ʼಕುತ್ತಿಗೆಗೆ ಸುಗಂಧ ದ್ರವ್ಯ ಸಿಂಪಡಿಸಬೇಡಿʼ: ಸುಗಂಧ ದ್ರವ್ಯಗಳಿಂದ ಅಪಾಯದ ಬಗ್ಗೆ ಎಚ್ಚರಿಸಿದ ಕೇಂಬ್ರಿಡ್ಜ್ ಕ್ಯಾನ್ಸರ್ ಸಂಶೋಧಕಿ
ಸಾಂದರ್ಭಿಕ ಚಿತ್ರ | Photo Credit : magnific.com
ಸುಗಂಧ ದ್ರವ್ಯಗಳನ್ನು ನೇರವಾಗಿ ಕುತ್ತಿಗೆ ಮೇಲೆ ಸಿಂಪಡಿಸಿಕೊಳ್ಳುವುದರಿಂದ ಬರಬಹುದಾದ ಗಮನಾರ್ಹ ಆರೋಗ್ಯ ಅಪಾಯಗಳ ಬಗ್ಗೆ ಕ್ಯಾನ್ಸರ್ ಸಂಶೋಧಕರು ಎಚ್ಚರಿಸಿದ್ದಾರೆ.
ನೀವು ಹೊರಗೆ ಹೊರಡಲು ಸಿದ್ಧರಾಗುವಾಗ ನಿಮ್ಮ ಕುತ್ತಿಗೆಗೆ ಸುಗಂಧ ದ್ರವ್ಯ ಹಚ್ಚುತ್ತಿರಾ? ಆದರೆ ಈ ಅಭ್ಯಾಸದ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅವರ ಪ್ರಕಾರ, ಸುಗಂಧ ದ್ರವ್ಯಗಳು ರಾಸಾಯನಿಕ ಮಿಶ್ರಣಗಳಾಗಿದ್ದು, ದೈನಂದಿನ ಬಳಕೆಯಿಂದ ವಿಶೇಷವಾಗಿ ಕುತ್ತಿಗೆಯ ಮೇಲೆ ಸಿಂಪಡಿಸುವುದರಿಂದ ಗಮನಾರ್ಹ ಆರೋಗ್ಯ ಅಪಾಯಗಳನ್ನು ಉಂಟು ಮಾಡಬಹುದು! ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರೋಗಶಾಸ್ತ್ರ ವಿಭಾಗದ ಪಿಎಚ್ಡಿ ವಿದ್ಯಾರ್ಥಿನಿ ಅನಾ ಕೆನಡಾಸ್ ಇನ್ಸ್ಟಾಗ್ರಾಂನಲ್ಲಿ ಈ ಕುರಿತು ವೀಡಿಯೋ ಹಂಚಿಕೊಂಡು ವೈಜ್ಞಾನಿಕ ಎಚ್ಚರಿಕೆ ನೀಡಿದ್ದಾರೆ.
ಅನಾ ಕೆನಡಸ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರೋಗಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ. ಅವರು ಹಲವಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು 'ಬಾಲ್ಯ, ಹದಿಹರೆಯದ ಮತ್ತು ಯುವ ವಯಸ್ಕರ ಕ್ಯಾನ್ಸರ್' ಮತ್ತು 'ಫಂಡಮೆಂಟಲ್ ಬಯಾಲಜಿ ಆಫ್ ಕ್ಯಾನ್ಸರ್'ನಂತಹ ಸಂಶೋಧನಾ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
“ನಿಮ್ಮ ಕುತ್ತಿಗೆ ಮೇಲೆ ಸುಗಂಧ ದ್ರವ್ಯ ಸಿಂಪಡಿಸುವುದನ್ನು ನಿಲ್ಲಿಸಿ” ಎಂದು ಅನಾ ಹೇಳಿದ್ದಾರೆ. “ಸುಗಂಧ ದ್ರವ್ಯಗಳು ಸಂಕೀರ್ಣ ರಾಸಾಯನಿಕ ಸಂಯೋಜನೆಗಳನ್ನು ಹೊಂದಿರುತ್ತವೆ. ಡಜನ್ಗಟ್ಟಲೆ ಪದಾರ್ಥಗಳನ್ನು ಹೊಂದಿರಬಹುದು. ಅನೇಕ ದೇಶಗಳಲ್ಲಿ ಸುಗಂಧ ದ್ರವ್ಯಗಳಲ್ಲಿರುವ ವೈಯಕ್ತಿಕ ರಾಸಾಯನಿಕಗಳನ್ನು ಗ್ರಾಹಕರಿಗೆ ಬಹಿರಂಗಪಡಿಸಬೇಕಾಗಿಲ್ಲ” ಎನ್ನುವತ್ತ ಅವರು ಗಮನಸೆಳೆದಿದ್ದಾರೆ.
