×
Ad

ಡಿಜಿಟಲ್ ಮುಕ್ತ ವಿಶ್ವವಿದ್ಯಾನಿಲಯಗಳ ನೀತಿಗೆ ಪಂಜಾಬ್ ಸರ್ಕಾರ ಅನುಮೋದನೆ; ಈ ವಿವಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

Update: 2026-01-19 23:54 IST

PC | PTI 

ಆಮ್ ಆದ್ಮಿ ಪಕ್ಷ (AAP) ನೇತೃತ್ವದ ಪಂಜಾಬ್ ಸರ್ಕಾರ ಗುರುವಾರ (ಜನವರಿ 15) ಪಂಜಾಬ್ ಖಾಸಗಿ ಡಿಜಿಟಲ್ ಮುಕ್ತ ವಿಶ್ವವಿದ್ಯಾಲಯಗಳ ನೀತಿ–2026 ಅನ್ನು ಪ್ರಕಟಿಸಿದ್ದು, ಇದು ಭಾರತದಲ್ಲೇ ಮೊದಲನೆಯದು ಎಂದು ಹೇಳಿಕೊಂಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, “ಆನ್‌ಲೈನ್ ಮತ್ತು ಮುಕ್ತ ದೂರಶಿಕ್ಷಣ (ODL) ಕಾರ್ಯಕ್ರಮಗಳನ್ನು ನೀಡುವ ಖಾಸಗಿ ಡಿಜಿಟಲ್ ಮುಕ್ತ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸಲು ಮತ್ತು ಉತ್ತೇಜಿಸಲು ಪಂಜಾಬ್ ಖಾಸಗಿ ಡಿಜಿಟಲ್ ಮುಕ್ತ ವಿಶ್ವವಿದ್ಯಾಲಯಗಳ ನೀತಿ–2026”ಗೆ ಅನುಮೋದನೆ ನೀಡಲಾಗಿದೆ.

ಈ ನೀತಿಯು ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ತೆರೆಯುವ ಗುರಿಯನ್ನು ಹೊಂದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಈ ನೀತಿಯ ಮೂಲಕ ಖಾಸಗಿ ವಲಯವು ಪಂಜಾಬ್‌ನಲ್ಲಿ “ಡಿಜಿಟಲ್ ವಿಶ್ವವಿದ್ಯಾಲಯಗಳನ್ನು” ಸ್ಥಾಪಿಸಲು ಅವಕಾಶ ದೊರೆಯಲಿದೆ. ಅಂದರೆ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೇ ಆನ್‌ಲೈನ್ ಶಿಕ್ಷಣದ ಮೂಲಕವೇ ತಮ್ಮ ಪದವಿಯನ್ನು ಮನೆಯಿಂದಲೇ ಪೂರ್ಣಗೊಳಿಸಬಹುದಾಗಿದೆ. ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇದು “ಐತಿಹಾಸಿಕ ಸುಧಾರಣೆ” ಎಂದು ಎಎಪಿ ಸರ್ಕಾರ ಹೇಳಿದೆ.

ಡಿಜಿಟಲ್, ಆನ್‌ಲೈನ್, ದೂರ ಅಥವಾ ಮುಕ್ತ ವಿಧಾನಗಳ ಮೂಲಕ ಉನ್ನತ ಶಿಕ್ಷಣದಲ್ಲಿ ಬೋಧನೆ ಮತ್ತು ತರಬೇತಿಯನ್ನು ಒದಗಿಸುವುದು ಖಾಸಗಿ ಡಿಜಿಟಲ್ ಮುಕ್ತ ವಿಶ್ವವಿದ್ಯಾಲಯಗಳ ಉದ್ದೇಶವಾಗಿದೆ. ಈ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳು, ಡಿಜಿಟಲ್ ಮೌಲ್ಯಮಾಪನಗಳು, ವರ್ಚುವಲ್ ಲ್ಯಾಬ್‌ಗಳು ಹಾಗೂ ಇತರ ತಂತ್ರಜ್ಞಾನ–ಸಕ್ರಿಯ ಪರಿಕರಗಳ ಮೂಲಕ ಪದವಿಪೂರ್ವ, ಸ್ನಾತಕೋತ್ತರ ಮತ್ತು ವೃತ್ತಿಪರ ಹಂತಗಳ ಅಧ್ಯಯನ ಕಾರ್ಯಕ್ರಮಗಳನ್ನು ನೀಡಲಿವೆ. ಇಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇಂಟರ್ನೆಟ್ ಮೂಲಕವೇ ಪರಸ್ಪರ ಸಂಪರ್ಕ ಸಾಧಿಸುತ್ತಾರೆ.

