×
Ad

ಇರಾನ್‌ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ; ಭಾರತದ ಮೌನವೇಕೆ?

ಭಾರತದ ಮೌನದ ಹಿಂದಿನ ಐದು ಭೌಗೋಳಿಕ ರಾಜಕೀಯ ಅಂಶಗಳು

Update: 2026-03-04 23:36 IST

Photo : PTI

ಟೆಹ್ರಾನ್‌ ನಲ್ಲಿ ಅಮೆರಿಕ ಮತ್ತು ಇಸ್ರೇಲಿ ದಾಳಿಯ ಸಂದರ್ಭದಲ್ಲಿ ಫೆಬ್ರವರಿ 28ರಂದು ಇರಾನ್‌ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಮತ್ತು ಅವರ ಪುಟ್ಟ ಮೊಮ್ಮಗಳು ಸೇರಿದಂತೆ ಅವರ ಕುಟುಂಬದ ಐವರು ಸದಸ್ಯರು ಹಾಗೂ ಅವರ ಉನ್ನತ ಸಲಹೆಗಾರರು ಹತ್ಯೆಯಾಗಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೌನವನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಆ ದಿನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇರಾನಿನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಮಾತನಾಡಿದ್ದರೂ, ಟೆಹ್ರಾನ್‌ ನಲ್ಲಿ ನಡೆದ ಯುಎಸ್–ಇಸ್ರೇಲಿ ದಾಳಿಗಳನ್ನು ಖಂಡಿಸುವುದು ಅಥವಾ ಶೋಕ ಸಂದೇಶ ವ್ಯಕ್ತಪಡಿಸುವುದರ ಕುರಿತು ಯಾವುದೇ ಉಲ್ಲೇಖವಿರಲಿಲ್ಲ.

ಯುಎನ್ ಅಂದಾಜಿನ ಪ್ರಕಾರ, ಯುಎಸ್–ಇಸ್ರೇಲಿ ಜಂಟಿ ಕ್ಷಿಪಣಿ ದಾಳಿಗಳು ದಕ್ಷಿಣ ಇರಾನ್‌ ನ ಮಿನಾಬ್‌ ನಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲೆಯನ್ನು ಗುರಿಯಾಗಿಸಿದ್ದವು. ಈ ದಾಳಿಯಲ್ಲಿ ಸುಮಾರು 150 ಜನರು ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಾರ್ಚ್ 1ರಂದು ನಡೆದ ಮತ್ತೊಂದು ದಾಳಿಯಲ್ಲಿ ಉತ್ತರ ಟೆಹ್ರಾನ್‌ ನ ಗಾಂಧಿ ಬೀದಿಯಲ್ಲಿರುವ ಗಾಂಧಿ ಆಸ್ಪತ್ರೆ ಸೇರಿದಂತೆ ಹಲವಾರು ಆಸ್ಪತ್ರೆಗಳು ಹಾನಿಗೊಳಗಾದವು. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಸರಣಿ ದಾಳಿಗಳನ್ನು “ತೀವ್ರ ಕಳವಳಕಾರಿ” ಎಂದು ಹೇಳಿದ್ದಾರೆ. ಆದಾಗ್ಯೂ, ಭಾರತ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಅಂತರರಾಷ್ಟ್ರೀಯ ಕಾನೂನಿನಲ್ಲಿ ಪರಿಣತಿ ಹೊಂದಿರುವ ಮಾಜಿ ರಾಯಭಾರಿಯೊಬ್ಬರು, ಜಾಗತಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ರಾಷ್ಟ್ರಗಳ ಮುಖ್ಯಸ್ಥರನ್ನು ಗುರಿಯಾಗಿಸುವ ಪ್ರವೃತ್ತಿಯನ್ನು ವಿರೋಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಅವರು, ಅಂತರರಾಷ್ಟ್ರೀಯ ಸಮುದಾಯವು ಇಂತಹ ಹತ್ಯೆಗಳನ್ನು ವಿರೋಧಿಸಲು ವಿಫಲವಾದರೆ, ಭವಿಷ್ಯದಲ್ಲಿ ಯಾವುದೇ ರಾಷ್ಟ್ರವೂ ಇದೇ ರೀತಿಯ ಬೆದರಿಕೆಗಳಿಂದ ಸುರಕ್ಷಿತವಾಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮೋದಿ ಸರ್ಕಾರದ ಮೌನವನ್ನು ಪ್ರತಿಪಕ್ಷಗಳು ಟೀಕಿಸಿವೆ. “ಪ್ರಧಾನಿ ಮೋದಿ ಮಾತನಾಡಬೇಕು. ವಿಶ್ವ ಶ್ರೇಣಿಯನ್ನು ವ್ಯಾಖ್ಯಾನಿಸುವ ಮಾರ್ಗವಾಗಿ ಒಂದು ರಾಷ್ಟ್ರದ ಮುಖ್ಯಸ್ಥರ ಹತ್ಯೆಯನ್ನು ಅವರು ಬೆಂಬಲಿಸುತ್ತಾರೆಯೇ? ಈ ಮೌನವು ಜಗತ್ತಿನಲ್ಲಿ ಭಾರತದ ಸ್ಥಾನಮಾನವನ್ನು ಕುಗ್ಗಿಸುತ್ತಿದೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ, “ಸರ್ಕಾರದ ಈ ನಡೆ ತಟಸ್ಥ ಧೋರಣೆಯಲ್ಲ, ಬದಲಿಗೆ ತಿರಸ್ಕಾರ. ಇದು ಭಾರತದ ವಿದೇಶಾಂಗ ನೀತಿಯ ದಿಕ್ಕು ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಸಂಶಯಗಳನ್ನು ಮೂಡಿಸುತ್ತದೆ” ಎಂದು ಬರೆದಿದ್ದಾರೆ.