ಸುಗಂಧ ದ್ರವ್ಯ ಸಿಂಪಡಿಸಿಕೊಳ್ಳುವ ಮೊದಲು ಎಚ್ಚರ!
ಕ್ಯಾನ್ಸರ್ ಸಂಶೋಧಕರ ಪ್ರಕಾರ, ಕುತ್ತಿಗೆ ಮೇಲೆ ಸುಗಂಧ ದ್ರವ್ಯ ಹಾಕಿಕೊಳ್ಳುವ ಮಂದಿಗೆ ನೇರವಾಗಿ ಹಾಗೆ ಸಿಂಪಡಿಸಬಾರದು ಎಂದು ತಿಳಿದಿರುವುದಿಲ್ಲ. ಫ್ರಂಟಿಯರ್ಸ್ ಇನ್ ಟಾಕ್ಸಿಕಾಲಜಿ ಎನ್ನುವ 2025ರ ಅಧ್ಯಯನವನ್ನು ಅನಾ ಕೆನಡಾಸ್ ಉಲ್ಲೇಖಿಸಿದ್ದಾರೆ. ಅಧ್ಯಯನದಲ್ಲಿ ಸುಗಂಧ ದ್ರವ್ಯಗಳು ಮತ್ತು ಇತರ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳನ್ನು ಉಲ್ಲೇಖಿಸಲಾಗಿದೆ. ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ಉತ್ಪನ್ನಗಳು, ಪ್ಥಾಲೇಟ್ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳು ಸೇರಿದಂತೆ ಅವುಗಳಲ್ಲಿ ಬಳಸಲಾಗುವ ಪದಾರ್ಥಗಳು ಹಾನಿಕರ. ಮುಖ್ಯವಾಗಿ ಇವೆಲ್ಲವೂ ಎಂಡೋಕ್ರೈನ್ಗೆ ಅಡ್ಡಿಪಡಿಸುತ್ತವೆ.
ಎಂಡೋಕ್ರೈನ್ ಸಿಸ್ಟಂಗೆ ಅವು ಹೇಗೆ ಅಡ್ಡಿಪಡಿಸುತ್ತವೆ ಎಂದು ವಿವರಿಸಿರುವ ಅನಾ ಕೆನಡಾಸ್ ಪ್ರಕಾರ, “ಅವು ನಮ್ಮ ಹಾರ್ಮೋನುಗಳನ್ನು ನಿರ್ಬಂಧಿಸುತ್ತವೆ ಅಥವಾ ಅನುಕರಿಸುತ್ತವೆ” ಎಂದು ಕ್ಯಾನ್ಸರ್ ಸಂಶೋಧಕರು ಎಚ್ಚರಿಸಿದ್ದಾರೆ! “ಅನೇಕ ಅಧ್ಯಯನಗಳ ಪ್ರಕಾರ ಸುಗಂಧ ದ್ರವ್ಯಗಳು ಬಂಜೆತನ, ಉಸಿರಾಟದ ಸಮಸ್ಯೆ ಅಥವಾ ಕ್ಯಾನ್ಸರ್ಗೆ ಸಂಬಂಧಿಸಿವೆ. ಸುಗಂಧ ಎನ್ನುವ ಹೆಸರಲ್ಲಿ ಸಾವಿರಾರು ರಾಸಾಯನಿಕಗಳನ್ನು ಮರೆಮಾಚಿ ಬಳಸಿರಲಾಗುತ್ತದೆ. ಹೀಗಾಗಿ ಅವುಗಳ ವಿವರ ನಮಗೆ ತಿಳಿದಿರುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.
