರ ಹೊತ್ತಿಗೆ ಬಿಎಂಸಿಯ 227 ಸ್ಥಾನಗಳ ಪೈಕಿ ಬಿಜೆಪಿ 116, ಶಿವಸೇನಾ (UBT) 85 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಗುರುವಾರ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಚುನಾವಣೆಯಲ್ಲಿ ಬಳಸಿದ ಶಾಯಿ ಬಗ್ಗೆ ವಿವಾದ ಭುಗಿಲೆದ್ದಿದೆ. ಹಲವಾರು ವಾರ್ಡ್ ಗಳಲ್ಲಿ ಮತದಾನ ಬಳಿಕ ಬೆರಳಿಗೆ ಹಾಕಿರುವ ಶಾಯಿಯನ್ನು ನೈಲ್ ಪಾಲಿಶ್ ರಿಮೂವರ್ ನಿಂದ ಅಳಿಸಬಹುದು ಎಂದು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು ಸಾಮಾಜಿಕ ಮಾಧ್ಯಮ Xನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ನೈಲ್ ಪಾಲಿಶ್ ನಿಂದ ಬೆರಳಿಗೆ ಹಾಕಿದ ಶಾಯಿ ಗುರುತು ಹೇಗೆ ಅಳಿಸಿಹೋಗುತ್ತಿದೆ ಎಂಬುದನ್ನು ತೋರಿಸಿದ್ದಾರೆ. ಶಾಯಿ ಅಳಿಸುವ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷಗಳಿಂದ ಚುನಾವಣಾ ಪ್ರಕ್ರಿಯೆ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕುವ ಬದಲು ಮಾರ್ಕರ್ ಪೆನ್ ಬಳಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಏನಿದು ವಿವಾದ?
ಮಹಾರಾಷ್ಟ್ರದಾದ್ಯಂತ 29 ಪುರಸಭೆಗಳಿಗೆ ಗುರುವಾರ (ಜ.14) ಚುನಾವಣೆ ನಡೆದಿದೆ. ಈ ವೇಳೆ ಮತದಾರರು ಮತ ಚಲಾಯಿಸಿದ್ದಾರೆಂದು ಸೂಚಿಸಲು ತೋರು ಬೆರಳಿಗೆ ಗುರುತು ಹಾಕಲು ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ. ಈ ಪೆನ್ನುಗಳಿಂದ ಹಾಕಿದ ಶಾಯಿ ಗುರುತು ಬೇಗನೆ ಅಳಿಸಿಹೋಗುತ್ತದೆ. ನೇಲ್ ಪಾಲಿಶ್ ರಿಮೂವರ್, ಸ್ಯಾನಿಟೈಸರ್ ಅಥವಾ ಸ್ವಲ್ಪ ಜೋರಾಗಿ ಉಜ್ಜಿದರೂ ಶಾಯಿ ಗುರುತು ಹೋಗುತ್ತದೆ ಎಂದು ಹಲವಾರು ಮತದಾರರು, ನಾಯಕರು ಆರೋಪಿಸಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ, ಚುನಾವಣಾ ಆಯೋಗವು ಪಕ್ಷಗಳಿಗೆ ಇವಿಎಂ ಯಂತ್ರಗಳನ್ನು ತೋರಿಸಿಲ್ಲ. ನಾವು ಇದನ್ನು ಅನುಮತಿಸುವುದಿಲ್ಲ. ಮತದಾನದ ನಂತರ ಬೆರಳಿನ ಮೇಲಿನ ಶಾಯಿಯನ್ನು ಸ್ಯಾನಿಟೈಸರ್ ಮೂಲಕ ತೆಗೆಯಬಹುದು. ಸಾಂಪ್ರದಾಯಿಕ ಶಾಯಿಯ ಬದಲಿಗೆ,ಮಾರ್ಕರ್ ಪೆನ್ನುಗಳನ್ನು ಬಳಸಲಾಗುತ್ತಿದೆ . ಇಡೀ ಆಡಳಿತವು ಆಡಳಿತ ಪಕ್ಷಕ್ಕಾಗಿ ಕೆಲಸ ಮಾಡುತ್ತಿದೆ. ಇದು ಉತ್ತಮ ಪ್ರಜಾಪ್ರಭುತ್ವದ ಸಂಕೇತವಲ್ಲ. ಇದು ನಾವು ಆಡಳಿತ ಎಂದು ಕರೆಯುವ ವಿಧಾನವಲ್ಲ. ಎಲ್ಲರೂ ಜಾಗರೂಕರಾಗಿರಬೇಕು. ಅಧಿಕಾರ ದುರುಪಯೋಗಪಡಿಸಿಕೊಳ್ಳುವುದಕ್ಕೂ ಮಿತಿ ಇದೆ. ಶಿವಸೇನಾ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಬೆಂಬಲಿಗರು ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮಾಡುವ ಮತ್ತು ಶಾಯಿಯನ್ನು ಒರೆಸುವವರ ಮೇಲೆ ನಿಗಾ ಇಡಬೇಕು ಎಂದಿದ್ದಾರೆ.
