ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಪುತ್ರಿಯ ಅಂತಾರಾಷ್ಟ್ರೀಯ ಫೋನ್ ಬಿಲ್ ಪಾವತಿಗೆ ಸರ್ಕಾರಿ ಹಣ ಬಳಕೆ?

ಪ್ರಧಾನ್ ಅವರ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ವಿವಾದ ಮುನ್ನೆಲೆಗೆ

Update: 2026-07-31 16:57 IST

ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ (Photo credit: indiatoday.in)

ಕೇಂದ್ರ ಶಿಕ್ಷಣ ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದಾಗ ನೆಟ್ಟಿಗರು ನೈಮಿಷಾ ಪ್ರಧಾನ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಪತ್ತೆಹಚ್ಚಿ, ಅವರ ಪೋಸ್ಟ್‌ಗಳ ಕಮೆಂಟ್ ವಿಭಾಗದಲ್ಲಿ ತೀವ್ರವಾಗಿ ಟೀಕಿಸಿದ್ದರು. ತಂದೆ ದೇಶದ ಶಿಕ್ಷಣ ಸಚಿವರಾಗಿದ್ದರೂ ಮಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವುದನ್ನು ಪ್ರಶ್ನಿಸಿ ಅನೇಕರು ಕಮೆಂಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೈಮಿಷಾ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದರು.

ಕೆಲವು ಬಳಕೆದಾರರು ಆಕೆ ಕಲಿಯುತ್ತಿದ್ದ 'ಟಫ್ಟ್ಸ್ ವಿಶ್ವವಿದ್ಯಾಲಯ'ದ (Tufts University) ಸಾಮಾಜಿಕ ಜಾಲತಾಣ ಪುಟಗಳಲ್ಲೂ ಕಮೆಂಟ್ ಮಾಡಿದ್ದು, ಆಕೆಯ ವಿದೇಶಿ ಶಿಕ್ಷಣವನ್ನು ಪ್ರಶ್ನಿಸಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗೆ ಆಗ್ರಹಿಸಿ ಸಂಸತ್ತಿಗೆ ಮೆರವಣಿಗೆ ಹೊರಟಿದ್ದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಕ್ರಮ ಕೈಗೊಂಡ ನಂತರ ಈ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು.

ನೈಮಿಷಾ ಪ್ರಧಾನ್ ಅವರು 2023 ರಲ್ಲಿ ಅಮೆರಿಕದ ಮ್ಯಾಸಚೂಸೆಟ್ಸ್‌ನ ಮೆಡ್‌ಫೋರ್ಡ್‌ನಲ್ಲಿರುವ 'ಟಫ್ಟ್ಸ್ ವಿಶ್ವವಿದ್ಯಾಲಯ'ದ 'ದಿ ಫ್ಲೆಚರ್ ಸ್ಕೂಲ್'ನಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ (LLM) ಪೂರ್ಣಗೊಳಿಸಿದ್ದಾರೆ. ವರದಿಗಳ ಪ್ರಕಾರ, ಪದವಿ ಮುಗಿಸಿದ ನಂತರ ಅವರು 'ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ' (USISPF) ಸಂಸ್ಥೆಗೆ ಹಿರಿಯ ಅಸೋಸಿಯೇಟ್ ಆಗಿ ಸೇರ್ಪಡೆಗೊಂಡಿದ್ದಾರೆ.

ಪುತ್ರಿಯ ಅಂತಾರಾಷ್ಟ್ರೀಯ ಫೋನ್ ಬಿಲ್ ಪಾವತಿಗೆ ಸರ್ಕಾರಿ ಹಣ ಬಳಕೆ?

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿದ್ದ ಅವಧಿಯಲ್ಲಿ (2017-18) ಅವರ ಪುತ್ರಿ ನೈಮಿಷಾ ಪ್ರಧಾನ್ ಅವರ ಅಂತಾರಾಷ್ಟ್ರೀಯ ಮೊಬೈಲ್ ಫೋನ್ ಬಿಲ್ ಅನ್ನು ಸರ್ಕಾರಿ ಅನುದಾನಿತ ಸಂಸ್ಥೆಯಾದ 'ಪೆಟ್ರೋನೆಟ್ ಎಲ್‌ಎನ್‌ಜಿ ಲಿಮಿಟೆಡ್' ಪಾವತಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.