ಒಂದು ದೇಶದ ಗಡಿಗಳು ಅಥವಾ ಅಂತರರಾಷ್ಟ್ರೀಯ ನಿಯಮಗಳನ್ನು ನಿರ್ಲಕ್ಷಿಸಿದಾಗ ಭಾರತ ಸಾಮಾನ್ಯವಾಗಿ ಪ್ರತಿಕ್ರಿಯಿಸುತ್ತದೆ. ಆದರೆ ಈ ಬಾರಿ ಕಂಡುಬಂದ ಮೌನವು ಹಿಂದೆ ಭಾರತ ವರ್ತಿಸಿದ ರೀತಿಗಿಂತ ಭಿನ್ನವಾಗಿದೆ. 2020ರ ಜನವರಿಯಲ್ಲಿ ಅಮೆರಿಕ ಇರಾನ್‌ನ ಹಿರಿಯ ಜನರಲ್ ಖಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಿದಾಗ ಭಾರತ ಅಧಿಕೃತವಾಗಿ ಪ್ರತಿಕ್ರಿಯಿಸಿ, ಪರಿಸ್ಥಿತಿಯನ್ನು “ಆತಂಕಕಾರಿ” ಎಂದು ಹೇಳಿತ್ತು.

“ಇರಾನ್‌ ನ ಹಿರಿಯ ನಾಯಕರೊಬ್ಬರನ್ನು ಅಮೆರಿಕ ಹತ್ಯೆ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಉದ್ವಿಗ್ನತೆಯ ಹೆಚ್ಚಳವು ಜಗತ್ತನ್ನು ಎಚ್ಚರಿಸಿದೆ. ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಿರುವುದು ಅತ್ಯಗತ್ಯ” ಎಂದು ವಿದೇಶಾಂಗ ಸಚಿವಾಲಯ (MEA) 2020ರ ಜನವರಿ 3ರಂದು ಹೇಳಿಕೆಯಲ್ಲಿ ತಿಳಿಸಿತ್ತು.

ಕೆಲವು ದಿನಗಳ ನಂತರ ಇರಾನ್ ವಿದೇಶಾಂಗ ಸಚಿವ ಜಾವದ್ ಜರೀಫ್ ರೈಸಿನಾ ಸಂವಾದಕ್ಕಾಗಿ ದೆಹಲಿಗೆ ಬಂದಿದ್ದರು. ಈ ಕಾರ್ಯಕ್ರಮದ ವೇಳೆ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಕಟುವಾದ ಸಾರ್ವಜನಿಕ ಟೀಕೆ ನಡೆಸಿ, ಹತ್ಯೆಗೆ ಅಧಿಕಾರ ನೀಡಿದ್ದಕ್ಕಾಗಿ ಅವರನ್ನು ಖಂಡಿಸಿದ್ದರು.