ಏತನ್ಮಧ್ಯೆ, ವರದಿಗಳಿಗೆ ಪ್ರತಿಕ್ರಿಯಿಸಿದ ಮುಂಬೈ ಮುನ್ಸಿಪಲ್ ಕಮಿಷನರ್ ಭೂಷಣ್ ಗಗ್ರಾಣಿ, "ಶಾಯಿ ಬಳಕೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ನಾವು ತನಿಖೆ ಮಾಡುತ್ತೇವೆ. ಪ್ರಾಥಮಿಕ ಅವಲೋಕನವೆಂದರೆ ಉಗುರಿನ ಮೇಲಿನ ಶಾಯಿ ಗುರುತನ್ನು ತೆಗೆಯಬಹುದು, ಆದರೆ ಚರ್ಮದ ಮೇಲಿನ ಶಾಯಿ ಅಳಿಸಿಹೋಗುವುದಿಲ್ಲ ಎಂದಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಹೇಳಿದ್ದೇನು?
ಆರೋಪ ಪ್ರತ್ಯಾರೋಪಗಳ ನಡುವೆಯೇ ರಾಜ್ಯ ಚುನಾವಣಾ ಆಯೋಗ (SEC)ಅಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪತ್ರಿಕಾಗೋಷ್ಠಿ ನಡೆಸಿದರು. ಈವರೆಗೆ ಬಳಸಲಾಗುತ್ತಿದ್ದ ಅದೇ ಶಾಯಿಯನ್ನು ಇಲ್ಲಿಯೂ ಬಳಸಲಾಗುತ್ತಿದೆ. ಯಾವುದೇ ಹೊಸ ವಸ್ತುವನ್ನು ಪರಿಚಯಿಸಲಾಗಿಲ್ಲ . ಚುನಾವಣಾ ಆಯೋಗವು 2011 ರಿಂದ ಮಾರ್ಕರ್ ಪೆನ್ ರೂಪದಲ್ಲಿ ಈ ಶಾಯಿಯನ್ನು ಬಳಸುತ್ತಿದೆ ಎಂದಿದ್ದಾರೆ SEC ಆಯುಕ್ತ ದಿನೇಶ್ ವಾಘ್ಮೋರೆ.
ಶಾಯಿ ಹಚ್ಚಿದ ನಂತರ ಒಣಗಲು ಸುಮಾರು 10 ರಿಂದ 12 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ, ಮತದಾರರು ಇನ್ನೂ ಮತಗಟ್ಟೆಯೊಳಗೆ ಇರುತ್ತಾರೆ. ಅದು ಒಣಗಿದ ನಂತರ ಅದನ್ನು ಅಳಿಸಲಾಗುವುದಿಲ್ಲ. ಇದು ಭಾರತೀಯ ಚುನಾವಣಾ ಆಯೋಗವು ಬಳಸುವ ಅದೇ ಶಾಯಿಯಾಗಿದೆ. ಎರಡು ಬಾರಿ ಮತದಾನ ನಡೆದರೆ, ಮತಗಟ್ಟೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮತದಾರರು ಶಾಯಿ ಒಣಗುವ ಮೊದಲೇ ಅದನ್ನು ಉಜ್ಜಿ ತೆಗೆದರೆ, ಅದು ಮತದಾರರ ತಪ್ಪು. ಅಂತಹ ಮತದಾರರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಡಿಯೊಗಳನ್ನು ತನಿಖೆ ಮಾಡಲಾಗುವುದು. ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ವಾಘ್ಮೋರೆ.