ಪಂಜಾಬ್ ಸರ್ಕಾರದ ಅಧಿಕೃತ ಟಿಪ್ಪಣಿಯ ಪ್ರಕಾರ, ಡಿಜಿಟಲ್ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಶೈಕ್ಷಣಿಕ ಭೂದೃಶ್ಯ ಹಾಗೂ ಹೊಂದಿಕೊಳ್ಳುವ ಕಲಿಕೆಯ ಆಯ್ಕೆಗಳ ಅಗತ್ಯತೆಯಿಂದಾಗಿ ಈ ನೀತಿಯನ್ನು ಪರಿಚಯಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯು ಪಂಜಾಬ್‌ನಲ್ಲಿ ಖಾಸಗಿ ಡಿಜಿಟಲ್ ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಈಗಾಗಲೇ ಸ್ವೀಕರಿಸಲು ಪ್ರಾರಂಭಿಸಿದೆ.

ಮನೆಯಿಂದಲೇ ತಮ್ಮ ಅಧ್ಯಯನವನ್ನು ಪುನರಾರಂಭಿಸಲು ಬಯಸುವ ಮಹಿಳೆಯರಿಗೆ ಈ ನೀತಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದು ಸರ್ಕಾರ ಹೇಳಿದೆ. ಖಾಸಗಿ ಡಿಜಿಟಲ್ ಮುಕ್ತ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸಲು, ಉತ್ತೇಜಿಸಲು ಮತ್ತು ಹೊಂದಿಕೊಳ್ಳುವ ಶಿಕ್ಷಣಕ್ಕೆ ಪ್ರವೇಶವನ್ನು ವಿಸ್ತರಿಸಲು ಈ ನೀತಿಯನ್ನು ಅನುಮೋದಿಸಲಾಗಿದೆ.

ಆದಾಗ್ಯೂ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತನ್ನ 2020ರ ನಿಯಮಗಳ ಅಡಿಯಲ್ಲಿ ಈಗಾಗಲೇ ಡಿಜಿಟಲ್ ಮತ್ತು ಆನ್‌ಲೈನ್ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುತ್ತಿದೆ. ಆದರೆ ಅಸ್ತಿತ್ವದಲ್ಲಿರುವ ಪಂಜಾಬ್ ಖಾಸಗಿ ವಿಶ್ವವಿದ್ಯಾಲಯಗಳ ನೀತಿ–2010ರಲ್ಲಿ ಡಿಜಿಟಲ್ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ನಿಯಮಗಳು ಒಳಗೊಂಡಿಲ್ಲ.

ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಪಂಜಾಬ್ ಸರ್ಕಾರ ಹಣ ನೀಡುತ್ತದೆಯೇ?