ಮೇ 2024ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಅಮೀರ್ ಅಬ್ದುಲ್ಲಾಹಿಯನ್ ಮೃತಪಟ್ಟ ನಂತರ ಭಾರತ ಒಂದು ದಿನದ ಶೋಕಾಚರಣೆಗೆ ಆದೇಶಿಸಿತ್ತು. ಆಗಿನ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. “ಭಾರತ–ಇರಾನ್ ಸಂಬಂಧದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಅವರನ್ನು ಭಾರತದ ಸ್ನೇಹಿತರು ಎಂದು ಯಾವಾಗಲೂ ಸ್ಮರಿಸಲಾಗುತ್ತದೆ. ಈ ಕಷ್ಟದ ಸಮಯದಲ್ಲಿ ಭಾರತ ಸರ್ಕಾರ ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ” ಎಂದು ಎಸ್. ಜೈಶಂಕರ್ ಇರಾನಿನ ರಾಯಭಾರ ಕಚೇರಿಯಲ್ಲಿನ ಸಂತಾಪ ಪುಸ್ತಕದಲ್ಲಿ ಬರೆದಿದ್ದರು.

2025ರ ಜೂನ್ 22ರಂದು ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ ಅವರು ಇರಾನಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರಿಗೆ ಕರೆ ಮಾಡಿ ಉದ್ವಿಗ್ನತೆಯ ಬಗ್ಗೆ “ತೀವ್ರ ಕಳವಳ” ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಹಿಂಜರಿದ ನಂತರ ಭಾರತವು ಆ ವರ್ಷದ ಕೊನೆಯಲ್ಲಿ ಶಾಂಘೈ ಸಹಕಾರ ಸಂಸ್ಥೆ ಮತ್ತು ಬ್ರಿಕ್ಸ್ ಹೇಳಿಕೆಗಳಿಗೆ ಸಹಿ ಹಾಕಿತು; ಆ ಹೇಳಿಕೆಗಳು ಅಮೆರಿಕ ಮತ್ತು ಇಸ್ರೇಲ್‌ ನ ಏಕಪಕ್ಷೀಯ ದಾಳಿಗಳನ್ನು ಖಂಡಿಸಿದ್ದವು.

ಬಿಕ್ಕಟ್ಟಿನ ಸಮಯದಲ್ಲಿ ಇರಾನ್ ನೂರಾರು ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ಮರಳಲು ವಿಮಾನಗಳಿಗೆ ಅವಕಾಶ ನೀಡುವುದಕ್ಕಾಗಿ ತನ್ನ ವಾಯುಪ್ರದೇಶವನ್ನು ತೆರೆಯಿತು.

ಹಾಗಾದರೆ ಇರಾನ್ ನಾಯಕನ ಹತ್ಯೆ ಅಥವಾ ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲಿನ ಮಾರಕ ದಾಳಿಗಳ ಬಗ್ಗೆ ಭಾರತದಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದಕ್ಕೆ ಕಾರಣವೇನು? ತನ್ನ ಹೇಳಿಕೆಗಳ ಕುರಿತು ತಾರ್ಕಿಕ ವಿವರಣೆಗಾಗಿ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದರೂ ಅದು ಪ್ರತಿಕ್ರಿಯಿಸಲಿಲ್ಲ ಎಂದು ದಿ ಹಿಂದೂ ವರದಿ ಉಲ್ಲೇಖಿಸಿದೆ.