2026 ಮೇ 24ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ ಹಾಗೂ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಎಕ್ಸ್ ನಲ್ಲಿ ಈ ಬಗ್ಗೆ ಪ್ರಶ್ನಿಸಿದ್ದರು.

ಸುಪ್ರಿಯಾ ಶ್ರೀನೇತ್ ಹೇಳಿದ್ದೇನು?

2017ರಲ್ಲಿ ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ ಸಚಿವರಾಗಿದ್ದರು. ಅವರ ಮಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕಿತ್ತು. ಆಕೆಯ ಬಳಿ ಅಂತಾರಾಷ್ಟ್ರೀಯ ಸಿಮ್ ಕಾರ್ಡ್ ಇರಲಿಲ್ಲ. ಆಕೆ ವಿದೇಶಕ್ಕೆ ಹೋದರೆ ಮನೆಯವರ ಜತೆ ಮಾತಾಡಬೇಕಲ್ಲ. ಆಕೆ ವಿಮಾನ ನಿಲ್ದಾಣದಲ್ಲಿರುವಾಗ ಅಲ್ಲಿಗೆ ಸಿಮ್ ಕಾರ್ಡ್ ತಲುಪಿಸಲಾಯಿತು. ಆ ಸಿಮ್ ಕಾರ್ಡ್ ತಲುಪಿಸಿದ್ದು ಪೆಟ್ರೋನೆಟ್ ಎಂಬ ಸರ್ಕಾರಿ ಕಂಪನಿ. ಆಕೆ ವಿದೇಶದಿಂದ ಮನೆಗೆ ಕರೆ ಮಾಡುತ್ತಿದ್ದಳು. ಹೀಗೆ ಕರೆ ಮಾಡುತ್ತಿದ್ದುದರಿಂದ 70,000 ರೂ ಫೋನ್ ಬಿಲ್ ಬಂತು. ಆದರೆ ಮಗಳ ಫೋನ್ ಬಿಲ್ ಪಾವತಿ ಮಾಡಿದ್ದು ಅಪ್ಪ ಧರ್ಮೇಂದ್ರ ಪ್ರಧಾನ್ ಆಗಿರಲಿಲ್ಲ. ಆ ಬಿಲ್ ಪಾವತಿಸಿದ್ದು ಪೆಟ್ರೋಲಿಯಂ ಸಚಿವಾಲಯದಡಿಯಲ್ಲಿರುವ ಪೆಟ್ರೋನೆಟ್ ಕಂಪನಿ. ಒಂದು ಬಾರಿ ಪಾವತಿಸಿದ್ದೇವೆ, ಇದನ್ನು ಪುನರಾವರ್ತಿಸಬೇಡಿ ಎಂದೂ ಅದರಲ್ಲಿ ನೋಟ್ ಬರೆಯಲಾಗಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು.