ಇಲ್ಲ. ಪಂಜಾಬ್‌ನಲ್ಲಿ ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಆಸಕ್ತಿ ಹೊಂದಿರುವ ಖಾಸಗಿ ಸಂಸ್ಥೆಗಳೇ ಸಂಪೂರ್ಣ ಹೂಡಿಕೆಯನ್ನು ಮಾಡಬೇಕು ಎಂದು ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ರಾಜ್ಯದ ಮೇಲೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ಆನ್‌ಲೈನ್ ಶಿಕ್ಷಣದಲ್ಲಿ ಗುಣಮಟ್ಟದ ಖಾಸಗಿ ಹೂಡಿಕೆಯನ್ನು ಆಕರ್ಷಿಸುವುದೇ ಈ ನೀತಿಯ ಗುರಿಯಾಗಿದೆ. ಸಂಪೂರ್ಣವಾಗಿ ಸ್ವ-ನಿಧಿ ಹೊಂದಿರುವ ವಿಶ್ವವಿದ್ಯಾಲಯಗಳು ಪ್ರಕ್ರಿಯೆಗಾಗಿ ವಿಧಿಸುವ ಶುಲ್ಕದ ಮೂಲಕ ಯಾವುದೇ ಹಣಕಾಸಿನ ಹೊರೆಯಿಲ್ಲದೆ ಉನ್ನತ ಶಿಕ್ಷಣ ಇಲಾಖೆಗೆ ಆದಾಯವನ್ನು ತಂದುಕೊಡಲಿವೆ.

ಖಾಸಗಿ ಸಂಸ್ಥೆಗಳು ಪೂರೈಸಬೇಕಾದ ಷರತ್ತುಗಳು ಯಾವುವು?

ಆಸಕ್ತ ಖಾಸಗಿ ಸಂಸ್ಥೆಗಳು ಡಿಜಿಟಲ್ ವಿಶ್ವವಿದ್ಯಾಲಯ ಆರಂಭಿಸಬೇಕಾದರೆ ಆನ್‌ಲೈನ್ ಕಲಿಕೆಯಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರಬೇಕು. ಕನಿಷ್ಠ 20 ಕೋಟಿ ರೂ.ಗಳ ಕಾರ್ಪಸ್ ನಿಧಿಯನ್ನು ನಿರ್ವಹಿಸಬೇಕು. ಅರ್ಜಿಯೊಂದಿಗೆ 5 ಲಕ್ಷ ರೂ.ಗಳ ಪ್ರಾಸೆಸಿಂಗ್ ಶುಲ್ಕವನ್ನು ಪಂಜಾಬ್ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಅನುಮೋದನೆ ದೊರೆತ ಬಳಿಕ ಸರ್ಕಾರಕ್ಕೆ 20 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ.

ವಿಶ್ವವಿದ್ಯಾಲಯದಲ್ಲಿ ಕನಿಷ್ಠ 15% ಸೀಟುಗಳನ್ನು ಪಂಜಾಬ್ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಖಾಸಗಿ ಸಂಸ್ಥೆಗಳು ಯುಜಿಸಿ ಅಥವಾ ಇತರ ನಿಯಮಗಳನ್ನು ಉಲ್ಲಂಘಿಸಿದರೆ, ಪಂಜಾಬ್ ಸರ್ಕಾರವು 25 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದು ಎಂದು ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಡಿಜಿಟಲ್ ವಿಶ್ವವಿದ್ಯಾಲಯಗಳಿಗೆ ಕ್ಯಾಂಪಸ್‌ಗಳಿರುತ್ತವೆಯೇ?

ಡಿಜಿಟಲ್ ವಿಶ್ವವಿದ್ಯಾಲಯಗಳು ಕ್ಯಾಂಪಸ್‌ಗಳನ್ನು ಹೊಂದಿರುತ್ತವೆ. ಆದರೆ ಅವು ಆಡಳಿತಾತ್ಮಕ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇಲ್ಲಿ ಪ್ರಧಾನ ಕಚೇರಿ ಕಾರ್ಯನಿರ್ವಹಿಸಲಿದೆ. ಕ್ಯಾಂಪಸ್‌ಗಳಲ್ಲಿ ಯಾವುದೇ ತರಗತಿಗಳನ್ನು ನಡೆಸಲು ಅವಕಾಶವಿಲ್ಲ ಎಂದು ನೀತಿ ಹೇಳುತ್ತದೆ.