ಫೆಬ್ರವರಿ 28ರಂದು ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಯಲ್ಲಿ, ಭಾರತವು ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಸಂಯಮವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿತು. ಸಂಘರ್ಷ ವಲಯದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಯೋಜನೆ ರೂಪಿಸಲು ಪ್ರಧಾನಿ ಮೋದಿ ಭದ್ರತಾ ಸಂಬಂಧಿತ ಕ್ಯಾಬಿನೆಟ್ ಸಮಿತಿಯ ಸಭೆಯ ನೇತೃತ್ವ ವಹಿಸಿದ್ದರು. ಮಾರ್ಚ್ 3ರ ವೇಳೆಗೆ ವಿದೇಶಾಂಗ ಸಚಿವಾಲಯ (MEA) ಭಾರತದ ಗಡಿಗಳ ಬಳಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ “ಗಂಭೀರ ಆತಂಕ” ವ್ಯಕ್ತಪಡಿಸಿ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿತು.

ಇರಾನ್‌ ನಲ್ಲಿ ನಡೆದ ಹತ್ಯೆಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದಿರಲು ಭಾರತ ತೆಗೆದುಕೊಂಡ ನಿರ್ಧಾರದ ಹಿಂದೆ ಹಲವಾರು ಅಂಶಗಳಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇರಾನ್‌ನ ಮಾಜಿ ರಾಯಭಾರಿ ರಾಕೇಶ್ ಸೂದ್, ಭಾರತದ ಈ ನಿಲುವಿಗೆ ಮೂರು ಕಾರಣಗಳಿವೆ ಎಂದು ದಿ ಹಿಂದೂಗೆ ತಿಳಿಸಿದ್ದಾರೆ. ಮೊದಲನೆಯದಾಗಿ, ಪ್ರಸ್ತುತ ವಿಶ್ವದ ರಾಜಕೀಯವು ಅತ್ಯಂತ ಜಟಿಲವಾಗಿದೆ. ಎರಡನೆಯದಾಗಿ, ಭಾರತ ಮತ್ತು ಇರಾನ್ ಚಬಹಾರ್ ಬಂದರಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರೂ ಹಲವು ವರ್ಷಗಳಿಂದ ಅವುಗಳ ನಡುವಿನ ಸಂಬಂಧಗಳು ಹೆಚ್ಚು ಹತ್ತಿರವಾಗಿಲ್ಲ. ಮೂರನೆಯದಾಗಿ, ದಿವಂಗತ ನಾಯಕ ಖಾಮಿನೈ ಅವರು ಈ ಹಿಂದೆ ಕಾಶ್ಮೀರದಲ್ಲಿನ ಭಾರತದ ನೀತಿಗಳು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಭಾರತದ ನಡೆ ಕುರಿತು ಟೀಕೆ ಮಾಡಿದ್ದರು.

ಭಾರತ ಮೌನ ವಹಿಸಿರುವುದೇಕೆ?

1. ಇಸ್ರೇಲ್:

ಭಾರತ ಮತ್ತು ಇಸ್ರೇಲ್ ದಶಕಗಳಿಂದ ನಿಕಟ ಭದ್ರತಾ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ಈ ಬಾಂಧವ್ಯ ಇನ್ನಷ್ಟು ಬಲಗೊಂಡಿದೆ. 2017ರಲ್ಲಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾದರು. ನಂತರ 2018ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದರು. 2026ರ ಫೆಬ್ರವರಿ ಕೊನೆಯಲ್ಲಿ ಜೆರುಸಲೆಮ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ನಾಯಕರಾಗಿ ಇತಿಹಾಸ ನಿರ್ಮಿಸಿದರು. ತಮ್ಮ ಭಾಷಣದಲ್ಲಿ ಭಾರತವು ಇಸ್ರೇಲ್‌ನೊಂದಿಗೆ “ದೃಢವಾಗಿ ಮತ್ತು ಸಂಪೂರ್ಣ ದೃಢನಿಶ್ಚಯದಿಂದ” ನಿಂತಿದೆ ಎಂದು ಅವರು ಘೋಷಿಸಿದರು.