2011 ನವೆಂಬರ್ 19 ಮತ್ತು 2011 ನವೆಂಬರ್ 28ರಂದು ಹೊರಡಿಸಲಾದ ಆದೇಶಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ ಶಾಯಿ ಹಚ್ಚಲು ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ ಎಂದು ಆಯೋಗವು ಪುನರುಚ್ಚರಿಸಿತು. ಈ ಆದೇಶಗಳ ಪ್ರಕಾರ, ಶಾಯಿಯನ್ನು ಸರಿಯಾಗಿ ಹಚ್ಚಬೇಕು. ಉಗುರು ಮತ್ತು ಅದರ ಮೇಲಿನ ಚರ್ಮದ ಮೇಲೆ ಮೂರರಿಂದ ನಾಲ್ಕು ಬಾರಿ ಹಚ್ಚಬೇಕು ಎಂದು ಆಯೋಗ ಹೇಳಿದೆ.
ವಾಘ್ಮೋರೆ ಅವರ ಪ್ರಕಾರ, ಭಾರತೀಯ ಚುನಾವಣಾ ಆಯೋಗವು (ECI) ಮೈಸೂರು ಪೇಂಟ್ಸ್‌ನಿಂದ ಶಾಯಿಯನ್ನು ಪಡೆಯುತ್ತದೆ. ಆದರೆ ರಾಜ್ಯ ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, 2011 ರಿಂದ ಕೋರೆಸ್‌ನಿಂದ (Kores) ಮತದಾನದ ಶಾಯಿ ಪೆನ್ನುಗಳನ್ನು ಖರೀದಿಸುತ್ತಿದೆ. ಈ ಶಾಯಿಯು ಶೇಕಡಾ 10-18 ರಷ್ಟು ಸಿಲ್ವರ್ ನೈಟ್ರೇಟ್ ಅನ್ನು ಹೊಂದಿರುತ್ತದೆ. ಇದು ನೇರಳಾತೀತ ಬೆಳಕಿಗೆ ಒಡ್ಡಿಕೊಂಡಾಗ ಗಾಢಬಣ್ಣಕ್ಕೆ ತಿರುಗುತ್ತದೆ, 40 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಒಣಗುತ್ತದೆ. ಸೋಪ್ ಅಥವಾ ಇನ್ಯಾವುದೇ ವಸ್ತು ಬಳಸಿ ತೊಳೆದರೂ ಇದು 72 ಗಂಟೆಗಳಿಗೂ ಹೆಚ್ಚು ತೋರುಬೆರಳಲ್ಲಿ ಗುರುತಾಗಿ ಉಳಿಯುತ್ತದೆ.
ಇನ್ನು ಮುಂದೆ ಕರ್ನಾಟಕದ ಶಾಯಿ
ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಮತದಾರರ ಬೆರಳಿಗೆ ಮಾರ್ಕರ್ ಪೆನ್ನಿನಿಂದ ಹಾಕಿದ್ದ ಶಾಯಿ ಅಳಿಸಿಹೋದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ, ಮುಂದಿನ ತಿಂಗಳು ನಿಗದಿಯಾಗಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಶಾಯಿ ಬಳಸಲು ಮಹಾರಾಷ್ಟ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಮಹಾರಾಷ್ಟ್ರದ 12 ಜಿಲ್ಲಾ ಪಂಚಾಯತ್ ಮತ್ತು 125 ಪಂಚಾಯಿತಿ ಸಮಿತಿಗಳಿಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಿದೆ.