ಕುತ್ತಿಗೆ ಮೇಲೆ ಏಕೆ ಸುಗಂಧ ಹರಿಸಬಾರದು?
ಪ್ರತಿ ಸುಗಂಧ ದ್ರವ್ಯ ಹಾನಿಕರ ಅಥವಾ ಬಳಸುವುದರಿಂದ ರೋಗ ಬರುತ್ತದೆ ಎಂದರ್ಥವಲ್ಲ. ಕ್ಯಾನ್ಸರ್ ಸಂಶೋಧಕರು ಸುಗಂಧಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು ಎಂದು ಹೇಳುತ್ತಾರೆ.
ಸುಗಂಧವನ್ನು ಕುತ್ತಿಗೆಗೆ ಒಡ್ಡಿಕೊಳ್ಳುವುದು ಅಥವಾ ನೇರವಾಗಿ ದೇಹಕ್ಕೆ ಸಿಂಪಡಿಸಿಕೊಳ್ಳುವ ಅಪಾಯವನ್ನು ಅನಾ ಕೆನಡಾಸ್ ಒತ್ತಿ ಹೇಳಿದ್ದಾರೆ. “ಎರಡು ಮುಖ್ಯ ಸಮಸ್ಯೆಗಳಿವೆ. ಮೊದಲನೆಯದು ಸಿಂಪಡಿಸಿದಾಗ ದೇಹವನ್ನು ನೇರವಾಗಿ ಪ್ರವೇಶಿಸುವ ಸಂಯುಕ್ತಗಳನ್ನು ನಾವು ಉಸಿರಾಡಬಹುದು. ಪ್ರತಿ ಸಿಂಪಡನೆ ವಾಯುಮಾರ್ಗವಾಗಿ ದೇಹ ಪ್ರವೇಶಿಸುತ್ತದೆ. ಅಂದರೆ ಸುಗಂಧ ರಾಸಾಯನಿಕಗಳು ಶ್ವಾಸಕೋಶ ಮತ್ತು ಚರ್ಮದ ಮೂಲಕ ದೇಹವನ್ನು ತಲುಪಬಹುದು. ಎರಡನೆಯದಾಗಿ, ಕುತ್ತಿಗೆ ದೇಹದಲ್ಲಿ ಅತಿ ಹೆಚ್ಚು ರಕ್ತ ಹರಿಯುವ ಪ್ರದೇಶವಾಗಿದೆ. ನಮ್ಮ ಕತ್ತಿನ ಚರ್ಮವು ತೆಳ್ಳಗಿರುತ್ತದೆ. ಹೀಗಾಗಿ ಸುಗಂಧವನ್ನು ಚರ್ಮ ವೇಗವಾಗಿ ಹೀರಿಕೊಂಡು ನೇರವಾಗಿ ರಕ್ತ ಪ್ರವೇಶಿಸಬಹುದು” ಎಂದು ಅವರು ವಿವರಿಸಿದ್ದಾರೆ.
ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮದ ಮಾಹಿತಿಯನ್ನು ಬಳಸಿಕೊಂಡು ಮಾಹಿತಿ ನೀಡುವ ಉದ್ದೇಶಕ್ಕಾಗಿ ಬರೆಯಲಾಗಿದೆ. ಯಾವುದೇ ಆರೋಗ್ಯ ಸಲಹೆಗಳಿಗೆ ನೇರವಾಗಿ ವೃತ್ತಿಪರ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.