2. ಇರಾನ್–ಭಾರತ ಸಂಬಂಧಗಳು:

ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ನಿಕಟವಾಗಿದ್ದರೂ, ಇರಾನ್‌ನೊಂದಿಗಿನ ಭಾರತದ ಸಂಬಂಧವು ದುರ್ಬಲಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕ ಜಾರಿಗೆ ತಂದ ಕಠಿಣ ಆರ್ಥಿಕ ನಿರ್ಬಂಧಗಳು. ಈ ನಿರ್ಬಂಧಗಳ ಪರಿಣಾಮವಾಗಿ ಭಾರತವು 2018ರಲ್ಲಿ ಇರಾನ್‌ನಿಂದ ತೈಲ ಖರೀದಿಸುವುದನ್ನು ನಿಲ್ಲಿಸಿತು. ಇದರ ಪರಿಣಾಮವಾಗಿ ಎರಡೂ ದೇಶಗಳ ನಡುವಿನ ವ್ಯಾಪಾರವು 2018ರಲ್ಲಿ 17 ಬಿಲಿಯನ್ ಡಾಲರ್‌ನಿಂದ 2025ರಲ್ಲಿ ಕೇವಲ 1.68 ಬಿಲಿಯನ್ ಡಾಲರ್‌ಗೆ ಕುಸಿದಿದೆ. ಇರಾನಿನ ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿನ ಹೂಡಿಕೆಗಳು ಕೂಡ ಸ್ಥಗಿತಗೊಂಡಿವೆ.

ಏಪ್ರಿಲ್‌ನಲ್ಲಿ ಅಮೆರಿಕವು ಚಬಹಾರ್ ಬಂದರಿಗೆ ನೀಡಿದ್ದ ತನ್ನ ನಿರ್ಬಂಧ ವಿನಾಯಿತಿಯನ್ನು ಕೊನೆಗೊಳಿಸುವ ಸಾಧ್ಯತೆಯಿದೆ. ಈ ವಿನಾಯಿತಿಯನ್ನು ವಿಸ್ತರಿಸದಿದ್ದರೆ ಭಾರತವು ಅಭಿವೃದ್ಧಿಪಡಿಸಿದ ಶಾಹಿದ್ ಬೆಹೆಶ್ಟಿ ಟರ್ಮಿನಲ್‌ನ ನಿರ್ವಹಣೆಯನ್ನು ಮುಕ್ತಾಯಗೊಳಿಸಬೇಕಾಗಬಹುದು. ನವೆಂಬರ್ 2025ರಲ್ಲಿ ಮೋದಿ ಸರ್ಕಾರವು ಬಂದರಿಗೆ ನೀಡಬೇಕಿದ್ದ 120 ಮಿಲಿಯನ್ ಡಾಲರ್ ಬದ್ಧತೆಯನ್ನು ಪಾವತಿಸಿತ್ತು. ಅನೇಕ ಭಾರತೀಯ ಕಾರ್ಮಿಕರು ಈಗಾಗಲೇ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇತ್ತೀಚಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲಿ ಕ್ಷಿಪಣಿಗಳು ಚಬಹಾರ್‌ನಲ್ಲಿರುವ ಕೊನಾರ್ಕ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಅಲ್ಲಿನ ಇತರ ಮೂಲಸೌಕರ್ಯಗಳನ್ನು ಹಾನಿಗೊಳಿಸಿವೆ.

3. ಖಾಮಿನೈಯವರ ಹೇಳಿಕೆಗಳ ಬಗ್ಗೆ ಕಳವಳ:

1981ರಿಂದ 1989ರವರೆಗೆ ಖಾಮಿನೈ ಇರಾನ್‌ನ ಅಧ್ಯಕ್ಷರಾಗಿದ್ದರು. ನಂತರ ಆಯತುಲ್ಲಾ ಖಾಮಿನೈ ಅವರ ಮರಣದ ನಂತರ ಅವರು ಸರ್ವೋಚ್ಚ ನಾಯಕರಾದರು. 1994ರಲ್ಲಿ ಭಾರತದಿಂದ ಬಂದ ಸಂಪರ್ಕದ ನಂತರ, ಯುಎನ್ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ಕುರಿತ ನಿರ್ಣಯದ ವಿಚಾರದಲ್ಲಿ ಇರಾನ್ ಪಾಕಿಸ್ತಾನ ಮತ್ತು ಹಲವು ಅರಬ್ ರಾಷ್ಟ್ರಗಳೊಂದಿಗೆ ಸೇರದಿರಲು ನಿರ್ಧರಿಸಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಭಾರತದ ಆಂತರಿಕ ಬೆಳವಣಿಗೆಗಳ ಕುರಿತು ಹಲವು ಹೇಳಿಕೆಗಳನ್ನು ನೀಡಿದ್ದರು. 2017ರಲ್ಲಿ ಕೇಂದ್ರ ಸರ್ಕಾರದ ಕಾಶ್ಮೀರ ನೀತಿಯನ್ನು ಅವರು ಟೀಕಿಸಿದ್ದರು. 2019ರಲ್ಲಿ 370ನೇ ವಿಧಿ ತಿದ್ದುಪಡಿ ಬಳಿಕವೂ ಅವರು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ, 2020ರ ಮಾರ್ಚ್‌ನಲ್ಲಿ ನಡೆದ ದೆಹಲಿ ಗಲಭೆಗಳನ್ನು ಭಾರತದಲ್ಲಿ “ಮುಸ್ಲಿಮರ ಹತ್ಯಾಕಾಂಡ”ದ ಪುರಾವೆಯಾಗಿ ಉಲ್ಲೇಖಿಸಿದ್ದ ಅವರ ಹೇಳಿಕೆಗಳ ಬಗ್ಗೆ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು.

4. ಭಾರತ–ಗಲ್ಫ್ ಸಂಬಂಧಗಳು:

ಗಲ್ಫ್ ಪ್ರದೇಶದ ದೇಶಗಳೊಂದಿಗೆ, ವಿಶೇಷವಾಗಿ ಯುಎಇ ಮತ್ತು ಸೌದಿ ಅರೇಬಿಯಾದೊಂದಿಗೆ ಇರುವ ಸಂಬಂಧಗಳನ್ನು ಕೆಡಿಸಿಕೊಳ್ಳದಿರಲು ಭಾರತದ ಬಯಕೆಯೂ ಈ ಮೌನಕ್ಕೆ ಕಾರಣವಾಗಿರಬಹುದು. ಇರಾನ್ ಆ ಪ್ರದೇಶಗಳಲ್ಲಿನ ಅಮೆರಿಕದ ನೆಲೆಗಳು ಮತ್ತು ತೈಲ ಸೌಲಭ್ಯಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಪರಿಸ್ಥಿತಿ ಸೂಕ್ಷ್ಮವಾಗಿದೆ.

ಈ ವರ್ಷದ ಜನವರಿಯಲ್ಲಿ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅವರ ಎರಡು ಗಂಟೆಗಳ ದೆಹಲಿ ಭೇಟಿಯ ಸಂದರ್ಭದಲ್ಲಿ ಘೋಷಿಸಲಾದ ರಕ್ಷಣಾ ಪಾಲುದಾರಿಕೆ ಭಾರತ–ಯುಎಇ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ. ಗಲ್ಫ್ ದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಸುಮಾರು 10 ಮಿಲಿಯನ್ ಭಾರತೀಯರ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಭಾರತ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ದಿ ಹಿಂದೂಗೆ ತಿಳಿಸಿದ್ದಾರೆ.

ಇರಾನ್‌ನಲ್ಲಿ ಸುಮಾರು 4,000–5,000 ಭಾರತೀಯರು ಹಾಗೂ ಇಸ್ರೇಲ್‌ ನಲ್ಲಿ ಸುಮಾರು 20,000 ಭಾರತೀಯರು ವಾಸಿಸುತ್ತಿದ್ದಾರೆ. ಹೆಚ್ಚುವರಿಯಾಗಿ, ಭಾರತವು ರಷ್ಯಾದಿಂದ ಕಡಿಮೆ ಪ್ರಮಾಣದಲ್ಲಿ ತೈಲ ಖರೀದಿಸಲು ಆರಂಭಿಸಿದ ನಂತರ ಗಲ್ಫ್ ದೇಶಗಳಿಂದ ತೈಲದ ಅವಲಂಬನೆ ಹೆಚ್ಚಾಗಿದೆ. ಈ ದೇಶಗಳನ್ನು ಅಸಮಾಧಾನಗೊಳಿಸಿದರೆ ಭಾರತದ ಇಂಧನ ಪೂರೈಕೆ ಮತ್ತು ಶತಕೋಟಿ ಡಾಲರ್ ವ್ಯಾಪಾರಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ.