ಇದು ಕೆಲವು ಪ್ರಶ್ನೆಗಳನ್ನು ಹುಟ್ಚುಹಾಕುತ್ತದೆ. ಆ ಮಗಳ ಉತ್ತಮ ಭವಿಷ್ಯಕ್ಕೆ ನನ್ನ ಹಾರೈಕೆಗಳು. ವಿದೇಶದಲ್ಲಿ ಕಲಿತಿದ್ದಾಳೆಂದರೆ ಆಕೆ ಪ್ರತಿಭಾನ್ವಿತೆಯಾಗಿರುತ್ತಾಳೆ. ಪ್ರಶ್ನೆ ಏನೆಂದರೆ ಬಿಜೆಪಿ ಸಚಿವರ ಮಕ್ಕಳ 70,000 ರೂ ಫೋನ್ ಬಿಲ್ ಸರ್ಕಾರಿ ಕಂಪನಿಗಳು ಪಾವತಿ ಮಾಡುತ್ತವೆ. ಆದರೆ ನಿಮ್ಮ 23 ಲಕ್ಷ ಮಕ್ಕಳು ಡಾಕ್ಟರ್ ಆಗುವ ಕನಸು ಕಂಡಿದ್ದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಅವರು ಭವಿಷ್ಯದ ಬಗ್ಗೆ ಆತಂಕಕ್ಕೀಡಾದರು. ಬಿಜೆಪಿ ಸಚಿವರ,ನಾಯಕರ, ಎಂಪಿಗಳ ಮಕ್ಕಳ ಭವಿಷ್ಯ ಒಂದೇ ರೀತಿಯಾಗಿದ್ದು ನಿಮ್ಮ ಮಕ್ಕಳ ಭವಿಷ್ಯ ಮಾತ್ರ ಅತಂತ್ರವಾಗಿದೆ. ಯಾವ ರೀತಿಯ ಜನರನ್ನು ಸರ್ಕಾರದಲ್ಲಿರಿಸಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ಧರ್ಮೇಂದ್ರ ಪ್ರಧಾನ್ ನಂಥಾ ವ್ಯಕ್ತಿ ಶಿಕ್ಷಣ ಸಚಿವರಾಗಿ ಮುಂದುವರಿಯುವುದು ನ್ಯಾಯವೇ ಅಂಥವಾ ರಾಜೀನಾಮೆ ನೀಡಬೇಕೆ ಎಂಬುದನ್ನು ನೀವು ನಿರ್ಧರಿಸಬೇಕಿದೆ.

ಅವರು ರಾಜೀನಾಮೆ ನೀಡದೇ ಇದ್ದರೆ ಈ ಜಗತ್ಗುರು, ವಿಶ್ವಗುರು ಮೋದಿ ಜೀ ಅವರು ಯಾಕೆ ಅವರನ್ನು ತಮ್ಮ ಸರ್ಕಾರದಲ್ಲಿ ಇಟ್ಟುಕೊಂಡಿದ್ದಾರೆ? ಅವರನ್ನು ಹೊರಗೆ ಕಳಿಸಬಹುದಲ್ಲವೇ? ಇನ್ನೊಂದು ವಿಷಯ ಹೇಳೋಣ ಅಂದುಕೊಂಡೆ, ಅವರ ಮತ್ತು ನಿಮ್ಮ ಮಕ್ಕಳ ನಡುವೆ ಎಷ್ಟು ಅಂತರವಿದೆ ಅಲ್ವೇ ?


ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ರಸೀದಿ

2020 ಆಗಸ್ಟ್ 29ರಂದು ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಇದೇ ರಸೀದಿಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಈ ರೀತಿ ಬರೆದಿದ್ದಾರೆ. ಪಿಎಸ್‌ಯು ಸಂಸ್ಥೆಯಾದ 'ಪೆಟ್ರೋನೆಟ್' ಅನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮಗಳ ವೈಯಕ್ತಿಕ ವೆಚ್ಚಕ್ಕಾಗಿ ಹೇಗೆ ಲೂಟಿ ಮಾಡಲಾಗುತ್ತಿದೆ ಎಂಬುದಕ್ಕೊಂದು ಉದಾಹರಣೆ. ಆಕೆಯ ಅಂತಾರಾಷ್ಟ್ರೀಯ ಕರೆಗಳಿಗಾಗಿ 68 ಸಾವಿರಕ್ಕೂ ಹೆಚ್ಚು ರೂಪಾಯಿಯನ್ನು ಪಾವತಿಸಲಾಗಿದೆ. ಇದಕ್ಕೆ ಎಂಡಿ ಮತ್ತು ಸಿಇಒ ಪ್ರಭಾತ್ ಸಿಂಗ್ ಅನುಮೋದನೆ ನೀಡಿದ್ದಾರೆ. ಅವರ ಅಧಿಕಾರ ದುರುಪಯೋಗದ ಬಗ್ಗೆ ಸಿವಿಸಿ (CVC) ತನಿಖೆಗೆ ಹೈಕೋರ್ಟ್ ಆದೇಶಿಸಿತ್ತು, ಆದರೂ ಇದುವರೆಗೆ ಯಾವುದೇ ತನಿಖೆ ನಡೆದಿಲ್ಲ. ಅವರಿಗೆ ಪ್ರಧಾನಿ ಕಚೇರಿಯ ರಕ್ಷಣೆ ಇದೆಯೇ?