ಸಂಸ್ಥೆಗಳು ಡಿಜಿಟಲ್ ವಿಶ್ವವಿದ್ಯಾಲಯ ಆರಂಭಿಸಲು ಪ್ರಧಾನ ಕಚೇರಿಗೆ ಸಂಬಂಧಿಸಿದ ಪ್ರಸ್ತಾವಿತ ಸ್ಥಳ ಹಾಗೂ ಭೂ ಮಾಲೀಕತ್ವದ ವಿವರಗಳನ್ನು ಘೋಷಿಸಬೇಕು. ಕಚೇರಿ, ಡಿಜಿಟಲ್ ಕಂಟೆಂಟ್ ಸ್ಟುಡಿಯೋ, ಕಲಿಕಾ ಬೆಂಬಲ ಕೇಂದ್ರಗಳು ಮತ್ತು ಇತರ ತಾಂತ್ರಿಕ ಮೂಲಸೌಕರ್ಯಗಳಿಗಾಗಿ ಕನಿಷ್ಠ ಮೂರು ಎಕರೆ ಭೂಮಿಯನ್ನು ಹೊಂದಿರಬೇಕು. ಈ ನೀತಿಯ ಅಡಿಯಲ್ಲಿ ಸೂಚಿಸಲಾದ ಭೌತಿಕ ಮೂಲಸೌಕರ್ಯವು ಸಂಪೂರ್ಣವಾಗಿ ಆಡಳಿತಾತ್ಮಕ ಹಾಗೂ ಡಿಜಿಟಲ್ ಉತ್ಪಾದನೆಗೆ ಮಾತ್ರ ಉದ್ದೇಶಿತವಾಗಿದ್ದು, ತರಗತಿ ಆಧಾರಿತ ಬೋಧನೆಗೆ ಸಂಬಂಧಪಟ್ಟುದಲ್ಲ.

ಅರ್ಜಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶೈಕ್ಷಣಿಕ ಹಾಗೂ ಡಿಜಿಟಲ್ ಮೂಲಸೌಕರ್ಯ, ವರ್ಚುವಲ್ ಲ್ಯಾಬ್ ವಿನ್ಯಾಸಗಳು, ಡಿಜಿಟಲ್ ಪ್ರೊಕ್ಟರ್ಡ್ ಪರೀಕ್ಷಾ ವ್ಯವಸ್ಥೆಗಳು, ಕ್ಲೌಡ್ ಹೋಸ್ಟಿಂಗ್, ಕೃತಕ ಬುದ್ಧಿಮತ್ತೆ (AI) ಆಡಳಿತ ಸೇರಿದಂತೆ ಎಲ್ಲ ವಿವರಗಳನ್ನು ಒದಗಿಸಬೇಕು. ಅಧ್ಯಾಪಕರು ಯುಜಿಸಿ ಮಾನದಂಡಗಳ ಪ್ರಕಾರ ಅರ್ಹತೆ ಹೊಂದಿರಬೇಕು.

ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ವಿಶ್ವವಿದ್ಯಾಲಯವು “ಡಿಜಿಟಲ್ ಒಂಬುಡ್ಸ್‌ಮನ್” ಅನ್ನು ನೇಮಿಸಬೇಕು. ಈ ಕುರಿತು ಪಂಜಾಬ್ ಸರ್ಕಾರಕ್ಕೆ ಬದ್ಧತಾ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಎಂದು ನೀತಿಯಲ್ಲಿ ಹೇಳಲಾಗಿದೆ.

ಅರ್ಜಿ ಸಲ್ಲಿಸಿದ ನಂತರ ಮುಂದೇನು?