5. ಭಾರತ–ಯುಎಸ್ ಸಂಬಂಧಗಳು:

ಅಮೆರಿಕವು ಸುಂಕ ಕಡಿತ ಮತ್ತು ಫೆಬ್ರವರಿ 2026ರಲ್ಲಿ ಘೋಷಿಸಲಾದ ವ್ಯಾಪಾರ ಒಪ್ಪಂದದ ನಂತರ ಮೋದಿ ಸರ್ಕಾರವು ಟ್ರಂಪ್ ಆಡಳಿತದೊಂದಿಗೆ ಸಂಬಂಧಗಳನ್ನು ಪುನಃಸ್ಥಾಪಿಸಲು ಆರಂಭಿಸಿದೆ. ಇದರ ಜೊತೆಗೆ ಅಮೆರಿಕ ತನ್ನ ಪ್ಯಾಕ್ಸ್ ಸಿಲಿಕಾ ನಿರ್ಣಾಯಕ ತಂತ್ರಜ್ಞಾನ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸೇರಿಸಿಕೊಂಡಿದೆ.

ರೈಸಿನಾ ಸಂವಾದಕ್ಕಾಗಿ ಈ ವಾರವೂ ಸೇರಿದಂತೆ ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಬರುತ್ತಿದ್ದಾರೆ. ಟ್ರಂಪ್ ಆಡಳಿತದ ಸ್ವಭಾವ ಮತ್ತು ಇರಾನ್‌ ನೊಂದಿಗೆ ಯಾವುದೇ ಸಂಪರ್ಕದ ಮೇಲೆ ನಿರ್ಬಂಧಗಳ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಹೆಚ್ಚು ಎಚ್ಚರಿಕೆಯ ನಿಲುವು ತೆಗೆದುಕೊಳ್ಳುತ್ತಿರುವ ಸಾಧ್ಯತೆಯಿದೆ.

ಭಾರತ ಮುಂದಿನ ದಿನಗಳಲ್ಲಿ ಇನ್ನೂ ಹಲವು ಕಠಿಣ ನಿರ್ಧಾರಗಳನ್ನು ಎದುರಿಸಬೇಕಾಗಿದೆ. ಇರಾನ್ ವಿರುದ್ಧದ ಮಿಲಿಟರಿ ಕ್ರಮಗಳು ವಾರಗಳವರೆಗೆ ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಅವರು ಅಮೆರಿಕದ ನೆಲದ ಪಡೆಗಳನ್ನು ದೇಶಕ್ಕೆ ಕಳುಹಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.

ಪ್ರಯಾಣ, ವ್ಯಾಪಾರ ಮತ್ತು ಇಂಧನದಂತಹ ತಕ್ಷಣದ ಸಮಸ್ಯೆಗಳ ಹೊರತಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭಾರತದ ಖ್ಯಾತಿಯನ್ನೂ ಪರಿಗಣಿಸಬೇಕಿದೆ. ಭಾರತ ಅಮೆರಿಕ ನೇತೃತ್ವದ ಒಕ್ಕೂಟದ ಪರವಾಗಿರಲು ಆಯ್ಕೆ ಮಾಡಿದರೆ, ಈ ದೇಶಗಳೊಂದಿಗೆ ತನ್ನ ಪ್ರಭಾವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಇದಲ್ಲದೆ, ಈ ವರ್ಷ ಭಾರತ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದ್ದು, ಯುದ್ಧ ಮತ್ತು ಅದರ ಪರಿಣಾಮಗಳು ಈಗ ಸಂಘರ್ಷದಲ್ಲಿ ಪ್ರತಿಸ್ಪರ್ಧಿಗಳಾಗಿರುವ ಇರಾನ್ ಮತ್ತು ಯುಎಇಗಳನ್ನು ಒಳಗೊಂಡಿರುವ ಈ ಗುಂಪಿನ ಮೇಲೆ ಶಾಶ್ವತ ಪರಿಣಾಮ ಬೀರುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ರಶ್ಮಿ ಕಾಸರಗೋಡು

contributor

Similar News