ಮಾರ್ಕರ್ ಪೆನ್ನಿನಿಂದ ಹಾಕಿದ ಗುರುತುಗಳು ಅಳಿಸಿಹೋದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ ವಾಘ್ಮೋರೆ, ಮಹಾರಾಷ್ಟ್ರ ಚುನಾವಣಾ ಆಯೋಗವು ಇನ್ಮುಂದೆ ಮಾರ್ಕರ್ ಪೆನ್ ಗಳನ್ನು ಬಳಸುವುದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಕರ್ನಾಟಕ ಸರ್ಕಾರದ ಮೈಸೂರ್ ಪೇಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ ಉತ್ಪಾದಿಸುವ ಸಾಂಪ್ರದಾಯಿಕ ಶಾಯಿಯನ್ನು ಬಳಸಲಾಗುವುದು. ಅಳಿಸಿಹೋಗುವ ಶಾಯಿ ಗುರುತು ವಿವಾದದ ಕುರಿತು ತನಿಖೆ ನಡೆಸುತ್ತಿದ್ದೇವೆ. ಅದೇ ವೇಳೆ ಮಾರ್ಕರ್ ಪೆನ್ನುಗಳ ಗುಣಮಟ್ಟ, ಶಾಯಿ ಅಳಿಸಿಹೋಗುತ್ತಿದೆ ಎಂದು ತೋರಿಸುವ ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲಿಸಲಾಗುವುದು ಎಂದಿದ್ದಾರೆ.
ಅಳಿಸಲಾಗದ ಮೈಸೂರು ಶಾಯಿ
ದೇಶದಾದ್ಯಂತ ನಡೆಯುವ ಚುನಾವಣೆಗಳಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿ ತಯಾರಾಗುವುದು ಕರ್ನಾಟಕದಲ್ಲಿ. ಮೈಸೂರಿನಲ್ಲಿ ‘ಮೈಸೂರ್ ಪೇಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ ' ಕಂಪನಿಯು ಚುನಾವಣೆಗಳಿಗಾಗಿ ಅಳಿಸಲಾಗದ ಶಾಯಿಯನ್ನು(MPVL indelible Ink) ಪೂರೈಸುತ್ತಿದೆ. 1962 ರಿಂದ ಈವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಈ ಶಾಯಿಯನ್ನೇ ಬಳಸಲಾಗುತ್ತಿದೆ.
1937 ರಲ್ಲಿ ಆಗಿನ ಮೈಸೂರು ಪ್ರಾಂತ್ಯದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಲ್ಯಾಕ್ & ಪೇಂಟ್ ವರ್ಕ್ಸ್ ಹೆಸರಿನಲ್ಲಿ ಸ್ಥಾಪಿಸಿದ ಈ ಘಟಕದ ಮೊದಲ ಉತ್ಪನ್ನ ಅರಗು. ಇದನ್ನು ಮೈಸೂರು ಮತ್ತು ನಾಗರಹೊಳೆ ಬಳಿಯ ಕಾಡುಗಳಿಂದ ಸಂಗ್ರಹಿಸಲಾಗುತ್ತಿತ್ತು. ಸ್ಥಳೀಯರಿಗೆ ಉದ್ಯೋಗ ನೀಡುವ ಆಶಯದೊಂದಿಗೆ ಇದು ಶುರುವಾಗಿದ್ದು, ಕಾರ್ಮಿಕರು ಅರಗು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು .ಅರಗು ಎಂದರೆ ಇದೊಂದು ರೀತಿಯ ಕೀಟದ ಮೈಯಿಂದ ಬರುವ ಅಂಟು ಪದಾರ್ಥ.ಈ ಕೀಟಗಳು ವಿಶಿಷ್ಟ ಮರಗಳಲ್ಲಿ ಮಾತ್ರ ಕಂಡುಬರುತ್ತವೆ. ಇವುಗಳು ಆ ಮರದ ರಸ ಹೀರಿ ಬೆಳೆದು ಮೈಯಿಂದ ಅಂಟು ಪದಾರ್ಥವನ್ನು ಉತ್ಪಾದಿಸುತ್ತವೆ. ಹೀಗೆ ಕಾಡಿನಿಂದ ಸಂಗ್ರಹಿಸಿದ ಅರಗನ್ನು ಭಾರತೀಯ ರೈಲ್ವೆ, ಭಾರತೀಯ ಅಂಚೆ ಮತ್ತು ಚುನಾವಣಾ ಆಯೋಗವು ಸರ್ಕಾರದ ಉನ್ನತ ರಹಸ್ಯಗಳು ಮತ್ತು ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿಡಲು ಬಳಸುತ್ತವೆ.