ಉನ್ನತ ಶಿಕ್ಷಣ ಇಲಾಖೆಯು ಪ್ರಸ್ತಾವನೆಯ ಪ್ರಾಥಮಿಕ ಪರಿಶೀಲನೆ ನಡೆಸುತ್ತದೆ. ನಂತರ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತ ಕಾರ್ಯದರ್ಶಿ (ಉನ್ನತ ಶಿಕ್ಷಣ) ನೇತೃತ್ವದಲ್ಲಿ ಐದು ಸದಸ್ಯರ ಉಪಸಮಿತಿಯನ್ನು ರಚಿಸಲಾಗುತ್ತದೆ. ಈ ಉಪಸಮಿತಿಯಲ್ಲಿ ರಾಜ್ಯ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಸದಸ್ಯರಾಗಿ ಸೇರಿಸಲಾಗುತ್ತದೆ.

ಉಪಸಮಿತಿಯ ಅನುಮೋದನೆಯ ನಂತರ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಮುಂದೆ ಇಡಲಾಗುತ್ತದೆ. ಅಂತಿಮ ಅನುಮೋದನೆ ಮುಖ್ಯಮಂತ್ರಿ ಅಥವಾ ಸಚಿವ ಸಂಪುಟದಿಂದ ದೊರೆಯುತ್ತದೆ. ಅಧಿಸೂಚಿತ ನೀತಿಯ ಪ್ರಕಾರ, ಖಾಸಗಿ ಸಂಸ್ಥೆಯು ಉನ್ನತ ಶಿಕ್ಷಣ ಇಲಾಖೆಗೆ 20 ಲಕ್ಷ ರೂ.ಗಳನ್ನು ಪಾವತಿಸಿದ ನಂತರವೇ ಅನುಮೋದನಾ ಪತ್ರ ನೀಡಲಾಗುತ್ತದೆ.

ಡಿಜಿಟಲ್ ವಿಶ್ವವಿದ್ಯಾಲಯಗಳು ಇತರ ದೂರಶಿಕ್ಷಣ ಕೇಂದ್ರಗಳನ್ನು ತೆರೆಯಬಹುದೇ?

ವಿಶ್ವವಿದ್ಯಾಲಯವು ಅದರ ಆಡಳಿತ ಕೇಂದ್ರವನ್ನು ಒಳಗೊಂಡಿರುವ ಒಂದೇ ಅಧಿಸೂಚಿತ ಡಿಜಿಟಲ್ ಕ್ಯಾಂಪಸ್‌ನಿಂದ ಮಾತ್ರ ಕಾರ್ಯನಿರ್ವಹಿಸಬೇಕು. ಅದೇ ಪ್ರಾಯೋಜಕ ಸಂಸ್ಥೆಯ ಒಡೆತನದಲ್ಲಿರುವ ಯಾವುದೇ ಕಾಲೇಜುಗಳು, ಕೇಂದ್ರಗಳು ಅಥವಾ ಸಂಸ್ಥೆಗಳನ್ನು ಸಂಯೋಜಿಸುವಂತಿಲ್ಲ. ಹಾಗೆಯೇ, ವಿಶ್ವವಿದ್ಯಾಲಯವು ಯಾವುದೇ ಕ್ಯಾಂಪಸ್ ಹೊರಗಿನ ಕೇಂದ್ರವನ್ನು ಸ್ಥಾಪಿಸುವಂತಿಲ್ಲ.

ನಿಯಮ ಉಲ್ಲಂಘನೆಯಾದರೆ ಯಾವ ಕ್ರಮ?

ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಮಾನ್ಯತೆಯನ್ನು ಅಮಾನತುಗೊಳಿಸಲು ಅಥವಾ ಹಿಂತೆಗೆದುಕೊಳ್ಳಲು ಅಧಿಕಾರ ಹೊಂದಿರುತ್ತದೆ. ವಿಶ್ವವಿದ್ಯಾಲಯವು ಯುಜಿಸಿ ಹಾಗೂ ಅನ್ವಯಿಸುವಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಯಿಂದ ಮಾನ್ಯತೆ ಪಡೆದ ಕಾರ್ಯಕ್ರಮಗಳನ್ನು ಮಾತ್ರ ನೀಡಬೇಕು.