ಅಂತಾರಾಷ್ಟ್ರೀಯ ಸಿಮ್ ಕಾರ್ಡ್ ಮತ್ತು ರೋಮಿಂಗ್ ಸೇವೆಗಳನ್ನು ಒದಗಿಸುವ 'ಮ್ಯಾಟ್ರಿಕ್ಸ್ ಸೆಲ್ಯುಲಾರ್ ಇಂಟರ್ನ್ಯಾಷನಲ್ ಸರ್ವಿಸಸ್' ಸಂಸ್ಥೆಯು ಆಗಸ್ಟ್ 2017 ರಲ್ಲಿ ನೀಡಿರುವ ರಸೀದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿಗೆ. ಈ ರಸೀದಿಯಲ್ಲಿ ಅಂತಾರಾಷ್ಟ್ರೀಯ ಮೊಬೈಲ್ ಸಂಪರ್ಕದ ಬಳಕೆದಾರರಾಗಿ ನೈಮಿಷಾ ಪ್ರಧಾನ್ ಅವರ ಹೆಸರು ಉಲ್ಲೇಖವಾಗಿದೆ. ಸುಮಾರು ಹತ್ತು ದಿನಗಳ ವಿದೇಶಿ ಪ್ರವಾಸದ ಸಮಯದಲ್ಲಿ ಬಳಸಲಾದ ಈ ಸಂಪರ್ಕಕ್ಕೆ ತೆರಿಗೆ ಸೇರಿ ಒಟ್ಟು 68,424 ರೂ ಬಿಲ್ ಬಂದಿದೆ.

ಈ ಪಾವತಿಯನ್ನು ಕಂಪನಿಯ ವಿದೇಶಿ ಪ್ರವಾಸದ ವೆಚ್ಚಗಳ ಅಡಿಯಲ್ಲಿ ಪ್ರಕ್ರಿಯೆಗೊಳಿಸಲಾಗಿತ್ತು. ಈ ಪ್ರಸ್ತಾವನೆಗೆ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸೇರಿದಂತೆ ಹಲವು ಹಂತದ ಅಧಿಕಾರಿಗಳಿಂದ ಅನುಮೋದನೆ ದೊರೆತಿತ್ತು. ಆಂತರಿಕ ದಾಖಲೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು, 'ಮುಂದಿನ ದಿನಗಳಲ್ಲಿ ಇಂತಹ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು' ಎಂದು ಕೈಬರಹದಲ್ಲಿ ಸಲಹೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದಾಖಲೆಗಳಲ್ಲಿ ಈ ಕೈಬರಹದ ಟಿಪ್ಪಣಿಯೇ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳೇ ಈ ವೆಚ್ಚದ ಬಗ್ಗೆ ಅಸಮಾಧಾನ ಹೊಂದಿದ್ದರು ಎಂಬುದನ್ನು ಇದು ತೋರಿಸುತ್ತದೆ.

'ಪೆಟ್ರೋನೆಟ್ ಎಲ್‌ಎನ್‌ಜಿ' ಮುಖ್ಯವಾಗಿ ಸಾರ್ವಜನಿಕ ವಲಯದ ಉದ್ಯಮಗಳ ಒಡೆತನದಲ್ಲಿದ್ದು, ಸಂಸ್ಥೆಯ ಯಾವುದೇ ವೆಚ್ಚವು ಅಂತಿಮವಾಗಿ ತೆರಿಗೆದಾರರ ಹಣವನ್ನೇ ಒಳಗೊಂಡಿರುತ್ತದೆ. ಹೀಗಿರುವಾಗ ಸಚಿವರ ಮಗಳ ಅಂತಾರಾಷ್ಟ್ರೀಯ ಫೋನ್ ಬಿಲ್ ಅನ್ನು ಸಂಸ್ಥೆಯ ಮೂಲಕ ಏಕೆ ಪಾವತಿಸಲಾಯಿತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News