ಇಂದಿರಾ ಗಾಂಧಿ 1980ರ ಅರಣ್ಯ (ಸಂರಕ್ಷಣಾ) ಕಾಯ್ದೆಯನ್ನು ಜಾರಿಗೆ ತಂದ ನಂತರ, ಕಂಪನಿಯು ಅರಣ್ಯಕ್ಕೆ ಪ್ರವೇಶವನ್ನು ಕಳೆದುಕೊಂಡಿತು. ಅರಗು ಮಾಡುವುದನ್ನು ನಿಲ್ಲಿಸಿದಾಗ ಮೈಸೂರು ಲ್ಯಾಕ್ & ಪೇಂಟ್ ವರ್ಕ್ಸ್ ಅದರ ಹೆಸರನ್ನು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಎಂದು ಬದಲಾಯಿಸಿತು.
ಇಲ್ಲಿ ತಯಾರಾಗುವ ಶಾಯಿಗೆ ಯಾವ ರೀತಿಯ ರಾಸಾಯನಿಕ ಅಥವಾ ಬಣ್ಣವನ್ನು ಬಳಸಲಾಗಿದೆ ಎಂಬುದು ಗೌಪ್ಯವಾಗಿದೆ. ಚುನಾವಣೆ ಹಾಗೂ ಮತದಾನದ ಭದ್ರತೆಯ ದೃಷ್ಟಿಯಿಂದ ಈ ಮಾಹಿತಿಯನ್ನು ಕಂಪನಿಯಾಗಲೀ ಚುನಾವಣಾ ಆಯೋಗವಾಗಲೀ ಬಹಿರಂಗಪಡಿಸುವುದಿಲ್ಲ. ಶಾಯಿಯಲ್ಲಿರುವ ಸಿಲ್ವರ್ ನೈಟ್ರೇಟ್ ನೇರಳಾತೀತ ಬೆಳಕಿಗೆ ಒಡ್ಡಿಕೊಂಡಾಗ ಉಗುರಿನ ಮೇಲೆ ಕಲೆಯಾಗುತ್ತದೆ ಎಂಬುದು ಬಿಟ್ಟರೆ ಈ ಶಾಯಿಗೆ ಏನೇನು ಬಳಸಲಾಗುತ್ತದೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಸಾಮಾನ್ಯವಾಗಿ ಈ ಶಾಯಿಯ ಗುರುತು ಚರ್ಮದ ಮೇಲೆ ಮೂರರಿಂದ ನಾಲ್ಕು ದಿನಗಳವರೆಗೆ, ಉಗುರಿನ ಮೇಲಿನ ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತದೆ . ಅದು ಎಷ್ಟು ಕಾಲ ಉಳಿಯುತ್ತದೆ ಎಂಬುದು ಮನುಷ್ಯರ ಚರ್ಮ ಮತ್ತು ಶಾಯಿಯನ್ನು ಯಾವ ರೀತಿ ಹಚ್ಚಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಚುನಾವಣೆಯ ಹೊತ್ತಲ್ಲಿ ಈ ವಿಶೇಷ ಶಾಯಿ ತಯಾರಿಸಲು ಹೆಚ್ಚು ಸಮಯ ಬೇಕಾಗಿರುವುದರಿಂದ ಚುನಾವಣಾ ಆಯೋಗವು 3 ತಿಂಗಳ ಮುಂಚಿತವಾಗಿ ಅಧಿಕೃತ ಖರೀದಿಯ ಆರ್ಡರ್ ನೀಡುತ್ತದೆ. ಈ ಕಂಪನಿ ಭಾರತ, ಥೈಲ್ಯಾಂಡ್, ಸಿಂಗಾಪುರ, ನೈಜೀರಿಯಾ, ಮಲೇಷ್ಯಾ, ಕಾಂಬೋಡಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 30 ದೇಶಗಳಿಗೆ ಶಾಯಿಯನ್ನು ರಫ್ತು ಮಾಡುತ್ತದೆ.