ಪ್ರತಿ ಕಾರ್ಯಕ್ರಮದಲ್ಲಿ ಅನುಮೋದಿತ ಪ್ರವೇಶದ ಕನಿಷ್ಠ 15% ಪಂಜಾಬ್ ರಾಜ್ಯದಲ್ಲಿ ನೆಲೆಸಿರುವ ಅಭ್ಯರ್ಥಿಗಳಿಗೆ ಮೀಸಲಿಡಬೇಕು. ಶುಲ್ಕ ರಚನೆಯನ್ನು ವಿಶ್ವವಿದ್ಯಾಲಯವೇ ನಿರ್ಧರಿಸಬಹುದು, ಆದರೆ ಅದು ಪಾರದರ್ಶಕವಾಗಿಯೂ ಕೈಗೆಟುಕುವಂತಾಗಿಯೂ ಇರಬೇಕು. ಯಾವುದೇ ದೂರು ಬಂದಲ್ಲಿ ಅಥವಾ ಸ್ವಯಂ ಪ್ರೇರಿತವಾಗಿ ಸರ್ಕಾರ ತನಿಖೆ ನಡೆಸಬಹುದು. ನಿಯಮ ಉಲ್ಲಂಘನೆಯಾದರೆ ಸರ್ಕಾರವು 25 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದು ಹಾಗೂ ಹೊಸ ಪ್ರವೇಶಗಳ ಮೇಲೆ ನಿರ್ಬಂಧ ವಿಧಿಸಬಹುದು ಎಂದು ನೀತಿಯಲ್ಲಿ ಹೇಳಲಾಗಿದೆ.

NIELIT ಡಿಜಿಟಲ್ ವಿಶ್ವವಿದ್ಯಾಲಯ ವೇದಿಕೆ

2025ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಹೊಸದಿಲ್ಲಿಯಲ್ಲಿ NIELIT ಡಿಜಿಟಲ್ ವಿಶ್ವವಿದ್ಯಾಲಯ (NDU) ವೇದಿಕೆಯನ್ನು ಉದ್ಘಾಟಿಸಿದರು. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ NIELIT ಒಂದು ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾಗಿದೆ.

ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ದತ್ತಾಂಶ ವಿಜ್ಞಾನ, ಸೆಮಿಕಂಡಕ್ಟರ್‌ಗಳು ಹಾಗೂ ಸಂಬಂಧಿತ ಪ್ರಮುಖ ತಂತ್ರಜ್ಞಾನಗಳಲ್ಲಿ ಉದ್ಯಮ–ಕೇಂದ್ರಿತ ಕಾರ್ಯಕ್ರಮಗಳನ್ನು ನೀಡುವುದು ಈ ವೇದಿಕೆಯ ಉದ್ದೇಶವಾಗಿದೆ. ವಿಶ್ವದರ್ಜೆಯ, ಕೈಗೆಟುಕುವ ಹಾಗೂ ಉದ್ಯೋಗ–ಆಧಾರಿತ ಡಿಜಿಟಲ್ ಕಲಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ದೃಷ್ಟಿಕೋನದೊಂದಿಗೆ ಈ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಉತ್ತಮ ಗುಣಮಟ್ಟದ ಡಿಜಿಟಲ್ ಶಿಕ್ಷಣಕ್ಕೆ ಪ್ರವೇಶವನ್ನು ಪ್ರಜಾಪ್ರಭುತ್ವಗೊಳಿಸುವುದು, ಡಿಜಿಟಲ್ ಇಂಡಿಯಾ, NEP–2020 ಮತ್ತು ಸ್ಕಿಲ್ ಇಂಡಿಯಾ ಗುರಿಗಳನ್ನು ಬೆಂಬಲಿಸುವುದು ಇದರ ಆಶಯವಾಗಿದೆ. 2030ರ ವೇಳೆಗೆ ಸುಮಾರು 40 ಲಕ್ಷ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ದೇಶಾದ್ಯಂತ ಕಲಿಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ವೇದಿಕೆ ಹೊಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News